ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಪರಾರಿಯಾದ ಭಗ್ನ ಪ್ರೇಮಿ

Kannada News

06-07-2017

 ಪಾಪರೆಡ್ಡಿ ಪಾಳ್ಯದ ಆರ್ಚಿಸ್ ಸ್ಕೂಲ್ ಬಳಿ ಬುಧವಾರ ಕಾಲೇಜಿಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಹಿಂದಿನಿಂದ ಬೈಕ್‍ನಲ್ಲಿ ಬಂದ ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಚಾಕು ಇರಿತದಿಂದ ಬಲ ಭುಜ ಹಾಗೂ ತೋಳಿಗೆ ಗಂಭೀರವಾಗಿ ಗಾಯಗೊಂಡಿರುವ (19) ವರ್ಷದ 2ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಕೃತ್ಯವೆಸಗಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿಯು ಬುಧವಾರ  ಬೆಳಿಗ್ಗೆ 8.15ರ ವೇಳೆ ಕಾಲೇಜಿಗೆ ಸ್ಕೂಟರ್‍ನಲ್ಲಿ ಪಾಪರೆಡ್ಡಿಪಾಳ್ಯದ ಆರ್ಚಿಸ್ ಸ್ಕೂಲ್ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಭಗ್ನ ಪ್ರೇಮಿ ಹಾಗೂ ಮತ್ತೊಬ್ಬ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿಯು ಪಿಯುಸಿ ಓದುತ್ತಿದ್ದಾಗಿನಿಂದಲೂ ಯುವಕನೊಬ್ಬ ಆಕೆಯನ್ನು ಪ್ರೀತಿಸುವುದಾಗಿ ಹೇಳಿಕೊಳ್ಳುತ್ತಿದ್ದು, ಆಕೆ ಅದನ್ನು ತಿರಸ್ಕರಿಸಿದ್ದರು. ಎಷ್ಟು ಪ್ರಯತ್ನಿಸಿದರೂ ಯುವತಿಯು ಆತನ ಪ್ರೀತಿಗೆ ಬಲಿಯಾಗಿರಲಿಲ್ಲ ಇದರಿಂದ ರೊಚ್ಚಿಗೆದ್ದ ಆತನೇ ಈ ಕೃತ್ಯ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ.
ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯು ಕಾಲೇಜಿಗೆ ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ದುಷ್ಕರ್ಮಿ ಬಂದರೆ ಆತನ ಹಿಂದೆ ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದ ಮತ್ತೊಬ್ಬ ದುಷ್ಕರ್ಮಿ ಇದ್ದು, ಆತ ನನಗೆ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನನ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಕೃತ್ಯವೆಸಗಿದ ದುಷ್ಕರ್ಮಿಗಳ ಮುಖ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ತೆರಳಿ ಯುವತಿಯಿಂದ ಮಾಹಿತಿ ಪಡೆದಿರುವ ಅನುಚೇತ್ ಅವರು, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ