ಒಂದೇ ದಿನದಲ್ಲಿ 1032 ಡಿಡಿ ಪ್ರಕರಣಗಳು !

Kannada News

03-07-2017

ಬೆಂಗಳೂರು: ಜುಲೈ 1 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅನೇಕ ಬಾರ್ ಹಾಗೂ ಪಬ್‍ ಗಳು ಮುಚ್ಚಲ್ಪಟ್ಟಿದ್ದರೂ ಸಹ ಶನಿವಾರದ ಒಂದೇ ರಾತ್ರಿಯಲ್ಲಿ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬರೋಬ್ಬರಿ 1032 ಪಾನಮತ್ತರಾಗಿ ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಹೆಬ್ಬಾಳ, ಮತ್ತಿಕೆರೆ, ಜಾಲಹಳ್ಳಿ, ಜೆಪಿ ಪಾರ್ಕ್, ಸಂಜಯನಗರ, ಯಶವಂತಪುರ, ಹೆಚ್‍ಎಂಟಿ ವಾರ್ಡ್, ಮಲ್ಲೇಶ್ವರಂ, ಎಲೆಕ್ಟ್ರಾನಿಕ್ ಸಿಟಿ,ಮಡಿವಾಳ,ಕೆಆರ್‍ಪುರ ಮಹದೇವಪುರ ಸೇರಿದಂತೆ ನಗರದ ವಿವಿದೆಢೆ 1032 ಕೇಸ್‍ ಗಳು ದಾಖಲಾಗಿವೆ. ರಾಷ್ಟ್ರಿಯ ಹೆದ್ದಾರಿಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ್ದರೂ ಕೂಡ ಜನರು ಬೇರೊಂದು ಮಾರ್ಗ ಹುಡುಕಿಕೊಂಡಿರುವ ಕಾರಣ ಪಾನಮತ್ತ ಪ್ರಕರಣಗಳಲ್ಲಿ ಏರಿಕೆಯಾಗಿದೆ. ನಗರದ ವಿವಿಧ ಚೆಕ್‍ ಪಾಯಿಂಟ್‍ ಗಳಲ್ಲಿ ರಾತ್ರಿ 8 ಗಂಟೆಯಿಂದ 2 ಗಂಟೆವರೆಗೆ ಪರಿಶೀಲನೆ ನಡೆಸಲಾಗಿದೆ. ಕುಡಿದು ವಾಹನ ಚಲಾಯಿಸುತ್ತಿದ್ದವರ ಲೈಸೆನ್ಸ್ ಅಮಾನತುಗೊಳಿಸಿ ದಂಡ ಪಾವತಿಸಲು ನ್ಯಾಯಲಯಕ್ಕೆ ಕಳಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ (ಸಂಚಾರ) ಆಯುಕ್ತರಾದ ಆರ್ ಹಿತೇಂದ್ರ ಹೇಳಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವುದರಿಂದ ಆಗಬಹುದಾದ ಅಪಾಯಗಳ ಬಗ್ಗೆ ಜನರಿಗೆ ಸಾಕಷ್ಟು ಮನವರಿಕೆ ಮಾಡಿಕೊಟ್ಟಿದ್ದರೂ, ಅಭಿಯಾನಗಳನ್ನ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದರೂ ಯಾವುದೇ ಪರಿಣಾಮವಾಗಿಲ್ಲ. ಚೆಕ್‍ ಪಾಯಿಂಟ್‍ ಗಳಲ್ಲಿ ಹೆಚ್ಚಿನ ಅಧಿಕಾರಿಗಳನ್ನ ನಿಯೋಜಿಸಿ ಮತ್ತಷ್ಟು ಕೇಸ್ ದಾಖಲಿಸಲಿದ್ದೇವೆ. ಪ್ರಸ್ತಾವನೆಯಾಗಿರುವ ತಿದ್ದುಪಡಿಗಳು ಕಾನೂನಾಗಿ ಜಾರಿಯಾದ ನಂತರ ಶಿಕ್ಷೆ ಮತ್ತಷ್ಟು ಕಠಿಣವಾಗಿರುತ್ತದೆ. ಆಗ ಕಾನೂನಿನ ಭಯದಿಂದಾದರೂ, ಜನ ಕುಡಿಯೋದನ್ನ ಕಡಿಮೆ ಮಾಡಬಹುದು ಎಂದಿದ್ದಾರೆ. 2016ರ ಮೋಟಾರ್ ವಾಹನ ತುದ್ದುಪಡಿ ಕಾಯ್ದೆಯಡಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಕಠಿಣ ಶಿಕ್ಷೆಗೆ ಅವಕಾಶವಿದೆ. ಡ್ರಂಕ್ ಅಂಡ್ ಡ್ರೈವಿಂಗ್‍ ನಲ್ಲಿ ಸಿಕ್ಕಿ ಬಿದ್ದವರಿಗೆ 2 ಸಾವಿರ ದಿಂದ 10 ಸಾವಿರದ ವರೆಗೂ ದಂಡ ಹಾಕಲಾಗುತ್ತದೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ