ಸಮಾಜದ ಶಾಂತಿ ಕದಡುವ ಯಾರನ್ನೂ ಬಿಡಬೇಡಿ !

Kannada News

10-07-2017

ಬೆಂಗಳೂರು: ಸರ್ಕಾರ ನಿಮ್ಮೊಂದಿಗೆ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರ ಬಂದಾಗ ಕಠಿಣ ನಿಲುವು ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಯವರು, ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಕಾನೂನು ಸುವ್ಯವಸ್ಥೆ ಸದಾ ನಿಯಂತ್ರಣದಲ್ಲಿ ಇರಬೇಕು. ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತ ಆಗುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಹೇಳಿದರು. ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಅತ್ಯಂತ ಪ್ರಾಮಾಣಿಕವಾಗಿ ಮಾಡಬೇಕು. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ತಪ್ಪುಗಳಾಗಬಾರದು. ಯಾವುದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವುದರ ಜೊತೆಗೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸರ್ಕಾರ ಬಹುತೇಕ ಸೌಲಭ್ಯಗಳನ್ನು ಒದಗಿಸಿದೆ. ಹಿಂದಿನ ಯಾವುದೇ ಸರ್ಕಾರಗಳು ಈ ಪ್ರಮಾಣದಲ್ಲಿ ಇಲಾಖೆಗೆ ಸೌಕರ್ಯಗಳನ್ನು ಒದಗಿಸಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. 12 ಸಾವಿರ ಪೊಲೀಸರಿಗೆ ಏಕ ಕಾಲಕ್ಕೆ ಬಡ್ತಿ ನೀಡಿರುವುದು, ಸಿಬ್ಬಂದಿ ನೇಮಕ, ಪೊಲೀಸರ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಗಮನ ಹರಿಸಿರುವುದು, ಕ್ಯಾಂಟೀನ್ ಸೌಲಭ್ಯ, ಭತ್ಯೆ ಹೆಚ್ಚಳ, ವಾಹನ ಸೌಲಭ್ಯ, ಇದೇ ಮೊದಲಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು. ಪೊಲೀಸ್ ಇಲಾಖೆಯಲ್ಲಿ ಸವಲತ್ತುಗಳಿಗೆ ಯಾವುದೇ ಕೊರತೆ ಇರಬಾರದು. ಜೊತೆಗೆ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಅದು ನೆಪ ಆಗಬಾರದು. ಬಹುತೇಕ ಸೌಲಭ್ಯಗಳನ್ನು ಒದಗಿಸಿರುವುದರಿಂದ ಸರ್ಕಾರ ನಿಮ್ಮಿಂದ ಹೆಚ್ಚು ದಕ್ಷತೆಯನ್ನು ನಿರೀಕ್ಷೆ ಮಾಡುತ್ತದೆ ಎಂದಿದ್ದಾರೆ.

ಜನರೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಿ. ಇದರಿಂದ ಅಪರಾಧ ಪ್ರಕರಣಗಳ ನಿಯಂತ್ರಣ ಸಾಧ್ಯವಾಗುತ್ತದೆ. ಅಪರಾಧ ಪ್ರಕರಣಗಳು ವರದಿಯಾದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ, ಆಗದಂತೆ ಮುಂಜಾಗ್ರತೆ ವಹಿಸುವುದು ಅತ್ಯಂತ ಸೂಕ್ತ ಎಂದು ಹೇಳಿದರು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಬೇಕು. ಹಿರಿಯ ಅಧಿಕಾರಿಗಳು ಆಗಾಗ, ಠಾಣೆಗಳಿಗೆ ಭೇಟಿ ನೀಡಿ ಕೆಳಹಂತದ ಸಿಬ್ಬಂದಿಗೆ ತಮ್ಮ ಅನುಭವ ಧಾರೆ ಎರೆಯುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಮಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಚುನಾವಣೆಯ ವರ್ಷ. ಹೀಗಾಗಿ ಕೋಮುವಾದಿ ಶಕ್ತಿಗಳು ಸಮಾಜದ ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕುತ್ತವೆ. ಗಲಭೆಗಳು ಉಂಟಾದಾಗ ರಾಜಕೀಯ ಪಕ್ಷಗಳು ಅದನ್ನು ಲಾಭವಾಗಿ ಮಾಡಿಕೊಳ್ಳಲು ಹುನ್ನಾರ ಮಾಡುವ ಸಾಧ್ಯತೆ ಇರುತ್ತದೆ. ಕೋಮು ಭಾವನೆಯನ್ನು ಕೆರಳಿಸುವ ಯಾವುದೇ ಸಂಘಟನೆಗೆ ಸರ್ಕಾರ ಬೆಂಬಲ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.  ಮಂಗಳೂರು ಗಲಭೆ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿಯವರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಕೂಡಲೇ ಅಲ್ಲಿಗೆ ತೆರಳಿ ವಿವಿಧ ಸಂಘಟನೆಗಳ ಮುಖಂಡರನ್ನು ಕರೆದು ಸಭೆ ನಡೆಸಬೇಕು. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು. ಕರ್ನಾಟಕ ಮೊದಲಿನಿಂದಲೂ ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾದ ರಾಜ್ಯ. ಸಮಾಜದ ಶಾಂತಿ ಕದಡುವ ವ್ಯಕ್ತಿಗಳು ಯಾರೇ ಆಗಲಿ, ಅವರು ಎಷ್ಟೇ ಬಲಿಷ್ಠರಾಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಚುನಾವಣೆ ವರೆಗೆ ಈ ವಿಚಾರದಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ನಮ್ಮ ಸರ್ಕಾರ ಕಬ್ಬಿಣದ ಕೈಗಳಿಂದ ಕ್ರಮ ಕೈಗೊಳ್ಳುತ್ತದೆ. ಒಂದು ವೇಳೆ ಅಧಿಕಾರಿಗಳು ತಪ್ಪು ಮಾಡಿದರೂ, ಅವರ ವಿರುದ್ಧವೂ ಕ್ರಮ ಜರುಗಿಸಬೇಕಾಗುತ್ತದೆ. ಮನುಷ್ಯನ ಜೀವ ಅಮೂಲ್ಯವಾದದ್ದು. ಅದನ್ನು ರಾಜಕೀಯಕ್ಕೆ ಬಲಿಯಾಗಲು ಬಿಡಬಾರದು ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ