ಮೊದಲು ಕುಡಿಯುವ ನೀರಿಗೆ ಆದ್ಯತೆ, ನಂತರ ಕೃಷಿಗೆ : ಸಚಿವ ಎಂ.ಬಿ.ಪಾಟೀಲ್

Kannada News

06-07-2017

ಬೆಂಗಳೂರು,ಜು,6:ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬರದೇ ಇರುವ ಹಿನ್ನೆಲೆಯಲ್ಲಿ ಕಾವೇರಿ ಸೇರಿದಂತೆ ಎಲ್ಲ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಸಲುವಾಗಿ ಕಾದಿಡುವಂತೆ ಸರ್ಕಾರ ಆದೇಶಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮೊದಲು ಕುಡಿಯುವ ನೀರಿಗೆ ಆದ್ಯತೆ, ನಂತರ ಕೃಷಿಗೆ ಎಂದರು.
ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ಸಧ್ಯಕ್ಕೆ ಸಂಗ್ರಹವಾಗಿರುವುದೇ ಹನ್ನೆರಡು ಟಿಎಂಸಿ ನೀರು. ಇದರಲ್ಲೇ ಬೆಂಗಳೂರು, ಮೈಸೂರು ಸೇರಿದಂತೆ ಪಾತ್ರದ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಬೇಕು. ಹೀಗಾಗಿ ಮೊದಲು ಕುಡಿಯುವ ನೀರಿಗೆ ಆದ್ಯತೆ. ನಂತರ ಕೃಷಿಗೆ ಆದ್ಯತೆ ಎಂದರು.
ಕೂಡಲ ಸಂಗಮ ಸೇರಿದಂತೆ ಮೂರು ಜಾಗಗಳನ್ನು ಸೇರಿಸಿ ಅಕ್ಷರಧಾಮದ ರೀತಿಯಲ್ಲಿ ಅಭಿವೃದ್ಧಿಪಡಿಸುವ 139 ಕೋಟಿ ರೂಗಳ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಇದನ್ನು ಕರ್ನಾಟಕ ಭಾಗ್ಯ ಜಲ ನಿಗಮ ಜಾರಿಗೆ ತರುತ್ತಿದ್ದು ಅಕ್ರ್ಯಾಪ್ ಎಂಬ ಸಂಸ್ಥೆ ಯೋಜನೆಯ ರೂಪು ರೇಷೆಗಳ ವಿವರವನ್ನು ಸಧ್ಯದಲ್ಲಿಯೇ ನೀಡಲಿದೆ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪದೇ ಪದೇ ನನ್ನ ವಿರುದ್ಧ ಮುಗಿಬೀಳುತ್ತಿರುವುದಕ್ಕೆ ಹಲವು ಕಾರಣಗಳಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು,ಕೂಡಲ ಸಂಗಮದ ಅಭಿವೃದ್ಧಿ, ಸರ್ಕಾರಿ ಕಛೇರಿಗಳಲ್ಲಿ ಬಸವಣ್ಣನವರ ಬಾವ ಚಿತ್ರ ಹಾಕಿರುವುದು ಮತ್ತು ಕೂಡಲ ಸಂಗಮದಲ್ಲಿ ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷರು ಅಧಿಕಾರ ಸ್ವೀಕರಿಸಿರುವುದು ಇವೆಲ್ಲವೂ ಯಡಿಯೂರಪ್ಪ ಅವರಿಗೆ ಆತಂಕವನ್ನು ತಂದೊಡ್ಡಿವೆ.
ಇದೇ ಕಾರಣಕ್ಕಾಗಿ ಅವರು ನನ್ನ ಮೇಲೆ ದೂರುತ್ತಿದ್ದಾರೆ.ಆದರೆ ಮಲಪ್ರಭಾ ನದಿಯ ದುರಸ್ಥಿ ಕಾರ್ಯಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆದೇ ಇಲ್ಲ.ಹೀಗಿರುವಾಗ ಅದರಲ್ಲಿ ಕಿಕ್ ಬ್ಯಾಕ್ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಇದೇ ರೀತಿ ಜಿಂದಾಲ್ ಸಂಸ್ಥೆಗೆ ಕೃಷ್ಣ ನದಿಯಿಂದ ಏಳು ಟಿಎಂಸಿ ನೀರು ಬಿಡಲು ನಾನು ಕಿಕ್ ಬ್ಯಾಕ್ ಪಡೆದಿದ್ದೇನೆ ಎಂಬ ಅವರ ಆರೋಪದಲ್ಲಿ ಹುರುಳಿಲ್ಲ.ಹಾಗೆ ನೋಡಿದರೆ ಜಿಂದಾಲ್ ಸಂಸ್ಥೆಗೆ ನಿರ್ದಿಷ್ಟ ಪ್ರಮಾಣದ ನೀರು ಹಂಚಿಕೆ ಮಾಡಿದ್ದೇ ಹಿಂದಿದ್ದ ಯಡಿಯೂರಪ್ಪ ಅವರ ಸರ್ಕಾರ.
ಒಂದು ವೇಳೆ ನಾವು ಏಳು ಟಿಎಂಸಿ ನೀರು ಬಿಡುಗಡೆ ಮಾಡಿದ್ದರೆ ಹಂಪೆ,ಜಿಂದಾಲ್ ಸೇರಿದಂತೆ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗುತ್ತಿದ್ದವು.ಹೀಗಾಗಿ ಟಿಎಂಸಿ ನೀರು ಎಂದರೇನು ಅನ್ನುವುದರ ಲೆಕ್ಕ ಅವರಿಗೇ ಗೊತ್ತಿರಬೇಕು ಎಂದು ಅವರು ವ್ಯಂಗ್ಯವಾಡಿದರು.
ಎಲ್ಲಕ್ಕಿಂತ ಮುಖ್ಯವಾಗಿ ಜಿಂದಾಲ್ ಸಂಸ್ಥೆಗೆ ಇವರು ಏಕೆ ನೀರು ಹಂಚಿಕೆ ಮಾಡಿದ್ದರು ಎಂಬುದಕ್ಕೆ ಲಿಖಿತ ದಾಖಲೆಗಳೇ ಇವೆ.ಆದ್ದರಿಂದ ಈ ಕುರಿತು ನಾನೇನೂ ಹೆಚ್ಚು ಹೇಳಬೇಕಾಗಿಲ್ಲ ಎಂದು ವಿವರಿಸಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ