ಅನ್ನಭಾಗ್ಯ: ಇನ್ಮುಂದೆ ಅಕ್ಕಿ-ತೊಗರಿ ಮಾತ್ರ !

Kannada News

11-07-2017

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹಾತ್ವಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದೆ ಫಲಾನುಭವಿಗಳಿಗೆ ಅಕ್ಕಿ ಮತ್ತು ತೊಗರಿಬೇಳೆ ಮಾತ್ರ ಲಭ್ಯವಾಗಲಿದೆ. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡುತ್ತಿದ್ದ ಗೋಧಿ, ಸಕ್ಕರೆ, ರಾಗಿ, ಉಪ್ಪು, ಹೆಸರುಕಾಳು, ತಾಳೆ ಎಣ್ಣೆ ಮುಂದಿನ ತಿಂಗಳಿನಿಂದ ಬಂದ್ ಆಗಲಿದೆ. ಕಾರಣ ಸಬ್ಸಿಡಿ ಕೊರತೆ ಹಾಗೂ ಫಲಾನುಭವಿಗಳಿಂದ ಬೇಡಿಕೆ ಕಡಿಮೆಯಾಗುತ್ತಿರುವುದು. ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಕೇವಲ ಒಂದು ಕುಟುಂಬದ ಸದಸ್ಯರಿಗೆ 7ಕೆಜಿ ಅಕ್ಕಿ ಹಾಗೂ ಒಂದು ಕೆಜಿ ತೊಗರಿಬೇಳೆಯನ್ನು ಮಾತ್ರ ನೀಡುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

2013 ಜೂನ್ 1ರಿಂದ ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಹಸಿವಿನಿಂದ ಬಳಲುತ್ತಿರುವವರಿಗೆ ಎರಡು ಹೊತ್ತು ಊಟ ನೀಡುವ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಯಿತು. ಈ ಯೋಜನೆಯಂತೆ ಪ್ರಾರಂಭದಲ್ಲಿ ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಒಂದು ರೂ. ದರದಲ್ಲಿ ತಿಂಗಳಿಗೆ 30ಕೆಜಿ ಅಕ್ಕಿ, ಸಕ್ಕರೆ, ಗೋಧಿ, ಉಪ್ಪು ನೀಡಲಾಗುತ್ತಿತ್ತು. ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಕುಟುಂಬದ ಓರ್ವ ಸದಸ್ಯರಿಗೆ ಉಚಿತವಾಗಿ 5 ಕೆಜಿ ಅಕ್ಕಿ ಘೋಷಣೆ ಮಾಡಿತ್ತು. ಇದರ ಜತೆಗೆ ಉತ್ತರ ಕರ್ನಾಟಕ ಭಾಗಕ್ಕೆ 2ರೂ. ದರದಲ್ಲಿ ಜೋಳ, ಇದೇ ರೀತಿ ದಕ್ಷಿಣ ಕರ್ನಾಟಕದಲ್ಲಿ ಇಷ್ಟೇ ಪ್ರಮಾಣದಲ್ಲಿ ರಾಗಿಯನ್ನು ವಿತರಣೆ ಮಾಡಲಾಗುತಿತ್ತು.

ಈ ಹಿಂದೆ ಕೇಂದ್ರ ಸರ್ಕಾರ ಪ್ರತಿ ಕೆಜಿ ಸಕ್ಕರೆಗೆ 18ರೂ. ಸಬ್ಸಿಡಿಯನ್ನು ನೀಡುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸಬ್ಸಿಡಿ ನಿಲ್ಲಿಸಿದ ಪರಿಣಾಮ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊಡೆತ ಬಿದ್ದಿತು. ಅಕ್ಕಿ ಖರೀದಿಗಾಗಿ ಪ್ರತೀ ತಿಂಗಳು ನೂರಾರು ಕೋಟಿ ವೆಚ್ಚವಾಗುವುದರ ಜತೆಗೆ ಸಕ್ಕರೆ ಸಬ್ಸಿಡಿ ನಿಂತ ಪರಿಣಾಮ ರಾಜ್ಯ ಸರ್ಕಾರ ಖರ್ಚಿನ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ನ್ಯಾಯಬೆಲೆ ಅಂಗಡಿಗಳಿಂದ ಫಲಾನುಭವಿಗಳು ಖರೀದಿಸಿದ ತಾಳೆಎಣ್ಣೆ, ಉಪ್ಪು, ರಾಗಿ ಮತ್ತು ಜೋಳ ಕಂಡವರ ಪಾಲಾಗುತ್ತಿತ್ತು. ಬಹುತೇಕರು ಇದನ್ನು ಬಳಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದರು. ಇದೆಲ್ಲವನ್ನೂ ಅರಿತ ಸರ್ಕಾರ ಬರುವ ತಿಂಗಳಿನಿಂದ ಅಕ್ಕಿ ಮತ್ತು ತೊಗರಿಬೇಳೆಯನ್ನು ಮಾತ್ರ ವಿತರಣೆ ಮಾಡಲು ತೀರ್ಮಾನಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ