ಹಕ್ಕು ಚ್ಯುತಿ ಮರ್ಮ !

Kannada News

11-07-2017 720

ಇಬ್ಬರು ಶಾಸಕರ ಬಗ್ಗೆ ಎರಡು ಪತ್ರಿಕೆಗಳಲ್ಲಿ ಸುಳ್ಳಿನಿಂದ ಕೂಡಿದ ಸುದ್ದಿ ಪ್ರಕಟಣೆಯಿಂದ ಹಕ್ಕುಚ್ಯುತಿ ಆಗಿದೆ ಅನ್ನುವ ಕಾರಣಕ್ಕಾಗಿ, ರಾಜ್ಯ ವಿಧಾನಸಭಾಧ್ಯಕ್ಷರು, ಇಬ್ಬರು ಪತ್ರಕರ್ತರಿಗೆ ಒಂದು ವರ್ಷ ಜೈಲುಶಿಕ್ಷೆ ಮತ್ತು ಹತ್ತುಸಾವಿರ ರೂಪಾಯಿ ದಂಡ ವಿಧಿಸುವ ಆದೇಶ ಹೊರಡಿಸಿದ್ದರು. ಅವರ ಈ ಆದೇಶ ಜಾರಿಗೆ ಮುನ್ನ, ಹಲವಾರು ನಾಟಕೀಯ ಬೆಳವಣಿಗೆಗಳೂ ನಡೆದವು. ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯೂ ಸಲ್ಲಿಕೆಯಾಗಿತ್ತು. ಆನಂತರ, ಆ ಪತ್ರಕರ್ತರಿಬ್ಬರೂ ಸಭಾಧ್ಯಕ್ಷರ ಮುಂದೆ ಹಾಜರಾಗಿ, ತಮಗೆ ವಿಧಿಸಿರುವ ಶಿಕ್ಷೆಯನ್ನು ಪುನರ್ ಪರಿಶೀಲನೆ ಮಾಡಲು ಮನವಿ ಸಲ್ಲಿಸಿದ್ದಾರೆ, ಸದ್ಯಕ್ಕಂತೂ ಅವರನ್ನು ಬಂಧಿಸಲಾಗಿಲ್ಲ. ಹೀಗಾಗಿ, ಈ ವಿಚಾರ ಇಷ್ಟಕ್ಕೆ ನಿಂತಿದೆ.  ಆದರೆ, ರಾಜ್ಯ ವಿಧಾನಸಭೆಯ ಈ ಆದೇಶದ ಮೊದಲು, ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳ ಶಾಸನ ಸಭೆಯ ಹಕ್ಕುಬಾಧ್ಯತಾ ಸಮಿತಿ, ಪತ್ರಕರ್ತರನ್ನು ದಂಡನೆಗೆ ಒಳಪಡಿಸಿದೆ. ಕೆಲವರನ್ನು ಸದನಕ್ಕೆ ಕರೆದು ಛೀಮಾರಿ ಹಾಕಲಾಗಿದೆ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ರೋನೆನ್ ಸೇನ್ ರಿಂದ ಹಿಡಿದು, ಸಂವಿಧಾನ ತಜ್ಞ ಸುಭಾಷ್ ಕಶ್ಯಪ್‌ವರೆಗೂ ಹಲವು ಗಣ್ಯರೂ ಕೂಡ ಹಕ್ಕುಚ್ಯುತಿ ಸಮಿತಿಯಿಂದ ನೋಟಿಸ್ ಪಡೆದಿದ್ದಾರೆ. 

ಪತ್ರಕರ್ತರಿಗೆ ವಿಧಿಸಲಾಗಿರುವ ಶಿಕ್ಷೆ ಸಂಬಂಧ ಎಲ್ಲಾ ಕಡೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಹಕ್ಕುಚ್ಯುತಿ ಅಂದರೇನು?  ಜನರ ಸೇವೆಗಾಗಿಯೇ ಪ್ರತಿನಿಧಿಗಳಾಗಿ ಆಯ್ಕೆಯಾಗುವ ನಮ್ಮ ಶಾಸಕರು ಮತ್ತು ಸಂಸದರಿಗೆ ಇಂಥ ವಿಶೇಷ ಸವಲತ್ತುಗಳು  ಮತ್ತು ಹಕ್ಕುಗಳು ಇರಬೇಕೇ? ಪತ್ರಕರ್ತರೂ ಸೇರಿದಂತೆ, ದೇಶದ ಜನರಿಗೆ ಇವರನ್ನು ಪ್ರಶ್ನಿಸುವ ಹಕ್ಕಿಲ್ಲವೇ? ಎಂಬೆಲ್ಲಾ ವಿಚಾರಗಳ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್.

ಪ್ರಜಾತಂತ್ರ ವ್ಯವಸ್ಥೆಯುಳ್ಳ ಭಾರತ ದೇಶದಲ್ಲಿ ಜನಪ್ರತಿನಿಧಿಗಳು ಅನ್ನಿಸಿಕೊಳ್ಳುವ ಶಾಸಕರಿಗೆ ಮತ್ತು ಸಂಸದರಿಗೆ ಕೆಲವು ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಕೊಡಲಾಗಿದೆ. ಅವುಗಳಲ್ಲಿ ಈ ಹಕ್ಕುಚ್ಯುತಿ ನಿರ್ಣಯ ಮಂಡನೆಯೂ ಒಂದು. privilege motion ಅಥವ ಹಕ್ಕುಚ್ಯುತಿ ನಿರ್ಣಯ ಅನ್ನುವುದು, ಯಾರಾದರೂ ತಮ್ಮ ಹಕ್ಕಿಗೆ ಚ್ಯುತಿ ತಂದಿದ್ದಾರೆ, ಅಥವ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕಾಗಿ, ಸಂಸತ್ ಸದಸ್ಯರು ಅಥವ ಯಾವುದೇ ರಾಜ್ಯವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಬಹುದಾದಂಥ ಒಂದು ವಿಶೇಷ  ಹಕ್ಕು ಎಂದು ಹೇಳಬಹುದು. ಜನಪ್ರತಿನಿಧಿಗಳಾಗಿ ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಿ ಎಂಬ ಕಾರಣಕ್ಕಾಗಿ ಸಂವಿಧಾನದಲ್ಲಿ ನೀಡಲಾಗಿರುವ ಈ ಸಂಸದೀಯ ಸವಲತ್ತುಗಳನ್ನು ಮತ್ತು ರಕ್ಷಣೆಯನ್ನು ಎಲ್ಲಾ ಸಂಸದರು ಮತ್ತು ಶಾಸಕರು ವೈಯಕ್ತಿಕವಾಗಿಯೂ ಮತ್ತು ಒಂದು ಸಮೂಹವಾಗಿಯೂ ಹೊಂದಿರುತ್ತಾರೆ. ಸಂಸದರು ಮತ್ತು ಶಾಸಕರ ಹಕ್ಕುಗಳನ್ನು ಮತ್ತು ಅವರಿಗೆ ಸಂವಿಧಾನ ನೀಡಿರುವ ರಕ್ಷಣಾ ವ್ಯವಸ್ಥೆಯನ್ನು ಯಾರಾದರೂ ಉಲ್ಲಂಘಿಸಿದ್ದಾರೆ ಅನ್ನುವುದಾದರೆ, ಅಂಥದ್ದನ್ನು ಹಕ್ಕುಚ್ಯುತಿ ಎಂದು ಹೇಳಲಾಗುತ್ತದೆ. ಅಂಥ ಪ್ರಕರಣಗಳಲ್ಲಿ, ಸಂಸತ್ತು ಮತ್ತು ಶಾಸನ ಸಭೆಯ ಕಾನೂನುಗಳ ಪ್ರಕಾರ ಶಿಕ್ಷೆ ವಿಧಿಸಲೂ ಅವಕಾಶವಿದೆ.

ಯಾವುದೇ ನಿರ್ದಿಷ್ಟ ಹಕ್ಕುಚ್ಯುತಿಯ ಜೊತೆಗೆ, ಎಲ್ಲಾ ಸದನಗಳಿಗೂ ತಮ್ಮ ಗೌರವ ಮತ್ತು ಅಧಿಕಾರದ ಬಗ್ಗೆ ತಿರಸ್ಕಾರದ ರೀತಿಯ ನಡೆಗಳನ್ನು ಅನುಸರಿಸಿದವರನ್ನು ಮತ್ತು  ನಿಂದನಾತ್ಮಕ ಹೇಳಿಕೆ ನೀಡಿದವರನ್ನು ಶಿಕ್ಷಿಸುವುದಕ್ಕೂ ಹಕ್ಕಿದೆ. ಈ ರೀತಿಯ ಹಕ್ಕುಚ್ಯುತಿ ನಿರ್ಣಯವನ್ನು ಯಾವುದೇ ವ್ಯಕ್ತಿ ವಿರುದ್ಧ, ಸದನದ ಇತರೆ ಸದಸ್ಯರ ವಿರುದ್ಧ, ಯಾವುದೇ ಸಮಿತಿಯ ವಿರುದ್ಧ ಮತ್ತು ಅಲ್ಲಿ ಸದಸ್ಯರಾಗಿರುವ ಇತರರ ವಿರುದ್ಧವೂ ಮಂಡಿಸಬಹುದಾಗಿದೆ. ಯಾವುದೇ ರೀತಿಯಲ್ಲಿ ತಮ್ಮ ಹಕ್ಕಿಗೆ ಚ್ಯುತಿಯಾಗಿದೆ ಅಥವ ಪೆಟ್ಟುಬಿದ್ದಿದೆ ಅನ್ನಿಸಿದಲ್ಲಿ, ಸಂಸದರು ಮತ್ತು ಶಾಸಕರು, ಸಂಸತ್ತು, ವಿಧಾನಸಭೆ ಅಥವ ಪರಿಷತ್ತಿನಲ್ಲಿ, ಆ ವಿಷಯ ಪ್ರಸ್ತಾಪಿಸಿ, ನ್ಯಾಯಒದಗಿಸುವಂತೆ ಸಭಾಧ್ಯಕ್ಷರನ್ನು ಕೋರಬಹುದು. ಸದಸ್ಯರು ಪ್ರಸ್ತಾಪ ಮಾಡಿದ ವಿಚಾರ, ಹಕ್ಕುಚ್ಯುತಿ ವ್ಯಾಪ್ತಿಗೆ ಬರುತ್ತದೆ ಎಂದು ಸಭಾಧ್ಯಕ್ಷರಿಗೆ ಅನ್ನಿಸಿದರೆ, ಆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಅದನ್ನು ಹಕ್ಕು ಬಾದ್ಯತಾ ಸಮಿತಿಗೆ ವರ್ಗಾಯಿಸಬಹುದು. ಅಥವ ಈ ಹಕ್ಕುಚ್ಯುತಿ ನಿರ್ಣಯ ಅಂಗೀಕರಿಸಲು ಯೋಗ್ಯವಾಗಿಲ್ಲ ಅನ್ನಿಸಿದರೆ, ಅದನ್ನು ತಿರಸ್ಕರಿಸುವ ಅಧಿಕಾರವೂ ಅವರಿಗೆ ಇರುತ್ತದೆ.  ಎಲ್ಲಾ ಪಕ್ಷಗಳ ಸದಸ್ಯರನ್ನೂ ಒಳಗೊಂಡ ಸಮಿತಿ, ದೂರುನೀಡಿದ ಶಾಸಕರು ಮತ್ತು ಆರೋಪ ಹೊತ್ತವರನ್ನು ಕರೆಸಿಕೊಂಡು ಅವರ ಅಭಿಪ್ರಾಯಗಳನ್ನು ಕೇಳಿ, ತನ್ನ ಅಂತಿಮ ವರದಿಯನ್ನು ಸದನಕ್ಕೆ ಸಲ್ಲಿಸುತ್ತದೆ.

ಸಂಸದೀಯ ವ್ಯವಸ್ಥೆಯಲ್ಲಿ ಎಲ್ಲಾ ಸಂಸದರು ಮತ್ತು ಶಾಸಕರು ವೈಯಕ್ತಿವಾಗಿ ಮತ್ತು ಸಾಮೂಹಿಕವಾಗಿ ಹಲವು ರೀತಿಯ ಸವಲತ್ತು ಮತ್ತು ಹಕ್ಕುಗಳನ್ನು ಹೊಂದಿರುತ್ತಾರೆ. ರಾಜ್ಯಗಳ ಶಾಸನ ಸಭೆ ಮತ್ತು ಸಂಸತ್ತಿಗೆ ಇರುವ ವಿಶೇಷಾಧಿಕಾರಗಳು ಏಕರೂಪವಾಗಿವೆ. ಸಂವಿಧಾನದ  105ನೇ ವಿಧಿಯಲ್ಲಿ ಸಂಸತ್ತಿನ ಪರಮಾಧಿಕಾರದ ಬಗ್ಗೆ ಮತ್ತು 194ನೇ ವಿಧಿಯಲ್ಲಿ ರಾಜ್ಯಗಳ ಶಾಸನ ಸಭೆಗಳಿಗಿರುವ ಪರಮಾಧಿಕಾರಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಪರಮಾಧಿಕಾರಗಳನ್ನು ನಮ್ಮ ಸಂಸತ್ತಿನಲ್ಲಿ ವ್ಯಾಖ್ಯಾನ ಮಾಡಿ ನಿರ್ಧರಿಸುವವರೆಗೂ, ಅವು ಬ್ರಿಟನ್‌ ದೇಶದ ಹೌಸ್ ಆಫ್ ಕಾಮನ್ಸ್ ನಲ್ಲಿ ಇರುವಂತೆಯೇ ಇರುತ್ತವೆ ಎಂದು ಉಲ್ಲೇಖಿಸಲಾಗಿತ್ತು. ಆದರೆ,  1978ರಲ್ಲಿ ಸಂವಿಧಾನದ 105ನೇ ವಿಧಿಯಲ್ಲಿನ ಕೆಲ ಅಂಶಗಳಿಗೆ ತಿದ್ದುಪಡಿ ತಂದು . ಸದನಗಳ ವಿಶೇಷಾಧಿಕಾರಗಳು, ಕಾಲದಿಂದ ಕಾಲಕ್ಕೆ ದೇಶದ ಸಂಸತ್ತಿನಲ್ಲಿ ನೀಡುವ ವಿವರಣೆಯಂತೆ ಇರುತ್ತವೆ ಎಂದು ಬದಲಾಯಿಸಲಾಯಿತು.

ಹೀಗಾಗಿ, ನಮ್ಮ ಸಂಸದರು ಮತ್ತು ಶಾಸಕರ ವ್ಯಕ್ತಿಗತ ವಿಶೇಷಾಧಿಕಾರಗಳು ಯಾವು ಯಾವು ಅನ್ನುವುದನ್ನು ನಿರ್ದಿಷ್ಟವಾಗಿ ಪಟ್ಟಿ ಮಾಡಿಲ್ಲ. ಕಾಲದಿಂದ ಕಾಲಕ್ಕೆ ಬದಲಾಗುವ ಸಂದರ್ಭಗಳಲ್ಲಿ ತಮ್ಮ ವಿವೇಚನೆಯನ್ನು ಸೂಕ್ತವಾಗಿ ಬಳಸಿ ನಿರ್ಧಾರ ಮಾಡಲಿ ಅನ್ನುವ ಭಾವನೆಯೂ ಇದಕ್ಕೆ ಕಾರಣವಾಗಿರಬಹುದು. ಆದರೆ, ನಮ್ಮ ಸದನಗಳು ಇದೇ ಅವಕಾಶವನ್ನು ಬಳಸಿಕೊಂಡು, ವಿಶೇಷಾಧಿಕಾರ ಅನ್ನುವುದನ್ನು ತಮಗೆ ತೋಚಿದ ರೀತಿಯಲ್ಲಿ ವ್ಯಾಖ್ಯಾನ ಮಾಡಲು ಮುಂದಾಗುತ್ತಿವೆ.

ನಮ್ಮ ಸಂಸದರು ಮತ್ತು ಶಾಸಕರಿಗಿರುವ ಪರಮಾಧಿಕಾರಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವ ವಾಕ್ ಸ್ವಾತಂತ್ರ್ಯ ಮುಖ್ಯವಾದದ್ದು. ಇದರ ಪ್ರಕಾರ, ಯಾವುದೇ ಒಬ್ಬ ಸಂಸದ ಅಥವ ಶಾಸಕ ಸದನಲ್ಲಿ ಆಡಿದ ಮಾತು, ನೀಡಿದ ಹೇಳಿಕೆಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಸದನದಲ್ಲಿ ಒಬ್ಬ ಸದಸ್ಯ ಯಾರ ಪರ ಅಥವ ವಿರುದ್ಧವಾಗಿ ಮತ ಹಾಕಿದರೂ ಕೂಡ, ಅದನ್ನು ಯಾವುದೇ ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ. ತಮ್ಮ ಹಕ್ಕನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಸದನದ ಹೊರಗಿರುವ ಯಾರನ್ನೇ ಆಗಲಿ ಸದನಕ್ಕೆ ಕರೆಸಿ ಛೀಮಾರಿ ಹಾಕುವ ಅಥವ ಅವರನ್ನು ಜೈಲು ಶಿಕ್ಷೆಗೆ ಗುರಿಪಡಿಸುವ ಅಧಿಕಾರ ಸದನಕ್ಕಿರುತ್ತದೆ. ತಮ್ಮ ಹಕ್ಕಿಗೆ ಚ್ಯುತಿ ತಂದವರನ್ನು ಅಮಾನತುಗೊಳಿಸುವ ಅಥವ ಉಚ್ಚಾಟನೆ ಮಾಡುವುದಕ್ಕೂ ಸದನಕ್ಕೆ ಅವಕಾಶವಿದೆ.

ಆದರೆ, ಸದನದ ಹೊರಗೆ, ಎಲ್ಲಾ ಸಂಸದರೂ ಮತ್ತು ಶಾಸಕರೂ ಕೂಡ ಸಾಮಾನ್ಯ ನಾಗರಿಕರೇ ಆಗಿರುತ್ತಾರೆ. ಹೀಗಾಗಿ, ಅವರು ಸದನದ ಹೊರಗೆ ಆಡುವ ಮಾತು ಮತ್ತು ಮಾಡುವ ಚಟುವಟಿಕೆಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಹೀಗಾಗಿ, ಅವರೇನಾದರೂ ಕಾನೂನು ಬಾಹಿರವಾಗಿ ನಡೆದುಕೊಂಡರೆ ಅವರ ವಿರುದ್ಧ  ಭಾರತೀಯ ದಂಡ ಸಂಹಿತೆ ಅಡಿ ಕ್ರಮ ಜರುಗಿಸಲು ಅವಕಾಶ ಇರುತ್ತದೆ. ಇದೇವೇಳೆ, ಸದನದಲ್ಲಿ ಆಡುವ ಮಾತುಗಳಿಗೆ ಸಂಬಂಧಪಟ್ಟಂತೆಯೂ ಸಂವಿಧಾನದ 121ನೇ ವಿಧಿಯಲ್ಲಿ ಒಂದು ಷರತ್ತು ವಿಧಿಸಲಾಗಿದೆ. ಅದೇನೆಂದರೆ, ಸದನದಲ್ಲಿ ಯಾರೂ ಕೂಡ ಹೈ ಕೋರ್ಟ್ ಅಥವ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳ ಕರ್ತವ್ಯನಿರ್ವಹಣೆ ಮತ್ತು ನಡವಳಿಕೆ ಬಗ್ಗೆ ಮಾತನಾಡುವಂತಿಲ್ಲ. ಆದರೆ, ನ್ಯಾಯಮೂರ್ತಿಯೊಬ್ಬರನ್ನು ಅವರ ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ನಿರ್ಣಯ ಸಲ್ಲಿಸುವಾಗ ಈ ಷರತ್ತು ಅನ್ವಯವಾಗುವುದಿಲ್ಲ. ಆದರೆ, ಯಾವುದೇ ನ್ಯಾಯಾಲಯಕ್ಕೆ ಸದನಗಳ ಅಥವಾ ಅವುಗಳ ಸಮಿತಿಗಳ ಕಲಾಪಗಳ ಬಗ್ಗೆ ವಿಚಾರಣೆ ನಡೆಸುವ ಹಕ್ಕಿಲ್ಲ.

ಇಷ್ಟು ಮಾತ್ರವಲ್ಲದೆ, ಅಧಿವೇಶನ ನಡೆಯುವ ವೇಳೆ, ಯಾವುದೇ ಸದನದ ಸದಸ್ಯನನ್ನು ಸಭಾಧ್ಯಕ್ಷರ ಅನುಮತಿಯಿಲ್ಲದೆ ಬಂಧಿಸಲು ಅವಕಾಶವಿಲ್ಲ. ಅಧಿವೇಶನದ ಆರಂಭಕ್ಕೆ 40 ದಿನಗಳ ಮೊದಲು ಮತ್ತು ಅಧಿವೇಶನ ಅಂತ್ಯಗೊಂಡ 40 ದಿನಗಳ ಒಳಗೂ ಸದಸ್ಯನನ್ನು ಬಂಧಿಸುವಂತಿಲ್ಲ. ಸದಸ್ಯರ ಬಂಧನ, ಶಿಕ್ಷೆ, ಬಿಡುಗಡೆ ಇತ್ಯಾದಿ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುವ ಅಧಿಕಾರ ಸದನಕ್ಕಿದೆ. ಆದರೆ, ಈ ವಿಶೇಷ ಸವಲತ್ತು, ಕೇವಲ ಸಿವಿಲ್ ಕೇಸುಗಳಿಗೆ ಮಾತ್ರ ಸಂಬಂಧಿಸಿದಂತೆ ಅನ್ವಯವಾಗುತ್ತದೆ. ಇದು ಕೊಲೆ, ಅತ್ಯಾಚಾರ ಇತ್ಯಾದಿ ಆರೋಪಗಳಿಗೆ ಅನ್ವಯವಾಗುವುದಿಲ್ಲ ಅಥವ ನ್ಯಾಯಾಂಗ ನಿಂದನೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯುವುದಕ್ಕೂ ನಿರ್ಬಂಧ ವಿಧಿಸುವುದಿಲ್ಲ.

ಇದೇ ವೇಳೆ, ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯುಳ್ಳ ವಿಚಾರಗಳ ಬಗ್ಗೆ ಚರ್ಚಿಸಲು ಗೋಪ್ಯ ಅಧಿವೇಶನ ನಡೆಸುವುದಕ್ಕೂ ಸದನಗಳಿಗೆ ಅವಕಾಶವಿದೆ. ಆದರೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಸತ್ತಿನಲ್ಲಾಗಲಿ, ಯಾವುದೇ ರಾಜ್ಯದ ವಿಧಾನಸಭೆ ಅಥವ ಪರಿಷತ್ತಿನಲ್ಲಾಗಲಿ ಇಂಥ ರಹಸ್ಯ ಅಧಿವೇಶನ ಈವರೆಗೂ ನಡೆದಿಲ್ಲ. ಪ್ರಜಾತಂತ್ರ  ವ್ಯವಸ್ಥೆಯಲ್ಲಿ ತಮ್ಮ ಪ್ರತಿನಿಧಿಗಳು ಏನೆಲ್ಲಾ ಚರ್ಚಿಸುತ್ತಿದ್ದಾರೆ ಅನ್ನುವುದು ನಾಗರಿಕರಿಗೆ ಗೊತ್ತಾಗಬೇಕಾಗಿರುವುದರಿಂದ ಈ ರೀತಿಯ ಅಧಿವೇಶನಗಳು ನಡೆಯುವುದಿಲ್ಲ. ಯಾವುದೇ ಸದನಕ್ಕೆ ಸಲ್ಲಿಕೆಯಾದ ವರದಿಗಳು, ಕಲಾಪಗಳು ಹಾಗೂ ಚರ್ಚೆಗಳನ್ನು ಪ್ರಕಟಿಸಲು ಸದನಕ್ಕೆ ಹಕ್ಕಿದೆ, ಇದೇ ವೇಳೆ, ಬೇರೆ ಯಾರೂ ಅಂಥವನ್ನು ಪ್ರಕಟಿಸದಂತೆ ತಡೆಹಿಡಿಯಲೂ ಅವಕಾಶವಿದೆ.

ಸದನದ ಅಥವ ಅದರ ಸದಸ್ಯನ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆಯೇ ಅನ್ನುವುದನ್ನು ನಿರ್ಧರಿಸುವ ಪರಮಾಧಿಕಾರ, ಸಂಸತ್ತು ಅಥವ ಶಾಸನ ಸಭೆಗೆ ಇರುತ್ತದೆ. ಈ ಪರಮಾಧಿಕಾರವನ್ನು ಯಾವುದೇ ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ. ಆದರೆ, ಸದನ ಕೈಗೊಂಡ ನಿರ್ಧಾರ, ನ್ಯಾಯಸಮ್ಮತ ವಾಗಿದೆಯೇ ಇಲ್ಲವೇ ಅನ್ನುವುದನ್ನು ಕೋರ್ಟುಗಳು ಪರಿಶೀಲಿಸಬಹುದು ಎಂದು ಸುಪ್ರೀಂಕೋರ್ಟು ಹೇಳಿದೆ. ಹೀಗಾಗಿ, ಯಾರದ್ದಾದರೂ ಬಂಧನಕ್ಕೆ ಯಾವುದೇ ಸದನ ಸೂಚನೆ ನೀಡಿದ್ದರೆ, ಅದರ ಸಿಂಧುತ್ವವನ್ನು ಕೋರ್ಟಿನಲ್ಲಿ ಪ್ರಶ್ನಿಸಬಹುದು. ಸಂವಿಧಾನದ 226ನೇ ವಿಧಿಯಲ್ಲಿ,  ಹೇಬಿಯಸ್ ಕಾರ್ಪಸ್ ಅರ್ಜಿ ಅಂದರೆ, ಎಲ್ಲೇ ಆದರೂ ಇರುವ ವ್ಯಕ್ತಿಯನ್ನು ಕರೆತಂದು ತನ್ನ ಮುಂದೆ ಹಾಜರುಪಡಿಸಲು ಆದೇಶಿಸುವಂಥ ಕೋರ್ಟುಗಳ ಅಧಿಕಾರವನ್ನು ಯಾವುದೇ ಸದನವೂ ಪ್ರಶ್ನಿಸುವಂತಿಲ್ಲ. ತನಗಿರುವ ಹಕ್ಕುಗಳು ಮತ್ತು ರಕ್ಷಣೆಯ ಸವಲತ್ತನ್ನು ಸ್ಪಷ್ಟಪಡಿಸುವ ಸಲುವಾಗಿಯೇ, ಸಂಸತ್ತು ಮತ್ತು ಶಾಸನ ಸಭೆಗಳ ವಿಶೇಷ ಅಧಿಕಾರ ಎಂಬ ಪದವನ್ನು ನಮ್ಮ ಸಂವಿಧಾನದಲ್ಲಿ ಬಳಕೆ ಮಾಡಲಾಗಿದೆ.

ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ, ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸುವ ರಾಜ್ಯ ವಿಧಾನಸಭೆಯ ಅಧ್ಯಕ್ಷರ ನಿರ್ಣಯಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸದನದಲ್ಲಿನ ತಮ್ಮ ಸ್ವಾತಂತ್ರ್ಯ ರಕ್ಷಿಸಿಕೊಳ್ಳಲು ಮತ್ತು ಶಾಸನಾಂಗದ ಕಾರ್ಯಕಲಾಪಗಳ ಮೇಲೆ ಹೊರಗಿನಿಂದ ಬೀಳಬಹುದಾದ ಒತ್ತಡಗಳಿಂದ ರಕ್ಷಣೆ ಪಡೆದುಕೊಳ್ಳಲು ಕೆಲವು ವಿಶೇಷಾಧಿಕಾರಗಳನ್ನು ಕೊಡಲಾಗಿದೆ. ಆದರೆ, ಆ ವಿಶೇಷಾಧಿಕಾರಗಳನ್ನು ಸದನ ಮತ್ತು ಅದರ ಸದಸ್ಯರ ವರ್ಚಸ್ಸಿನ ರಕ್ಷಣೆಗಾಗಿ, ಟೀಕೆ ಟಿಪ್ಪಣಿಗಳನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಬಳಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಯಾವುದೇ ಮಾಧ್ಯಮ ಅಥವ ಪತ್ರಿಕೆ ತಮ್ಮ ವಿರುದ್ಧ ಸುಳ್ಳು ಅಥವ ತಪ್ಪು ವರದಿ ಪ್ರಕಟಿಸಿದೆ ಮತ್ತು ಅದರಿಂದ ತಮ್ಮ ಮಾನ ಹಾನಿಯಾಗಿದೆ ಎಂದಾದರೆ, ಅಂಥವರ ವಿರುದ್ಧ ಕೋರ್ಟಿನಲ್ಲಿ ಪ್ರಕರಣ ದಾಖಲಿಸಬಹುದಾಗಿತ್ತು. ಅದನ್ನುಬಿಟ್ಟು, ಹಕ್ಕುಚ್ಯುತಿಯಂಥ ಸಾಂವಿಧಾನಿಕ ಅಧಿಕಾರಗಳ ಮೊರೆಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಇಡೀ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ.  ನಮ್ಮ ಸಂಸದರು, ಶಾಸಕರು ಮತ್ತು ಸರ್ಕಾರದ ಕೆಲವು ಅಧಿಕಾರಿಗಳು ದೇಶದಲ್ಲಿನ ಬೇರೆ ಯಾವುದೇ ಸಂಸ್ಥೆಗಳಿಗಿಂತ ತಾವೇ ಶ್ರೇಷ್ಠರು ಎಂದು ಅಂದುಕೊಂಡಿದ್ದಾರೆ.  ಹೀಗಾಗಿ, ಮಾಧ್ಯಮಗಳು ಅಥವ ಇತರೆ ವ್ಯಕ್ತಿಗಳು ತಮ್ಮ ಬಗ್ಗೆ ಮಾಡುವ ಟೀಕೆಗಳನ್ನು ಸಹಿಸಲು ಅವರಿಗೆ ಆಗುತ್ತಿಲ್ಲ. ಇಂಥ ಒಂದು ಧೋರಣೆಯೇ ಶಾಸಕಾಂಗ ಮತ್ತು ಮಾಧ್ಯಮಗಳ ನಡುವಿನ ಜಗಳಕ್ಕೆ ಕಾರಣ ಅನ್ನುವುದು ವಿಶ್ಲೇಷಕರ ಅಭಿಪ್ರಾಯ. ಒಂದು ವೇಳೆ, ಹಕ್ಕುಚ್ಯುತಿ  ನೆಪದಲ್ಲಿ ಶಾಸಕರು ಮತ್ತು ಸಂಸದರಿಗೆ ತಮ್ಮ ಮನ ಬಂದಂತೆ ಮಾಡಲು ಸಾಧ್ಯವಾಗಿದ್ದರೆ, ಪತ್ರಕರ್ತರೂ ಸೇರಿದಂತೆ, ಜನಪ್ರತಿನಿಧಿಗಳ ಎಡವಟ್ಟುಗಳನ್ನು ಪ್ರಶ್ನಿಸುವವರೆಲ್ಲರೂ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತಿತ್ತೋ ಏನೋ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ