ಇಂಡಿಯಾ-ಇಸ್ರೇಲ್ ದೋಸ್ತಿ !

Kannada News

10-07-2017 1196

ತಾವು ಪ್ರಧಾನಿಯಾದಾಗಿನಿಂದಲೂ ಒಂದೇ ಸಮನೆ ಜಗತ್ತಿನ ಹಲವಾರು ದೇಶಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ, ಇದೀಗ ಇಸ್ರೇಲ್‌ ದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ, ಈವರೆಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ದೇಶಕ್ಕೆ ಭೇಟಿ ನೀಡಿರಲಿಲ್ಲ. ಹೀಗಾಗಿ, ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿ, ಭಾರತ ಮತ್ತು ನೆರೆಹೊರೆಯವರಲ್ಲಿ ಹಾಗೂ ಇಡೀ ಜಗತ್ತಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಮೋದಿಯವರ ಇಸ್ರೇಲ್ ಭೇಟಿ ಬಗ್ಗೆ, ಇಸ್ರೇಲ್ ದೇಶದ ಬಗ್ಗೆ ಮತ್ತು ಈ ಭೇಟಿಯಿಂದ ಭಾರತಕ್ಕೆ ಆಗಬಹುದಾದ ಲಾಭಗಳ ಬಗ್ಗೆ ಸ್ಪೆಷಲ್ ರಿಪೋರ್ಟರ್‌ನಿಂದ ಒಂದು ವಿಶೇಷ ವರದಿ.

ಹೆಚ್ಚೂ ಕಡಿಮೆ ಒಂದೇ ಸಮಯದಲ್ಲಿ ಸ್ವತಂತ್ರ ರಾಷ್ಟ್ರಗಳಾಗಿ ಉದಯಿಸಿದ ಭಾರತ ಮತ್ತು ಇಸ್ರೇಲ್ ನಡುವೆ, ಸುಮಾರು ವರ್ಷಗಳ ಕಾಲ ಯಾವುದೇ ಸಂಬಂಧ ಇರಲಿಲ್ಲ.  ತಾನು ಪಾಕಿಸ್ತಾನವನ್ನು ನಿಯಂತ್ರಿಸಲು, ಇತರೆ ಮುಸ್ಲಿಮ್ ದೇಶಗಳ ಜೊತೆ ಉತ್ತಮ ಸ್ನೇಹ ಅಗತ್ಯ ಎಂಬ ಭಾವನೆ ಭಾರತಕ್ಕಿತ್ತು. ಹೀಗಾಗಿ, ಮುಸ್ಲಿಮ್ ದೇಶಗಳು ಮತ್ತು ಭಾರತದಲ್ಲಿನ ಮುಸ್ಲಿಮ್ ಸಮುದಾಯದ ವಿರೋಧವನ್ನೆದುರಿಸಿ ಇಸ್ರೇಲ್ ಜೊತೆ ಸ್ನೇಹ ಬೆಳೆಸುವುದು ಸರಿಹೋಗುವುದಿಲ್ಲ ಅನ್ನುವ ಚಿಂತನೆಯಲ್ಲಿ ಭಾರತ ಹತ್ತಾರು ವರ್ಷಕಾಲ ಹಾಕಿತ್ತು. ಆದರೆ, ತೊಂಭತ್ತರ ದಶಕದಲ್ಲಿ ಪಿ.ವಿ.ನರಸಿಂಹ ರಾವ್ ಸರ್ಕಾರ ಅಧಿಕಾರದಲ್ಲಿದ್ದಾಗ ಇಸ್ರೇಲ್ ಜೊತೆಗೆ ಪೂರ್ಣ ರಾಜತಾಂತ್ರಿಕ ಸಂಬಂಧ ಬೆಳೆಸಿತ್ತು. ಆನಂತರ, ವಾಜಪೇಯಿ ಅವಧಿಯಲ್ಲಿ ಭಾರತ-ಇಸ್ರೇಲ್ ಸಂಬಂಧ ಮತ್ತಷ್ಟು ಉತ್ತಮಗೊಂಡಿತ್ತು. 2003ರಲ್ಲಿ ಇಸ್ರೇಲ್‌ ಪ್ರಧಾನಿ ಏರಿಯಲ್‌ ಶೆರೋನ್‌ ಭಾರತಕ್ಕೆ ಭೇಟಿ ನೀಡಿದ್ದರು. ಅದು ಇಸ್ರೇಲ್‌ ಪ್ರಧಾನಿಯೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ. ಅಲ್ಲಿಂದ ಮುಂದಕ್ಕೆ ಡಾ.ಮನ್ ಮೋಹನ್ ಸಿಂಗ್ ಅವಧಿಯಲ್ಲೂ ಭಾರತ–ಇಸ್ರೇಲ್ ಸಂಬಂಧಗಳಲ್ಲಿ ಸಾಕಷ್ಟು ಮುಂದುವರಿಕೆ ಕಂಡುಬಂದಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಸ್ರೇಲ್‌ ಜತೆಗಿನ ಸಂಬಂಧ ಎದ್ದು ಕಾಣುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಗೃಹ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಈಗಾಗಲೇ ಇಸ್ರೇಲ್‌ಗೆ ಭೇಟಿ ನೀಡಿದ್ದರು.

ಇಸ್ರೇಲ್ ದೇಶದ ರಾಜಧಾನಿ ಟೆಲ್ ಅವೀವ್‌ ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಇಸ್ರೇಲಿ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಖುದ್ದು ಹಾಜರಿದ್ದರು. ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ಮತ್ತು ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಅವರನ್ನು ಮಾತ್ರ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಪರಿಪಾಠವಿದೆ. ಅದನ್ನು ಮುರಿದ ನೆತನ್ಯಾಹು, ಮೋದಿ ಅವರನ್ನು ಸ್ವಾಗತಿಸಿ ‘ಆಪ್ ಕಾ ಸ್ವಾಗತ್‌ ಹೈ ಮೇರೆ ದೋಸ್ತ್‌’ ಎಂದು ಹೇಳಿದರು. ಅಲ್ಲಿಂದಾಚೆಗೆ ಭಾರತ–ಇಸ್ರೇಲ್‌ ನಡುವಣ ಬಾಂಧವ್ಯದಲ್ಲಿ ಹೊಸ ಅಧ್ಯಾಯವೇ  ಆರಂಭವಾಯಿತು ಎಂದು  ಬಣ್ಣಿಸಲಾಗುತ್ತಿದೆ.

ಇದನ್ನು ಗಮನಿಸಿದಾಗ ಇಸ್ರೇಲ್ ಎಂಬ ಪುಟ್ಟ ಹಾಗೂ ಶಕ್ತಿಶಾಲಿ ರಾಷ್ಟ್ರ ತನ್ನದೇ ಆದ ಕಾರಣಕ್ಕಾಗಿ ಭಾರತವನ್ನು ತುಂಬಾ ಪ್ರೀತಿಸುವಂತೆ ಕಂಡುಬರುತ್ತಿದೆ. ಆದರೆ, ಭಾರತ ಮತ್ತು ಯಹೂದಿಗಳ ಸಂಬಂಧದ ಎಳೆ ಕ್ರಿಸ್ತಪೂರ್ವದಿಂದಲೂ ಇದೆ ಎಂದು ಹೇಳಲಾಗುತ್ತದೆ. ಯಹೂದಿಗಳು ಹಲವಾರು ಶತಮಾನಗಳ ಕಾಲ, ಕ್ರೈಸ್ತರು ಮತ್ತು ಮುಸಲ್ಮಾನರಿಂದ ಸಮಸ್ಯೆ ಅನುಭವಿಸುತ್ತಿದ್ದ ವೇಳೆ, ಅವರಿಗೆ ಭಾರತದಲ್ಲಿ ಆಶ್ರಯ ಸಿಕ್ಕಿತ್ತು. ಎಂದೋ ಭಾರತಕ್ಕೆ ಬಂದವರಲ್ಲಿ ಇಲ್ಲೇ ಉಳಿದು ಇಲ್ಲಿಯವರೇ ಆಗಿಹೋಗಿರುವ ಯಹೂದಿಗಳ ಪೀಳಿಗೆ ಇನ್ನೂ ಇಲ್ಲಿದೆ.

ಯಹೂದಿ ಸಮುದಾಯದ ಮೇರ್ಯ್ ನಿಸ್ಸಿಮ್ ಅನ್ನುವವರು, ಅಂದಿನ ಬಾಂಬೆ ಮಹಾನಗರದ ಮೇಯರ್ ಆಗಿದ್ದರು. ನಾವು 1936ನೇ ಇಸವಿಯಿಂದಲೂ ಕೇಳುತ್ತಿರುವ ಶಿವರಂಜಿನಿ ರಾಗದಲ್ಲಿರುವ ನಮ್ಮ ಆಕಾಶವಾಣಿಯ ಆರಂಭಿಕ ಸಂಗೀತವನ್ನು ಸಂಯೋಜಿಸಿದವರೂ ಕೂಡ ವಾಲ್ಟರ್ ಕೌಫ್ ಮ್ಯಾನ್ ಎಂಬ ಯಹೂದಿ ನಿರಾಶ್ರಿತ ಸಂಗೀತಗಾರನೇ ಆಗಿದ್ದ. 13 ನೇ ಶತಮಾನದಲ್ಲಿ ಬಾಬಾ ಫರೀದುದ್ದೀನ್ ಎಂಬ ಭಾರತದ ಸೂಫಿ ಸಂತ ಇಸ್ರೇಲ್ ನ ಜೆರೂಸಲೇಮ್ ನಲ್ಲಿ ಸಾಕಷ್ಟು ವರ್ಷಗಳ ಕಾಲ ನೆಲೆನಿಂತಿದ್ದನಂತೆ.

ಇಸ್ರೇಲ್ ದೇಶ ಹುಟ್ಟಿದ್ದೇ 1948ರಲ್ಲಿ, ಆ ಬಳಿಕವೇ ಜಗತ್ತಿನ ಹಲವೆಡೆ ಇದ್ದ ಯಹೂದಿಗಳಲ್ಲಿ ಹೆಚ್ಚಿನವರು ಇಸ್ರೇಲ್ ಸೇರಿಕೊಂಡರು. ಆನಂತರದ ದಿನಗಳಲ್ಲಿ, ಇಸ್ರೇಲ್ ದೇಶ ಬೆಳೆದು ನಿಂತ ರೀತಿಯೇ ಒಂದು ವಿಸ್ಮಯ. ಭಾರತದ ನೆರೆಯ ಪಾಕಿಸ್ತಾನ ಮತ್ತು ಚೀನಾದಂಥ ದೇಶಗಳು ಮಿತ್ರರಂತೂ ಅಲ್ಲ, ಆದರೆ ಅವರು ನಮ್ಮ ಶತ್ರುಗಳು ಎಂಬ ಮಾತನ್ನು ಭಾರತದ ಬುದ್ಧಿಜೀವಿಗಳು ಒಪ್ಪುವುದಿಲ್ಲ. ಆದರೆ, ಇಸ್ರೇಲ್ ತನ್ನ ಸುತ್ತಲೂ ಸಿರಿಯಾ, ಇರಾಕ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ, ಇರಾನ್, ಪ್ಯಾಲೇಸ್ತೀನ್ ನಂಥ ವಿರೋಧಿ ರಾಷ್ಟ್ರಗಳಿಂದ ಸುತ್ತುವರೆಯಲ್ಪಟ್ಟಿದೆ.

ಇಸ್ರೇಲ್ ದೇಶ, ವಿಸ್ತೀರ್ಣದಲ್ಲಿ ನಮ್ಮ ಬೆಂಗಳೂರಿಗಿಂತ ಸುಮಾರು ನಾಲ್ಕುಪಟ್ಟು ಮಾತ್ರ ದೊಡ್ಡದಾಗಿರೋ ಒಂದು ಪುಟ್ಟ ದೇಶ. ಹೀಗಿದ್ದರೂ ಕೂಡ ಇಸ್ರೇಲ್ ವಿಶ್ವದ ದೊಡ್ಡ ರಾಷ್ಟ್ರಗಳ ಜೊತೆಗೆ ಸರಿಸಮನಾಗಿ ನಿಂತು, ತನ್ನ ಶಕ್ತಿ  ಪ್ರದರ್ಶನ  ಮಾಡುತ್ತದೆ. ಇದಕ್ಕೆ ಇಸ್ರೇಲಿಗರ ಪರಿಶ್ರಮ ಮತ್ತು  ಅಮೆರಿಕದ ಬೆಂಬಲವೂ ಕಾರಣ ಎಂದು ಹೇಳಬಹುದು. ತನ್ನ ಜನರನ್ನು ಕಾಪಾಡಿಕೊಳ್ಳಲು ಮತ್ತು ತನಗೆ ತೊಂದರೆ ಕೊಟ್ಟವರನ್ನು ಬಲಿಹಾಕಲು ಇಸ್ರೇಲ್ ಎಂಥದ್ದೇ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.

ಇಸ್ರೇಲ್ ದೇಶದ ಜನಸಂಖ್ಯೆ ಸುಮಾರು 75 ಲಕ್ಷ. ಅದರಲ್ಲಿ 56 ಲಕ್ಷ ಜನರು ಯಹೂದಿಗಳು, ಸುಮಾರು 16 ಲಕ್ಷ ಜನ ಅರಬ್ಬೀಗಳು, ಇತರೆ ಜನಾಂಗದವರು ಸುಮಾರು ಮೂರು ಲಕ್ಷ. ಇಸ್ರೇಲ್ ದೇಶದ ಮಹಿಳೆಯರು ಮತ್ತು ಪುರುಷರ ಅನುಪಾತ ಭಾರತಕ್ಕೆ ತದ್ವಿರುದ್ಧವಾಗಿದೆ. ಅಲ್ಲಿ ಪ್ರತಿ 979 ಜನ ಪುರುಷರಿಗೆ ಒಂದು ಸಾವಿರ ಜನ ಮಹಿಳೆಯರಿದ್ದಾರೆ.  ಉದ್ಯಮಗಳ ಸೃಷ್ಟಿ ವಿಚಾರದಲ್ಲಿ ಇಸ್ರೇಲ್‌ಗೆ ಜಗತ್ತಿನಲ್ಲೇ ನಾಲ್ಕನೇ ಸ್ಥಾನ, ಅಲ್ಲಿ ಮಹಿಳಾ ಉದ್ಯಮಿಗಳೇ ಹೆಚ್ಚು, ಅಷ್ಟು ಮಾತ್ರವಲ್ಲಾ ಇಸ್ರೇಲ್ ದೇಶದ ವಕೀಲರಲ್ಲಿ ಶೇ44 ರಷ್ಟು ಜನ ಹೆಂಗಸರೇ ಅಂತೆ. ಹೀಬ್ರೂ ಮತ್ತು ಅರಬ್ಬೀ ಭಾಷೆಗಳು ಇಸ್ರೇಲ್ ದೇಶದ ಅಧಿಕೃತ ಭಾಷೆಗಳು. ಜಗತ್ತಿನ ಬೇರೆ ಯಾವುದೇ ದೇಶಕ್ಕಿಂತಲೂ ಹೆಚ್ಚು ಅನುವಾದಿತ ಪುಸ್ತಕಗಳನ್ನು ಇಸ್ರೇಲ್ ಪ್ರಕಟಿಸಿದೆ. ಇಸ್ರೇಲ್ ದೇಶ, ತನ್ನ ಬಸ್‌ಸ್ಟಾಪ್ ಲೈಬ್ರರಿಗಳಿಗೆ ಹೆಸರುವಾಸಿಯಾಗಿದೆ.  

ಇಡೀ ಜಗತ್ತಿನಲ್ಲಿರುವ ಒಂದೇ ಒಂದು ಯಹೂದಿ ದೇಶವಾಗಿರುವ ಇಸ್ರೇಲ್ ಬಗ್ಗೆ ಹಲವಾರು ಕಥೆಗಳಿವೆ. ನಮ್ಮಲ್ಲಿ ಸಂಸ್ಕೃತ ಭಾಷೆ ಹೇಗೋ ಹಾಗೆಯೇ ಇಸ್ರೇಲ್‌ ನ ಭಾಷೆ ಹಿಬ್ರೂ. ಒಂದು ಕಾಲದಲ್ಲಿ ಅಳಿದು ಹೋಗಿದ್ದ ಹಿಬ್ರೂ ಭಾಷೆಯನ್ನು ಮತ್ತೆ ಪ್ರಚಲಿತಕ್ಕೆ ತಂದ ಇಸ್ರೇಲಿಗರು ಅದನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡರು. ಹೆಂಗಸರೂ ಸೇರಿದಂತೆ ಇಸ್ರೇಲಿನ ಪ್ರತಿಯೊಬ್ಬ ಪ್ರಜೆಯೂ ಸೈನ್ಯದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಲೇಬೇಕು. ಗಂಡಸರಿಗೆ ಮೂರು ವರ್ಷ ಹಾಗೂ ಮಹಿಳೆಯರಿಗೆ ಎರಡು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ.

ವೈನ್ ಲವರ್ ಗಳ ದೇಶವಾಗಿರುವ ಇಸ್ರೇಲ್, ಕೃಷಿಯಲ್ಲಿ ಜಗತ್ತಿನ ಮೂರನೇ ಸ್ಥಾನದಲ್ಲಿದೆ. ತರಕಾರಿ ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವುದರಲ್ಲೂ ಇಸ್ರೇಲಿಗಳಿಗೆ ಜಗತ್ತಿನಲ್ಲಿ ಮೂರನೇ ಸ್ಥಾನ. ಇಸ್ರೇಲ್ ದೇಶದ ನೋಟುಗಳ ಮೇಲೆ ಬ್ರೈಲ್ ನಲ್ಲೂ ಗುರುತು ಮಾಡಲಾಗಿರುತ್ತದೆ. ಔಟ್ ಮ್ಯಾಗಜೀನ್ ಪ್ರಕಾರ ಇಸ್ರೇಲ್ ದೇಶ ಮಧ್ಯ ಏಷ್ಯಾದ “ಗೇ ಕ್ಯಾಪಿಟಲ್ “ಅಂದರೆ ಸಲಿಂಗಿಗಳ ರಾಜಧಾನಿಯಂತೆ. ತಾಂತ್ರಿಕ ಪರಿಣತಿಯಲ್ಲಿ ಜಗತ್ತಿನ ಎರಡನೇ ಸ್ಥಾನದಲ್ಲಿರುವ ಇಸ್ರೇಲ್ ದೇಶದಲ್ಲಿ, ಮೂರುಸಾವಿರಕ್ಕೂ ಹೆಚ್ಚು ಹೈಟೆಕ್ ಕಂಪನಿಗಳಿವೆ, ಆ ದೇಶದ ಬಹುತೇಕ ಎಲ್ಲಾ ಮನೆಗಳಲ್ಲೂ ಕಂಪ್ಯೂಟರ್ ಗಳಿವೆ. ಮೊಟೊರೊಲ ಕಂಪನಿ ತನ್ನ  ಮೊಟ್ಟ ಮೊದಲ ಮೊಬೈಲ್ ಪೋನ್ ಆವಿಷ್ಕಾರ ಮಾಡಿದ್ದೇ ಇಸ್ರೇಲ್ ನಲ್ಲಿ. ವಾಯ್ಸ್ ಮೇಲ್ ತಂತ್ರಜ್ಞಾನವೂ ಇಸ್ರೇಲ್‌ ನಲ್ಲೇ ಹುಟ್ಟಿದ್ದು.

1979ರಲ್ಲಿ ಮೊದಲ ಬಾರಿಗೆ ಕಂಪೂಟ್ಯರ್‌ಗಳನ್ನು ರಕ್ಷಿಸುವ ಯ್ಯಾಂಟಿ ವೈರಸ್ ಫ್ಟ್‌ವೇರ್ ಸೃಷ್ಟಿಯಾಗಿದ್ದು ಕೂಡ ಇಸ್ರೇಲ್‌ ನಲ್ಲಿಯೇ. ಇಸ್ರೇಲ್ ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದಲ್ಲಿ ಅಲ್ಲಿ ಪದವಿ ಪಡೆದವರ ಸಂಖ್ಯೆ ಅತಿ ಹೆಚ್ಚು. ಅದೇ ರೀತಿ ಮ್ಯೂಸಿಯಂಗಳು ಮತ್ತು  ಸ್ಟಾರ್ಟ್‌ ಅಪ್‌ ಅಂದರೆ ನವೋದ್ಯಮಗಳೂ ಹೆಚ್ಚು. ಇಸ್ರೇಲ್ ನಲ್ಲಿ ಹುಟ್ಟಿದವರ ಸರಾಸರಿ ಆಯಸ್ಸು 82 ವರ್ಷಗಳು.  ಇಸ್ರೇಲ್ ದೇಶದ ವಾಯುಪಡೆ ತುಂಬಾ ಬಲಿಷ್ಟವಾಗಿದ್ದು, ಜಗತ್ತಿನ ನಾಲ್ಕನೆಯ ಸ್ಥಾನದಲ್ಲಿದೆ.  ಇಸ್ರೇಲ್ ದೇಶ ಪರಿಪೂರ್ಣ “ಆಂಟಿ ಬ್ಯಾಲೆಸ್ಟಿಕ್ ಮಿಸಾಯಲ್ ಡಿಫೆನ್ಸ್ ಸಿಸ್ಟಮ್” ಹೊಂದಿದೆ. ತನ್ನ ದೇಶದ ಮೇಲೆ ಯಾವುದೇ ದಿಕ್ಕಿನಿಂದ ಬರಬಹುದಾದ ಕ್ಷಿಪಣಿಗಳನ್ನು ಇವು ಹೊಡೆದು ಉರುಳಿಸುತ್ತವೆ. ಇಸ್ರೇಲ್ ನ ಗುಪ್ತದಳ ಮೊಸ್ಸಾಡ್ ಅನ್ನು ಇಡೀ ಜಗತ್ತಿನ ಅತ್ಯಂತ ಶಕ್ತಿಶಾಲಿ ಇಂಟೆಲಿಜೆನ್ಸ್ ಏಜೆನ್ಸಿ ಎಂದು ಹೇಳಲಾಗುತ್ತದೆ.

1976 ರಲ್ಲಿ ಏರ್ ಫ್ರಾನ್ಸ್ ವಿಮಾನ ಅಪಹರಿಸಿದ್ದ ಪ್ಯಾಲೆಸ್ತೀನಿ ಉಗ್ರರ ಕಪಿಮುಷ್ಠಿಯಿಂದ ತನ್ನ 103 ನಾಗರಿಕರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದ ಆಪರೇಷನ್ ಥಂಡರ್ ಬೋಲ್ಟ್ ಅಥವ ಆಪರೇಷನ್ ಎಂಟೇಬ್ಬ್ ರೂಪಿಸಿದ್ದೇ ಮೊಸ್ಸಾಡ್. ಇಡೀ ಜಗತ್ತಿನಲ್ಲಿ ಯಾವ ಜನಾಂಗದ್ದಾದರೂ  ಅತಿ ಹೆಚ್ಚು ಸಾಮೂಹಿಕ ಮಾರಣಹೋಮ ಆಗಿದ್ದರೆ, ಅದು ಯಹೂದಿಗಳದ್ದು ಮಾತ್ರ, ಯಹೂದಿಗಳ ಬಗ್ಗೆ ಕಿಡಿ ಕಾರುತ್ತಿದ್ದ ಕ್ರಿಶ್ಚಿಯನ್ನರು ಇತ್ತೀಚಿನ ದಶಕಗಳಲ್ಲಿ ಸ್ವಲ್ಪ ಬದಲಾಗಿದ್ದಾರೆ. ಆದರೆ, ಮುಸಲ್ಮಾನರು ಮಾತ್ರ ಈಗಲೂ ಯಹೂದಿಗಳು ಮತ್ತು ಇಸ್ರೇಲ್ ಬಗ್ಗೆ ಕೆಂಡ ಕಾರುತ್ತಾರೆ. ಇಸ್ರೇಲ್ ಮತ್ತು ಪ್ಯಾಲಸ್ತೀನಿಯರ ನಡುವಿನ ಘರ್ಷಣೆಗಳೂ ಕೂಡ ಇನ್ನೂ ನಿಂತಿಲ್ಲ.

ದಶಕಗಳ ಹಿಂದೆ, ಭಾರತದ ಜೊತೆ ಮೇಲುನೋಟಕ್ಕೆ ಎದ್ದು ಕಾಣುವಂಥ ಸಂಬಂಧ ಇರದೇ ಇದ್ದರೂ ಕೂಡ, 1971ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಇಸ್ರೇಲ್, ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿ ಸಹಾಯ ಮಾಡಿತ್ತು. ನಂತರ ವಾಜಪೇಯಿ ಸರ್ಕಾರದ ಅವಧಿಯಲ್ಲಿ, ಭಾರತ ಎರಡನೇ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಅಮೆರಿಕ ಮತ್ತಿತರ ದೇಶಗಳು ನಿರ್ಬಂಧ ಹೇರಿದ್ದವು. ಆದರೆ ಇಸ್ರೇಲ್‌ ಹಾಗೆಮಾಡಲಿಲ್ಲ. 1999ರಲ್ಲಿ ಪಾಕಿಸ್ತಾನದ ಜೊತೆಗಿನ ಕಾರ್ಗಿಲ್‌ ಯುದ್ಧದ ವೇಳೆಯೂ ಇಸ್ರೇಲ್ ದೇಶ, ಕಣ್ಗಾವಲು ಡ್ರೋನ್‌ ಮತ್ತು ಲೇಸರ್‌ ಆಧರಿತ ಕ್ಷಿಪಣಿಗಳನ್ನು ಒದಗಿಸಿತ್ತು. ಇಸ್ರೇಲ್ ದೇಶ ಭಾರತಕ್ಕೆ ಹಲವಾರು ಅತ್ಯಾಧುನಿಕ ಉಪಕರಣಗಳನ್ನು ಕೊಡಲಿದೆ. ಅವುಗಳಲ್ಲಿ ಗಡಿ ಪ್ರದೇಶದಲ್ಲಿ ಹಗಲೂ-ರಾತ್ರಿ ವೀಕ್ಷಣೆ ಸಾಧ್ಯವಾಗಿಸುವ ಕ್ಯಾಮರಾ ವ್ಯವಸ್ಥೆ, ಶತ್ರುಗಳ ಚಲನವಲನದ  ಮೇಲೆ ನಿಗಾವಹಿಸಲು ರಾಡಾರ್‌ಗಳು  ಮತ್ತು ಗಡಿ ಭಾಗದಲ್ಲಿ ಸುರಂಗ ಕೊರೆದು ಒಳ ನುಗ್ಗುವುದನ್ನು ಪತ್ತೆ ಮಾಡುವ ಸೆನ್ಸಾರ್ ವ್ಯವಸ್ಥೆಯೂ ಸೇರಿದೆ.

ಇಸ್ರೇಲ್ ಮತ್ತು ಭಾರತ ದೇಶಗಳು, ಭಯೋತ್ಪಾದನೆಯಿಂದ ರಕ್ಷಣೆ ಪಡೆಯುವ ವಿಚಾರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಿಗೆ ಹಾಕಿವೆ. ನೀರಿನ ಬಳಕೆ, ಕೃಷಿ  ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲೂ ಎರಡೂ ದೇಶಗಳು ಜೊತೆಯಾಗಿ ಹೆಜ್ಜೆಹಾಕಲಿವೆ. ಇವೆಲ್ಲದರ ಬಗ್ಗೆ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದೊಡನೆ ಸ್ನೇಹ ಸಂಬಂಧ ಗಟ್ಟಿಗೊಳಿಸಿಕೊಳ್ಳಲು ಅಪಾರ ಆಸಕ್ತಿ ತೋರಿರುವ ಪ್ರಧಾನಿ ನೆತನ್ಯಾಹು ಅವರು, ಭಾರತ ಮತ್ತು ಇಸ್ರೇಲ್ ದೇಶಗಳ ಸಂಬಂಧ ಸ್ವರ್ಗದಲ್ಲಿಯೇ ನಿಶ್ಚಯವಾದ ಸಂಬಂಧ, ಅದನ್ನು ನಾವು ಭೂಮಿಯಲ್ಲಿ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.ಪ್ರಧಾನಿ ಮೋದಿ ಅವರು ಯೋಗದ ಬಗ್ಗೆ ಹೊಂದಿರುವ ಆಸಕ್ತಿಯಿಂದ ಸ್ಫೂರ್ತಿಗೊಂಡಿದ್ದೇನೆ ಎಂದು ಹೇಳಿದ ಬೆಂಜಾಮಿನ್‌ ನೆತನ್ಯಾಹು, ತಾವೂ ಕೂಡ ಯೋಗಾಭ್ಯಾಸ ಆರಂಭಿಸುವುದಾಗಿ ಹೇಳಿದ್ದಾರೆ.

ಮೋದಿ ಮತ್ತು ಇಸ್ರೇಲ್ ದೇಶಗಳ ಸ್ನೇಹ ಹತ್ತು ವರ್ಷಗಳಿಗೂ ಹಳೆಯದು, 2006ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಇಸ್ರೇಲ್ ದೇಶಕ್ಕೆ ಭೇಟಿ ಕೊಟ್ಟಿದ್ದರು. ಇಲ್ಲಿಯವರೆಗೂ ಈ ಪ್ರದೇಶಕ್ಕೆ ಭೇಟಿ ನೀಡಿದ ಭಾರತದ ಎಲ್ಲಾ ಪ್ರಮುಖ ನಾಯಕರು, ಇಸ್ರೇಲ್ ಜೊತೆಗೆ ಪ್ಯಾಲಸ್ತೀನ್ ರಾಜಧಾನಿ ರಾಮಲ್ಲಾಹ್ ಗೂ ಭೇಟಿ ನೀಡಿದ್ದರು. ಆದರೆ, ಈ ಬಾರಿ ಹಾಗೆ ಆಗಿಲ್ಲ. ಆದರೆ, ಇಸ್ರೇಲ್ ಜೊತೆಗಿನ ಸ್ನೇಹ, ಪ್ಯಾಲಸ್ತೀನ್ ದೇಶದ ಜೊತೆಗಿನ ಸಂಬಂಧದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಭಾರತ ಹಿಂದಿನಿಂದಲೂ ಭರವಸೆ ನೀಡುತ್ತಾ ಬಂದಿದೆ ಮತ್ತು ಅದೇ ರೀತಿಯಯಲ್ಲಿ ನಡೆದುಕೊಂಡಿದೆ. ಇಸ್ರೇಲ್-ಪ್ಯಾಲಸ್ತೀನ್ ಸಂಬಂಧ ಸುಧಾರಿಕೆಗೆ ಭಾರತ ಮಧ್ಯಸ್ಥಿಕೆ ವಹಿಸುವ ಸಾಧ್ಯತೆಗಳೂ ಇವೆಯೆನ್ನಲಾಗಿದೆ. ಆದರೆ, ಭಾರತ ಇಸ್ರೇಲ್ ನಡುವೆ ಬೆಳೆಯುತ್ತಿರುವ ಸಂಬಂಧವನ್ನು ಇತರೆ ಮುಸ್ಲಿಮ್ ದೇಶಗಳು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತವೆ ಮತ್ತು ಅದರ ಪರಿಣಾಮಗಳೇನು ಅನ್ನುವುದನ್ನು ಮುಂದೆ ನೋಡಬೇಕಾಗಿದೆ. ಭಾರತ ಮತ್ತು ಇಸ್ರೇಲ್ ದೇಶಗಳ ಸಂಬಂಧ, ಈ ಮಟ್ಟಿಗೆ ವೃದ್ಧಿಯಾಗಿರುವ ವಿಚಾರ ಬೇರೆಲ್ಲರಿಗಿಂತಲೂ ಸಂಘ ಪರಿವಾರದವರಿಗೆ ಹೆಚ್ಚು ಸಂತೋಷ ತಂದಿದೆಯಂತೆ. ಆರೆಸ್ಸೆಸ್‌ ಮುಖಂಡರು ಬಹಳ ಹಿಂದಿನಿಂದಲೂ ಇಸ್ರೇಲ್ ದೇಶದೊಂದಿಗೆ ಉತ್ತಮ ಬಾಂಧವ್ಯದ ಪರವಾಗಿ ವಕಾಲತ್ತು ವಹಿಸುತ್ತಲೇ ಬಂದಿದ್ದರಂತೆ.

ಕಾಂಗ್ರೆಸ್ ಪಕ್ಷದಿಂದ ಮೋದಿ ಇಸ್ರೇಲ್ ಭೇಟಿಗೆ ಯಾವುದೇ ತೀಕ್ಷ್ಣವಾದ ಟೀಕೆ ವ್ಯಕ್ತವಾಗಿಲ್ಲ, ಆದರೆ ಎಡಪಂಥೀಯ ನಾಯಕ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಮೋದಿ ಭೇಟಿ ಖಂಡಿಸಿದ್ದಾರೆ. ಇಸ್ರೇಲ್  ದೇಶ ಮುಗ್ಧರನ್ನು ಕೊಂದುಹಾಕಿ, ಅದನ್ನು ಭಯೋತ್ಪಾದನಾ ವಿರೋಧಿ ಕಾರ್ಯ  ಎಂದು ಹೇಳಿಕೊಳ್ಳುವ ಒಂದು ಭಯೋತ್ಪಾದಕ ದೇಶ ಎಂದು ಟೀಕಿಸಿದ್ದಾರೆ. ಅಮೆರಿಕ-ಇಸ್ರೇಲ್-ಇಂಡಿಯ ಜೊತೆಗಾರಿಕೆ ಅಪಾಯಕಾರಿ ಎಂದೂ ಹೇಳಿದ್ದಾರೆ.

ಇವೆಲ್ಲಾ ರಾಜಕೀಯ ಹೇಳಿಕೆಗಳು ಏನೇ ಇದ್ದರೂ ಕೂಡ, ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಭಾರತ ಮತ್ತು ಇಸ್ರೇಲ್ ದೇಶಗಳ ಸಂಬಂಧದಲ್ಲಿ ಒಂದು ಮೈಲಿಗಲ್ಲಾಗಿರುವುದಂತೂ ನಿಜ. ಆದರೆ, ಐತಿಹಾಸಿಕವೆಂದು ಬಣ್ಣಿಸಲಾಗಿರುವ ಈ ಭೇಟಿಯಿಂದ ಭಾರತಕ್ಕೆ  ಎಷ್ಟರಮಟ್ಟಿಗೆ ಲಾಭವಾಗಲಿದೆ ಅನ್ನುವುದನ್ನು ಕಾದು ನೋಡಬೇಕಾಗಿದೆ.

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ