ಗೋಹತ್ಯೆ ನಿಷೇಧ ಸುಪ್ರೀಂ ತಡೆ !

Kannada News

11-07-2017

ನವದೆಹಲಿ: ವಿವಾದಿತ ಗೋಹತ್ಯೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಕಳೆದ ಮೇ 23 ರಂದು ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧವನ್ನು ಹೇರಿ ದೇಶಾದ್ಯಂತ ಜಾರಿ ಮಾಡಿ ಆದೇಶ ಹೊರಡಿಸಿತ್ತು. ಇದಾದ ನಂತರ ಭಾರಿ ಪ್ರತಿಭಟನೆ ಮತ್ತು ಹಲವೆಡೆ ಹಿಂಸಾಚಾರ ಸೇರಿದಂತೆ, ಸ್ವಂತ ಪಕ್ಷದಿಂದಲೇ ಗೋ ಹತ್ಯೆ ನಿಷೇಧಕ್ಕೆ ಅಪಸ್ವರ ಕೇಳಿಬಂದಿತ್ತು. ಅಲ್ಲದೆ ಈಶಾನ್ಯ ರಾಜ್ಯಗಳ ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಕೇಂದ್ರ ಸರ್ಕಾರದ ನೂತನ ನೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ಹಲವು ಸ್ವಯಂ ಹೋರಾಟಗಳು ನಡೆದಿದ್ದವು. ಈ ಕುರಿತು ಕೇರಳ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಾವು ಏನನ್ನು ಸೇವಿಸಬೇಕು ಎಂಬುದನ್ನು ಕೇಂದ್ರ ಸರ್ಕಾರದಿಂದ ಕಲಿಯುವ ಅಗತ್ಯವಿಲ್ಲ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಇದಾದ ನಂತರ ದೇಶಾದ್ಯಂತ  ಈ ವಿಚಾರವಾಗಿ ಪರ ವಿರೋಧಗಳು ವ್ಯಕ್ತವಾಗಿತ್ತು. ಇನ್ನು ಆಹಾರ ಸಂಸ್ಕೃತಿಯ ಬಗ್ಗೆ ಚರ್ಚೆಗಳು ಆರಂಭವಾದವು, ಕೆಲವು ಕಡೆ ಈ ಚರ್ಚೆಗಳು, ಖಾಸಗಿ ಹಕ್ಕಿನ ಮೊಟಕು ಗೊಳಿಸುವಿಕೆ ಎಂದೇ ಟೀಕಿಸಿದರು. ಅದಾಗಲೇ ಈ ವಿಚಾರ ಸುಪ್ರೀಂ ಅಂಗಳಕ್ಕೆ ಬಂದಿತ್ತು. ಈ ವಿಚಾರವಾಗಿ  ಮದ್ರಾಸ್ ಹೈ ಕೋರ್ಟ್, ಕೇಂದ್ರ ಸರ್ಕಾರದ ಆದೇಶವನ್ನು ತಡೆಹಿಡಿದು ತೀರ್ಪು ನೀಡಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಜೆ.ಎಸ್.ಖೆಹರ್, ಮದ್ರಾಸ್ ಹೈ ಕೋರ್ಟ್ ಆದೇಶವನ್ನು ದೇಶಾದ್ಯಂತ ವಿಸ್ತರಿಸುವ ಆದೇಶ ನೀಡಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧಕ್ಕೆ ತಡೆ ನೀಡಿದಂತಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ