ವಿವಾದಕ್ಕೆ ಕಾರಣವಾದ ಬೋಸ್ ನೇಮಕ..?

Kannada News

07-07-2017

ಬೆಂಗಳೂರು: ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಜಾಗೃತಿ ಸಮಿತಿಗೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಅಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಯೊಬ್ಬರಿಗೆ ಲಂಚ ಪಡೆಯಲು ಒತ್ತಡ ಹಾಕಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಅವರನ್ನು ಇಂತಹ ಮಹತ್ವದ ಹುದ್ದೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಿವಾದದ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರನ್ನು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಜಾಗೃತಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಪ್ರತಿನಿಧಿಸುವ ಟಿ.ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಜಾಗೃತಿ ಸಮಿತಿಗೆ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿರುವುದು ಬೆಳಕಿಗೆ ಬಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ಬಸವ ವಸತಿ, ಇಂದಿರಾ ಅವಾಜ್, ರಾಜೀವ್‍ಗಾಂಧಿ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ  ಜಾಗೃತಿ ಸಮಿತಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಸಮಿತಿಗೆ ಸಾಮಾನ್ಯವಾಗಿ ಸ್ಥಳೀಯ ಶಾಸಕರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಈ ಶಿಷ್ಟಾಚಾರವನ್ನು ಬದಿಗೊತ್ತಿ ಜಾಗೃತಿ ಸಮಿತಿಗೆ ತಮಗೆ ಬೇಕಾದವರನ್ನು  ನೇಮಕ ಮಾಡುತ್ತಿದ್ದಾರೆ. ರಾಜಕೀಯ ಆಕಾಂಕ್ಷಿ ಮೈಸೂರು ಜಿಲ್ಲೆಯಲ್ಲಿ ಅಪ್ಪನ ನಾಮ ಬಲದಿಂದಲೇ ರಾಜಕಾರಣದಲ್ಲಿ ಬೇರೂರಲು  ಹವಣಿಸುತ್ತಿರುವ ಸುನೀಲ್ ಬೋಸ್ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಸ್ಪರ್ಧಿಸಲು ಬೋಸ್ ಆಕಾಂಕ್ಷಿಯಾಗಿದ್ದರು. ಆದರೆ ಮೈಸೂರು ಸೇರಿದಂತೆ ಈ ಭಾಗದ ಸುತ್ತಮುತ್ತಲಿನ ಭಾಗದಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆಯಲ್ಲಿ ಸುನೀಲ್ ಬೋಸ್ ಮತ್ತು ಅವರ  ಬೆಂಬಲಿಗರು ವ್ಯಾಪಕ ಭ್ರಷ್ಟಾಚಾರ  ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಡಿಸಿದ ಸುನೀಲ್ ಬೋಸ್ ಅಲ್ಲದೆ ಸ್ವತಃ ಮಹದೇವಪ್ಪನವರ ಜಂಘಾಬಲವನ್ನೇ ಉಡುಗಿಸಿತ್ತು. ಯಾವುದೇ ಕಾರಣಕ್ಕೂ ನಂಜನಗೂಡು  ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಕಾಕತಾಳೀಯ ಎಂಬಂತೆ ಶ್ರೀನಿವಾಸ್ ಪ್ರಸಾದ್ ವಿರುದ್ದ ಸುನೀಲ್ ಬೋಸ್ ಕಣಕ್ಕಿಳಿಸಲು ಹೈಕಮಾಂಡ್ ಕೂಡ ಒಲವು ತೋರಲಿಲ್ಲ. ಇದೀಗ ಬೋಸ್ ಜಾಗೃತಾ ಸಮಿತಿಗೆ ಅಧ್ಯಕ್ಷರಾಗಿರುವುದು ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ