ತಲೆಮರೆಸಿಕೊಂಡಿದ್ದ ರೌಡಿ ಪೊಲೀಸ್ ಬಲೆಗೆ !

Kannada News

04-07-2017

ಬೆಂಗಳೂರು: ಕುಖ್ಯಾತ ರೌಡಿ ಶಿವಕುಮಾರ್ ಅಲಿಯಾಸ್ ರುದ್ರ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ರೌಡಿ ಗೌತಮ್‍ನನ್ನು ತಮಿಳುನಾಡಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಳೆಯ ರೌಡಿಯಾಗಿರುವ ಈತನ ಬಂಧನದಿಂದ ಪೊಲೀಸ್ ಅಧಿಕಾರಿಯ ಕೊಲೆ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಶಿವಕುಮಾರ್ ಮತ್ತು ವೇಲು ಕುಟುಂಬದ ನಡುವೆ ಗಲಾಟೆಯಾಗಿತ್ತು. 2005ರಲ್ಲಿ ವೇಲು ಸಂಬಂಧಿ ಸುಬ್ರಹ್ಮಣ್ಯ ಎಂಬಾತನನ್ನು ರೌಡಿ ಶಿವಕುಮಾರ್ ಹತ್ಯೆ ಮಾಡಿದ್ದ. ಇದಕ್ಕೆ ಪ್ರತೀಕಾರವಾಗಿ ವೇಲು ಮತ್ತು ಆತನ ಸಹಚರರು ಶಿವಕುಮಾರ್‍ ನ ಅಣ್ಣ ಅಶ್ವಥ್ ನಾರಾಯಣ್‍ ನನ್ನು ಕೊಲೆ ಮಾಡಿದ್ದರು. ಜೈಲಿನಿಂದ ಬಿಡುಗಡೆಯಾದ ಶಿವಕುಮಾರ್ ನಿವೃತ್ತ ಪೊಲೀಸ್ ಅಧಿಕಾರಿ ತಮ್ಮಯ್ಯ ಅವರನ್ನು ಬರ್ಬರವಾಗಿ ಯಲಹಂಕ ಸಮೀಪ ಕೊಲೆ ಮಾಡುತ್ತಾನೆ. ನಂತರ ತನ್ನ ಸಹಚರರೊಂದಿಗೆ ಸೇರಿ ವೇಲು ಅವರನ್ನು 2011ರಲ್ಲಿ ಹತ್ಯೆ ಮಾಡುತ್ತಾನೆ.

ಜೈಲಿನಿಂದ ಬಿಡುಗಡೆಯಾದ ನಂತರ ಶಿವಕುಮಾರ್, "ನಾನು ಪೊಲೀಸ್ ಅಧಿಕಾರಿಯನ್ನು ಕೊಂದವನು, ವೇಲು ಕುಟುಂಬ ಯಾವ ಲೆಕ್ಕ, ಅವರಿಗೂ ಒಂದು ಗತಿ ಕಾಣಿಸುತ್ತೇನೆ" ಎಂದು ಹೇಳಿ ತಿರುಗಾಡುತ್ತಿದ್ದ. ಇದನ್ನು ಕೇಳಿಸಿಕೊಂಡ ವೇಲು ಸಂಬಂಧಿಗಳಾದ ಷಣ್ಮುಗ, ರಂಜಿತ್, ಗೌತಮ್ ಹಾಗೂ ಕುಖ್ಯಾತ ರೌಡಿ ಸುನೀಲ ಅಲಿಯಾಸ್ ಸೈಲಂಟ್ ಸುನೀಲ, ಮಾರ್ಕೇಟ್ ವೇಡಿ ಅವರ ಸಹಾಯದಿಂದ ಸಂಚು ರೂಪಿಸಿ 2012, ಡಿಸೆಂಬರ್ 9ರಂದು ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಶಿವಕುಮಾರ್‍ ನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಂದು ಹಾಕುತ್ತಾರೆ. ಈ ಪ್ರಕರಣದಲ್ಲಿ ಗೌತಮ್ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗೌತಮ್ 2013ರಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ. ಈ ಸಂಬಂಧ ಈತನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು.  ಗೌತಮ್ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಎಸ್.ಜೆ.ಪಾರ್ಕ್, ಬಸವನಗುಡಿ, ಅಶೋಕ್‍ನಗರ, ತಿಲಕ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕೊಲೆ ಯತ್ನ, ಸುಲಿಗೆ, ದರೋಡೆಗೆ ಸಂಚು, ಶಸ್ತ್ರಾಸ್ತ್ರ ಕಾಯ್ದೆಯಡಿ ಸುಮಾರು 9 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಆರೋಪಿಯನ್ನು ನ್ಯಾಯಾಂಗಕ್ಕೆ ಹಾಜರುಪಡಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ