ರಾಜ್ಯ ಗೃಹ ಖಾತೆ ಯಾರಿಗೆ..?

Kannada News

07-07-2017

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಂದ ತೆರವಾಗುತ್ತಿರುವ  ಗೃಹ ಖಾತೆಯನ್ನು  ಅಲ್ಪಸಂಖ್ಯಾತ ಮುಖಂಡರಿಗೆ ನೀಡಬೇಕು ಎಂಬ ಕೂಗು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬಂದಿದೆ. ಇದರ ಪರಿಣಾಮ ಹಾಲಿ ಸಚಿವರಾದ ರೋಷನ್ ಬೇಗ್ ಹಾಗೂ ಯು.ಟಿ.ಖಾದರ್ ಅವರ ಹೆಸರು ಈ ಹುದ್ದೆಗೆ ಕೇಳಿ ಬಂದಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಆಡಳಿತದಲ್ಲಿ ಅಲ್ಪ ಸಂಖ್ಯಾತರಿಗೆ ಗೃಹ ಖಾತೆ ನೀಡುವ ಪರಿಪಾಠವಿದ್ದು, ಇದನ್ನೇ ಮುಂದಿಟ್ಟುಕೊಂಡು ಈ ಸಮುದಾಯದ ಮುಖಂಡರು ಗೃಹ ಖಾತೆಗೆ ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ ಸಮುದಾಯದ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಹುದ್ದೆಗಳಿಗೆ ಅನುಕ್ರಮವಾಗಿ ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಹಾಗೂ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್.ಆರ್.ಪಾಟೀಲ್ ನೇಮಕಗೊಂಡಿದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದೇ ರೀತಿ ಪರಿಶಿಷ್ಟ ವರ್ಗಕ್ಕೆ ಸೇರಿದ ಸತೀಶ್ ಜಾರಕಿಹೊಳಿ ಅವರನ್ನು ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಮೂಲಕ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಲಾಗಿದೆ. ಆದರೆ ದಲಿತ ವರ್ಗವನ್ನು ಹೊರತುಪಡಿಸಿದರೆ ಜನಸಂಖ್ಯೆಯಲ್ಲಿ ರಾಜ್ಯದ ಎರಡನೇ ಸ್ಥಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಯಾವುದೇ ಪ್ರಮುಖ ಹುದ್ದೆಗಳನ್ನು ನೀಡಿಲ್ಲ ಎಂಬುದು ಈಗ ಕೇಳಿ ಬಂದಿರುವ ಕೂಗು. ಈ ಕೂಗಿನ ಬೆನ್ನಲ್ಲೇ ಹಾಲಿ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಅವರ ಹೆಸರು ರೇಸಿಗೆ ಬಂದಿದ್ದು ಹಿಂದೆ ಜನತಾದಳ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು  ಗೃಹ ಖಾತೆ ರಾಜ್ಯ ಸಚಿವರಾಗಿದ್ದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಆ ಹುದ್ದೆಯನ್ನು ನಿರ್ವಹಿಸಿದ ಅನುಭವ ಅವರಿಗೆ ಇರುವುದರಿಂದ ಅವರನ್ನೇ ಗೃಹ ಸಚಿವ ಹುದ್ದೆಗೆ ನೇಮಕ ಮಾಡುವುದು ಒಳ್ಳೆಯದು ಎಂದು ಬಹುತೇಕ ನಾಯಕರು ಧ್ವನಿ ಎತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಅವರಿಗೆ ಈ ಸ್ಥಾನವನ್ನು ನೀಡುವುದರಿಂದ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದಲ್ಲಿ ನಂಬರ್ ಸೆಕೆಂಡ್ ಸ್ಥಾನ ನೀಡಲಾಗಿದೆ ಎಂಬ ಸಂದೇಶ ರವಾನೆಯಾಲಿದೆ. ಒಂದು ವೇಳೆ ರೋಷನ್ ಬೇಗ್ ಬದಲು ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಅವರಿಗೆ ಗೃಹ ಖಾತೆ ನೀಡುವುದು ಸೂಕ್ತ ಎಂದು ಈ ವಲಯದ ಅಭಿಪ್ರಾಯ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ತೆರವು ಮಾಡಿರುವ ಗೃಹ ಸಚಿವ ಹುದ್ದೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರು ರೇಸಿನಲ್ಲಿ ಮುಂಚೂಣಿಯಲ್ಲಿದ್ದು ಅದರೊಂದಿಗೆ ಇದೀಗ ಅಲ್ಪಸಂಖ್ಯಾತರ ಕೂಗೂ ಕೇಳಿ ಬಂದಿರುವುದರಿಂದ ಸಿಎಂ ಸಿದ್ಧರಾಮಯ್ಯ ಅವರೇ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಸಾಲದೆಂಬಂತೆ ಅವರ ಆಪ್ತರನೇಕರು ಈ ಕಾಲದಲ್ಲಿ ಗೃಹ ಖಾತೆಯನ್ನು ನೀವಿಟ್ಟುಕೊಳ್ಳುವದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಆಷಾಡ ಕಳೆದ ನಂತರ ಸಿಎಂ ಸಿದ್ಧರಾಮಯ್ಯ ಗೃಹ ಖಾತೆಯ ಕುರಿತು ಒಂದು ಖಚಿತ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಮೂಲಗಳು ವಿವರ ನೀಡಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ