ನಕಲಿ ಕಾರು ಮಾರಾಟಗಾರರಿದ್ದಾರೆ ಎಚ್ಚರಿಕೆ !

Kannada News

07-07-2017 546

ಬೆಂಗಳೂರು: ಓಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಂದಾಪುರದ ಯಡೂರಿನ ನವೀನ್ ಕುಮಾರ್ ಆಲಿಯಾಸ್ ನವೀನ್ (31), ಸುಬ್ರಹ್ಮಣ್ಯಪುರದ ಮನು (38) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 3 ಮೊಬೈಲ್ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಓಎಲ್‍ಎಕ್ಸ್ ನಲ್ಲಿ ಮಾರುತಿ ಎರ್ಟಿಗಾ ಕಾರನ್ನು ಮಾರಾಟ ಮಾಡುವುದಾಗಿ ಆರೋಪಿಗಳು ಮಾಹಿತಿ ಹಾಕಿದ್ದು, ಅದನ್ನು ನೋಡಿದ ವ್ಯಕ್ತಿಯೊಬ್ಬರು ಸಂಪರ್ಕಿಸಿದಾಗ ಕಾರು ವಿಮಾನ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿದ್ದು, ಪಾರ್ಕಿಂಗ್ ಶುಲ್ಕ ನೀಡಿದ್ದಲ್ಲಿ ಮಾರುವುದಾಗಿ ಸುಳ್ಳು ಹೇಳಿ ಸ್ನೇಹಿತನ ಐಸಿಐಸಿಐ ಬ್ಯಾಂಕ್ ಖಾತೆಗೆ 92,900 ರೂ. ಹಣವನ್ನು ಹಾಕಿಸಿಕೊಂಡಿದ್ದರು.

ಕಾರು ಪಡೆದುಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಕೆಆರ್ ಮಾರುಕಟ್ಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಓಎಲ್‍ಎಕ್ಸ್ ವೆಬ್‍ಸೈಟ್‍ನಲ್ಲಿ ನಕಲಿ ಅಕೌಂಟ್‍ಗಳನ್ನು ಸೃಷ್ಟಿಸಿ, ನಕಲಿ ದಾಖಲೆಗಳಿಂದ ಪಡೆದ ಸಿಮ್ ಕಾರ್ಡ್ ಬಳಸಿ ವಿವಿಧ ಮಾದರಿಯ ವಾಹನಗಳ ಫೋಟೋವನ್ನು ಅಪ್ಲೋಡ್ ಮಾಡಿ, ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿಕೊಂಡು ಪರಾರಿಯಾಗುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ