ಟ್ವಿಟ್ಟರ್ ಮೂಲಕ ರಾಜೀನಾಮೆ: ಶಾಸಕ ಕೆ.ಸುಧಾಕರ್ ಮನವೊಲಿಸಲು ಯತ್ನ !

Kannada News

07-07-2017

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ರಾತ್ರಿ ಟ್ವಿಟ್ಟರ್ ಮೂಲಕ ಘೋಷಿಸಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಮನವೊಲಿಸಲು ಜಿಲ್ಲೆಯ ವಿವಿಧ ಕಾಂಗ್ರೆಸ್ ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಗುರುವಾರ ರಾತ್ರಿ ಟ್ವೀಟ್‌ ಮಾಡಿ ಶುಕ್ರವಾರ ಬೆಳಗ್ಗೆ 11 ಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಡಾ.ಕೆ.ಸುಧಾಕರ್ ಘೋಷಿಸಿದ್ದರು. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಉಂಟಾಗಿದ್ದು, 50ಕ್ಕೂ ಹೆಚ್ಚು ಕಾರುಗಳಲ್ಲಿ, ಡಾ.ಕೆ.ಸುಧಾಕರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಆಗಮಿಸಿ, ಮನವೊಲಿಸುವ ಯತ್ನ ಆರಂಭಿಸಿದ್ದಾರೆ. ತಾಲ್ಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌, ನಗರಸಭೆ ಅಧ್ಯಕ್ಷರು, ಸದಸ್ಯರು ಸೇರಿದಂತೆ ವಿವಿಧ ಹಂತ ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ಆಗಮಿಸಿದ್ದು, ಶಾಸಕರ ಭೇಟಿ ಮಾಡಿ ಮನವೊಲಿಸುವ ಯತ್ನದಲ್ಲಿದ್ದಾರೆ. ಶಾಸಕ ಡಾ.ಕೆ.ಸುಧಾಕರ್ ಅವರ ತಂದೆ ಪಿ.ಎನ್. ಕೇಶವರೆಡ್ಡಿ ಹಾಲಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್‌ ಸದಸ್ಯರು ಗಲಾಟೆ ಮಾಡುತ್ತಲೇ ಬಂದಿದ್ದರು. ಅಧ್ಯಕ್ಷರಾಗಿ ಒಂದು ವರ್ಷ ಕೂಡ ಆಗಿಲ್ಲ. ಆಗಲೇ ಅವರನ್ನು ಪದವಿಯಿಂದ ಕೆಳಗಿಳಿಸುವ ಯತ್ನ ಕೂಡ ನಡೆದಿತ್ತು. ಇದಕ್ಕೆ ಪುಷ್ಟಿ ನೀಡುವ ರೀತಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ, ವಿಧಾನಸಭೆ ಉಪ ಸಭಾಪತಿ ಶಿವಶಂಕರ ರೆಡ್ಡಿ, ಸಂಸದ ಕೆ.ಹೆಚ್. ಮುನಿಯಪ್ಪ, ಮಾಜಿ ಸಚಿವ ವಿ.ಮುನಿಯಪ್ಪ, ಶಾಸಕ ಡಾ.ಕೆ.ಸುಧಾಕರ್ ಅವರನ್ನು ಕೆಪಿಸಿಸಿ ಕಚೇರಿಗೆ ಕರೆಸಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಭೆ ನಡೆಸಿದ್ದರು. ನಿನ್ನೆ ಸಂಜೆ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದೂ, ಬರುವ ನವೆಂಬರ್ ತಿಂಗಳಲ್ಲಿ ಕೇಶವರೆಡ್ಡಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದರು. ಇದರಿಂದ ಬೇಸರಗೊಂಡಿರುವ ಶಾಸಕ ಡಾ.ಸುಧಾಕರ್ ರಾಜೀನಾಮೆ ಸಲ್ಲಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಕೇಂದ್ರದಲ್ಲಿ ಸಂಚಲನ ಉಂಟಾಗಿದ್ದು, ನಾಯಕರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ಒಂದೆಡೆ ಬೇಸರಗೊಂಡಿರುವ ಸುಧಾಕರ್ ಅವರು ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇವರ ತಂದೆ ಪಿ.ಎನ್. ಕೇಶವರೆಡ್ಡಿ ಕೂಡ ಅಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಪಂಚಾಯತ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ