ಅಂತರಾಷ್ಟ್ರೀಯ ಭಯೋತ್ಪಾದಕ ಬಿಚ್ಚಿಟ್ಟ ಸತ್ಯ !

Kannada News

03-07-2017

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರೆಯುತ್ತಿರುವಂತೆಯೇ, ಭಾರತದ ಯಾವುದೇ ಭಾಗದ ಮೇಲೆ ಯಾವುದೇ ಕ್ಷಣದಲ್ಲಿ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಉಗ್ರ ಸಯ್ಯದ್ ಸಲಾಹುದ್ದೀನ್ ಹೇಳಿದ್ದಾನೆ. ಇತ್ತೀಚೆಗೆ ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಹೆಸರಿಸಲಾಗಿರುವ ನಿಷೇಧಿತ ಹಿಜ್ಬುಲ್ ಮುಜಾಹಿದೀನ್(ಎಚ್‍ಎಂ) ಉಗ್ರಗಾಮಿ ಸಂಘಟನೆ ನಾಯಕ ಸೈಯದ್ ಸಲಾಹುದ್ದೀನ್ ಸಂದರ್ಶನವೊಂದರಲ್ಲಿ ಈ ಅಂಶವನ್ನು ಬಹಿರಂಗಪಡಿಸಿದ್ದಾನೆ. ಕಾಶ್ಮೀರ ಕಣಿವೆಯನ್ನು ಭಾರತೀಯ ಸೇನಾಪಡೆಗಳ ಸ್ಮಶಾನವನ್ನಾಗಿ ಮಾಡುತ್ತೇನೆಂದು ಇತ್ತೀಚೆಗಷ್ಟೇ ಬೆದರಿಕೆ ಒಡ್ಡಿದ ಸಲಾಹುದ್ದೀನ್ ಈಗ ಭಾರತದ ಮೇಲೆ ದಾಳಿ ನಡೆಸುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಈಗಾಗಲೇ ಹಿಜ್ಬುಲ್ ಹೋರಾಟಗಾರರು ವಿವಿಧೆಡೆ ದಾಳಿಗಳನ್ನು ನಡೆಸಿರುವುದಾಗಿಯೂ ಕೊಚ್ಚಿಕೊಂಡಿದ್ದಾನೆ. ಇದಕ್ಕಾಗಿ ಪಾಕಿಸ್ತಾನದಿಂದ ನಮಗೆ ಸಾಕಷ್ಟು ಹಣಕಾಸಿನ ನೆರವು ದೊರೆಯುತ್ತದೆ. ಇದರಲ್ಲಿ ನಾವು ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತೇವೆ ಎಂಬುದನ್ನೂ ಬಯಲು ಮಾಡಿದ್ದಾನೆ. ಸೇನಾ ನೆಲೆಗಳು ಮತ್ತು ಸೇನಾಪಡೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ ಭಾರತದ ಯಾವುದೇ ಭಾಗದಲ್ಲಿ ಯಾವುದೇ ಸಮಯದಲ್ಲಿ ನಾವು ಹಠಾತ್ ದಾಳಿ ನಡೆಸಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾನೆ. ಪಾಕಿಸ್ತಾನದ ಟೆಲಿವಿಷನ್ ಚಾನೆಲ್‍ವೊಂದಕ್ಕೆ ಸಂದರ್ಶನ ನೀಡಿರುವ ಉಗ್ರ ತನ್ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿರುವುದು ಅಕ್ರಮ. ನಾನು ಭಯೋತ್ಪಾದಕ ಅಲ್ಲ. ಕಾಶ್ಮೀರದ ಜನತೆಯ ಹಿತರಕ್ಷಣೆಗಾಗಿ ಹೋರಾಡುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ