‘ಉದ್ಯೋಗ ಖಾತ್ರಿ, ಭ್ರಷ್ಟಾಚಾರ ಖಾತ್ರಿ’

Kannada News

10-07-2017

ಭಾರತ ಸ್ವತಂತ್ರವಾಗಿ ದಶಕಗಳೇ ಕಳೆದಿದ್ದರೂ ಕೂಡ, ಬಹುತೇಕ ರಾಜ್ಯಗಳ, ಗ್ರಾಮೀಣ ಭಾಗದ ಜನರು, ಬೇಸಿಗೆ ಬಂತೆಂದರೆ ಹೊಟ್ಟೆಪಾಡಿಗಾಗಿ, ಕೆಲಸ ಹುಡುಕುತ್ತಾ ನಗರಗಳತ್ತ ವಲಸೆ ಹೋಗುವಂತ ಪರಿಸ್ಥಿತಿಯೇ ಇತ್ತು. ಇಂಥ ಸನ್ನಿವೇಶ ಅರ್ಥಮಾಡಿಕೊಂಡ ಪಿ.ವಿ.ನರಸಿಂಹರಾವ್ ನೇತೃತ್ವದ ಕೇಂದ್ರಸರ್ಕಾರ, ಹಳ್ಳಿಗರು ಅವರ ಹಳ್ಳಿಯಲ್ಲೇ ಕೆಲಸ ಮಾಡಿ, ಒಂದಿಷ್ಟು ಹಣಗಳಿಸಿ, ಜೀವನಮಟ್ಟ ಸುಧಾರಿಸಿಕೊಳ್ಳಲು ನೆರವಾಗುವ ಯೋಜನೆ ಬಗ್ಗೆ ಚಿಂತನೆ ನಡೆಸಿತ್ತು. 1991ರಲ್ಲಿ ಆರಂಭಗೊಂಡ ಚಿಂತನೆಗಳು, ಅಂತಿಮವಾಗಿ 2005ರಲ್ಲಿ ಡಾ.ಮನ್ ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಕಾರವಾದವು. ಕೇಂದ್ರಸರ್ಕಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಂಬ ಹೆಸರಿನ ಯೋಜನೆ ಜಾರಿಗೆ ತಂದಿತ್ತು. ಒಂದು ರೀತಿಯ ಕಾರ್ಮಿಕ ಕಾನೂನು ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯಾಗಿ ಈ ಯೋಜನೆ ಅಸ್ತಿತ್ವಕ್ಕೆ ಬಂತು.

ದೇಶದ ಗ್ರಾಮೀಣ ಭಾಗದ ಜನರ ಜೀವನೋಪಾಯಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ, ಒಂದು ಆರ್ಥಿಕ ವರ್ಷದಲ್ಲಿ, ಒಂದು ಕುಟುಂಬಕ್ಕೆ ಕನಿಷ್ಟ 100 ದಿನಗಳ ಖಾತ್ರಿ ಉದ್ಯೋಗ ದೊರಕಿಸಿಕೊಡುವುದು ಈ ಯೋಜನೆಯ ಮಹತ್ವದ ಅಂಶವಾಗಿತ್ತು.  ಒಂದು ವೇಳೆ, ಈ ಯೋಜನೆಯಡಿ ಹೆಸರು ನೋಂದಾಯಿಸಿ ಉದ್ಯೋಗ ಚೀಟಿ ಪಡೆದವರಿಗೆ, 15 ದಿನಗಳ ಒಳಗೆ ಉದ್ಯೋಗ ಒದಗಿಸದಿದ್ದಲ್ಲಿ, ಅವರಿಗೆ ಸಿಗಬೇಕಾಗಿದ್ದ ಕೂಲಿಯ ಶೇ 30ರಷ್ಟು ಹಣವನ್ನು ನಿರುದ್ಯೋಗ ಭತ್ಯೆಯಾಗಿ ಪಡೆಯಲೂ ಅವಕಾಶವಿತ್ತು.

2005ರಲ್ಲಿ ಆರಂಭಗೊಂಡ ಈ ಯೋಜನೆಯನ್ನು, ಮೊದಲಿಗೆ ದೇಶದ 200 ಜಿಲ್ಲೆಗಳಲ್ಲಿ ಜಾರಿಗೆ ತರಲಾಯಿತು. ಆನಂತರ, 2008ರ ಏಪ್ರಿಲ್ 1ರಂದು ಈ ಯೋಜನೆ ದೇಶಾದ್ಯಂತ ಅನುಷ್ಠಾನಕ್ಕೆ ಬಂದಿತ್ತು. ಸ್ವಾತಂತ್ರ್ಯ ಪೂರ್ವದಲ್ಲೇ ಮಹಾತ್ಮ ಗಾಂಧಿ ಅವರು ಪಂಚಾಯತಿಗಳಿಗೆ ಪೂರ್ಣ ಅಧಿಕಾರ ನೀಡುವ ಕನಸು ಕಂಡಿದ್ದರು. ಹೀಗಾಗಿ, 2009ರಲ್ಲಿ ಗಾಂಧೀಜಿಯವರ 140ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ, ಈ ಯೋಜನೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಂದು ಹೆಸರಿಡಲಾಯಿತು. ಈ ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮಪಂಚಾಯಿತಿ ಮಟ್ಟದಲ್ಲಿ ಜಾರಿಗೆ ತರಲಾಯಿತು. ಗ್ರಾಮೀಣ ಪ್ರದೇಶದಲ್ಲಿ, ಮೂಲಸೌಕರ್ಯ ಸುಧಾರಣೆ, ಶಾಲಾ ಕಟ್ಟಡ, ಗ್ರಾಮ ನೈರ್ಮಲ್ಯ, ಮಳೆ ನೀರು ಸಂಗ್ರಹ, ಕೃಷಿ ಹೊಂಡ, ಅರಣ್ಯೀಕರಣ, ಚೆಕ್ ಡ್ಯಾಮ್‌ ಗಳ ನಿರ್ಮಾಣ, ಇತರೆ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ.

ಕೃಷಿ ಋುತು ಮುಗಿದ ನಂತರದ ಸಮಯದಲ್ಲಿ, ಹಳ್ಳಿಗರ ಜೀವನೋಪಾಯಕ್ಕೆ ನೆರವಾಗುವ ಈ ಯೋಜನೆಯಡಿಯಲ್ಲಿ, ಎಲ್ಲಾ ಕಾಮಗಾರಿಗಳು ಮಾನವ ಶ್ರಮದಿಂದಲೇ ಆಗಬೇಕು ಅನ್ನುವುದು ಕಡ್ಡಾಯ. ಹೀಗಾಗಿ, ದೈಹಿಕ ಶ್ರಮ ವಹಿಸಲು ಒಲ್ಲದ ಯಾವುದೇ ವರ್ಗದ ಜನರನ್ನು ಈ ಯೋಜನೆ ದೂರವಿಡುತ್ತದೆ. ಇದರಡಿ ಕೆಲಸ ಮಾಡುವ ಹೆಂಗಸರಿಗೂ ಗಂಡಸರಷ್ಟೇ ಸಮಾನ ಕೂಲಿ ನಿಗದಿಪಡಿಸಿದ್ದೂ ಕೂಡ, ಲಿಂಗಾಧಾರಿತ ತಾರತಮ್ಯ ನಿವಾರಣೆಯತ್ತ ಇರಿಸಿದ ಮತ್ತೊಂದು ಹೆಜ್ಜೆಯಾಗಿತ್ತು. ಬೇಸಿಗೆ ಕಾಲದಲ್ಲಿ ಹಳ್ಳಿಗರು ಕೆಲಸ ಹುಡುಕುತ್ತಾ ಪಟ್ಟಣಕ್ಕೆ ವಲಸೆ ಹೋಗುವುದನ್ನು ತಪ್ಪಿಸಿದ ಉದ್ಯೋಗ ಖಾತ್ರಿ ಯೋಜನೆ, ದೇಶದಲ್ಲಿನ ಬಡತನ ನಿವಾರಣೆಗೆ ಬಹು ಮಟ್ಟಿಗೆ ನೆರವಾಯಿತು. ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡದವರು ಹಾಗೂ ಹಿಂದುಳಿದ ವರ್ಗಗಳ ಜನರು, ಈ ಯೋಜನೆಯಲ್ಲಿ ಹೆಚ್ಚಿನ ಲಾಭ ಪಡೆದರು .ಜಗತ್ತಿನೆಲ್ಲೆಡೆಯ ಅಭಿವೃದ್ಧಿ ಕಾರ್ಯದ ಬಗ್ಗೆ ವಿಶ್ವಸಂಸ್ಥೆಯವರು ನಡೆಸಿದ ಸಮೀಕ್ಷೆಯಲ್ಲೂ, ಭಾರತದ ಈ ಯೋಜನೆಯನ್ನು ಒಂದು ಮೈಲಿಗಲ್ಲು ಎಂದು ಅಭಿಪ್ರಾಯಪಡಲಾಯಿತು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನ್ನುವುದು, ಬಡವರಲ್ಲಿ ಬಡವರು ಅನ್ನಿಸಿಕೊಂಡವರಿಗೆ, ಮನೆಯ ದಿನನಿತ್ಯದ ಅಗತ್ಯಗಳಿಗೆ ಒಂದಿಷ್ಟೂ ಹಣವೇ ಸಿಗದೆ ಕಷ್ಟಕ್ಕೆ ಸಿಲುಕುವವರಿಗೆ ಒಂದು ರೀತಿಯಲ್ಲಿ ರಕ್ಷಣಾತ್ಮಕ ಕವಚವಾಗಿ ಕೆಲಸ ಮಾಡಿತ್ತು. 2016ರ ವೇಳೆಗೆ ಹತ್ತುವರ್ಷ ಪೂರೈಸಿದ ಈ ಯೋಜನೆಯಡಿಯಲ್ಲಿ ಕೇಂದ್ರಸರ್ಕಾರ, ಸುಮಾರು ಮೂರೂವರೆ ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚಮಾಡಿತ್ತು. ಸುಮಾರು 2 ಸಾವಿರ ಕೋಟಿ ಮಾನವ ದಿನಗಳ ಕೆಲಸವನ್ನು ಸೃಷ್ಟಿಸಲಾಗಿದ್ದ ಈ ಯೋಜನೆಯಡಿ ವೆಚ್ಚವಾದ ಹಣದಲ್ಲಿ, ಶೇ. 71 ರಷ್ಟು ಹಣವನ್ನು ಕಾರ್ಮಿಕರ ವೇತನವಾಗಿಯೇ ನೀಡಲಾಗಿತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಈ ಯೋಜನೆಯನ್ನು ಬಿಜೆಪಿಯವರು ಟೀಕಿಸುತ್ತಲೇ ಬಂದಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕವೂ ಉದ್ಯೋಗ ಖಾತ್ರಿ ಯೋಜನೆ , ಕಳೆದ 60 ವರ್ಷಗಳ ಕಾಂಗ್ರೆಸ್ ಆಡಳಿತದ ವೈಫಲ್ಯಕ್ಕೆ ಜೀವಂತ ಸ್ಮಾರಕಎಂದು ಟೀಕಿಸಿದ್ದರು. ಆದರೆ, ಈ ಯೋಜನೆಯ ಜನಪ್ರಿಯತೆಯ ಕಾರಣದಿಂದ ಇದನ್ನು ಕೈ ಬಿಡಲಾಗಲಿಲ್ಲ. ಯೋಜನೆಯೇ ಸರಿಯಿಲ್ಲ ಅನ್ನುತ್ತಿದ್ದ ಮೋದಿ ಸರ್ಕಾರ, ಇದರ ನಿಯಮಗಳನ್ನು ಪರಿಷ್ಕರಿಸಿ, ವರ್ಷದಲ್ಲಿ ಉದ್ಯೋಗ ನೀಡುವ ಕನಿಷ್ಟ ದಿನಗಳನ್ನು ನೂರರಿಂದ ನೂರೈವತ್ತಕ್ಕೆ ಹೆಚ್ಚಿಸಲು ಕ್ರಮ ಕೈಗೊಂಡಿದೆ.

ಎಷ್ಟೇ ಚೆನ್ನಾಗಿದೆ ಎಂದರೂ ಕೂಡ, ಈ ಯೋಜನೆ ಬಗ್ಗೆಯೂ ಹಲವು ಟೀಕೆಗಳಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಹಣ ಖರ್ಚು ಮಾಡಿದರೂ ಕೂಡ, ಗ್ರಾಮೀಣ ಪ್ರದೇಶದಲ್ಲಿ ಸುಸ್ಥಿರ ಅಥವ ಬಾಳಿಕೆ ಬರುವಂಥ ಆಸ್ತಿಗಳನ್ನು ಸೃಷ್ಟಿಸಲು ಆಗಿಲ್ಲ, ಹೀಗಾಗಿ ಈ ಯೋಜನೆಯಿಂದ ದೇಶದ ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ ಎಂಬ ಮಾತುಗಳಿವೆ. ಇದರ ಜೊತೆಗೆ, ಗ್ರಾಮೀಣ ಪ್ರದೇಶದಲ್ಲಿ ಕೂಲಿ ದರ ಏರಿಕೆಗೆ ಮತ್ತು ಹಣದುಬ್ಬರ ಏರಿಕೆಗೂ ಈ ಯೋಜನೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಆರೋಪಗಳು, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೇಳಿಬಂದಿವೆ. ಹೀಗಾಗಿ, ‘ಉದ್ಯೋಗ ಖಾತ್ರಿ ಅಂದರೆ ಭ್ರಷ್ಟಾಚಾರ ಖಾತ್ರಿ’ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.  ಉದ್ಯೋಗ ಖಾತ್ರಿ ಯೋಜನೆಯಡಿ ಬಿಡುಗಡೆ ಮಾಡುವ ಐದು ರೂಪಾಯಿಗಳಲ್ಲಿ, ಕೇವಲ ಒಂದು ರೂಪಾಯಿ ಮಾತ್ರ ನಿಜವಾದ ಫಲಾನುಭವಿಗಳ ಕೈ ಸೇರುತ್ತಿದ್ದು, ಯೋಜನಾ ವೆಚ್ಚದ ಶೇ.80ರಷ್ಟು ಹಣ ದುರುಪಯೋಗವಾಗುತ್ತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆಗಳನ್ನೂ ಮಾಡಿದ್ದಾರೆ.

ಸಾಮಾನ್ಯವಾಗಿ, ಭೂಮಿ ಉಳ್ಳವರು ಮಳೆಗಾಲದಲ್ಲಿ ತಮ್ಮದೇ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಅದೇ ರೀತಿ, ಭೂರಹಿತ ಕೃಷಿ ಕಾರ್ಮಿಕರಿಗೂ ಕೂಡ ಈ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಒಂದಿಷ್ಟು ಹಣ ಮಾಡಿಕೊಳ್ಳಲು ಅವಕಾಶವಿರುವ ಇಂಥ ಸಮಯದಲ್ಲೇ ಕೆಲವು ಪಂಚಾಯತಿಗಳವರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಕರೆಯುತ್ತಾರೆ. ಹೀಗಾಗಿ ಹೆಚ್ಚಿನವರು ಹೋಗುವುದಿಲ್ಲ, ಅದನ್ನೇ ನೆಪವಾಗಿ ಮಾಡಿಕೊಳ್ಳುವ ಪಂಚಾಯಿತಿ ಅಧ್ಯಕ್ಷರು, ಜೆಸಿಬಿ, ಟ್ರಾಕ್ಟರ್ ಇತ್ಯಾದಿ ಯಂತ್ರಗಳನ್ನು ಬಳಸಿ, ಏನೋ ಒಂದಿಷ್ಟು ಕೆಲಸ ಮಾಡಿದ ಹಾಗೆ ತೋರಿಸುತ್ತಾರೆ.

ಆದರೆ, ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ಶ್ರಮವನ್ನು ಬಳಸಿಕೊಂಡೇ ಕೆಲಸ ಮಾಡಿಸಬೇಕು ಎಂಬುದು ಕಡ್ಡಾಯ. ಹೀಗಾಗಿ, ಇಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರಗಳು ಆರಂಭವಾಗುತ್ತವೆ. ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಪಡೆದಿರುವ ಜನರು ಕೆಲಸ ಕೆಲಸಕ್ಕೆ ಬರದೇ ಇದಿದ್ದರಿಂದ ಹೀಗೆ ಮಾಡಬೇಕಾಯಿತು ಎಂದು ಹೇಳಿಕೊಳ್ಳುವ ಪಂಚಾಯತಿಯವರು ಭ್ರಷ್ಟಾಚಾರಕ್ಕಿಳಿಯುತ್ತಾರೆ. ಯೋಜನೆಯಡಿ ಉದ್ಯೋಗ ಚೀಟಿ ಪಡೆದಿರುವ, ಆದರೆ ಕೆಲಸವನ್ನೇ ಮಾಡಿರದ ಬಹುತೇಕ ಗ್ರಾಮಸ್ಥರ ಬ್ಯಾಂಕ್ ಖಾತೆಗಳಿಗೆ ಹಣ ರವಾನೆಯಾಗುತ್ತದೆ. ಹೀಗೆ, ತಮ್ಮ ಖಾತೆಗೆ ಬಂದ ಹಣವನ್ನು ಬ್ಯಾಂಕಿನಿಂದ ಹಿಂಪಡೆದು, ವಾಪಸ್ ನೀಡುವಂತೆ ಹೇಳಲಾಗುತ್ತದೆ. ತಮ್ಮ ಖಾತೆಗೆ ಬಂದು ಬಿದ್ದ ಹಣವನ್ನು ಪಂಚಾಯಿತಿಯವರಿಗೆ ಹಿಂದಿರುಗಿಸುವ ಹಳ್ಳಿಗರು, ಅದಕ್ಕೆ ಪ್ರತಿಯಾಗಿ ನೂರಿನ್ನೂರು ರೂಪಾಯಿ ಪಡೆದು ಸುಮ್ಮನಾಗುತ್ತಾರೆ. ಆದರೆ, ಹೀಗೆ ಮಾಡುವ ಮೂಲಕ ಇಡೀ ಉದ್ಯೋಗ ಖಾತ್ರಿ ಯೋಜನೆಯ ಮೂಲಕ್ಕೆ ಮತ್ತು ತಮ್ಮ ಜೀವನೋಪಾಯಕ್ಕೂ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಇವರಿಗೆ ಅರಿವಿರುವುದಿಲ್ಲ. ಅವ್ಯವಹಾರ ತಪ್ಪಿಸುವ ಸಲುವಾಗಿ, ಯೋಜನೆಯ ಅಡಿ ಗಳಿಸಿದ ಹಣವನ್ನು ಕೈಗೆ ಕೊಡುವ ವ್ಯವಸ್ಥೆ ನಿಲ್ಲಿಸಿ, ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹಾಕುವ ವ್ಯವಸ್ಥೆ ಜಾರಿಗೆ ತರಲಾಯಿತು. ಆದರೆ, ಅದನ್ನೂ ಕೂಡ ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದೇ ಒಂದು ವಿಪರ್ಯಾಸ. ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಭ್ರಷ್ಟಾಚಾರ ಇಷ್ಟಕ್ಕೇ ನಿಲ್ಲುವುದಿಲ್ಲ. ಅಸ್ತಿತ್ವದಲ್ಲೇ ಇಲ್ಲದವರ, ಹೆಸರಿನಲ್ಲಿ ಉದ್ಯೋಗ ಚೀಟಿ ಸೃಷ್ಟಿಸಲಾಗುತ್ತದೆ, ಅವರು ಕೆಲಸ ಮಾಡಿದ ಹಾಗೆ ತೋರಿಸಿ ಅವರ ಖಾತೆಗೆ ಹಣವೂ ಜಮಾ ಆಗುವ ಹಾಗೆ ನೋಡಿಕೊಳ್ಳಲಾಗುತ್ತದೆ. ಆ ಮೂಲಕ ಯೋಜನೆಯಡಿಯಲ್ಲಿ ಬಿಡುಗಡೆಯಾದ ಹೆಚ್ಚಿನ ಹಣ, ತಮ್ಮ ಜೇಬು ಸೇರಿಕೊಳ್ಳುವ ಹಾಗೆ ಮಾಡಿಕೊಳ್ಳುತ್ತಾರೆ.  ಹೀಗಾಗಿ, ಹಳ್ಳಿಗರ ಅಮಾಯಕತೆಯನ್ನು ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಎಸಗುವುದನ್ನು ತಪ್ಪಿಸಲು, ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.

ಕೃಷಿ ಚಟುವಟಿಕೆಗಳು ನಡೆಯದ ಸಮಯದಲ್ಲಿ ಅಥವ ಬೇಸಿಗೆಯಲ್ಲಿ ಕಾಮಗಾರಿ ಹಮ್ಮಿಕೊಳ್ಳುವ ಬದಲು, ಕೃಷಿ ಋುತುವಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಿಸುವುದನ್ನು ಕಡ್ಡಾಯವಾಗಿ ತಪ್ಪಿಸಬೇಕಾಗಿದೆ. ಇದರ ಜೊತೆಗೆ, ಇನ್ನೂ ಹಲವು ರೀತಿಯ ಸಮಸ್ಯೆಗಳು ಉದ್ಯೋಗ ಖಾತ್ರಿ ಯೋಜನೆಯನ್ನು ಕಾಡುತ್ತಿವೆ. ಪ್ರತಿದಿನ ಕೂಲಿಕೆಲಸಕ್ಕೆ ಹೋಗುವ ಹಳ್ಳಿಗರಿಗೆ, ಖಾಸಗಿಯವರು ಅಂದು ಸಂಜೆಯೇ ಕೂಲಿ ಹಣ ಕೊಟ್ಟುಬಿಡುತ್ತಾರೆ.  ಆದರೆ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರಿಗೆ ಹಣ ಬಿಡುಗಡೆಯಾಗಲು ಸಾಕಷ್ಟು ದಿನ ಹಿಡಿಯುತ್ತದೆ. ಹೀಗಾಗಿ, ಅವತ್ತೇ ದುಡಿದು ಅವತ್ತೇ ತಿನ್ನಬೇಕಾದಂಥ ಪರಿಸ್ಥಿತಿ ಇರುವ ಜನರು ಕಷ್ಟಕ್ಕೆ ಸಿಲುಕುತ್ತಾರೆ.  ಎಷ್ಟೋ ಪಂಚಾಯಿತಿಗಳಲ್ಲಿ ಗ್ರಾಮಸಭೆಗಳು ನಡೆಯುವುದೇ ಇಲ್ಲ, ತಮಗೆ ಬೇಕಾದವರ ಸಹಿ ಹಾಕಿಸಿಕೊಂಡು ಸಭೆ ನಡೆದಂತೆ ದಾಖಲೆ ತೋರಿಸುತ್ತಾರೆ. ಇನ್ನು, ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ನಡೆಯುವಾಗ, ಅಲ್ಲಿ ಕಾರ್ಮಿಕರಿಗೆ ನೀರು, ನೆರಳಿನ ವ್ಯವಸ್ಥೆ ಮಾಡಬೇಕು. ಹೆಣ್ಣು ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯೂ ಇರಬೇಕು. ಇದರ ಜೊತೆಗೆ, ಸಣ್ಣ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಸಹಾಯಕರನ್ನೂ ನೇಮಿಸಬೇಕು ಎಂಬ ನಿಯಮಗಳಿವೆ. ಆದರೆ, ಇದು ಯಾವುದನ್ನೂ ಮಾಡದ ಪಂಚಾಯತಿಯವರು, ಆ ಬಾಬತ್ತು ಹಣವನ್ನೂ ನುಂಗಿಹಾಕುತ್ತಾರೆ.

ಇದೆಲ್ಲವೂ ಒಂದು ರೀತಿಯ ಭ್ರಷ್ಟಾಚಾರವಾದರೆ, ಇಲ್ಲಿ ಇನ್ನೂ ಇತರ ರೀತಿಯ  ಭ್ರಷ್ಟಾಚಾರಗಳಿಗೆ ಆಸ್ಪದ ನೀಡುವ ಸನ್ನಿವೇಶಗಳೂ ಉದ್ಭವವಾಗುತ್ತವೆ.  ಸಾಮಾನ್ಯವಾಗಿ ಸುಮಾರು 10 ಲಕ್ಷ ರೂಪಾಯಿಗಳ ಒಂದು ಕಾಮಗಾರಿ ಕೈಗೆತ್ತಿಕೊಂಡು ಪೂರೈಸಲು, ಪ್ರತಿದಿನ ನೂರರಿಂದ ನೂರೈವತ್ತು ಜನ ಕೆಲಸಗಾರರು ಬೇಕಾಗುತ್ತದೆ. ಆದರೆ, ಹಳ್ಳಿಗಳಲ್ಲಿ ಕೆಲಸ ಮಾಡಲು ಜನರೇ ಸಿಗುವುದಿಲ್ಲ. ಬಹುತೇಕರು, ಅವರ ಊರುಗಳ ನೂರು ಕಿಲೋಮೀಟರ್ ಆಸುಪಾಸಿನ ನಗರಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಇಂಥವರನ್ನು ಪ್ರತಿದಿನವೂ ಅವರ ಊರಿನಿಂದ ಕರೆದುಕೊಂಡು ಹೋಗಲು ಮತ್ತು ಮತ್ತೆ ವಾಪಸ್ ಬಿಡಲು ವಾಹನ ವ್ಯವಸ್ಥೆ ಮಾಡಲಾಗಿರುತ್ತದೆ.

ಇದರ ಜೊತೆಗೆ, ನಗರದಲ್ಲಿ ಇವರಿಗೆ ಪ್ರತಿದಿನ ಐದುನೂರರಿಂದ ಸಾವಿರ ರೂಪಾಯಿಗಳವರೆಗೆ ಕೂಲಿ ಸಿಗುತ್ತದೆ. ಹೀಗಾಗಿ, ಉದ್ಯೋಗ ಖಾತ್ರಿ ಯೋಜನೆ ಅಡಿ ಕೊಡುವ 236 ರೂಪಾಯಿಗಳ ದಿನಗೂಲಿ ಇವರನ್ನು ಸೆಳೆಯುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜನರಿಂದಲೇ ಕೆಲಸ ಮಾಡಿಸಬೇಕೆಂಬ ನಿಯಮವಿದೆ, ಹೀಗಾಗಿ ಯಂತ್ರಗಳನ್ನು ಬಳಸುವಂತಿಲ್ಲ. ಇಂಥ ಪರಿಸ್ಥಿತಿಯಲ್ಲಿ, ಈ ಯೋಜನೆಯಡಿ ಲಕ್ಷಗಟ್ಟಲೆ ಹಣ ಬಿಡುಗಡೆಯಾದರೂ ಯಾವುದೇ ಕೆಲಸ ಮಾಡಿಸಲು ಸಾಧ್ಯವಿಲ್ಲ. ಆದರೆ, ಹಣ ಸುಮ್ಮನಿರುತ್ತದೆಯೇ, ತನ್ನ ಮಹಿಮೆ ತೋರುತ್ತದೆ, ಪಂಚಾಯತಿ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ಕಾಮಗಾರಿ ಆಗದಿದ್ದರೂ, ಅರ್ಧಂಬರ್ಧ ಆಗಿದ್ದರೂ, ಯಂತ್ರಗಳನ್ನೇ ಬಳಸಿದರೂ ಕೂಡ ಯಾರೂ ಕೇಳುವವರೇ ಇರುವುದಿಲ್ಲ. ತೋರಿಕೆಯ ಕೆಲಸ ಮಾಡಿಸುತ್ತಾರೆ, ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಉದ್ಯೋಗ ಖಾತ್ರಿ ಯೋಜನೆಯ ಮೂಲ ಉದ್ದೇಶವೇ ಸೋತುಹೋಗುತ್ತದೆ.

ಹೀಗಾಗಿ, ಯಾವ ಪ್ರದೇಶ ತೀರಾ ಹಿಂದುಳಿದಿದೆಯೋ, ನಗರಗಳಿಂದ ಸಾಕಷ್ಟು ದೂರವಿದೆಯೋ, ಅಲ್ಲಿ ಮಾತ್ರ, ಉದ್ಯೋಗ ಖಾತ್ರಿ ಈ ಯೋಜನೆ ಒಂದುಮಟ್ಟಿಗೆ ಯಶಸ್ವಿಯಾಗಿದೆ. ಇದರ ಜೊತೆಗೆ, ಅಧಿಕಾರಿಗಳು ಮತ್ತು ಪಂಚಾಯಿತಿ ಸದಸ್ಯರು ಪ್ರಾಮಾಣಿಕರಾಗಿರುವ ಕಡೆಯೂ ಒಳ್ಳೆಯ ಕೆಲಸಗಳಾಗಿವೆ. ಆದರೆ, ಉಳಿದ ಬಹುತೇಕ ಕಡೆ ಭ್ರಷ್ಟಾಚಾರವೇ ವ್ಯಾಪಕವಾಗಿದ್ದು, ದೇಶದ ತೆರಿಗೆದಾರರ ಹಣ ವ್ಯರ್ಥವಾಗುತ್ತಿದೆ ಎಂದೇ ಹೇಳಬಹುದು. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು, ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು, ತಂತ್ರಜ್ಞಾನ ಬಳಕೆ ಹೆಚ್ಚುಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ, ಮಹಾತ್ಮ ಗಾಂಧಿ ಹೆಸರಿನ ಈ ಉದ್ಯೋಗ ಖಾತ್ರಿ ಯೋಜನೆಯ ಅಂತ್ಯದ ದಿನಗಳು ಆರಂಭವಾಗುವುದು ತಡವಿಲ್ಲ.

 

 


ಟಾಪ್ ಪ್ರತಿಕ್ರಿಯೆಗಳು


  • Professional
  • Professional
ಸರ್ ಇದೆ ತರ ನಮ್ಮ ಊರಿನಲ್ಲಿ ಕೂಡಾ ನಡೆಯುತ್ತಿದೆ .ಇಂತಹದಕ್ಕೆ ಅಂತ್ಯ ಹಾಡಬೇಕು .ನಮಗೂ ಸಪೋರ್ಟ್ ಮಾಡಿ ಸರ್.ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಒಂದು ಹಳ್ಳಿ
  • ಮಂಜುನಾಥ ಆದಿಮನಿ
  • ಕೂಲಿ