ಖಾಸಗಿ ಆಸ್ಪತ್ರೆ ನಿಯಂತ್ರಣ ಮಸೂದೆ !

Kannada News

04-07-2017 909

ಹೋಟೆಲ್ಲಿಗೆ ಹೋಗ್ತೀರಿ ಅಲ್ಲಿನ ದರಪಟ್ಟಿ ನೋಡ್ತೀರಿ, ಮಸಾಲೆ ದೋಸೆಯೋ, ಕೇಸರೀ ಬಾತೋ, ನಿಮಗೆ ಬೇಕಾದ ತಿಂಡಿ ಆರ್ಡರ್ ಮಾಡ್ತೀರಿ, ತಿಂತೀರಿ ದುಡ್ಡುಕೊಟ್ಟು ಎದ್ದು ಬರುತ್ತೀರಿ. ಮಾಲುಗಳಿಗೆ ಹೋಗ್ತೀರಿ, ನಿಮಗೆ ಬೇಕಾದ ಬಟ್ಟೆಗಳು, ವಸ್ತುಗಳನ್ನು ಕೈಯ್ಯಲ್ಲಿ ಮುಟ್ಟಿ ಪರಿಶೀಲಿಸ್ತೀರಿ, ಅವುಗಳ ದರ ನೋಡಿ, ಕೊಳ್ಳಬೇಕೇ ಬೇಡವೇ ಅಂತ ನಿರ್ಧರಿಸಿ, ಬಿಲ್ ಮಾಡಿಸಿ ಹಣಕೊಟ್ಟು, ವಸ್ತುಗಳೊಂದಿಗೆ ಮನೆಗೆ ಬರುತ್ತೀರಿ. ಬ್ಯೂಟಿ ಪಾರ್ಲರ್‌ ಸೇವೆ, ವಾಹನಗಳ ಬಾಡಿಗೆ, ವಾಹನಗಳ ಸರ್ವೀಸು, ಅಥವ ಇನ್ಯಾವುದೇ ರೀತಿ ಸೇವೆಗಳಲ್ಲಿ ನಿಗದಿತ ದರಪಟ್ಟಿ ಇರುತ್ತದೆ. ಹೀಗಾಗಿ,  ಬಿಲ್ ಪಡೆದ ನಂತರ, ನಿಮಗೆ ಯಾವುದೇ ಅನಿರೀಕ್ಷಿತ ಆಘಾತ ಆಗುವುದಿಲ್ಲ.

ಆದರೆ, ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಯೇ ಬೇರೆ. ನಿಮಗೆ ಸಣ್ಣದಾಗಿ ಬಂದ ಜ್ವರಕ್ಕೆ ಹೆದರಿ, ಪರಿಚಯಸ್ಥ ವೈದ್ಯರು ಕೆಲಸ ಮಾಡೋ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತೀರಿ. ಕೇವಲ 24 ಗಂಟೆಗಳಲ್ಲಿ ಸಾಕಷ್ಟು ಚೇತರಿಸಿಕೊಳ್ಳುತ್ತೀರಿ, ಮನೆಗೆ ಹೋಗಲು ಅವಸರ ಮಾಡುತ್ತೀರಿ. ಆದರೆ, ಆ ಆಸ್ಪತ್ರೆ ವೈದ್ಯರಿಗೋ ನಿಮ್ಮ ಬಗ್ಗೆ ತುಂಬಾ ಕಾಳಜಿ, ಇಲ್ಲಾ ಇಲ್ಲಾ ಇನ್ನೂ ಎರಡು ದಿನಗಳಾದರೂ ನಿಮ್ಮನ್ನು ಅಬ್ಜರ್ವೇಶನ್ ನಲ್ಲಿ ಇಡಬೇಕು, ನಿಮ್ಮ ಪರಿಸ್ಥಿತಿ ನಮಗೆ ಸಮಾಧಾನ ತಂದರೆ ಮಾತ್ರ, ನಿಮಗೆ ಡಿಸ್ಚಾರ್ಜ್‌ ಎಂದು ಹೇಳುತ್ತಾರೆ. ನಿಮ್ಮ ಒಳ್ಳೆಯದಕ್ಕಾಗಿಯೇ ವೈದ್ಯರು ಹೇಳುವ ಮಾತನ್ನು ಉಲ್ಲಂಘಿಸಿಸಲು ಸಾಧ್ಯವೇ? ಹೀಗಾಗಿ, ಮತ್ತೊಂದೆರಡು ದಿನ ಅಲ್ಲೇ ಇರುತ್ತೀರಿ. ಇಷ್ಟು ಹೊತ್ತಿಗಾಗಲೇ ಆಸ್ಪತ್ರೆಯ ಆಡಳಿತ ಸಿಬ್ಬಂದಿ ಮುಂಗಡವಾಗಿ ಸಾಕಷ್ಟು ಹಣ ಕಟ್ಟಿಸಿಕೊಂಡಿರುತ್ತಾರೆ. ನೀವು, ಮಧ್ಯಮ ಅಥವ ಕೆಳ ಮಧ್ಯಮ ವರ್ಗದವರಾಗಿದ್ದರೆ, ಈಗಾಗಲೇ ಒಂದುಮಟ್ಟಿಗೆ ಬಿಸಿ ತಟ್ಟಿರುತ್ತದೆ. ಸರಿ, ಇವತ್ತು ಡಿಸ್ಚಾರ್ಜ್ ಆಗಬೇಕು, ನಿಮ್ಮ ಡಾಕ್ಟರು ಡಿಸ್ಚಾರ್ಜ್ ಎಂದು ಬರೆಯುತ್ತಾರೆ. ನೀವು ಮನೆಗೆ ಹೋಗುವಾಗ ಈ ಎಲ್ಲಾ ಮಾತ್ರೆಗಳು ಮತ್ತು ಟಾನಿಕ್ ತೆಗೆದುಕೊಂಡು ಹೋಗಿ, ಮತ್ತೆ ಮುಂದಿನವಾರ ತಪ್ಪದೇ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗಿ ಎಂದು ಹೇಳಿದ್ದೂ ಆಗುತ್ತದೆ. ಆನಂತರ  ನೀವು ಮತ್ತು ಮನೆಯವರು ಬಿಲ್ಲಿಂಗ್ ಕೌಂಟರ್ ಬಳಿ ಹೋಗುತ್ತೀರಿ, ಅಲ್ಲಿ ನಿಮ್ಮ ಬಿಲ್ ಪ್ರಿಂಟ್ ಮಾಡುವ ಯಂತ್ರ ಕಿರ್ ಕಿರ್ ಕಿರ್ ಎಂದು ಕಿರುಚುತ್ತಿದ್ದಂತೆ, ನಿಮ್ಮ ಎದೆ ಅಡ್ಡಾದಿಡ್ಡಿಯಾಗಿ ಬಡಿದುಕೊಳ್ಳುತ್ತಿರುತ್ತದೆ. ಕಡೆಗೆ, ಬಿಲ್ ಕೈ ಸೇರಿದಾಗ ಆಗುವ ಆಘಾತ, ಅನಾರೋಗ್ಯದ  ಆಘಾತಕ್ಕಿಂತಲೂ ತೀವ್ರ ಅನ್ನಿಸುತ್ತದೆ. ಒಂದು ಜ್ವರ, ನಾಲ್ಕು ದಿನ ಆಸ್ಪತ್ರೆವಾಸ, ಮೂರು ಬಾಟಲಿ ಗ್ಲೂಕೋಸ್, ದಿನಕ್ಕೆ ಮೂರು ಬಾರಿ ಡೋಲೊ 650 ಮಾತ್ರೆ, ಇಷ್ಟೇ ಆಸ್ಪತ್ರೆಯವರು ಕೊಟ್ಟ ಚಿಕಿತ್ಸೆ, ಇಷ್ಟಕ್ಕೇ ಇಷ್ಟೊಂದಾ ಅನ್ನಿಸುತ್ತದೆ. ಇಷ್ಟಾಗುತ್ತೆ ಅಂತ ಗೊತ್ತಿದ್ರೆ, ಅಲ್ಲೇ ಮನೆಹತ್ತಿರದ ಕ್ಲಿನಿಕ್ ನಲ್ಲೇ ತೋರಿಸಿಕೊಂಡು, ಮನೆಯಲ್ಲೇ ರೆಸ್ಟ್ ತೊಗೋತಿದ್ದೆನಲ್ಲಾ ಅಂತೆಲ್ಲಾ ಅಂದುಕೊಳ್ತೀರಿ, ಈಗಂತೂ ಏನೂ ಮಾಡುವಂತಿಲ್ಲ, ಹೇಗೋ ಹಣ ಹೊಂದಿಸಿ, ಬಿಲ್ ಕಟ್ಟಿ ಆಸ್ಪತ್ರೆಯಿಂದ ಹೊರ ಬರುತ್ತೀರಿ. ಮನೆಗೆ ಹೋಗಲು ಆಟೊ ಕರೀತೀನಿ ಎಂದು ಹೇಳುವ ಪತ್ನಿಗೋ ಮಗಳಿಗೋ, ಇಷ್ಟೊತ್ತಿನಲ್ಲಿ ಏನೂ ರಷ್ ಇರಲ್ಲ, ಬಸ್ ನಲ್ಲೇ ಮನೆಗೆ ಹೋದರೆ ಆಗಲ್ವೇ ಅಂತೀರಿ. ಈಗಷ್ಟೇ ಆಸ್ಪತ್ರೆಯಲ್ಲಿ ಸಾವಿರಗಟ್ಟಲೆ  ಹಣ ಕಟ್ಟಿಬಂದಿರುವ ನಿಮಗೆ, ಆಟೊ ಚಾರ್ಜ್ ಆದ್ರೂ ಉಳಿಸಬಹುದಲ್ಲಾ ಅನ್ನಿಸುತ್ತಿರುತ್ತದೆ. ಇಂಥ ಪಾಡು ನಿಮ್ಮೊಬ್ಬರದಲ್ಲಾ…ಇದು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಭಾರತದ ಬಹುತೇಕ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರ ಹಣೆಬರಹ.  ಇವರು, ಸರ್ಕಾರಿ ಆಸ್ಪತ್ರೆಗೆ ಹೋಗಲಾರರು, ಖಾಸಗಿ ಆಸ್ಪತ್ರೆ ಬಿಲ್ ಕಟ್ಟಲಾರರು. ಇನ್ನು ಬಡವರ್ಗದವರ ವಿಚಾರ ಬಿಟ್ಟೇ ಬಿಡಿ, ಅವರಿಗೆ ಸರ್ಕಾರಿ ಆಸ್ಪತ್ರೆ ಬಿಟ್ಟರೆ ಬೇರೇನೂ ಮಾರ್ಗವೇ ಇರುವುದಿಲ್ಲ.

ಇನ್ನು ಉಳಿದವರು, ಮೇಲ್ಮಧ್ಯಮ ವರ್ಗದವರು ಮತ್ತು ಶ್ರೀಮಂತರು. ಇವರು ಅನಾರೋಗ್ಯಕ್ಕೊಳಗಾದರೆ, ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆಯೇ ಹೊರತು, ಸರ್ಕಾರಿ ಆಸ್ಪತ್ರೆ ಮತ್ತು ಅಲ್ಲಿನ ವ್ಯವಸ್ಥೆ, ಇವರಿಗೆ ಪರಿಚಯವೇ ಆಗಿರುವುದಿಲ್ಲ. ಈ ಎರಡೂ ವರ್ಗಗಳ ಬಹುತೇಕ ಜನರು, ಆರೋಗ್ಯ ವಿಮೆ ಮಾಡಿಸಿಕೊಂಡಿರುತ್ತಾರೆ, ಅದಿಲ್ಲದೇ ಹೋದರೂ ಕೂಡ, ಇವರಿಗೆ ಆಸ್ಪತ್ರೆ ಬಿಲ್ ಕಟ್ಟಲು ಬೇಕಾಗುವ ಹಣಕ್ಕೆ ತೊಂದರೆಯೇನೂ ಇರುವುದಿಲ್ಲ. ಇದು ಭಾರತದಲ್ಲಿನ ಆರೋಗ್ಯ ಕ್ಷೇತ್ರದ ಇವತ್ತಿನ ಪರಿಸ್ಥಿತಿ. ಹೀಗಿರುವಾಗ, ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಸೇವೆಗಳ ಗುಣಮಟ್ಟದ ಜೊತೆಗೆ ದುಬಾರಿ ಬಿಲ್ ಬಗ್ಗೆಯೂ  ಜನಸಾಮಾನ್ಯರಿಗೆ ತೀವ್ರ ಅಸಮಾಧಾನವಿದೆ.  ಈ ಆಸ್ಪತ್ರೆಯವರು, ಇಷ್ಟು ದುಡ್ಡಾಗುತ್ತದೆ ಎಂದು ಮೊದಲೇ ನಮಗೆ ಏಕೆ ಹೇಳಲ್ಲ? ಅನ್ನುವ ಪ್ರಶ್ನೆ ಜೊತೆಗೆ, ಇಪ್ಪೈದು ಸಾವಿರ ಆಗುತ್ತೆ ಅಂತ ಹೇಳಿದ್ರು, ಕಡೆಗೆ ಎಪ್ಪೈದು ಸಾವಿರ ರೂಪಾಯಿ ವಸೂಲಿ ಮಾಡಿದ್ರು ಅನ್ನುವ ದೂರುಗಳೂ ಕೇಳಿ ಬರುತ್ತಿರುತ್ತವೆ.  ಮೂರು ಲಕ್ಷ ರೂಪಾಯಿ ಬಿಲ್ ಮಾಡಿದ್ರೂ ನಮ್ಮವರು ಉಳಿಯಲಿಲ್ಲ, ಕೊನೆಗೆ ಹತ್ತು ಸಾವಿರ ರೂಪಾಯಿ ಆದ್ರೂ ರಿಯಾಯತಿ ಕೊಡಿ ಅಂದ್ರೆ ಅದೂ ಆಗಲ್ಲ ಅಂದುಬಿಟ್ರು,  ಪೂರ್ತಿ ಹಣ ಹೊಂದಿಸಿ, ಬಿಲ್ ಕಟ್ಟುವವರೆಗೂ ಶವ ಕೊಡಲಿಲ್ಲ, ಅನ್ನುವ ಗಂಭೀರ ಆರೋಪಗಳೂ ಆಗಿದ್ದಾಗ್ಗೆ ವರದಿಯಾಗುತ್ತವೆ. ಇದೆಲ್ಲವನ್ನೂ ಮನಗಂಡ ಸಿದ್ದರಾಮಯ್ಯ ನೇತೃತ್ವದ  ಸರ್ಕಾರ, ಖಾಸಗಿ ವೈದ್ಯಕೀಯ ಸೇವೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆ ಮಂಡಿಸಿದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದ್ದಾರೆ.  ಎಲ್ಲರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು, ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ರೋಗಿಗಳ ಸುಲಿಗೆ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ  ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ– 2007ಕ್ಕೆ ತಿದ್ದುಪಡಿ ತಂದು, ಅದರ ಹೆಸರನ್ನು The Karnataka Private Medical Establishments Amendment Bill-2017 ಎಂದು ಬದಲಿಸಲು ಸರ್ಕಾರ ಉದ್ದೇಶಿಸಿದೆ. ಈ ತಿದ್ದುಪಡಿ ಮಸೂದೆಯು ಅಲೋಪಥಿ, ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪಥಿ ಸೇರಿದಂತೆ ಎಲ್ಲಾ ಮಾದರಿಯ ವೈದ್ಯಕೀಯ ಪದ್ಧತಿಗಳಿಗೂ ಅನ್ವಯವಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದು, ಬಡ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗಬಾರದು. ಇಡೀ ಆರೋಗ್ಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಎಂಬ ಕಾಳಜಿಯಿಂದ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಸಚಿವ ರಮೇಶ್  ಕುಮಾರ್ ಹೇಳಿದ್ದಾರೆ.
ರಾಜ್ಯಸರ್ಕಾರವೇ ತಪಾಸಣಾ ವೆಚ್ಚ, ವೈದ್ಯರ ಶುಲ್ಕ, ವಿವಿಧ ದರ್ಜೆಯ ವಾರ್ಡುಗಳ ಶುಲ್ಕ, ಪ್ರತಿದಿನದ ಶುಶ್ರೂಷೆ ವೆಚ್ಚ, ಶಸ್ತ್ರಚಿಕಿತ್ಸಾ ಕೊಠಡಿಯ ವೆಚ್ಚಗಳು, ತೀವ್ರ ನಿಗಾ ಘಟಕದ ವೆಚ್ಚ, ಕೃತಕ ಆಮ್ಲಜನಕ ಪೂರೈಕೆ ವೆಚ್ಚ ಇತ್ಯಾದಿಗಳನ್ನು ನಿಗದಿ ಪಡಿಸಲು ಮುಂದಾಗಿದೆ. ತಜ್ಞರ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಈ ರೀತಿಯ ದರಪಟ್ಟಿ ಸಿದ್ಧಪಡಿಸುತ್ತಾರಂತೆ. ಖಾಸಗಿ ಆಸ್ಪತ್ರೆಗಳ ಮೂಲ ಸೌಕರ್ಯ  ಮತ್ತು ಇತರೆ ವ್ಯವಸ್ಥೆಗಳನ್ನು ಆಧರಿಸಿ ಅವುಗಳನ್ನು ವರ್ಗೀಕರಿಸಲೂ ಕೂಡ ಸರ್ಕಾರ ಮುಂದಾಗಿದೆ.  ಈ ವೈದ್ಯಕೀಯ ಸೇವೆಗಳ ನಿಯಂತ್ರಣ ಮಸೂದೆಯಲ್ಲಿ ರೋಗಿ ಹಾಗೂ ಕುಟುಂಬದ ಸದಸ್ಯರಿಗೆ,  ಚಿಕಿತ್ಸಾ ವಿವರ, ಚಿಕಿತ್ಸಾ ವಿಧಾನ ಮತ್ತು ವೆಚ್ಚ ಎಷ್ಟಾಗಬಹುದು ಎಂಬ ಮಾಹಿತಿ ಹಾಗೂ ಚಿಕಿತ್ಸೆ ಬಗ್ಗೆ ಮತ್ತೊಬ್ಬ ವೈದ್ಯರ ಅಭಿಪ್ರಾಯ ಪಡೆಯುವ ಹಕ್ಕನ್ನೂ ನೀಡಲಾಗಿದೆ. ರೋಗಿಯ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬುದರ ವಿವರವನ್ನೂ ಕುಟುಂಬದ ಸದಸ್ಯರಿಗೆ ಕಡ್ಡಾಯವಾಗಿ ನೀಡಬೇಕು ಎಂದು ಹೇಳಲಾಗಿದೆ. ರೋಗಿಗಳು, ತಮ್ಮ ಸಮಸ್ಯೆ ಬಗ್ಗೆ ವೈದ್ಯರೊಂದಿಗೆ ಚರ್ಚಿಸುವ, ಚಿಕಿತ್ಸೆ ಪಡೆಯುವ ಮತ್ತು  ಸಲಹಾ ಚೀಟಿ ಪಡೆಯುವ ಹಕ್ಕು ಹೊಂದಿರುತ್ತಾರೆ. ಇದರ ಜೊತೆಗೆ, ವೈದ್ಯರಿಂದ ಪರೀಕ್ಷಿಸಲ್ಪಡುವ ವೇಳೆ, ಖಾಸಗಿತನ ಕಾಪಾಡಿಕೊಳ್ಳುವ ಹಕ್ಕು, ಆರೋಗ್ಯ ಸ್ಥಿತಿಯ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕು, ತಮ್ಮ ವೈದ್ಯಕೀಯ ದಾಖಲೆಗಳನ್ನು ನೋಡುವ ಮತ್ತು ಅದರ ಪ್ರತಿ ಪಡೆಯುವ ಹಕ್ಕುಗಳನ್ನೂ ಇಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ರೋಗಿಗಳಿಗೂ ಅನ್ವಯವಾಗುವ ಹಲವು ಅಂಶಗಳು ಈ ತಿದ್ದುಪಡಿ ಕಾಯಿದೆಯಲ್ಲಿವೆ. ರೋಗಿಗಳು ತಮ್ಮ ಆರೋಗ್ಯ ಪರಿಸ್ಥಿತಿ ಬಗ್ಗೆ ಪ್ರಾಮಾಣಿಕವಾಗಿರಬೇಕು, ವೈದ್ಯರ ಬಳಿ ಸಮಯ ಕಾಯ್ದಿರಿಸಿದ ಮೇಲೆ ಅದಕ್ಕನ್ನುಗುಣವಾಗಿ ಹಾಜರಿರಬೇಕು, ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆಗಳನ್ನು ಪಾಲಿಸಬೇಕು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಗೌರವದಿಂದ ಕಾಣಬೇಕು ಎಂಬ ಅಂಶಗಳನ್ನು ಸೇರಿಸಲಾಗಿದೆ.

ಆಸ್ಪತ್ರೆಯವರು, ತಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಪರೀಕ್ಷಾ ವೆಚ್ಚ, ವಿವಿಧ ರೀತಿಯ ಚಿಕಿತ್ಸಾ ವಿಧಾನಗಳು, ಶಸ್ತ್ರಕ್ರಿಯೆಗೆ ತಗಲುವ ವೆಚ್ಚ ಇತ್ಯಾದಿಗಳ ವಿವರ ಇರುವ ಘೋಷಣಾ ಪಟ್ಟಿಯನ್ನು ಆಸ್ಪತ್ರೆಯಲ್ಲಿ ಎದ್ದುಕಾಣುವಂತೆ  ಪ್ರದರ್ಶಿಸಬೇಕು ಮತ್ತು ರೋಗಿಯ ಗಮನಕ್ಕೆ ತರಬೇಕು ಅನ್ನುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ, ತುರ್ತು ಪರಿಸ್ಥಿತಿ ವೇಳೆ, ಮುಂಗಡ ಹಣ ಕಟ್ಟುವಂತೆ ರೋಗಿಯ ಸಂಬಂಧಿಕರನ್ನು ಪೀಡಿಸಬಾರದು. ಅಕಸ್ಮಾತ್ ರೋಗಿಯೇನಾದರೂ ಮೃತಪಟ್ಟ ಸಂದರ್ಭದಲ್ಲಿ ಬಾಕಿ ಬಿಲ್ ಪಾವತಿಸಲು ಒತ್ತಾಯಿಸಿ, ಶವ ಕೊಡದೆ ಸತಾಯಿಸಬಾರದು ಎಂದೂ ಕೂಡ ಈ ಹೊಸ ಮಸೂದೆ ಹೇಳುತ್ತದೆ. ಇಷ್ಟು ಮಾತ್ರವಲ್ಲ, ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸುವ ಆಸ್ಪತ್ರೆಗಳಿಗೆ ದಂಡ ಮತ್ತು ಶಿಕ್ಷೆಯನ್ನೂ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.  ಈ ಹೊಸ ವೈದ್ಯಕೀಯ ಸೇವೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಅನುಸಾರ, ಯಾವುದೇ ಆಸ್ಪತ್ರೆಯವರು, ರಾಜ್ಯಸರ್ಕಾರ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತ ಹೆಚ್ಚಿಗೆ ವಸೂಲಿ ಮಾಡಿದರೆ, 25 ಸಾವಿರ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ಇದರ ಜೊತೆಗೆ, ಹೆಚ್ಚಿನ ದರ ವಸೂಲು ಮಾಡುವ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರಿಗೆ, ಕನಿಷ್ಟ ಆರು ತಿಂಗಳಿನಿಂದ, ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲೂ ಕೂಡ, ಈ ಮಸೂದೆ ಅವಕಾಶ ನೀಡಲಿದೆ. ಖಾಸಗಿ ವೈದ್ಯಕೀಯ ಸೇವೆಗಳ ನಿಯಂತ್ರಣ ತಿದ್ದುಪಡಿ ಕಾಯ್ದೆ ಜಾರಿ ನಂತರ, ರೋಗಿಗಳ ಕುಂದುಕೊರತೆಗಳು ಅಥವ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಜಿಲ್ಲಾ ಮಟ್ಟದ ಸಮಿತಿ ರಚಿಸುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಖಾಸಗಿ ಆಸ್ಪತ್ರೆಗಳ ಪ್ರತಿನಿಧಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರ್ಕಾರದಿಂದ ಸೂಚಿಸಲ್ಪಟ್ಟ ಓರ್ವ ಮಹಿಳಾ ಸದಸ್ಯರಿರುತ್ತಾರೆ. ಯಾವುದೇ ದೂರು ಸಲ್ಲಿಕೆಯ ನಂತರ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವ, ವಿಚಾರಣೆ ನಡೆಸುವ ಮತ್ತು ಆದೇಶ ನೀಡುವ ಅಧಿಕಾರ ಈ ಸಮಿತಿಗಿರುತ್ತದೆ. ರಾಜ್ಯಸರ್ಕಾರದ ಪರವಾಗಿ ಸಚಿವ ರಮೇಶ್ ಕುಮಾರ್ ಅವರು, ಈ ಮಸೂದೆಯನ್ನು ಮಂಡಿಸುತ್ತಿದ್ದಂತೆ, ಖಾಸಗಿ ಆಸ್ಪತ್ರೆಗಳನ್ನು ನಡೆಸುವವರು ಮತ್ತು ಅಲ್ಲಿ ಕೆಲಸ ಮಾಡುವ  ವೈದ್ಯರು ಗರಂ ಆಗಿಬಿಟ್ಟರು. ಆಸ್ಪತ್ರೆಗಳ ಮತ್ತು ವೈದ್ಯರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶ ಕಲ್ಪಿಸುವ ಈ ಮಸೂದೆ ವಿರುದ್ಧ ಒಗ್ಗಟ್ಟಾದ ಖಾಸಗಿ ಆಸ್ಪತ್ರೆಗಳವರು, ಕಳೆದ ವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆಸಿದರು.  ರಾಜ್ಯಸರ್ಕಾರದ ಈ ನಡೆಗೆ, ಆಕ್ರೋಶ ವ್ಯಕ್ತಪಡಿಸಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ, ನಮಗೆ ಮಾನವೀಯತೆ ಇರೋದ್ರಿಂದಲೇ ಈ ವೃತ್ತಿಗೆ ಬಂದಿದ್ದೇವೆ, ನಿಮ್ಮಿಂದ ಮಾನವೀಯತೆ ಪಾಠ ಕಲಿಯಬೇಕಿಲ್ಲ ಎಂದು ಸಚಿವ ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಮಸೂದೆಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿರುವುದು ತುಂಬಾ ಕಠಿಣವಾಗಿದೆ ಎಂದು ಡಾ.ಸುದರ್ಶನ್ ಬಲ್ಲಾಳ್ ಅವರು ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆ ಸರಿಯಾಗಿದ್ರೆ, ಜನರು ಖಾಸಗಿ ಆಸ್ಪತ್ರೆಗೆ ಯಾಕೆ ಯಾತಕ್ಕೆ ಬರುತ್ತಾರೆ.  ಮೊದಲು, ನೀವು ಸರ್ಕಾರಿ ಆಸ್ಪತ್ರೆಯನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಅವರು, ಸರ್ಕಾರವನ್ನು ಚುಚ್ಚಿದ್ದಾರೆ. ಒಂದು ವೇಳೆ, ರಾಜ್ಯಸರ್ಕಾರ ಈ ವಿಧೇಯಕವನ್ನು ಹಿಂಪಡೆಯದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರೂ ಕೂಡ, ಖಾಸಗಿ ಆಸ್ಪತ್ರೆಯವರ ಬೆಂಬಲಕ್ಕೆ ನಿಂತಿರುವುದು ಸೋಜಿಗವೆನ್ನಿಸಿದರೂ ಸತ್ಯ. ರಾಜ್ಯಸರ್ಕಾರ ತರಲು ಉದ್ದೇಶಿಸಿರುವ ಮಸೂದೆಯಲ್ಲಿ, ವೈದ್ಯಕೀಯ ಸೇವೆಗಳಿಗೆ ಶುಲ್ಕನಿಗದಿ ಅಧಿಕಾರವನ್ನೇ ಖಾಸಗಿ ಆಸ್ಪತ್ರೆಗಳಿಂದ ಕಿತ್ತುಕೊಳ್ಳಲಾಗಿದೆ. ಇದರ ಜೊತೆಗೆ, ಚಿಕಿತ್ಸೆ ಫ‌ಲಕಾರಿಯಾಗದೆ ಇದ್ದಲ್ಲಿ, ಅಂಥ ವೈದ್ಯರ ವಿರುದ್ಧ ದೂರು ದಾಖಲಿಸುವ ಅವಕಾಶವೂ ಇದೆ. ಇವೆಲ್ಲಾ ಅಂಶಗಳು ನಮಗೆ ಸಾಕಷ್ಟು ಸಮಸ್ಯೆ ತಂದೊಡ್ಡಲಿವೆ ಅನ್ನುವುದು ಖಾಸಗಿ ಆಸ್ಪತ್ರೆಗಳ ವೈದ್ಯರ ಅಭಿಮತ. ಸಿದ್ದರಾಮಯ್ಯ ಸರ್ಕಾರ, ಈ ಹಿಂದೆ  ಮೂಢನಂಬಿಕೆ ನಿಗ್ರಹ ಕಾಯ್ದೆ ಜಾರಿಗೆ ತರಲು ಹೊರಟಿತ್ತು ಅದಾಗಲಿಲ್ಲ, ಅದ್ದೂರಿ ಮದುವೆಗಳಿಗೆ ತೆರಿಗೆ ಹೇರುವ ಕಾಯ್ದೆ ತರುವ ಪ್ರಯತ್ನವೂ ವಿಫಲವಾಯಿತು.  ಇತ್ತೀಚೆಗೆ ಏಕರೂಪದ ನೀತಿ ಹೆಸರಿನಲ್ಲಿ ಕುಲಪತಿಗಳ ನೇಮಕಾತಿ ಸೇರಿದಂತೆ, ವಿಶ್ವವಿದ್ಯಾಲಯಗಳ ಎಲ್ಲಾ ಅಧಿಕಾರವನ್ನೂ ತಾನೇ ನಿಯಂತ್ರಿಸುವ ಹಾಗೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ಮಂಡಿಸಿದ್ದೂ ಕೂಡ ಶಿಕ್ಷಣ ತಜ್ಞರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ವಿವಾದಾತ್ಮಕವಾಗಿರುವ ಖಾಸಗಿ ವೈದ್ಯಕೀಯ ಸೇವೆಗಳ ನಿಯಂತ್ರಣ ವಿಧೇಯಕದ ಸರದಿ. ರಾಜ್ಯಸರ್ಕಾರದ ಈ ಕೆಲಸವನ್ನು ಕೆಲವರು ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಎಂದು ಬಣ್ಣಿಸಿದ್ದಾರೆ.

ಆದರೆ, ಕೆಲವು ವಿಚಾರಗಳು, ಸರ್ಕಾರ ಏನನ್ನಾದರೂ ಮಾಡಿದರೂ ತಪ್ಪು, ಮಾಡದೆ ಸುಮ್ಮನಿದ್ದರೂ ತಪ್ಪು ಅನ್ನುವ ಹಾಗಿರುತ್ತವೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣದಂಥ ವಿಚಾರಗಳಲ್ಲಿ ಸರ್ಕಾರದ ಹಸ್ತಕ್ಷೇಪ ಏಕೆ? ಎಂದು ಕೆಲವರು ಕೇಳಿದರೆ, ಖಾಸಗಿ ಆಸ್ಪತ್ರೆಗಳವರು ಜನಸಾಮಾನ್ಯರನ್ನು ಸುಲಿಯುತ್ತಿದ್ದಾರೆ, ಇದನ್ನು ನಿಯಂತ್ರಿಸಲು ಏನೂ ಮಾಡದಂಥ ಈ ಸರ್ಕಾರ ಯಾಕಾದರೂ ಇದೆಯೋ ಎಂದು ಅನ್ನುವವರ ಸಂಖ್ಯೆಯೂ ಸಾಕಷ್ಟು ದೊಡ್ಡದಾಗಿಯೇ ಇದೆ.

ಇಡೀ ದೇಶಕ್ಕೆ ಏಕರೂಪದ ತೆರಿಗೆ ಅನ್ವಯ ಮಾಡುವ ಮಹತ್ವದ ಜಿಎಸ್‌ಟಿ ಕಾಯ್ದೆ ವಿಚಾರದಲ್ಲೂ ಹಲವುರೀತಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು, ಆದರೆ,  ಅಂಥ ಒಂದು ತೆರಿಗೆ ವ್ಯವಸ್ಥೆ ಜಾರಿಯಿಂದ ಆಗಬಹುದಾದ ಲಾಭಗಳ ಬಗ್ಗೆ ಗೊತ್ತಾದ ಮೇಲೆ ಎಲ್ಲರೂ ಸುಮ್ಮನಾಗಿದ್ದಾರೆ. ಅದೇ ರೀತಿ ಆಧಾರ್ ಬಗ್ಗೆ ಕೂಗಾಡುತ್ತಿದ್ದ ಬಿಜೆಪಿಯವರು, ಅಧಿಕಾರಕ್ಕೆ ಬಂದ ನಂತರ ಅದನ್ನೇ ಮೂಲಮಂತ್ರವಾಗಿಸಿಕೊಂಡು ಎಲ್ಲದಕ್ಕೂ ಬಳಸುತ್ತಿದ್ದಾರೆ. ಹೀಗಾಗಿ, ಸರ್ಕಾರಗಳು ಎಲ್ಲಾ ಅಭಿಪ್ರಾಯಗಳನ್ನೂ ಪರಿಶೀಲಿಸಿ ನಂತರ ತಮಗೆ ಸರಿ ಅನ್ನಿಸಿದ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ, ಸರ್ಕಾರದ ನಿರ್ಧಾರ ಇಷ್ಟವಾಗದಿದ್ದರೆ, ಅದಕ್ಕೆ ಮುಂದಿನ ಚುನಾವಣೆಯಲ್ಲಿ ಪಾಠಕಲಿಸಬಹುದು, ಇದು ಪ್ರಜಾತಂತ್ರ ವ್ಯವಸ್ಥೆಯ ವಿಶೇಷತೆ.

ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ಶುಲ್ಕಗಳು ಒಂದೇ ಸಮನೆ ಏರುತ್ತಿವೆ. ಅದರಲ್ಲೂ ಸ್ಪೆಷಾಲಿಟಿ ಎಂದು ಕರೆಸಿಕೊಳ್ಳುವ ಮೂತ್ರಪಿಂಡ ಕಸಿ, ಹೃದಯ ಶಸ್ತ್ರ ಚಿಕಿತ್ಸೆ ಇತ್ಯಾದಿಗಳ ವೆಚ್ಚಗಳು ಆಕಾಶಕ್ಕೇರಿವೆ. ಸಾಮಾನ್ಯ ಜನರು ಏನೆಲ್ಲಾ ಪರದಾಡಿದರೂ ಕೂಡ ಲಕ್ಷಗಟ್ಟಲೆ ಹಣವನ್ನು ಹೊಂದಿಸುವುದು ಅಸಾಧ್ಯವೆನ್ನುವಂತಾಗಿದೆ. ಇವತ್ತಿನ ದಿನಗಳಲ್ಲಿ, ವೈದ್ಯಕೀಯ ಕ್ಷೇತ್ರವೂ ಒಂದು ಉದ್ಯಮವಾಗಿದೆಯೇ ಹೊರತು ಸೇವೆಯಾಗಿ ಉಳಿದಿಲ್ಲ. ಎಷ್ಟೋ ಕಡೆ ಎಂಬಿಎ ಪದವೀಧರರನ್ನು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ. ಬರೀ ಬ್ಯುಸಿನೆಸ್, ಬೆಳವಣಿಗೆ ಮತ್ತು ಲಾಭಾಂಶದ ಬಗ್ಗೆ ಮಾತಾಡುವ ಇಂಥ ಮುಖ್ಯಸ್ಥರಲ್ಲಿ ಮಾನವೀಯತೆಯ ಸೆಲೆಯೇ ಇರುವುದಿಲ್ಲ. ಹೀಗಿರುವಾಗ, ಇವರು ಸಾಮಾನ್ಯ ಜನರ ಕಷ್ಟಗಳನ್ನು ಅರ್ಥಮಾಡಿಕೊಳ್ಳುವುದು ದೂರದ ಮಾತು.

ಇಂಥ ಸನ್ನಿವೇಶದಲ್ಲಿ, ರಾಜ್ಯಸರ್ಕಾರ ಜಾರಿಗೆ ತರಲು ಹೊರಟಿರುವ, ಈ ಖಾಸಗಿ ವೈದ್ಯಕೀಯ ಸೇವೆಗಳ ನಿಯಂತ್ರಣ ಮಸೂದೆಯಲ್ಲಿ, ಸಾಮಾನ್ಯ ಜನರಿಗೆ ದೊಡ್ಡ ರೀತಿಯಲ್ಲಿ ಅನುಕೂಲಕರವಾಗಬಲ್ಲ ಅಂಶಗಳಿವೆ. ಆದರೆ, ರಾಜ್ಯದ ಹಲವು ರಾಜಕಾರಣಿಗಳು ಮತ್ತು ಅವರ ಸಂಬಂಧಿಕರು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳ ಮಾಲೀಕರಾಗಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಲಾಬಿಯೂ ಜೋರಾಗಿದ್ದು, ಅವರಿಗೆ ಸರ್ಕಾರವನ್ನೇ ಅಲುಗಾಡಿಸುವ ಶಕ್ತಿ ಇದೆ.  ಈ ನಡುವೆ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು, ಸರ್ಕಾರ ಜಾರಿಗೆ ತರಲು ಹೊರಟಿರುವ ಮಸೂದೆ ಬಗ್ಗೆ, ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆ ಆಗಿದೆ. ಮಸೂದೆ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿ ಬಂದಿವೆ. ಹೀಗಾಗಿ, ಈ ಮಸೂದೆಯನ್ನು ತರಾತುರಿಯಲ್ಲಿ ಜಾರಿ ಮಾಡುವುದು ಬೇಡ, ಎಲ್ಲಾ ಅಂಶಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕದ ಬಗ್ಗೆ ಪರಿಶೀಲಿಸಿ ವರದಿ ನೀಡಲು, ಜಂಟಿ ಸದನ ಸಮಿತಿ ರಚನೆಗೆ ರಾಜ್ಯಸರ್ಕಾರ ಒಪ್ಪಿಗೆ ಸೂಚಿಸಿದೆ. ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆಯೂ ಹೇಳಲಾಗಿದೆ. ಇದರ ಜೊತೆಗೆ, ಸರ್ಕಾರದ ನಿಯಮ ಉಲ್ಲಂಘಿಸಿ ಹೆಚ್ಚಿನ ದರ ವಸೂಲು ಮಾಡುವ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರಿಗೆ,  ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಿದ್ದ ಪ್ರಸ್ತಾವನೆಯನ್ನು ಕರಡು ಮಸೂದೆಯಿಂದ ಕೈ ಬಿಡಲು ನಿರ್ಧರಿಸಲಾಗಿದೆ.

ಜಂಟಿ ಸದನ ಸಮಿತಿಯವರು, ಒಂದೇ ತಿಂಗಳಲ್ಲಿ ವರದಿ ನೀಡಿದರೂ ಕೂಡ, ನವೆಂಬರ್‌ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವರೆಗೆ ಮತ್ತೆ ಈ ವಿಚಾರ ಪ್ರಸ್ತಾಪಕ್ಕೆ ಬರುವ ಸಾಧ್ಯತೆಗಳು ಕಡಿಮೆಯೆಂದೇ ಹೇಳಬೇಕು. ಹೀಗಾಗಿ, ಸದ್ಯಕ್ಕಂತೂ ಖಾಸಗಿ ಆಸ್ಪತ್ರೆಗಳವರು ನಿರಾಳರಾಗಿದ್ದಾರೆ. ಅಂತಿಮವಾಗಿ ರಾಜ್ಯಸರ್ಕಾರ, ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದು ಸುಮ್ಮನಾಗುತ್ತದೋ ಅಥವ ಕೆಲವು ವಿವಾದಾತ್ಮಕ ಅಂಶಗಳನ್ನು ಕೈಬಿಟ್ಟು, ಮಸೂದೆ ಜಾರಿಗೆ ಮುಂದಾಗುತ್ತದೋ ಕಾದು ನೋಡಬೇಕಾಗಿದೆ.


ಟಾಪ್ ಪ್ರತಿಕ್ರಿಯೆಗಳು


Let the government bring the amendments, as follows. 1. Close all private medical establishments. 2. Let all the Doctors work in government hospitals only, like consultants work in polyclinics. 3. Let government fix consultation fee for each patient. 4. Let government fix / give timings to each doctor.
  • Dr K Krishnaswamy Mandya
  • Eye Surgeon