ಲಾಲು-ನಿತೇಶ್ ಸಂಬಂಧದಲ್ಲಿ ಬಿರುಕು..? 

Kannada News

10-07-2017

ಪಾಟ್ನಾ: ಆರ್‍.ಜೆ.ಡಿ ಮತ್ತು ಜೆಡಿಯು ನಾಯಕರಾದ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಲಾಲೂ ಆಪ್ತ ಬಳಗದವರು ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳಿಗೆ ಈಡಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಮೈತ್ರಿ ಕಡಿದುಕೊಳ್ಳಲು ಚಿಂತಿಸುತ್ತಿದ್ದಾರ ಎನ್ನಲಾಗಿದೆ. ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮೈತ್ರಿ ಉಳಿಯುವುದು ಅನುಮಾನವಾಗಿದೆ. ಲಾಲೂ ಮಕ್ಕಳು ಹಾಗೂ ಆಪ್ತರ ಮನೆ ಮೇಲೆ ನಿರಂತರವಾಗಿ ಸಿಬಿಐ ದಾಳಿ ನಡೆಯುತ್ತಿದೆ. ಇದರಿಂದ ಬಿಹಾರ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದ್ದು, ಸರ್ಕಾರಕ್ಕೆ ಬೆಂಬಲ ನೀಡಿರುವ ಲಾಲೂ ಸಂಗವನ್ನು ತ್ಯಜಿಸಲು ನಿತೀಶ್ ಕುಮಾರ್ ಚಿಂತನೆ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪದ ಮೇಲೆ ಲಾಲೂ ಪ್ರಸಾದ್ ಕುಟುಂಬಸ್ಥರು ಮತ್ತು ಆಪ್ತರ ಮನೆ ಮೇಲೆ ಜಾರಿ ನಿರ್ದೇಶನಾಲಯವು ಹಲವು ಬಾರಿ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಲಾಲೂ ಪುತ್ರರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ಬಿಹಾರದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ, ಇದೇ ವಿಷಯವನ್ನು ಮುಂದಿಟ್ಟುಕೊಂಡು ಲಾಲು ಪುತ್ರರ ರಾಜೀನಾಮೆ ಪಡೆಯುವಂತೆ ಒತ್ತಾಯಿಸುತ್ತಿದೆ. ಸಿಎಂ ನಿತೀಶ್ ಕುಮಾರ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಲಾಲೂ ಅವರ ಆರ್‍.ಜೆ.ಡಿ ಪಕ್ಷದ ಜೊತೆಗಿನ ಮೈತ್ರಿ ಕಡಿದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲಾಲೂ ಆಪ್ತರ ಭ್ರಷ್ಟಾಚಾರದ ವಿಷಯ ಮೇಲಿಂದ ಮೇಲೆ ಬಯಲಾಗುತ್ತಿರುವುದರಿಂದ ಸರ್ಕಾರ ಹಾಗೂ ಪಕ್ಷದ ಬಗ್ಗೆ ಜನರಲ್ಲಿ ನಕಾರಾತ್ಮಕ ಸಂದೇಶ ಹೋಗಬಹುದು ಎಂಬ ಆತಂಕದಲ್ಲಿರುವ ಜೆಡಿಯು ಪಕ್ಷವು ಮುಂದಿನ ನಡೆ ಬಗ್ಗೆ ಚರ್ಚಿಸಲು ಜುಲೈ 11 ರಂದು ಜೆಡಿಯು ಕಾರ್ಯಕಾರಿಣಿ ಸಭೆ ಕರೆದಿದೆ. ಸಭೆಯಲ್ಲಿ ಡಿಸಿಎಂ ರಾಜೀನಾಮೆ ತೆಗೆದುಕೊಳ್ಳುವ ವಿಚಾರ ಮತ್ತು ಮೈತ್ರಿ ಮುಂದುವರಿಸಬೇಕೇ ಬೇಡವೇ ಎಂಬ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ರಾಜಕೀಯ ಮೂಲಗಳು ತಿಳಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ