ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

Kannada News

06-07-2017

ಬೆಂಗಳೂರು,ಜು,6: ಕರ್ನಾಟಕ ಹಾಗೂ ತಮಿಳುನಾಡು ನಡುವೆ ಭುಗಿಲೆದ್ದಿರುವ ಕಾವೇರಿ ನದಿ ನೀರಿನ ವಿವಾದದ ಬೆನ್ನಲ್ಲೇ ತಮಿಳುನಾಡಿನ ವಾದವನ್ನು ತಳ್ಳಿ ಹಾಕಿರುವ ಕರ್ನಾಟಕ, ಯಾವ ಕಾರಣಕ್ಕೂ ಅದು ಹೇಳಿದಂತೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಾವೇರಿ ನದಿ ಪಾತ್ರಕ್ಕೆ ನಿರೀಕ್ಷಿತ ಪ್ರಮಾಣದ ನೀರು ಬರುತ್ತಿಲ್ಲ. ಅಂದ ಮೇಲೆ ತಮಿಳುನಾಡು ಹೇಳಿದಂತೆ ಹತ್ತು ಟಿಎಂಸಿ ನೀರು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ಕಾವೇರಿ ನದಿ ಪಾತ್ರದ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬರುತ್ತಿಲ್ಲ.ಒಳಹರಿವಿನ ಪ್ರಮಾಣ ಐದರಿಂದ ಐದೂವರೆ ಸಾವಿರ ಕ್ಯೂಸೆಕ್ಸ್‍ನಷ್ಟಿರುವಾಗ ತಮಿಳ್ನಾಡಿಗೆ ಎಷ್ಟು ನೀರು ಬಿಡುಗಡೆ ಮಾಡಲು ಸಾಧ್ಯ?ಎಂದು ಪ್ರಶ್ನಿಸಿದರು.
ಆದರೂ ಸಾಧ್ಯವಿರುವ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದೇವೆ.ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ನ್ಯಾಯಾಲಯದ ಮಾತನ್ನೂ ಕೇಳಬೇಕು. ಅದೇ ಕಾಲಕ್ಕೆನಮ್ಮ ರೈತರು,ಜನರ ಹಿತವನ್ನೂ ಕಾಪಾಡಬೇಕು.
ಒಟ್ಟಿನಲ್ಲಿ ನಾವೇ ಗೊಂದಲದಲ್ಲಿದ್ದೇವೆ. ಇಂತಹ ಗೊಂದಲದ ಮಧ್ಯೆಯೂ ಪರಿಸ್ಥಿತಿಯನ್ನು ಹೇಗೋ ತೂಗಿಸುತ್ತಿದ್ದೇವೆ. ಆದ್ದರಿಂದ ತಮಿಳ್ನಾಡು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಜೂನ್ ತಿಂಗಳಲ್ಲಿ ತಮಿಳ್ನಾಡಿಗೆ ಹತ್ತು ಟಿಎಂಸಿ, ಜುಲೈ ತಿಂಗಳಲ್ಲಿ ಮೂವತ್ನಾಲ್ಕು ಟಿಎಂಸಿ,ಆಗಸ್ಟ್ ತಿಂಗಳಲ್ಲಿ ಐವತ್ತು ಟಿಎಂಸಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ನಲವತ್ತು ಟಿಎಂಸಿ ನೀರು ಬಿಡುಗಡೆ ಮಾಡಬೇಕು.
ಆದರೆ ಇದುವರೆಗೆ ಕಾವೇರಿ ಪಾತ್ರದ ಜಲಾಶಯಗಳಿಗೆ ಒಟ್ಟಾರೆಯಾಗಿ ಬಂದಿದ್ದೇ ಹನ್ನೊಂದು ಟಿಎಂಸಿ ನೀರು.ಹೀಗಿರುವಾಗ ಅವರಿಗೆ ಹತ್ತು ಟಿಎಂಸಿ ನೀರು ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಜೂನ್ ತಿಂಗಳಲ್ಲಿ ನಮಗೆ ಮೂವತ್ನಾಲ್ಕು ಟಿಎಂಸಿ ನೀರು ಬರಬೇಕಿತ್ತು.ಬಂದಿದ್ದರೆ ತಮಿಳ್ನಾಡಿಗೆ ನೀರು ಬಿಡುಗಡೆ ಮಾಡುತ್ತಿದ್ದಿವಿ. ಆದರೆ ನಮಗೇ ನೀರು ಹರಿದು ಬಂದಿಲ್ಲ. ಅಂದ ಮೇಲೆ ಯಾವ ರೀತಿ ನೀರು ಕೊಡಬಹುದು ಎಂದು ಕೇಳಿದರು.
ಈಗಾಗಲೇ ನಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆ ಕುರಿತು ಸಧ್ಯದಲ್ಲೇ ವಿಚಾರಣೆಯೂ ನಡೆಯಲಿದೆ.ಹೀಗಾಗಿ ಮುಂದಿನ ದಿನಗಳನ್ನು ನೋಡೋಣ. ನಂತರ ತೀರ್ಮಾನ ತೆಗೆದುಕೊಳ್ಳೋಣ ಎಂದರು.
ನಾವು ಈಗ ಲಭ್ಯವಾಗುತ್ತಿರುವ ನೀರಿಗೆ ತಕ್ಕಂತೆ ಸ್ವಲ್ಪ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿದ್ದೇವೆ.ಯಾಕೆಂದರೆ ಕರ್ನಾಟಕ ಹಠಮಾರಿ ರಾಜ್ಯ ಎಂದು ಪ್ರತಿಬಿಂಬಿಸುವ ಕೆಲಸ ಯಾರಿಂದಲೂ ನಡೆಯಬಾರದು.
ಮೇಕೆದಾಟು ಆಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಈಗಾಗಲೇ ಸಮಗ್ರ ಯೋಜನಾ ವರದಿ ಸಲ್ಲಿಕೆಯಾಗಿದೆ.ಅದು ಯೋಜನೆಗೆ ಸಂಬಂಧಿಸಿದಂತೆ ವೈಮಾನಿಕ ಸಮೀಕ್ಷೆ ಹಾಗೂ ಭೌಗೋಳಿಕ ಅಂಶಗಳ ಕುರಿತು ಮಾಹಿತಿ ಕೇಳಿತ್ತು.
ಈಗಾಗಲೇ ನಾವು ಆ ಮಾಹಿತಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಒದಗಿಸಿದ್ದೇವೆ.ಕೇಳಿದರೆ ಇನ್ನಷ್ಟು ಮಾಹಿತಿ ನೀಡಲು ಸಿದ್ಧರಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದರು.
ಮೇಕೆದಾಟು ಆಣೆಕಟ್ಟೆ ಯೋಜನೆಯನ್ನು ನಮ್ಮ ಅವಧಿಯಲ್ಲೇ ಆರಂಭಿಸಬೇಕು.ಅಡಿಗಲ್ಲು ಹಾಕಬೇಕು ಎಂದು ತೀರ್ಮಾನಿಸಿದ್ದೇವೆ.ನಿಗದಿತ ಅವಧಿಯಲ್ಲಿ ಎಲ್ಲವೂ ಪೂರ್ಣಗೊಂಡರೆ ಆ ಕೆಲಸ ಸಾಧ್ಯವಾಗಲಿದೆ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ