ಕಿಡಿಗೇಡಿಗಳ ಕೃತ್ಯ: ವಾಲ್ಮೀಕಿ ನಾಮ ಘಲಕಕ್ಕೆ ಸಗಣಿ !

Kannada News

11-07-2017

ಬಳ್ಳಾರಿ: ಮಹರ್ಷಿ ವಾಲ್ಮೀಕಿ ನಾಮ ಫಲಕಕ್ಕೆ ಚಪ್ಪಲಿ ಹಾಕಿ, ಸೆಗಣಿ ಹಚ್ಚಿರುವುದರಿಂದ ಬಳ್ಳಾರಿಯ ಕೂಡ್ಲಿಗಿ ತಾಲ್ಲೂಕಿನ, ತಿಮ್ಮಲಾಪುರ ಗ್ರಾಮದಲ್ಲಿ ಈಗ ಉದ್ರಿಕ್ತ ಪರಿಸ್ಥಿತಿ ಏರ್ಪಟ್ಟಿದೆ. ಸ್ಥಳದಲ್ಲಿ ಕೊಟ್ಟೂರು ಠಾಣೆ ಪೊಲೀಸರು ಬೀಡು ಬಿಟ್ಟಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಹತ್ತಿರದ ತಿಮ್ಮಲಾಪುರದ ತಾಂಡದ ಲಮಾಣಿ ಸಮುದಾಯದ ಯುವಕರು ಈ ಕೃತ್ಯ ಎಸಗಿದ್ದಾರೆಂದು, ವಾಲ್ಮೀಕಿ ಸಮುದಾಯದ ಜನತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ನಿನ್ನೆ ರಾತ್ರಿ ಈ ಕೃತ್ಯ ನಡೆದಿದೆ. ಲಂಬಾಣಿ ಸಮುದಾಯದ ನಾಗರಾಜ್ ಮತ್ತು ವಾಲ್ಮೀಕಿ ಸಮುದಾಯದ ಪ್ರಶಾಂತ್ ಅವರ ನಡುವಿನ ವಯಕ್ತಿಕ ಜಗಳ ಈಗ ಎರಡು ಸಮುದಾಯಗಳ ನಡುವೆ ವೈಷಮ್ಯಕ್ಕೆ ತಿರುಗಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಮೊದಲು ಪ್ರಶಾಂತ್ ನಾಗರಾಜ್ ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ನಾಗರಾಜ್ ಗುಂಪು ಪ್ರಶಾಂತ್ ಅವರ ಮನೆಗೆ ಬಂದು ಹಲ್ಲೆ ಮಾಡಿ ಹೋಗಿದ್ದರು. ಈ ಬಗ್ಗೆ ರಾತ್ರಿ ಇಡೀ ಕೊಟ್ಟೂರು ಠಾಣೆಯಲ್ಲಿ ಸಂಧಾನ ಕಾರ್ಯ ನಡೆದಿತ್ತು. ಆದರೆ ಬೆಳಗಾಗುವುದರೊಳಗೆ ಈ ಕೃತ್ಯ ನಡೆದಿರುವುದು ಈಗ ಗ್ರಾಮದಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣವಾಗಿದೆ. ಘಟನೆಯಿಂದ ಕೂಡ್ಲಿಗಿಗೆ ಮತ್ತಿತರೆಡೆಗಳಿಂದ ವಾಲ್ಮೀಕಿ ಜನ ಬಂದು ಸೇರಿದ್ದಾರೆ. ಗ್ರಾಮದಲ್ಲಿ ಪಿಎಸ್‍ಐ ಪುಲ್ಲಯ್ಯ ರಾಥೋಡ್ ಮತ್ತವರ ಸಿಬ್ಬಂದಿ ಸಂಧಾನ ಸಭೆ ನಡೆಸಿದ್ದಾರೆ. ಈ ಘಟನೆಗೆ ಮೂಲ ಕಾರಣ ಅಕ್ರಮ ಮದ್ಯ ಮಾರಾಟ ದಂಧೆ ಎಂದು ಹೇಳಲಾಗುತ್ತಿದೆ. ನಾಗರಾಜ್ ಮತ್ತು ಪ್ರಶಾಂತ್ ಇಬ್ಬರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರು. ಮಾರಾಟ ವಿಷಯದಲ್ಲಿನ ಭಿನ್ನಾಭಿಪ್ರಾಯವೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ