ಮೀಸಲಾತಿ ಏಕೆ ಅನಿವಾರ್ಯ..?

Kannada News

08-07-2017

ಮೀಸಲಾತಿ ಅನ್ನುವುದು ಭಾರತದಲ್ಲಿ ಬಹುಚರ್ಚಿತ ವಿಚಾರ. ಕಳೆದ ಎಪ್ಪತ್ತು ವರ್ಷಗಳಿಂದಲೂ ಈ ಬಗ್ಗೆ ಹಲವು ರೀತಿಯ ವಾದಗಳು, ವಿವಾದಗಳು ನಡೆದೇ ಇವೆ. ಒಂದಷ್ಟುದಿನ ಬಿಸಿಯಾಗುವ ಮೀಸಲಾತಿ ವಿಚಾರ, ಮತ್ತೊಂದಷ್ಟು ದಿನ ತಣ್ಣಗಾಗುತ್ತದೆ. ಮೀಸಲಾತಿ ಬೇಡ ಅನ್ನುವವರು, ಅದಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತಾರೆ, ಹಾಗೆಯೇ ಮೀಸಲಾತಿ ಏಕೆ ಬೇಕು ಅನ್ನುವುದಕ್ಕೂ ಅಷ್ಟೇ ಸಮರ್ಥರೀತಿಯ ವಾದಗಳು ಕಂಡುಬರುತ್ತವೆ. ಆದರೆ, ದೇಶದ ಇವತ್ತಿನ ಸನ್ನಿವೇಶದಲ್ಲಿ ಮೀಸಲಾತಿ ಏಕೆ ಅನಿವಾರ್ಯ? ಎಂಬ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್.

ಭಾರತದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರೆಂದು ಕರೆಸಿಕೊಳ್ಳುವವರು, ಮೀಸಲಾತಿ ಅನ್ನುವುದನ್ನು ತಮ್ಮ ಉದ್ಧಾರಕ್ಕಾಗಿ ಇರುವ ಒಂದು ವರವೆಂದು ಪರಿಗಣಿಸಿದರೆ, ಮತ್ತೆ ಕೆಲವರು ಅದನ್ನು ಶಾಪದಂತೆ, ತಮ್ಮ ಅವಕಾಶಗಳನ್ನು ಕಿತ್ತುಕೊಳ್ಳುವ ಒಂದು ದುಷ್ಟಶಕ್ತಿಯಂತೆ ಕಾಣುತ್ತಾರೆ.  ಮೀಸಲಾತಿ ಬೇಕಿಲ್ಲ ಅನ್ನುವವರ ವಾದದಂತೆ, ಹಿಂದುಳಿದ ವರ್ಗದವರ ಉದ್ಧಾರಕ್ಕೆ ತಾತ್ಕಾಲಿಕ ಬೆಂಬಲದಂತಿರಬೇಕಿದ್ದ ಮೀಸಲಾತಿ ಅನ್ನುವುದು, ಶಾಶ್ವತವಾದ ಊರುಗೋಲಾಗಿಬಿಟ್ಟಿದೆ. ಹೀಗಾಗಿ, ಇವತ್ತಿನ ದಿನಗಳಲ್ಲಿ ಮೀಸಲಾತಿ ಪಡೆಯುವವರು, ನಡೆಯಲು ಸ್ವಂತ ಶಕ್ತಿಯಿದ್ದರೂ, ಗಾಲಿಖುರ್ಚಿ ಕೇಳುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಕೇವಲ ಒಂದು ರಿಯಾಯಿತಿ ಆಗಿರಬೇಕಿದ್ದ ರಿಸರ್ವೇಷನ್ ಪದ್ಧತಿ, ಇದೀಗ ಮೂಲಭೂತ ಹಕ್ಕಿನ ರೂಪತಳೆದಿದೆ ಎಂದು ಬಣ್ಣಿಸುತ್ತಾರೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ, ಜಾತಿ ಪದ್ಧತಿಯನ್ನು ಎತ್ತಿಹಿಡಿಯುವ ಮೀಸಲಾತಿ, ಸಮಾಜವನ್ನು ವಿಭಜನೆ ಮಾಡುತ್ತದೆ ಎಂದು ಮೀಸಲಾತಿ ವಿರೋಧಿಗಳು ಆರೋಪಿಸುತ್ತಾರೆ.

ಶತಮಾನಗಳ ಹಿಂದೆ, ಒಂದು ವರ್ಗದವರು ಶೋಷಣೆಗೊಳಗಾಗಿದ್ದರು ಎಂಬ ಕಾರಣಕ್ಕಾಗಿ, ಇವತ್ತು ಕೆಲವು ಸಮುದಾಯಗಳ ವಿರುದ್ಧ ಪ್ರತೀಕಾರಾತ್ಮಕ ತಾರತಮ್ಯ ತೋರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ. ಜಾತಿ ಆಧಾರಿತ ಮೀಸಲಾತಿ ಪದ್ಧತಿ, ಜನರ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಗೆ ಮಾಡುವ ಅಪಮಾನವಲ್ಲವೇ? ಎಂಬ ಪ್ರಶ್ನೆಗಳೂ ತೂರಿಬರುತ್ತವೆ.  ಇಷ್ಟಕ್ಕೇ ನಿಲ್ಲದ ಮೀಸಲಾತಿ ವಿರೋಧಿಗಳು, ಯಾರೋ ಪೂರ್ವಜರು ಮಾಡಿದ್ದಾರೆ ಎನ್ನಲಾದ ತಾರತಮ್ಯಕ್ಕೆ, ಆ ಬಗ್ಗೆ ಏನೇನೂ ಗೊತ್ತಿಲ್ಲದ ಈಗಿನ ಪೀಳಿಗೆಯವರಿಗೇಕೆ ಶಿಕ್ಷೆ? ಈ ರೀತಿ ಮಾಡುವುದು, ಯಾವುದೋ ಕಾಲದಲ್ಲಿ, ಒಬ್ಬ ವ್ಯಕ್ತಿಯ ತಾತನನ್ನು, ಮತ್ತೊಬ್ಬ ವ್ಯಕ್ತಿಯ ತಾತ ಕೊಲೆ ಮಾಡಿರುತ್ತಾನೆ, ಅದಕ್ಕಾಗಿ ಈಗ, ಸತ್ತ ಆ ವ್ಯಕ್ತಿಯ ಮೊಮ್ಮಗನಿಗೆ, ಕೊಲೆಗಾರ ವ್ಯಕ್ತಿಯ ಮೊಮ್ಮಗನ್ನು ಕೊಲ್ಲಲು ಅವಕಾಶ ಕೊಡಬೇಕು ಎಂದು ಹೇಳಿದ ಹಾಗಲ್ಲವೇ? ಎಂಬ ತರ್ಕ ಮಂಡಿಸುತ್ತಾರೆ.

ಮೀಸಲಾತಿ ವ್ಯವಸ್ಥೆ, ಜಾತಿಪದ್ಧತಿಯನ್ನು ಹೋಗಲಾಡಿಸುವ ಬದಲಿಗೆ ಅದನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆಯಲ್ಲವೇ? ಮೀಸಲಾತಿ ಜಾರಿಯಲ್ಲಿರುವುದರಿಂದಲೇ ವಿವಿಧ ಜಾತಿ, ವರ್ಗದವರೂ ಕೂಡ, ಬೇರೆ ಬೇರೆ ರೀತಿಯ ಲಾಭಕ್ಕಾಗಿ ತಮ್ಮನ್ನು ತಾವು ಹಿಂದುಳಿದವರು ಎಂದು ಪರಿಗಣಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರಲ್ಲವೇ? ಎಂದು ಕೇಳುತ್ತಾರೆ.

ಮೀಸಲಾತಿ ಅನ್ನುವುದು, ಇವತ್ತಿನ ಕಾಲಘಟ್ಟದಲ್ಲಿ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಪ್ರಾಯೋಜಿಸುತ್ತಿರುವ ವಿಭಿನ್ನ ರೀತಿಯ ಭ್ರಷ್ಟಾಚಾರ ಎಂದು ಟೀಕಿಸುತ್ತಾರೆ. ದೇಶದ ರಾಜಕೀಯ ಪಕ್ಷಗಳು, ಮೀಸಲಾತಿಯನ್ನು ತಮ್ಮ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ ಎಂದೂ ಕೂಡ ಆರೋಪಿಸುತ್ತಾರೆ. ಮೀಸಲಾತಿ ಅನ್ನುವುದು ಅನರ್ಹರಿಗೆ ಲಾಭಮಾಡಿಕೊಡುವ ಒಳದಾರಿ, ಹೀಗಾಗಿ ಇದು, ಇಡೀ ದೇಶ ತನ್ನನ್ನು ತಾನೇ ನಾಶ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಸುತ್ತದೆ ಎಂದು ಹೆದರಿಸುತ್ತಾರೆ. ಪ್ರಾಚೀನ ಭಾರತದಲ್ಲಿ, ರಾಜಮಹಾರಾಜರು ಮತ್ತು ಪುರೋಹಿತಶಾಹಿಗಳು ಜಾತಿ ಪದ್ಧತಿ ಹೇರುತ್ತಿದ್ದರು. ಇದೀಗ, ಆ ಜವಾಬ್ದಾರಿಯನ್ನು ನಮ್ಮ ಸರ್ಕಾರಗಳು ವಹಿಸಿಕೊಂಡಿದ್ದು, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರುತ್ತಾರೆ.

ಹೀಗಾಗಿ, ಭಾರತದಲ್ಲಿ ಮೀಸಲಾತಿ ವಿರೋಧಿಸುವವರ ದನಿ ಗಟ್ಟಿಯಾಗಿಯೇ ಕೇಳಿಬರುತ್ತಿದೆ. ಆದರೆ, ಅಂಥವರ ಆಗ್ರಹಕ್ಕೆ ಮಣಿದು ಮೀಸಲಾತಿ ಪದ್ಧತಿ ಕೈ ಬಿಡಬೇಕಾದ ಸಮಯ ಬಂದಿದೆಯೇ ಎಂದು ನೋಡುವುದಾರೆ, ಇಲ್ಲವೇ ಇಲ್ಲ ಅನ್ನುವುದೇ ಸ್ಪಷ್ಟ ಉತ್ತರ. ಭಾರತದ ಬಹುತೇಕ ಪ್ರದೇಶಗಳಲ್ಲಿ ಇನ್ನೂ ಕೂಡ, ಪ್ರತ್ಯಕ್ಷ ಮತ್ತು ಪರೋಕ್ಷ ಅಸೃಶ್ಯತೆ ಜಾರಿಯಲ್ಲಿದೆ. ಇವತ್ತಿಗೂ, ದಲಿತರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುವ ಮನಸ್ಥಿತಿಯ ಜನರಿದ್ದಾರೆ. ಸವರ್ಣೀಯರ ಮನೆಗಳಿಗೆ, ದೇಗುಲಗಳಿಗೆ ದಲಿತರ ಪ್ರವೇಶ ತಡೆಯುವಂಥ ವ್ಯವಸ್ಥೆಗಳಿವೆ. ಕೆಲವು ಕಡೆ, ಸವರ್ಣೀಯರು ನಡೆಸುವ ಹೋಟೆಲುಗಳಲ್ಲಿ, ದುಡ್ಡುಕೊಟ್ಟರೂ ದಲಿತರಿಗೆ ಒಂದು ಕಪ್ಪು ಚಹಾ ಸಿಗುವುದು ಕಷ್ಟ. ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ, ದಲಿತರು ತಿಂದ ತಟ್ಟೆ-ಲೋಟ ತೊಳೆಯುವುದನ್ನು ತಪ್ಪಿಸಿಕೊಳ್ಳಲಿಕ್ಕಾಗಿಯೇ ಬಳಸಿ ಬಿಸಾಕುವ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಬಳಸುತ್ತಾರೆ. ನಮ್ಮ ಬೆಂಗಳೂರಿನ ಐವತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೆಲವು ಊರುಗಳಲ್ಲೂ ಇನ್ನೂ ಕೂಡ, ದಲಿತರು ಕುಡಿಯಲು ನೀರು ಕೇಳಿದರೆ, ನೀರಿನ ಬಿಂದಿಗೆ ತಂದು ಅವರ ಕೈಗೆ ಸುರಿಯುತ್ತಾರೆ ಹೊರತು, ಲೋಟ ಅಥವ ತಂಬಿಗೆಯಲ್ಲಿ ನೀರು ಕೊಡುವವರ ಸಂಖ್ಯೆ ಕಡಿಮೆ.

ಮೊನ್ನೆ ಮೊನ್ನೆಯಷ್ಟೇ ಹರಿಯಾಣದ ಕುರುಕ್ಷೇತ್ರದಲ್ಲಿ, ದಲಿತ ಎಂಬ ಕಾರಣಕ್ಕಾಗಿ, ಮದುವೆ ಮೆರವಣಿಗೆ ವೇಳೆ ಕುದುರೆ ಸವಾರಿ ಹೊರಟ ವರನಿಗೆ ತಡೆಯೊಡ್ಡಲಾಗಿದೆ. ಭಾರತ ದೇಶದಲ್ಲಿ ಅಸ್ಪೃಶ್ಯತೆ ಆಚರಣೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದಲಿತರ ನಿಂದನೆ ತಪ್ಪಿಸಲು, ಅವರ ಮೇಲೆ ದೌರ್ಜನ್ಯ ಎಸಗುವುದನ್ನು ತಪ್ಪಿಸಲು, ಕಠಿಣ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ, ಸ್ವಾತಂತ್ರ್ಯಾನಂತರದ ಇಷ್ಟು ವರ್ಷಗಳಲ್ಲಿ, ದಲಿತರಿಗೆ ಒಂದಿಷ್ಟಾದರೂ ಮರ್ಯಾದೆ ದೊರಕುತ್ತಿದೆಯೆಂದಾರೆ ಅದಕ್ಕೆ, ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನುಗಳು ಕಾರಣ ಅಷ್ಟೇ.  ಕಠಿಣ ಕಾನೂನಿಗೆ ಹೆದರಿ, ದಲಿತರಿಗೆ ಗೌರವ ಕೊಟ್ಟಂತೆ ವರ್ತಿಸುತ್ತಾರೆಯೇ ಹೊರತು, ಜನರ ಮನಸ್ಥಿತಿಗಳು ಸಂಪೂರ್ಣವಾಗಿ ಬದಲಾಗಿವೆಯೆಂದೇನೂ ಅಲ್ಲ.

ರಾಷ್ಟ್ರೀಯತೆ, ರಾಷ್ಟ್ರ ಪ್ರೇಮದ ಬಗ್ಗೆ ಭಾಷಣ ಬಿಗಿಯುವ ಆರೆಸ್ಸೆಸ್ ಮಂದಿ, ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಈವರೆಗೆ ಎಂದೂ ಬಹಿರಂಗವಾಗಿ ಖಂಡಿಸಿಯೇ ಇಲ್ಲ. ನಾವೆಲ್ಲಾ ಒಂದು, ನಾವೆಲ್ಲಾ ಹಿಂದೂ ಎಂದು ಕೂಗುಹಾಕುವ ಆರೆಸ್ಸೆಸ್ ನವರಿಗೆ, ದಲಿತರು ಹಿಂದೂಧರ್ಮದಲ್ಲೇ ಮುಂದುವರಿಯಬೇಕಿರುವುದು, ತಮ್ಮ ಧರ್ಮದವರ ಸಂಖ್ಯೆ ದೊಡ್ಡದೆಂದು ತೋರಿಸಿಕೊಳ್ಳುವ ಸಲುವಾಗಿ ಮಾತ್ರ. ಹೀಗಾಗಿ, ದಲಿತರನ್ನು ಬಲವಂತವಾಗಿ ಹಿಂದೂಗಳಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ದಲಿತರು ಲೆಕ್ಕಕ್ಕುಂಟು, ಆಟಕ್ಕಿಲ್ಲ ಎಂಬಂತಾಗಿದ್ದಾರೆ. ದೇಶದ ಅಲ್ಲಲ್ಲಿ ಇವತ್ತಿಗೂ ಜೀತ ಪದ್ಧತಿ ಜೀವಂತವಾಗಿದೆ. ಇತ್ತೀಚೆಗೆ ದಲಿತರ ಆಹಾರ ಪದ್ಧತಿ ಮೇಲೆಯೇ ಪ್ರಹಾರ ಮಾಡುವಂಥ ಬೆಳವಣಿಗೆಗಳೂ ದೇಶದಲ್ಲಿ ನಡೆದಿವೆ.

ಇವತ್ತಿನ ದಿನಗಳಲ್ಲಿ ನಮ್ಮ ದೇಶದಲ್ಲಿ ರಾಷ್ಟ್ರೀಯತೆ, ಐಕ್ಯತೆ, ಭದ್ರತೆಗಳ ಹೆಸರಿನಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ, ಎಲ್ಲವೂ ಸರಿಯಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಇವತ್ತಿಗೂ ಕೂಡ, ಮ್ಯಾನ್ ಹೋಲ್‌ಗೆ ಇಳಿಯುವಂಥವರು, ಮನೆಗಳ ಶೌಚಾಲಯದ ಗುಂಡಿ ಸ್ವಚ್ಛಗೊಳಿಸುವವರು, ನಮ್ಮ ಕಿತ್ತುಹೋದ ಚಪ್ಪಲಿ ಹೊಲೆದು ಕೊಡುವವರು ಮತ್ತು ಬಹುತೇಕ ಪೌರಕಾರ್ಮಿಕರು ಒಂದೇ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಯಾವುದೇ ಪರಿಸ್ಥಿತಿಯಲ್ಲೂ ಮೇಲ್ವರ್ಗದವರು, ಬೇರೆಯವರು ಇಂಥ ಕೆಲಸಗಳನ್ನು ಮಾಡುವುದಿಲ್ಲ. ಮೇಲ್ವರ್ಗದ ಬಡವರ ಬಗ್ಗೆ ಅಪಾರ ಕಾಳಜಿ ತೋರಿಸುವ ಮೀಸಲಾತಿ ವಿರೋಧಿಗಳು, ಇದನ್ನು ಅರ್ಥಮಾಡಿಕೊಳ್ಳಬೇಕು. ಏಕೆಂದರೆ, ಎಂತಹ ಕಠಿಣ ಪರಿಸ್ಥಿತಿ ಬಂದರೂ ಕೂಡ, ಮೇಲ್ವರ್ಗದವರು ಒಂದಲ್ಲಾ ಒಂದು ಬದಲಿ ಮಾರ್ಗ ಕಂಡುಹಿಡಿದುಕೊಳ್ಳುತ್ತಾರೆ.  

ಕರ್ನಾಟಕದ ರಾಜಕೀಯ ಪಕ್ಷವೊಂದರ ಮುಖಂಡರು ದಲಿತರ ಮನೆಗಳಿಗೆ ಭೇಟಿ ನೀಡಿ, ಅಲ್ಲಿ ಊಟ ಮಾಡುವ ನಾಟಕ ಆಡುತ್ತಿದ್ದಾರೆ. ಆದರೆ, ಈಗಾಗಲೇ ಜೀವನಕ್ರಮ ಸುಧಾರಣೆಯಾಗಿರುವ ದಲಿತರ ಮನೆಗೆ ಭೇಟಿ ನೀಡುವುದರಿಂದಾಗಲಿ, ಅಲ್ಲಿ ಊಟದ ಶಾಸ್ತ್ರ ಮಾಡುವುದರಿಂದಾಗಲಿ ದಲಿತರ ಏಳಿಗೆಗೆ ಏನೂ ಕೊಡುಗೆ ನೀಡಿದಂತೆ ಆಗುವುದಿಲ್ಲ. ಇವತ್ತಿಗೂ ಯಾವ ದಲಿತನ ಮನೆಯಲ್ಲಿ, ಮನುಷ್ಯರಿಗೂ ಹಂದಿಗಳಿಗೂ ಬೇಧವೇ ಇಲ್ಲದಂಥ ವ್ಯವಸ್ಥೆ ಇದೆಯೋ, ಯಾವ ಮನೆಯಲ್ಲಿ ಕೈತೊಳೆಯಲು ಸೋಪೇ ಇರುವುದಿಲ್ಲವೋ, ಯಾವ ಮನೆಯಲ್ಲಿ ವಿವಾಹಿತರು, ಅವಿವಾಹಿತರೂ ಎಲ್ಲರೂ ಒಂದೇ ಕೋಣೆಯಲ್ಲಿ ಮಲಗುವಂಥ ಪರಿಸ್ಥಿತಿ ಇದೆಯೋ ಅಂಥ ದಲಿತರ ಮನೆಗೆ ನಮ್ಮ ನಾಯಕರು ಹೋಗಲಿ, ಅವರು ಪ್ರತಿದಿನ ಸೇವಿಸುವಂಥ ಊಟವನ್ನೇ ಮಾಡಿ ತೋರಿಸಲಿ, ಆಗ ಅವರ ಕಷ್ಟ ಮತ್ತು ಯಾತನೆಗಳು ಏನು ಅನ್ನುವುದು ಗೊತ್ತಾಗುತ್ತದೆ.

ಇದೆಲ್ಲವನ್ನೂ ನೋಡಿದಾಗ, ಸದ್ಯಕ್ಕಂತೂ ದೇಶದಲ್ಲಿ ಮೀಸಲಾತಿ ಕೈ ಬಿಡಬೇಕಾದಂಥ ಪರಿಸ್ಥಿತಿ ಕಂಡುಬರುತ್ತಿಲ್ಲ ಎಂದು ಗಟ್ಟಿಯಾಗಿ ಹೇಳಬಹುದು. ಮೀಸಲಾತಿ ಏಕೆ ಬೇಕು ಅನ್ನುವುದರ ಪರವಾಗಿರುವ ವಾದಗಳ ಜೊತೆಗೇ, ಈ ಮೀಸಲಾತಿ ಅನ್ನುವ ಪದ ಬಳಕೆ ಬಗ್ಗೆ ಇರುವ ವಿಚಾರವವನ್ನೂ ನೋಡೋಣ. ಭಾರತದಲ್ಲಿ ಮೀಸಲಾತಿ ಎಂಬ ಪದವನ್ನೇ ತಪ್ಪಾಗಿ ಪ್ರಯೋಗ ಮಾಡಲಾಗುತ್ತಿದೆ ಎಂದು ಚಿಂತಕರು ಹೇಳುತ್ತಾರೆ. ಭಾರತದ ಸಂವಿಧಾನದಲ್ಲಿ ಪ್ರಾತಿನಿದ್ಯ ಎಂಬ ಪದ ಬಳಸಲಾಗಿದೆಯೇ ಹೊರತು ಮೀಸಲಾತಿ ಅಲ್ಲ. ಇದನ್ನು, ಯಾರಿಗೂ ವೈಯುಕ್ತಿಕ ನೆಲೆಗಟ್ಟಿನಲ್ಲಿ ಕೊಡಲಾಗಿಲ್ಲ. ಇವರು ಪ್ರತಿನಿಧಿಸುವಂಥ ಶೋಷಿತ ಸಮುದಾಯಗಳ ಕಾರಣದಿಂದಾಗಿ ಇವರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಈ ರೀತಿ ಮೀಸಲಾತಿ ಪಡೆದವರು, ತಮ್ಮ ಸಮುದಾಯದ ಇತರೇ ಜನರಿಗೆ ಸಹಾಯ ಮಾಡಲಿ ಅನ್ನುವುದೇ ಇಲ್ಲಿರುವ ಉದ್ದೇಶ.

ಮೀಸಲಾತಿ ಅಥವ ಪ್ರಾತಿನಿಧ್ಯತ್ವ ಅನ್ನುವುದು, ದೇಶದಲ್ಲಿರುವ ವಿವಿಧ ಸಮುದಾಯಗಳ ನಡುವಿನ ತಾರತಮ್ಯ ನಿವಾರಿಸಿ, ಅವಕಾಶ ವಂಚಿತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ಸಮಾಜದ ಕೆಲವು ಸಮುದಾಯಗಳ ಜನರು, ಅಸ್ಪ್ರ್ಯಶ್ಯತೆಯ ಕಾರಣದಿಂದ, ಶಿಕ್ಷಣ ಮತ್ತು ನಾಗರಿಕ ಹಕ್ಕುಗಳ ನಿರಾಕರಣೆ ಕಾರಣದಿಂದ ಸಂಕಷ್ಟ ಅನುಭವಿಸುತ್ತಿದ್ದರು.  ನೂರಾರು ವರ್ಷಗಳಿಂದಲೂ ಇದ್ದ, ಇಂಥ ತಾರತಮ್ಯಗಳನ್ನು ನಿವಾರಿಸಿ, ಅವರ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿಯೇ ಮೀಸಲಾತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೀಸಲಾತಿ ವಿರೋಧಿಸುವ ಬಹುತೇಕರು, ಇದು ಜಾರಿಗೆ ಬಂದ ನಂತರ, ಕೇವಲ ಮೊದಲ ಹತ್ತುವರ್ಷಗಳಿಗೆ ಮಾತ್ರ ಸೀಮಿತವಾಗಿರಬೇಕಾಗಿತ್ತು ಆದರೆ, ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಮತ್ತೆ ಮತ್ತೆ ವಿಸ್ತರಿಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

ಆದರೆ, ಭಾರತದಲ್ಲಿ ಕೇವಲ ರಾಜಕೀಯ ಮೀಸಲಾತಿಯನ್ನು ಮಾತ್ರ ಹತ್ತು ವರ್ಷಗಳವರೆಗೆ ನಿಗದಿ ಪಡಿಸಲಾಗಿತ್ತೇ ಹೊರತು, ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿ ಅಲ್ಲ ಎಂದು ತಜ್ಞರು ಸ್ಪಷ್ಟಪಡಿಸುತ್ತಾರೆ. ಜಾತಿಯ ಆಧಾರದ ಮೇಲೆಯೇ  ಮೀಸಲಾತಿ ಏಕೆ, ಆರ್ಥಿಕ ಪರಿಸ್ಥಿತಿ ಆಧರಿಸಿ ನೀಡಬಹುದಲ್ಲವೇ ಅನ್ನುವುದು ಹೆಚ್ಚಿನವರ ಪ್ರಶ್ನೆ. ಇದಕ್ಕಿರುವ ಉತ್ತರವೇನೆಂದರೆ, ಸಾವಿರಾರು ವರ್ಷಗಳಿಂದಲೂ, ಜಾತಿಯ ಕಾರಣಕ್ಕೆ ಕೆಳವರ್ಗದ ಜನರ ಹಕ್ಕುಗಳನ್ನು, ಅವಕಾಶಗಳನ್ನು ನಿರಾಕರಿಸಲಾಗಿದೆ. ಕೆಳವರ್ಗದವರ ಮೇಲಿನ ಅನ್ಯಾಯ, ಶೋಷಣೆ ಮತ್ತು ತಾರತಮ್ಯಗಳಿಗೆ ಜಾತಿಪದ್ದತಿಯೇ ಪ್ರಮುಖ ಕಾರಣ. ಸತ್ಯ ಹೀಗಿರುವುದರಿಂದಲೇ, ಅವಕಾಶ ವಂಚಿತ ಸಮಾಜಕ್ಕೆ, ಜಾತಿಯ ಆಧಾರದಲ್ಲೇ ಅನುಕೂಲತೆಗಳನ್ನು ಕಲ್ಪಿಸುವುದು ಅನಿವಾರ್ಯವಾಗುತ್ತದೆ.

ಮೀಸಲಾತಿ ಅನ್ನುವುದೇ ಒಂದು ಅಂತಿಮ ಗುರಿಯಲ್ಲ, ಬದಲಿಗೆ ಅಂತ್ಯದತ್ತ ಇರುವ ಒಂದು ದಾರಿಯಷ್ಟೇ. ಸಮಾಜದ ಮುಖ್ಯವಾಹಿನಿಯಿಂದ ಹೊರಗಿರುವ ಜನರಿಗೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳ ಬಾಗಿಲುಗಳು ತೆರೆಯುವಂತೆ ಮಾಡುವುದೇ ಮೀಸಲಾತಿಯ ಮುಖ್ಯ ಉದ್ದೇಶ.

ಇನ್ನೂ ಎಷ್ಟು ಕಾಲ ದೇಶದಲ್ಲಿ ಮೀಸಲಾತಿ ಮುಂದುವರಿಸಬೇಕು ಅನ್ನುವ ಪ್ರಶ್ನೆ ಪದೇ ಪದೇ ಕೇಳಿಬರುತ್ತದೆ. ಮೇಲಿನ ವರ್ಗದವರು ಎಂದು ಕರೆಸಿಕೊಳ್ಳುವವರು, ಸಾವಿರಾರು ವರ್ಷಗಳಿಂದ ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಾ ಬಂದಿದ್ದಾರೆ, ಇವತ್ತೂ ಕೂಡ ಧಾರ್ಮಿಕ ವ್ಯವಸ್ಥೆಯಲ್ಲಿ, ಶಾಸಕಾಂಗದಲ್ಲಿ, ನ್ಯಾಯಾಂಗದಲ್ಲಿ, ಕಾರ್ಯಾಂಗದಲ್ಲಿ ಮೇಲ್ವರ್ಗದವರದ್ದೇ ಹಿಡಿತವಿದೆ, ಹೀಗಾಗಿ ಸದ್ಯಕ್ಕಂತೂ ಮೀಸಲಾತಿ ಅನ್ನುವುದು ಅನಿವಾರ್ಯ.

ಶತಶತಮಾನಗಳಷ್ಟು ಕಾಲ ಕುರಿಗಳಂತೆ ಬದುಕಿದ್ದವರನ್ನು ಕೆಲವೇ ವರ್ಷಗಳಲ್ಲಿ ಹುಲಿಗಳಂತೆ ವರ್ತಿಸುವ ಹಾಗೆ ಮಾಡುವುದು ಸಾಧ್ಯವಿಲ್ಲ. ದಲಿತರ ಚಿಂತನೆ ಮತ್ತು ಮನಸ್ಥಿತಿಗಳು ಬದಲಾಗಲು, ಅವರು ಇತರೆಯವರ ಮಟ್ಟಕ್ಕೆ ವಿಕಾಸ ಹೊಂದಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ಇನ್ನೂ ಸಾಕಷ್ಟು ವರ್ಷಗಳ ಕಾಲ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ಮುಂದುವರಿಸುವುದು ಅನಿವಾರ್ಯವಾಗುತ್ತದೆ.


ಟಾಪ್ ಪ್ರತಿಕ್ರಿಯೆಗಳು


"mesalatiya bagge ondu uttamavada samarthane ", i agree this above statement and its true also so i say hands up to kannada super sudshi...
  • sharavanakumara
  • HR
Rss ಬಗ್ಗೆ ಬರೆದಿದ್ದೀರಲ್ಲ ನಾಚಿಕೆ ಯಾಗ ಬೇಕು ನಿಮಗೆ ಅಸ್ಪ್ರುಶಯತೆ ಸ್ವಲ್ಪವೂ ಇಲ್ಲದ ಸ್ಥಾನ RSS ದು.
  • ನಿಖಿಲ್
  • ನಿಖಿಲ್
ಇನ್ನು ಕೋಮು ಸಂಘರ್ಷ ಜಾಸ್ತಿ ಆಗುತ್ತೆ ಜಾತಿ ಪದ್ದತಿ ಇಂದ ಎ ವ್ಯವಸ್ತೆ ಇಂದ ಭಾರತ ಹಿಂದುಳಿದಿದೆ
  • ಪ್ರಭು
  • ವಿದ್ಯಾಬ್ಯಾಸ
ತಮ್ಮ ಅಭಿಪ್ರಾಯ ಸರಿಯಾಗಿದೆ
  • ವಿನೋದ ಕರಣ
  • ಕನ್ನಡ ಉಪನ್ಯಾಸಕರು
ಈಗಿನ ಬ್ರಾಹ್ಮಣರು ಬದುಕುವ ಹಕ್ಕು ಪಡೆದಿಲ್ಲ. ಬಡತನದಲ್ಲಿರುವ ಅನೇಕರು ಅನುಭವಿಸುವ ಕಷ್ಟ ದೇವರಿಗೇ ಗೊತ್ತು. ದಲಿತರ ಹೆಸರಲ್ಲಿ ಶ್ರೀಮಂತ ರೂ ಮೀಸಲಾತಿ ಪಡೆಯಲಿ.ನಿಜವಾಗಿಯೂ ಶೋಷಣೆ ಗೆ ಒಳಗಾದವರು ನಾವು. ಆದರೆ ಸ್ವಾಭಿಮಾನಿ ಗಳು. ಸರಕಾರದ ಭಿಕ್ಷೆ ನಮಗೆ ಬೇಡ
  • ವಿನೋದ ಕರಣಂ
  • ಕನ್ನಡ ಉಪನ್ಯಾಸಕರು