ಕೋಮುಗಲಭೆಗೆ ಸರ್ಕಾರವೇ ಕಾರಣ..?

Kannada News

11-07-2017

ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಅವರು ಆ ಜಿಲ್ಲೆಯಲ್ಲಿ ಚುನಾವಣೆಗೆ ನಿಲ್ಲುವಂತೆ ಹಾಕಿರುವ ಸವಾಲನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ವೀಕರಿಸಿದ್ದಾರೆ. ಸಾಧ್ಯವಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಸದಾನಂದ ಗೌಡರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಲಿ ಎಂದು ತಮ್ಮ ಅಥವಾ ಯು.ಟಿ.ಖಾದರ್ ವಿರುದ್ಧ ಸ್ಪರ್ಧಿಸಲಿ ಎಂದು ರಮಾನಾಥ ರೈ ನಿನ್ನೆ ಸವಾಲು ಹಾಕಿದ್ದರು. ಇದಕ್ಕೆ ಇಂದು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಬಿ.ಎಸ್.ಯಡಿಯೂರಪ್ಪ, ದಕ್ಷಿಣ ಕನ್ನಡ ಜಿಲ್ಲೆ ಕೋಮುದಳ್ಳುರಿಯಲ್ಲಿ ಬೇಯುತ್ತಿರುವಾಗ ಈ ಇಬ್ಬರು ಸಚಿವರು ಅವುಗಳನ್ನು ನಿಯಂತ್ರಿಸುವ ಬದಲು ರಾಜಕೀಯ ಸವಾಲು ಹಾಕುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯಾಗಿದೆ. ಬಂಟ್ವಾಳದ ಕೋಮುಗಲಭೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ. ಅವರು ಇಂದು ಬೆಳಿಗ್ಗೆ ನಗರದಲ್ಲಿ ಪಾಸ್‌ಪೋರ್ಟ್ ಕಚೇರಿಯ ಸ್ಥಳ ವೀಕ್ಷಣೆಗೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸ್ ಅಧಿಕಾರಿಗಳೊಂದಿಗೆ ನಿನ್ನೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯಾದವರು ಪೊಲೀಸ್ ಅಧಿಕಾರಿಗಳೊಂದಿಗೆ ಈ ರೀತಿ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ ಎನ್ನುವುದಕ್ಕೆ ಸಿದ್ದರಾಮಯ್ಯ ಅವರ ಹೇಳಿಕೆಯೇ ನಿದರ್ಶನ ಎಂದು ಹೇಳಿದರು.

ಪೊಲೀಸ್ ಇಲಾಖೆಗೆ ಕೆಂಪಯ್ಯನಂತಹ ನಿವೃತ್ತ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಇವರಿಂದ ಯಾವ ರೀತಿಯ ಕೆಲಸ ನಿರೀಕ್ಷಿಸಬಹುದು. ಮುಖ್ಯಮಂತ್ರಿ ಅವರು ನಿವೃತ್ತ ಅಧಿಕಾರಿಗಳಿಗೆ ಸೂಚನೆ ನೀಡುವುದು ಅವರ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಯಡಿಯೂರಪ್ಪ ಆರೋಪಿಸಿದರು. ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ವ್ಯಥಾ ಎಳೆದುತರುತ್ತಿದೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಅವರು ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರೈತರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನು ಹಿಡಿದುಕೊಂಡು ರಾಜ್ಯ ಸರ್ಕಾರ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದ ಅವರು, ಆರೋಪ ಮತ್ತು ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಕೇಂದ್ರ ನೀಡುವ ಅನುಕೂಲ ಬಳಸಿಕೊಂಡು ರೈತರಿಗೆ ಸಂಕಷ್ಟದ ಸಮಯದಲ್ಲಿ ನೆರವಾಗಬೇಕು ಎಂದು ತಾಕೀತು ಮಾಡಿದರು. ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ಕೇಂದ್ರ ಸರ್ಕಾರ ಮುಂಗಾರು ಕೈಕೊಟ್ಟ ೧೬ ರಾಜ್ಯಗಳಿಂದ ಸಮೀಕ್ಷೆ ನಡೆಸಿ ವರದಿ ಕೇಳಿದೆ. ಆದರೆ ರಾಜ್ಯ ಸರ್ಕಾರ ವರದಿಯನ್ನು ತಯಾರಿಸುವ ಸಮಿತಿ ರಚಿಸಿ ನಡೆಸಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ನಗರಕ್ಕೆ ಬಹು ಬೇಡಿಕೆಯಿದ್ದ ಪಾಸ್ ಪೋರ್ಟ್ ಕಚೇರಿಯು ಇನ್ನು ಎರಡು ಮೂರು ತಿಂಗಳಲ್ಲಿ ರಚನೆಯಾಗಲಿದೆ. ಅದರಂತೆಯೆ ನಗರದಲ್ಲಿ ಪಾಸ್‌ ಪೋರ್ಟ್ ಕೇಂದ್ರ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ