ಡಾಕ್ಟರ್ಸ್ v/s ಸರ್ಕಾರ

Kannada News

04-07-2017 354

ನಮ್ಮ ಆಸ್ಪತ್ರೆಯಲ್ಲಿ ಸುಮಾರು ನಾಲ್ಕು ಸಾವಿರ ರೀತಿಯ ಚಿಕಿತ್ಸೆಗಳಿವೆ, ಆ ಎಲ್ಲ ಚಿಕಿತ್ಸೆಗಳ ಹೆಸರು ಮತ್ತು ಅವಕ್ಕೆ ತಗಲುವ  ವೆಚ್ಚದ ಬೋರ್ಡ್ ಹಾಕುವುದು ಸಾಧ್ಯವೇ? ಒಂದು ವೇಳೆ ನಾವು ಬೋರ್ಡ್ ಹಾಕಿದರೂ ಕೂಡ, ಆಸ್ಪತ್ರೆಗೆ ಬಂದವರು ಅದನ್ನು ಓದುತ್ತಾ ಕೂರಲು ಸಾಧ್ಯವೇ? ಅವರಿಗೆ ಅದು ಅರ್ಥವಾಗುತ್ತದೆಯೇ? ಯಶಸ್ವಿನಿ ಇತ್ಯಾದಿ ಯೋಜನೆಗಳ ಅಡಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಖಾಸಗಿ ಆಸ್ಪತ್ರೆಗಳು, ಸಮಾಜ ಸೇವೆಯಲ್ಲಿ ತಮ್ಮ ಪಾಲಿನ ಕರ್ತವ್ಯ ನಿಭಾಯಿಸಿಲ್ಲವೇ? ಜನಸಾಮಾನ್ಯರ ಆರೋಗ್ಯದ ಹೊಣೆ ಹೊರಬೇಕಾದ ಸರ್ಕಾರ, ಜನಸಂಖ್ಯೆಗೆ ತಕ್ಕಂತೆ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿದೆಯೇ? ಸರ್ಕಾರಿ ಆಸ್ಪತ್ರೆಗಳು ಸರಿಯಾಗಿದ್ದರೆ, ಖಾಸಗಿ ಆಸ್ಪತ್ರೆಗೆ ಯಾರು ಬರುತ್ತಾರೆ? ಖಾಸಗಿ ಆಸ್ಪತ್ರೆಗಳವರನ್ನು ವಿಲನ್ ಗಳಂತೆ ಬಿಂಬಿಸುವ ಮೊದಲು ಸರ್ಕಾರಿ ಆಸ್ಪತ್ರೆಗಳ ಗುಣಮುಟ್ಟ ಸುಧಾರಿಸಬೇಕಲ್ಲವೇ? ಯಾರನ್ನು ಮೆಚ್ಚಿಸಲು ರಾಜ್ಯಸರ್ಕಾರ ಹೀಗೆಲ್ಲಾ ಮಾಡುತ್ತಿದೆ? ಹೀಗೆಲ್ಲಾ ಒಂದರ ಹಿಂದೊಂದರಂತೆ ಪ್ರಶ್ನೆಗಳು ತೂರಿಬಿಡುತ್ತಿರುವವರು ಯಾರು? ಅನ್ನುವುದಕ್ಕೆ ಉತ್ತರ ನಿಮ್ಮೆಲ್ಲರಿಗೂ ಗೊತ್ತು.

ರಾಜ್ಯಸರ್ಕಾರ ಜಾರಿಗೆ ತರಲು ಹೊರಟಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆ, ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಮಸೂದೆ ವಿರುದ್ಧ ಸಿಡಿದೆದ್ದಿರುವ ಖಾಸಗಿ ವೈದ್ಯರು, ರಾಜ್ಯಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿನ ಈ ಕಳವಳಕಾರಿ ಬೆಳವಣಿಗೆಗಳಿಗೆ ಕಾರಣವಾದ ಹಿನ್ನೆಲೆ ಏನು ಎಂದು ಮೊದಲು ನೋಡೋಣ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ, ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸುಲಿಗೆ ಆಗಬಾರದು, ಚಿಕಿತ್ಸಾ ವೆಚ್ಚ ನ್ಯಾಯಸಮ್ಮತವಾಗಿರಬೇಕು, ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ, ರಾಜ್ಯಸರ್ಕಾರ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ–2007ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿತ್ತು. ಈ ಬಗ್ಗೆ ಅಧ್ಯಯನ ನಡೆಸಿ, ಸಲಹೆ ನೀಡುವ ಸಲುವಾಗಿ, ರಾಜ್ಯ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಕಾನೂನು ಪಂಡಿತರು ಮತ್ತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೂ ಸೇರಿದಂತೆ 23 ಸದಸ್ಯರಿದ್ದರು. ಎರಡು ತಿಂಗಳ ಹಿಂದೆ, ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಈ ವರದಿಯನ್ನು ಪಡೆದ ರಾಜ್ಯಸರ್ಕಾರ, ಅದನ್ನು The Karnataka Private Medical Establishments Amendment Bill-2017 ಎಂದು ಬದಲಿಸಿ ಜಾರಿಗೆ ತರಲು ಮುಂದಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಮನಬಂದಂತೆ ಶುಲ್ಕ ವಸೂಲಿ ಮಾಡುವುದನ್ನು ತಪ್ಪಿಸಲು, ಬಡ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುವುದನ್ನು ತಪ್ಪಿಸಲು, ಕಾಯ್ದೆ ತಿದ್ದುಪಡಿಗೆ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್  ಕುಮಾರ್ ಹೇಳಿದ್ದರು. ತಜ್ಞರ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ರಾಜ್ಯಸರ್ಕಾರವೇ ತಪಾಸಣಾ ವೆಚ್ಚ, ವೈದ್ಯರ ಶುಲ್ಕ, ವಿವಿಧ ದರ್ಜೆಯ ವಾರ್ಡುಗಳ ಶುಲ್ಕ, ಪ್ರತಿದಿನದ ಶುಶ್ರೂಷೆ ವೆಚ್ಚ, ಶಸ್ತ್ರಚಿಕಿತ್ಸಾ ಕೊಠಡಿ ವೆಚ್ಚಗಳು, ತೀವ್ರ ನಿಗಾ ಘಟಕದ ವೆಚ್ಚ, ಕೃತಕ ಆಮ್ಲಜನಕ ಪೂರೈಕೆ ವೆಚ್ಚ ಇತ್ಯಾದಿಗಳನ್ನು ನಿಗದಿ ಪಡಿಸಿ ದರಪಟ್ಟಿ ಸಿದ್ಧಪಡಿಸಲು ಮುಂದಾಗಿತ್ತು. ಚಿಕಿತ್ಸಾ ವಿಧಾನ ಮತ್ತು ವೆಚ್ಚದ ಬಗ್ಗೆ, ರೋಗಿ ಹಾಗೂ ಕುಟುಂಬದ ಸದಸ್ಯರಿಗೆ ಮಾಹಿತಿ ಹಾಗೂ ಚಿಕಿತ್ಸೆ ಬಗ್ಗೆ ಮತ್ತೊಬ್ಬ ವೈದ್ಯರ ಅಭಿಪ್ರಾಯ ಪಡೆಯುವ ಹಕ್ಕನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಇದಲ್ಲದೆ, ತುರ್ತು ಪರಿಸ್ಥಿತಿ ವೇಳೆ, ಮುಂಗಡ ಹಣ ಕಟ್ಟುವಂತೆ ರೋಗಿ ಮತ್ತು ಸಂಬಂಧಿಕರನ್ನು ಪೀಡಿಸಬಾರದು. ಅಕಸ್ಮಾತ್ ರೋಗಿ ಮೃತಪಟ್ಟ ಸಂದರ್ಭದಲ್ಲಿ ಬಾಕಿ ಬಿಲ್ ಪಾವತಿಸಲು ಒತ್ತಾಯಿಸಿ, ಶವ ಕೊಡದೆ ಸತಾಯಿಸಬಾರದು ಎಂದೂ ಕೂಡ ಈ ಮಸೂದೆಯಲ್ಲಿ ಹೇಳಲಾಗಿತ್ತು. ಆದರೆ, ಅದು ಅಷ್ಟಕ್ಕೇ ನಿಂತಿರಲಿಲ್ಲ, ರಾಜ್ಯ ಸರ್ಕಾರದ ನಿರ್ದೇಶನ ಉಲ್ಲಂಘಿಸುವ ಆಸ್ಪತ್ರೆಗಳಿಗೆ ದಂಡ ಮತ್ತು ಜೈಲು ಶಿಕ್ಷೆಯನ್ನೂ ವಿಧಿಸಲೂ ಅವಕಾಶ ಕಲ್ಪಿಸಲಾಗಿತ್ತು.

ರಾಜ್ಯಸರ್ಕಾರ ರೂಪಿಸಿರುವ ವೈದ್ಯಕೀಯ ಸೇವೆಗಳ ನಿಯಂತ್ರಣ ಮಸೂದೆ ಅನುಸಾರ, ಯಾವುದೇ ಖಾಸಗಿ ಆಸ್ಪತ್ರೆಯವರು ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ, ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ, ಆ ಆಸ್ಪತ್ರೆಯ ವ್ಯವಸ್ಥಾಪಕರಿಗೆ 25 ಸಾವಿರ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು ಕನಿಷ್ಟ ಆರು ತಿಂಗಳಿನಿಂದ ಗರಿಷ್ಠ  ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲೂ ಕೂಡ ಅವಕಾಶ ನೀಡಲಾಗಿತ್ತು. ಇದೇ ಜೂನ್ 13ರಂದು ವಿಧಾನಸಭೆಯಲ್ಲಿ ಈ ಮಸೂದೆ ಮಂಡಿಸಲಾಗಿತ್ತು.  ಆದರೆ, ಸರ್ಕಾರ ಜಾರಿಗೆ ತರಲು ಹೊರಟಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯಲ್ಲಿನ ಹಲವಾರು ಅಂಶಗಳ ಬಗ್ಗೆ, ಖಾಸಗಿ ಆಸ್ಪತ್ರೆಗಳ ವೈದ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.  ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರ ನೇತೃತ್ವದ ಸಮಿತಿ ಸಿದ್ಧಪಡಿಸಿಕೊಟ್ಟ ವರದಿಯೇ ಬೇರೆ, ರಾಜ್ಯಸರ್ಕಾರದವರು ಸದನದಲ್ಲಿ ಮಂಡಿಸಿದ್ದೇ ಬೇರೆ ಎಂಬ ಆರೋಪ ಖಾಸಗಿ ವೈದ್ಯರಿಂದ ಕೇಳಿ ಬಂದಿದೆ.  ವಿಕ್ರಮ್ ಜಿತ್ ಸೇನ್ ವರದಿ ಅನುಸಾರ, ಈ ಮಸೂದೆಯನ್ನು ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಎಂದು ಹೆಸರಿಸಲಾಗಿತ್ತು, ಆದರೆ, ರಾಜ್ಯಸರ್ಕಾರ ಅದನ್ನು ಖಾಸಗಿ ವೈದ್ಯಕೀಯ ಸೇವೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಎಂದು ಬದಲಾಯಿಸಿದೆ. ಮೂಲ ವರದಿಯ ಅನುಸಾರ, ಆರೋಗ್ಯ ವ್ಯವಸ್ಥೆಯ ಗುಣಮಟ್ಟ ಅನ್ನುವುದು, ಎಲ್ಲರಿಗೂ ಒಂದೇ ಆಗಬೇಕಿರುವುದರಿಂದ, ಈ ತಿದ್ದುಪಡಿ ಕಾಯಿದೆಯು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳಿಗೆ ಸಮಾನವಾಗಿ ಅನ್ವಯವಾಗುತ್ತದೆ. ಈ ವಿಚಾರವನ್ನು ರಾಜ್ಯಸರ್ಕಾರಕ್ಕೆ ಸ್ಪಷ್ಟಪಡಿಸಿದ್ದ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅವರು, ಸರ್ಕಾರದ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯರೂ ಕೂಡ ಈ ಕಾಯ್ದೆ ಅಡಿ ಬರಬೇಕು ಎಂದು ಹೇಳಿದ್ದರು. ಆದರೆ, ವಿಕ್ರಮ್ ಜಿತ್ ಸೇನ್ ವರದಿಯನ್ನೇ ತಿರುಚಿ, ಕೇವಲ ಖಾಸಗಿ ವಲಯದ ಆಸ್ಪತ್ರೆಗಳನ್ನು ನಿಯಂತ್ರಣ ಮಾಡಲು ಹೊರಟಿರುವುದು ಅನ್ಯಾಯ ಎಂದು ಖಾಸಗಿ ಆಸ್ಪತ್ರೆಗಳು ಆರೋಪಿಸುತ್ತವೆ.

ಆಸ್ಪತ್ರೆ ಯಾವುದೇ ಇರಲಿ, ವೈದ್ಯರೂ, ರೋಗಿಗಳೂ ಮತ್ತು ಚಿಕಿತ್ಸಾ ಕ್ರಮ ಒಂದೇ ಆಗಿರುವುದರಿಂದ, ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯರನ್ನು ಈ ಕಾಯಿದೆ ಅಡಿ ಸೇರಿಸಬೇಕು ಅನ್ನುವುದು, ಖಾಸಗಿ ಕ್ಷೇತ್ರದ ಆಸ್ಪತ್ರೆಗಳವರ ವಾದ. ಹೀಗಾಗಿ, ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕದಲ್ಲಿ ತನ್ನದೇ ಆದ ವಿಚಾರಗಳನ್ನು ತುರುಕುವ ಇಚ್ಛೆ ರಾಜ್ಯಸರ್ಕಾರಕ್ಕೆ ಇದ್ದಲ್ಲಿ, ಹಾಗೇ ಮಾಡಬೇಕಿತ್ತು, ಅದನ್ನುಬಿಟ್ಟು, ತಜ್ಞರ ಸಮಿತಿ ನೇಮಕ ಮಾಡಿ, ವರದಿ ಪಡೆದು, ಅದರಲ್ಲಿನ ಪ್ರಮುಖ ಅಂಶಗಳನ್ನು ಕೈಬಿಡುವ ಅಗತ್ಯ ಏನಿತ್ತು ಎಂದು ಖಾಸಗಿ ಆಸ್ಪತ್ಪೆ ವೈದ್ಯರು ಪ್ರಶ್ನಿಸುತ್ತಾರೆ. ವಿಕ್ರಮ್ ಜಿತ್ ಸೇನ್ ಸಮಿತಿ ಒಂದು ವರ್ಷ ಕುಳಿತು ವರದಿ ಸಿದ್ಧಪಡಿಸಿತ್ತು. ರೋಗಿಗಳ ಸುರಕ್ಷತೆ ಮತ್ತು ಹಕ್ಕುಗಳನ್ನು ಕಾಪಾಡುವುದೇ ಆ ವರದಿ ಉದ್ದೇಶವಾಗಿತ್ತು, ಹೀಗಾಗಿ ಅದನ್ನು, ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳೆರಡಕ್ಕೂ ಅನ್ವಯಿಸುವುದೇ ನ್ಯಾಯಸಮ್ಮತ ನಿರ್ಧಾರ. ಅಂಥ ನಿರ್ಧಾರಕ್ಕೆ ನಮ್ಮೆಲ್ಲರ ಸ್ವಾಗತವಿದೆ, ಅದನ್ನುಬಿಟ್ಟು ಖಾಸಗಿ ವಲಯದ ಆಸ್ಪತ್ರೆಗಳನ್ನೇ ಗುರಿಯಾಗಿಸಿಕೊಂಡಿರುವುದು ಸರಿಯಲ್ಲ ಅನ್ನುತ್ತಾರೆ. ರಾಜ್ಯಸರ್ಕಾರದ ಈ ನಿಲುವು, ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಜೀವ ಅಷ್ಟೊಂದು ಅಮೂಲ್ಯವಲ್ಲ, ಕೇವಲ ಖಾಸಗಿ ಆಸ್ಪತ್ರೆಗೆ ಹೋಗುವವರ ಜೀವಕ್ಕೆ ಮಾತ್ರ ಬೆಲೆ ಎಂಬಂತಾಗಿದೆ ಅನ್ನುವುದು ಖಾಸಗಿ ವೈದ್ಯರ ಆರೋಪ. ವೈದ್ಯ ನೆನ್ನುವನು ಸರ್ಕಾರಿ ಆಸ್ಪತ್ರೆಯಲ್ಲಿದ್ದರೂ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೂ ವೈದ್ಯನೇ ತಾನೇ, ಹೀಗಿದ್ದರೂ ಕೂಡ, ಸರ್ಕಾರಿ ಆಸ್ಪತ್ರೆಗಳಲ್ಲಿ ಏನೇ ಲೋಪದೋಷ ಆದರೂ ಕೂಡ ಅವರಿಗೆ ಶಿಕ್ಷೆ ಇಲ್ಲ, ಆದರೆ ಖಾಸಗಿ ಆಸ್ಪತ್ರೆಗಳಲ್ಲಿನ ಲೋಪದೋಷಗಳಿಗೆ ಮಾತ್ರ ದಂಡ ಮತ್ತು  ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆಗಳನ್ನು ಸೇರಿಸುವುದು ಸರಿಯಲ್ಲ ಅನ್ನುತ್ತಾರೆ. ರಾಜ್ಯಸರ್ಕಾರ ಸಿದ್ಧಪಡಿಸಿರುವ ಈ ತಿದ್ದುಪಡಿ ವಿಧೇಯಕವನ್ನು ಕರಾಳ ಶಾಸನ ಎಂದು ಕರೆದಿರುವ ಖಾಸಗಿ ವಲಯದ ಆಸ್ಪತ್ರೆಗಳು ಮತ್ತು ವೈದ್ಯರು, ರಾಜ್ಯಸರ್ಕಾರದ ವಿರುದ್ಧ ಸಿಡಿದೆದ್ದು ನಿಂತಿದ್ದಾರೆ.  

ರಾಜ್ಯಸರ್ಕಾರದ ನಿಲುವನ್ನು ಖಂಡಿಸುವ ಸಲುವಾಗಿ, ಹದಿನೈದು ದಿವಸಗಳ ಹಿಂದೆ, ಬೆಂಗಳೂರು ಚಲೋ ಹೆಸರಿನಲ್ಲಿ  ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಬಂದ ಸುಮಾರು 15 ಸಾವಿರ ವೈದ್ಯರು ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ವೈದ್ಯರು, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನಾ ಜಾಥಾ ನಡೆಸಿ, ರಾಜ್ಯಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಲು ರೂಪಿಸಿರುವ ಈ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ, ಖಾಸಗಿ ಆಸ್ಪತ್ರೆಗಳ ಸ್ವಾಯತ್ತತೆ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಹೆಚ್ಚೂಕಮ್ಮಿ ಸರ್ಕಾರವೇ ನೇರವಾಗಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಸನ್ನಿವೇಶ ಉದ್ಭವ ಆಗುತ್ತದೆ ಎಂದು ಆರೋಪಿಸಿರುವ ಖಾಸಗಿ ವೈದ್ಯರು, ಈ ಮಸೂದೆಯನ್ನು ಅಸಾಂವಿಧಾನಿಕ ಎಂದು ಬಣ್ಣಿಸಿದ್ದಾರೆ. ಈ ಮಸೂದೆಯನ್ನು, ಖಾಸಗಿ ಆಸ್ಪತ್ರೆಗಳ ಜೊತೆಗೆ, ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯರಿಗೂ ಅನ್ವಯಿಸುವಂತೆ ಜಾರಿಗೆ ತರಬೇಕು. ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆಗಳಿಗೆ ಸರ್ಕಾರ ಶುಲ್ಕ ನಿಗದಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಮಸೂದೆಯಲ್ಲಿನ ಎಲ್ಲಾ ವಿವಾದಾತ್ಮಕ ಅಂಶಗಳನ್ನು ಕೈಬಿಡದಿದ್ದರೆ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದಾದ ಬಳಿಕ, ವಿಧಾನಸಭೆಯಲ್ಲಿ ಖಾಸಗಿ ಆಸ್ಪತ್ರೆ ನಿಯಂತ್ರಣ ಮಸೂದೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸದನದಲ್ಲಿ, ಮಸೂದೆ ಪರ ಮತ್ತು ವಿರೋಧ ಅಭಿಪ್ರಾಯಗಳೂ ಕೇಳಿ ಬಂದವು. ಹೀಗಾಗಿ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ತರಾತುರಿಯಲ್ಲಿ ಜಾರಿ ಮಾಡುವ ಬದಲು, ಕೂಲಂಕಷ ಪರಿಶೀಲನೆ ನಡೆಸುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ, ವಿಧೇಯಕದ ಪರಿಶೀಲನೆಗೆ, ಜಂಟಿ ಸದನ ಸಮಿತಿ ರಚಿಸಿ, ಒಂದು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಯಿತು. ಇದರ ಜೊತೆಗೆ, ಸರ್ಕಾರದ ನಿರ್ದೇಶನ ಉಲ್ಲಂಘಿಸಿ, ಹೆಚ್ಚಿನ ದರ ವಸೂಲು ಮಾಡುವ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರಿಗೆ,  ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಿದ್ದ ಪ್ರಸ್ತಾವನೆಯನ್ನೂ ಕರಡು ಮಸೂದೆಯಿಂದ ಕೈಬಿಡಲು ನಿರ್ಧರಿಸಲಾಯಿತು. ಈ ನಡುವೆ, ರಾಜ್ಯಸರ್ಕಾರದ ಮಸೂದೆ ವಿರುದ್ಧ ಸಮರ ಸಾರಿರುವ ಖಾಸಗಿ ಆಸ್ಪತ್ರೆಗಳ ವೈದ್ಯರು, ಸಾರ್ವಜನಿಕರ ಎದುರು ತಮ್ಮ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಯಾವುದೇ ಒಂದು ಖಾಸಗಿ ಆಸ್ಪತ್ರೆ, ತನ್ನಲ್ಲಿರುವ ಸೌಲಭ್ಯ, ಸೌಕರ್ಯಗಳು ಮತ್ತು ವೈದ್ಯರ ವೃತ್ತಿ ಕೌಶಲ್ಯಗಳನ್ನು ಆಧರಿಸಿ, ಚಿಕಿತ್ಸಾ ಶುಲ್ಕ ನಿಗದಿಪಡಿಸಲು ಸ್ವತಂತ್ರವಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಿಧ ಚಿಕಿತ್ಸೆಗಳಿಗೆ ಇಷ್ಟೇ ದರ ಎಂದು ನಿಗದಿಪಡಿಸಲು, ಅದು ಹೋಟೆಲ್‌ ನಲ್ಲಿ ಸಿಗುವ ತಿಂಡಿಗಳ ದರಪಟ್ಟಿಯಂತಲ್ಲ ಅನ್ನುವ ಖಾಸಗಿ ವೈದ್ಯರು, ಆರೋಗ್ಯದ ವಿಚಾರಗಳಲ್ಲಿ ಪ್ರತಿಯೊಬ್ಬ ರೋಗಿಯ ಸಮಸ್ಯೆಯೂ ವಿಭಿನ್ನವಾಗಿರುತ್ತದೆ. ಹೀಗಾಗಿ, ಇಂಥ ಕಾಯಿಲೆಯ ಚಿಕಿತ್ಸೆಗೆ ಇಷ್ಟು ಚಾರ್ಜು ಎಂದು ನಿಗದಿ ಪಡಿಸುತ್ತೇವೆ ಎಂಬ ಚಿಂತನಾ ಕ್ರಮವೇ ತಪ್ಪು ಎಂದು ಅಭಿಪ್ರಾಯಪಡುತ್ತಾರೆ. ಇದಲ್ಲದೆ, ಇವತ್ತಿನ ದಿನಗಳಲ್ಲಿ ಯಾವುದೇ ವೃತ್ತಿಪರ ಸೇವೆಗೆ ದರ ನಿಗದಿ ಮಾಡಲು ಸಾಧ್ಯವಿಲ್ಲ. ಎಲ್ಲಾ ವಕೀಲರಿಗೆ, ಚಾರ್ಟರ್ಡ್ ಅಕೌಂಟೆಂಟ್‌ ಗಳಿಗೆ, ಆರ್ಕಿಟೆಕ್ಟ್‌ಗಳಿಗೆ, ಸರ್ಕಾರದವರು ಒಂದೇ ರೀತಿಯ ಶುಲ್ಕ ನಿಗದಿ ಪಡಿಸಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ. ಒಬ್ಬ ಕಲಾವಿದ ಮಾಡಿರುವ  ಪೇಂಟಿಂಗ್ ಮತ್ತು ಮತ್ತೊಬ್ಬರ ಪೇಂಟಿಂಗ್ ಗೆ ಒಂದೇ ದರ ನಿಗದಿಪಡಿಸಲು ಮುಂದಾದರೆ, ಅದು ಹಾಸ್ಯಾಸ್ಪದವಲ್ಲವೇ ಅನ್ನುತ್ತಾರೆ. ರೋಗಿಗಳು, ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳುವಾಗ, ಡಾಕ್ಟರು ಮಧ್ಯೆ ಪ್ರವೇಶಿಸಬಾರದು, ಎಂದು ಮಸೂದೆಯಲ್ಲಿ ಹೇಳಿರುವುದಂತೂ ತುಂಬಾ ಬಾಲಿಶವಾಗಿದೆ, ಎಂದು ಖಾಸಗಿ ವೈದ್ಯರು ಲೇವಡಿ ಮಾಡುತ್ತಾರೆ. ವೈದ್ಯರು, ರೋಗಿಯೊಂದಿಗೆ ನಡೆಸುವ ಸಂಭಾಷಣೆ, ಅದರ ಭಾಷೆ ಮತ್ತು ಚಿಕಿತ್ಸೆಯ ನಿರ್ಧಾರಗಳೆಲ್ಲದರ ಬಗ್ಗೆಯೂ ದೂರುನೀಡಲು ಅವಕಾಶ ನೀಡಿರುವುದು ತಪ್ಪುಕ್ರಮ ಅನ್ನುತ್ತಾರೆ.

ಖಾಸಗಿ ವೈದ್ಯಕೀಯ ಸೇವೆ ನಿಯಂತ್ರಣ ಕಾಯ್ದೆ ಅಡಿ, ರೋಗಿಗಳ ದೂರುಗಳ ಬಗ್ಗೆ ವಿಚಾರಣೆ ನಡೆಸಲು, ಜಿಲ್ಲಾ ಮಟ್ಟದ  ಕುಂದುಕೊರತೆ ಸಮಿತಿ ರಚಿಸುವ ನಿರ್ಧಾರಕ್ಕೂ ಖಾಸಗಿ ಆಸ್ಪತ್ರೆಗಳ ವೈದ್ಯರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಯಾವುದೇ ರೀತಿಯ ದೂರುಗಳನ್ನು ಆಲಿಸಲು, ಈಗಾಗಲೇ ಗ್ರಾಹಕ ನ್ಯಾಯಾಲಯಗಳು, ಸಿವಿಲ್ ಕೋರ್ಟ್, ಕ್ರಿಮಿನಲ್ ಕೋರ್ಟ್, ಮಾನವ ಹಕ್ಕು ಆಯೋಗ ಮತ್ತು ಮೆಡಿಕಲ್ ಕೌನ್ಸಿಲ್ ನಂಥ ಸಂಸ್ಥೆಗಳಿವೆ. ಹೀಗಿರುವಾಗ ಇದಕ್ಕಾಗಿ ಮತ್ತೊಂದು ಸಮಿತಿ ರಚಿಸುವ ಅವಶ್ಯಕತೆ ಏನಿದೆ ಎಂದು ಖಾಸಗಿ ವೈದ್ಯರು ಪ್ರಶ್ನಿಸುತ್ತಾರೆ.  ಈ ರೀತಿಯ ಕ್ರಮ, ಖಾಸಗಿ ಆಸ್ಪತ್ರೆಗಳು ಮತ್ತು ಅಲ್ಲಿನ ವೈದ್ಯರ ಶೋಷಣೆಗೆ ದಾರಿ ಮಾಡಿಕೊಡುತ್ತದೆ ಅನ್ನುತ್ತಾರೆ. ಇದಲ್ಲದೆ, ಸರ್ಕಾರಿ ಅಧಿಕಾರಿಗಳು, ಇಡೀ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನೇ ನಿಯಂತ್ರಿಸುವ ಸನ್ನಿವೇಶದಲ್ಲಿ, ಲಂಚಗುಳಿತನ ಮತ್ತು ಭ್ರಷ್ಟಾಚಾರ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಆತಂಕ ವ್ಯಕ್ತಪಡಿಸುತ್ತಾರೆ. ವಿಕ್ರಮ್ ಜಿತ್ ಸೇನ್ ವರದಿಯಲ್ಲಿ, ಸರ್ಕಾರಿ ಆಸ್ಪತ್ರೆಗಳ ನೂರು ಮೀಟರ್ ದೂರದ ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರ ಇರಬಾರದು ಎಂದು ಸೂಚಿಸಿತ್ತು, ಆದರೆ, ರಾಜ್ಯಸರ್ಕಾರ ಅದನ್ನು 200 ಮೀಟರುಗಳಿಗೆ ಏರಿಸಿದೆ. ಇದರಿಂದ ತುರ್ತುಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ. ಏಕೆಂದರೆ, ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಉಪಕರಣಗಳು ಮತ್ತು ಪ್ರಯೋಗಾಲಯಗಳು ಯಾವ ಮಟ್ಟದಲ್ಲಿರುತ್ತವೆ ಅನ್ನುವುದು ಎಲ್ಲರಿಗೂ ಗೊತ್ತು, ಹೀಗಾಗಿ, ತುರ್ತು ಅಗತ್ಯದ ವೇಳೆ, ದೂರಕ್ಕೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರುವುದು ಜೀವಕ್ಕೆ ಅಪಾಯ ತರಬಹುದು ಅನ್ನುವುದು ಖಾಸಗಿ ವೈದ್ಯರ ಅಭಿಮತ.

ಖಾಸಗಿ ಆಸ್ಪತ್ರೆಗಳನ್ನು ಉತ್ತರದಾಯಿಗಳನ್ನಾಗಿ ಮಾಡುವುದಷ್ಟೇ ನಮ್ಮ ಉದ್ದೇಶ. ಹೊಸ ಕಾಯ್ದೆ ಜಾರಿಯಿಂದ, ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ. ಖಾಸಗಿ ಆಸ್ಪತ್ರೆಗಳ ಮಾಲೀಕರು, ವೈದ್ಯರನ್ನು ಚಿತಾವಣೆ ಮಾಡುತ್ತಿದ್ದಾರೆ ಅನ್ನುತ್ತಾರೆ, ಆರೋಗ್ಯ ಸಚಿವ ರಮೇಶ್ ಕುಮಾರ್. ಆದರೆ, ರಾಜ್ಯಸರ್ಕಾರವೇನೂ ನಮಗೆ ಬಂಡವಾಳ ಕೊಟ್ಟಿಲ್ಲ, ಸಹಾಯಧನ ಕೊಟ್ಟಿಲ್ಲ, ಆಸ್ಪತ್ರೆ ಕಟ್ಟಿಸಲು ನಿವೇಶನವನ್ನೂ ಕೊಟ್ಟಿಲ್ಲ. ಖಾಸಗಿ ವಲಯದ ಆಸ್ಪತ್ರೆಗಳು, ತಮ್ಮ ಸ್ವಂತ ವೆಚ್ಚದಲ್ಲಿ ಅತ್ಯುತ್ತಮ ಮೂಲ ಸೌಕರ್ಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಂಡಿರುತ್ತವೆ. ಹೀಗೆಲ್ಲಾ ಇರುವಾಗ ನಮ್ಮ ಆಸ್ಪತ್ರೆಗಳಲ್ಲಿ ಶುಲ್ಕ ನಿರ್ಧರಿಸಲು ಸರ್ಕಾರಕ್ಕೆ ಯಾವ ಹಕ್ಕಿದೆ ಎಂದು ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರು ಪ್ರಶ್ನಿಸುತ್ತಾರೆ.  ಸಣ್ಣ ಮತ್ತು ಮಧ್ಯಮ ಮಟ್ಟದ ಆಸ್ಪತ್ರೆಗಳು ಈಗಾಗಲೇ ಕಷ್ಟದಲ್ಲಿದ್ದು, ಹೀಗೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸುತ್ತಾರೆ. ಸುಮಾರು 20 ವರ್ಷಗಳ ಹಿಂದೆ, ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆಗಳ ಅಗತ್ಯವಿದ್ದ ಎಷ್ಟೋ ಸಮಸ್ಯೆಗಳಿಗೆ, ಇದೀಗ ಅತಿ ಸಣ್ಣ ರಂದ್ರದ ಮೂಲಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ.  ಆದರೆ, ಈ ರೀತಿಯ ತಂತ್ರಜ್ಞಾನಗಳು ದುಬಾರಿಯಾಗಿದ್ದು, ಸಹಜವಾಗಿಯೇ ಚಿಕಿತ್ಸಾ ವೆಚ್ಚವೂ ಹೆಚ್ಚುತ್ತದೆ. ಇಂಥ ಸನ್ನಿವೇಶದಲ್ಲಿ, ಚಿಕಿತ್ಸಾ ವೆಚ್ಚ ಹೆಚ್ಚಾಗಿದೆ ಎಂದು ಹೇಳುತ್ತಾ ಅದನ್ನು ನಿಯಂತ್ರಿಸಲು ಮುಂದಾಗುವುದು ಎಷ್ಟರ ಮಟ್ಟಿಗೆ ಸರಿಯಾದ ಕ್ರಮ ಎಂದು ಪ್ರಶ್ನಿಸುತ್ತಾರೆ.

ಒಟ್ಟಿನಲ್ಲಿ, ಸರ್ಕಾರದ ಈ ಕಾಯಿದೆಯಿಂದ ಖಾಸಗಿ ವೈದ್ಯರು ಪ್ರತಿದಿನವೂ ತಮ್ಮ ಮೇಲೆ ದೂರು ದಾಖಲಾಗುವ ಭಯದಲ್ಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದು ರೋಗಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ ಅನ್ನುವುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಅನ್ನುವುದು ಖಾಸಗಿ ಆಸ್ಪತ್ರೆಗಳ ಅಹವಾಲು. ರಾಜ್ಯಸರ್ಕಾರದ ಜೊತೆ ಸಂಘರ್ಷಕ್ಕಿಳಿಯಲು ನಮಗೆ ಇಷ್ಟವಿಲ್ಲ ಎಂದು ಹೇಳುವ ಖಾಸಗಿ ವಲಯದ ವೈದ್ಯರು, ಖಾಸಗಿ ಆಸ್ಪತ್ರೆಗಳ ವಿಧೇಯಕವನ್ನು ಸರ್ಕಾರ, ತನ್ನ ಮೂಗಿನ ನೇರಕ್ಕೇ ಇರುವಂತೆ ಜಾರಿಗೆ ತರುವುದಾದರೆ, ನಾವು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ಮತ್ತು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಜನಸಾಮಾನ್ಯರಿಗೆ ಸೇವೆ ಕೊಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳನ್ನೂ ಈ ವಿಧೇಯಕದ ಅಡಿ ತರಬೇಕು ಎಂಬ ಖಾಸಗಿ ಆಸ್ಪತ್ರೆಗಳ ಆಗ್ರಹವನ್ನು ಒಪ್ಪುವುದು ಸಾಧ್ಯವಿಲ್ಲ. ಏಕೆಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಾಭಗಳಿಸುವ ಉದ್ದೇಶ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆ ಸಂಬಂಧ ಈಗಾಗಲೇ ಹಲವಾರು ನೀತಿ ನಿಯಮ ಮತ್ತು ಕಾನೂನುಗಳಿವೆ ಎಂಬುದು ಸರ್ಕಾರದ ಪರ ಇರುವವರು ಹೇಳುವ ಮಾತು.  ಇದರ ಜೊತೆಗೆ, ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳನ್ನೂ ಹೊಂದಿರುವ ತಜ್ಞರ ಸಮಿತಿಯೇ ದರ ನಿಗದಿ ಮಾಡುವುದರಿಂದ ಆ ಬಗ್ಗೆ ಖಾಸಗಿ ಆಸ್ಪತ್ರೆಗಳವರು ಆತಂಕ ವ್ಯಕ್ತಪಡಿಸುವ ಅಗತ್ಯವಿಲ್ಲ ಅನ್ನುವ ಮಾತೂ ಕೇಳಿ ಬರುತ್ತದೆ.

ಈಗಾಗಲೇ ತಾನು ಸ್ಥಾಪಿಸಿರುವ ಸರ್ಕಾರಿ ಆಸ್ಪತ್ರೆಗಳನ್ನು ನಿರ್ವಹಿಸಲು ಮತ್ತು ಸುಧಾರಿಸಲು ಹೆಣಗುತ್ತಿರುವ ರಾಜ್ಯಸರ್ಕಾರ, ಸ್ವಂತ ಹಣ ಮತ್ತು ಪರಿಶ್ರಮಗಳಿಂದ ಆಸ್ಪತ್ರೆ ಸ್ಥಾಪಿಸಿ, ನಡೆಸುತ್ತಿರುವವರ ಮೇಲೆ ನಿಯಂತ್ರಣ ಹೇರಲು ಹೊರಟಿರುವುದು ಆಘಾತಕಾರಿ, ಎಂದು ಖಾಸಗಿ ಆಸ್ಪತ್ರೆಗಳವರು ಬೇಸರ ವ್ಯಕ್ತಪಡಿಸುತ್ತಾರೆ. ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದು ಎಂದರೆ, ‘ಖಾಸಗಿ ಆಸ್ಪತ್ರೆಗಳಲ್ಲಿನ ದರಗಳನ್ನು ನಿಯಂತ್ರಿಸುವುದಲ್ಲ, ಬದಲಿಗೆ ತನ್ನ ಆಸ್ಪತ್ರೆಗಳನ್ನು ಸುಧಾರಿಸಿ, ಮೇಲ್ದರ್ಜೆಗೇರಿಸಿ, ಜನಸಂಖ್ಯೆಯ ಬಹುಭಾಗಕ್ಕೆ ಅಲ್ಲಿಯೇ ಸೂಕ್ತ ಚಿಕಿತ್ಸೆಗಳು ದೊರೆಯುವಂತೆ ಮಾಡುವುದು’ ಅನ್ನುವುದನ್ನು ರಾಜ್ಯ ಸರ್ಕಾರ ಅರ್ಥಮಾಡಿಕೊಳ್ಳಬೇಕು ಅನ್ನುತ್ತಾರೆ ಖಾಸಗಿ ವೈದ್ಯರು.

ಕರ್ನಾಟಕ ರಾಜ್ಯದಲ್ಲಿ ಶೇ 70 ರಷ್ಟು ವೈದ್ಯಕೀಯ ಸೇವೆಯನ್ನು ಖಾಸಗಿ ಆಸ್ಪತ್ರೆಗಳೇ ನೀಡುತ್ತಿವೆ. ಇಂಥ ಪರಿಸ್ಥಿತಿಯಲ್ಲಿ, ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಸಂಘರ್ಷ ಒಳ್ಳೆಯದಲ್ಲ. ಏಕೆಂದರೆ, ರಾಜ್ಯಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಈ ಜಟಾಪಟಿಯಲ್ಲಿ, ರೋಗಿಗಳು ಬಲಿಪಶು ಆಗಬಾರದು. ಹೀಗಾಗಿ, ಎರಡೂ ಕಡೆಯವರು ಕುಳಿತು ಚರ್ಚೆನಡೆಸಿ, ನ್ಯಾಯಸಮ್ಮತ ಅಂಶಗಳನ್ನು ಇರಿಸಿಕೊಂಡು, ಹೊಸ ಕಾಯ್ದೆ ಜಾರಿಗೆ ತರುವುದರಲ್ಲೇ ಸಮಾಜದ ಹಿತ ಅಡಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ