ಸಾಮಾಜಿಕ ಹೋರಾಟಕ್ಕೆ ಪೆಟ್ಟು..?

Kannada News

04-07-2017

ಬೆಂಗಳೂರು: ಕಲಬುರ್ಗಿ ಜಿಲ್ಲೆ ಆಳಂದದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಆಯ್ಕೆ ಮಾಡಿರುವ ನಿವೇಶನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಅಷ್ಟು ಮಾತ್ರವಲ್ಲ, ಅಬ್ರಹಾಂ ಅವರಿಗೆ 25 ಲಕ್ಷ ರೂಪಾಯಿ ದಂಡ ವಿಧಿಸಿರುವ ಸುಪ್ರೀಂಕೋರ್ಟ್, ಈ ಅರ್ಜಿಯ ಹಿಂದೆ ಯಾವುದೇ ರೀತಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಕೋರ್ಟ್ ತೀರ್ಪಿನ ಬಗ್ಗೆ ಸೂಪರ್ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಟಿ.ಜೆ.ಅಬ್ರಹಾಂ, ನನ್ನ ಪರವಾಗಿ ವಾದ ಮಂಡಿಸಿದ ನ್ಯಾಯವಾದಿಗಳು, ಸುಪ್ರೀಂಕೋರ್ಟಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಅದರಿಂದಲೇ ಕೋರ್ಟ್ ಈ ರೀತಿ ತೀರ್ಪು ನೀಡಿದೆ ಎಂದಿದ್ದಾರೆ.

ಆಳಂದ ಶಾಸಕ ಬಿ.ಆರ್‌. ಪಾಟೀಲರು, ತಮ್ಮ ವೈಯಕ್ತಿಕ ಲಾಭಕ್ಕಾಗಿ ಮಿನಿ ವಿಧಾನಸೌಧದ ನಿವೇಶನವನ್ನು ತಮಗೆ ಅನುಕೂಲವಾದಂಥ ಸ್ಥಳದಲ್ಲಿ ಗುರುತಿಸಿದ್ದರು. ಇದನ್ನು ಗಮನಿಸಿಯೇ ನಾನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದೆ. ಆದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ನೆರವಾಗಬೇಕಾದ ಸುಪ್ರೀಂಕೋರ್ಟ್ ಇಂಥ ತೀರ್ಪು ನೀಡಿರುವುದು ದುರದೃಷ್ಟಕರ.  ಕೋರ್ಟ್ ನೀಡಿರುವ ಈ ತೀರ್ಪಿನಿಂದ  ಸಾಮಾಜಿಕ ಹೋರಾಟ, ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡಲು ಜನತೆ ಹಿಂದೇಟು ಹಾಕುವಂತಾಗಿದೆ ಎಂದು ಟಿ.ಜೆ.ಅಬ್ರಹಾಂ ಪ್ರತಿಕ್ರಿಯೆ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ