ನಿಟ್ಟುಸಿರು ಬಿಟ್ಟ ಮೆಟ್ರೋ ಪ್ರಯಾಣಿಕರು !

Kannada News

07-07-2017 368

ಬೆಂಗಳೂರು: ನಮ್ಮ ಮೆಟ್ರೊ ರೈಲು ಸಿಬ್ಬಂದಿ ಮತ್ತು ಭದ್ರತಾ ಪಡೆ ಪೊಲೀಸರ ನಡುವೆ ನಡೆದ ಮಾರಾಮಾರಿಯಿಂದಾಗಿ ಶುಕ್ರವಾರ ಬೆಳಿಗ್ಗೆಯಿಂದ ಸಂಚಾರ ಸ್ಥಗಿತಗೊಂಡಿದ್ದ ಮೆಟ್ರೊ ರೈಲು 11.30ರ ವೇಳೆಗೆ ಸಂಚಾರ ಪುನರಾರಂಭಗೊಂಡು ಲಕ್ಷಾಂತರ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಮೆಟ್ರೊ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದು, ಸಿಬ್ಬಂದಿ ಪ್ರತಿಭಟನೆಗೆ ಇಳಿದಿದ್ದರಿಂದ ಬೆಳಿಗ್ಗೆ ದಿಢೀರನೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಮೆಟ್ರೊ ರೈಲು ನಿಲ್ದಾಣಗಳಿಗೆ ಬಂದ ಜನರಿಗೆ ನಿರಾಶೆ ಎದುರಾಗಿತ್ತು. ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡು ಉಂಟಾದ ಸಮಸ್ಯೆಯನ್ನು ಬಗೆಹರಿಸಲು ಮುಂದಾದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಶಾಸಕ ಎನ್.ಎ. ಹ್ಯಾರಿಸ್  ಬಿಎಂಆರ್‍ಎಲ್ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು. ಬಿಎಂಆರ್‍ಎಲ್ ಅಧಿಕಾರಿಗಳು ಕೂಡ ಸಿಬ್ಬಂದಿ ಸಮಸ್ಯೆಯನ್ನು ಮುಂದಿನ ವಾರ ಕುಳಿತು ಚರ್ಚಿಸುತ್ತೇವೆ ಎಂಬ ಭರವಸೆ ನೀಡಿದರು.

ಎರಡು ಮೂರು ಹಂತದಲ್ಲಿ ಸಿಬ್ಬಂದಿ ಮನವೊಲಿಸುವ ಪ್ರಯತ್ನದ ನಂತರ ಮೆಟ್ರೊ ಸೇವೆ ಮರು ಆರಂಭಗೊಂಡಿದೆ. ಸರ್ಕಾರ ಮತ್ತು ಮೆಟ್ರೊ ನಿಗಮದ ಅಧಿಕಾರಿಗಳು ಪ್ರತಿಭಟನಾ ನಿರತ ಮೆಟ್ರೊ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಮನವೊಲಿಸುವ ಮೂಲಕ ಮತ್ತೆ ರೈಲು ಸಂಚಾರ ಆರಂಭವಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗದಿದ್ದರೆ ಎಸ್ಮಾ ಜಾರಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಪ್ರತಿಭಟನೆ ಕೈಬಿಡಲು ನಿರ್ಧರಿಸಿದರು. ಇದರಿಂದ ಸುಮಾರು 5 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನಃ ಆರಂಭಗೊಂಡಿದ್ದು, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದ ನಾಲ್ಕೂ ಕಾರಿಡಾರ್ಗಳಲ್ಲಿ ಸಾರ್ವಜನಿಕರು ಎಂದಿನಂತೆ ಸಂಚರಿಸಲು ಆರಂಭಿಸಿದರು.

ಮೆಟ್ರೊ ರೈಲಿನಲ್ಲಿ ಪ್ರತಿನಿತ್ಯ 3 ರಿಂದ 4 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ರೈಲು ಸಂಚಾರ ದಿಢೀರ್ ಸ್ಥಗಿತದಿಂದಾಗಿ ಅವರೆಲ್ಲರಿಗೂ ಗರ ಬಡಿದಂತಾಗಿತ್ತು. ಅನಿವಾರ್ಯವಾಗಿ ಆಟೋ, ಬಿಎಂಟಿಸಿ, ಕ್ಯಾಬ್ ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಇಂದು ಬೆಳಿಗ್ಗೆಯಿಂದಲೇ ಮೆಟ್ರೊ ರೈಲು ಸಂಚಾರ ಬಂದ್ ಆಗಿದ್ದು, ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್, ಮೆಜೆಸ್ಟಿಕ್ ನಿಂದ ನಾಗಸಂದ್ರ, ಮೆಜೆಸ್ಟಿಕ್ ನಿಂದ ಮೈಸೂರು ರಸ್ತೆ ಹಾಗೂ ಯಲಚೇನಹಳ್ಳಿವರೆಗೆ ಹೋಗಲು ಮನೆಗಳಿಂದ ಸಿದ್ಧರಾಗಿ ಬಂದಿದ್ದ ಜನರು ಕೆಲ ಹೊತ್ತು ದಿಕ್ಕು ತೋಚದೆ ಪರದಾಡಿದರು. ನಂತರ ಅನಿವಾರ್ಯವಾಗಿ ಇತರೆ ಸಂಚಾರ ವಾಹನ ವ್ಯವಸ್ಥೆಗಳನ್ನು ಅವಲಂಬಿಸುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಒಟ್ಟಾರೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಕಾರಿಡಾರ್ಗಳನ್ನು ಸಂಪರ್ಕಿಸುವ, ಈ ಮಾರ್ಗಗಳಲ್ಲಿ 40ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಇದ್ದು, ಈ ನಿಲ್ದಾಣಗಳ ಮೂಲಕ ಬೇರೆಡೆಗೆ ಹೋಗಲು ಬಂದಿದ್ದ ಸಾರ್ವಜನಿಕರು 'ಬಂದ ದಾರಿಗೆ ಸುಂಕ ಇಲ್ಲ' ಎಂಬಂತೆ ಮುಂದಿನ ದಾರಿ ಬಗ್ಗೆ ಚಿಂತನೆ ನಡೆಸಿದರು. ಮೆಟ್ರೊ ಸಿಬ್ಬಂದಿ ಪ್ರತಿಭಟನೆಯಿಂದ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಮೆಟ್ರೊ ರೈಲು ಅಧಿಕಾರಿಗಳು ಬೆಳಿಗ್ಗೆಯಿಂದಲೇ ಪ್ರಯತ್ನಿಸಿದರು. ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲ ಖುದ್ದಾಗಿ ಸಿಬ್ಬಂದಿಯ ಮನವೊಲಿಸುವವಲ್ಲಿ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಮೆಟ್ರೊ ಸಿಬ್ಬಂದಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಒಟ್ಟಾರೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದಂತೂ ಸುಳ್ಳಲ್ಲ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ