ಯೂ-ಟ್ಯೂಬ್ ನೋಡಿ ಬೈಕ್ ಕಳ್ಳತನ !  

Kannada News

01-07-2017 550

ಬೆಂಗಳೂರು: ಗೂಗಲ್, ಯೂ-ಟ್ಯೂಬ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಕಳವು ಮಾಡುವ ದೃಶ್ಯಗಳನ್ನು ನೋಡಿ ಗ್ಯಾಂಗ್ ಕಟ್ಟಿಕೊಂಡು ದುಬಾರಿ ಬೆಲೆಯ ವಿಲಾಸಿ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಎಂಜಿನಿಯರ್ ಸೇರಿ ಮೂವರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಗ್ಯಾಂಗ್ ಕಳವು ಮಾಡಿದ್ದ 30 ಲಕ್ಷ ಬೆಲೆಯ ಡಾಮಿನೋರ್ ಬುಲೆಟ್, ಬಜಾಜ್ ಆರ್‍ಎಕ್ಸ್ ಸೇರಿ 28 ವಿಲಾಸಿ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗ್ಯಾಂಗ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತನೋರ್ವ ಇದ್ದು, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಣ್ಣಾತಂಗಲ್‍ನ  ಪ್ರಭು (21), ದೊಡ್ಡನಾಗಮಂಗಲದ ಅರುಣ್ಸಾಯಿ ಅಲಿಯಾಸ್ ಸಾಯಿರಾಂ (21), ಕಾರ್ತಿಕ್ (18) ಬಂಧಿತ ಆರೋಪಿಗಳಾಗಿದ್ದಾರೆ. ಇವರ ಜೊತೆ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಡಿಪ್ಲೋಮೋ ಎಂಜಿನಿಯರಿಂಗ್ ಪದವೀಧರನಾದ ಪ್ರಭು, ವ್ಯಾಸಂಗದ ವೇಳೆ ಸ್ನೇಹಿತರಾದ ಬಿಕಾಂ ಪದವಿ ಓದುತ್ತಿದ್ದ ಕಾರ್ತಿಕ್, ಅರುಣ್ಸಾಯಿ ಹಾಗೂ ಪಿಯುಸಿ ವಿದ್ಯಾರ್ಥಿ ಜೊತೆ ಗ್ಯಾಂಗ್ ಕಟ್ಟಿಕೊಂಡು ಗೂಗಲ್, ಯೂ-ಟ್ಯೂಬ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಕಳವು ಮಾಡುವ ದೃಶ್ಯಾವಳಿಗಳನ್ನು ನೋಡಿ ಶೋಕಿ ಹಾಗೂ ಬೈಕ್ ರೇಸಿಂಗ್‍ಗಾಗಿ ಬೈಕ್‍ಗಳನ್ನು ಕಳವು ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ, ಹೆಚ್.ಎಸ್.ಆರ್ ಲೇಔಟ್, ಬಿಟಿಎಂ ಲೇಔಟ್ ಇನ್ನಿತರ ನಗರದ ಹೊರ ವಲಯದ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಆರೋಪಿಗಳು ಮನೆಗಳ ಮುಂದೆ ನಿಲ್ಲಿಸಿದ್ದ. ವಿಲಾಸಿ ಬೈಕ್ ಗಳನ್ನು ಗಮನಿಸಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಮುಂಜಾನೆ 3 ರಿಂದ 6 ಗಂಟೆಯೊಳಗೆ ಬೈಕ್ ಗಳ ಹ್ಯಾಂಡಲ್ ಲಾಕ್ ಮುರಿದು ಕಟರ್ ನಲ್ಲಿ ಇಗ್ನೇಷನ್ ವೈರ್ ಕಟ್ ಮಾಡಿ, ಡೈರೆಕ್ಟ್ ಮಾಡಿಕೊಂಡು ಕಳೆದ 6 ತಿಂಗಳಿನಿಂದ ವಾರಕ್ಕೆ ಒಂದು ಬೈಕ್ ನಂತೆ ಕಳವು ಮಾಡಿದ್ದರು. ಕಳವು ಮಾಡಿದ್ದ ಬೈಕ್ ಗಳನ್ನು ಆರೋಪಿ ಪ್ರಭು ತಮಿಳುನಾಡಿನ ವೇಲೂರು, ಆಂಬೂರು ಇನ್ನಿತರ ಕಡೆಗಳಲ್ಲಿನ ತಮ್ಮ ಪರಿಚಯಸ್ಥರಿಗೂ ಹಾಗೂ ಸಾರ್ವಜನಿಕರಿಗೆ ಫೈನಾನ್ಸ್ ಅವರು ಸೀಜ್ ಮಾಡಿರುವ ಬೈಕ್ ಗಳೆಂದು ತಿಳಿಸಿ ನಂತರ ದಾಖಲಾತಿಗಳನ್ನು ತಂದುಕೊಡುವುದಾಗಿ ನಂಬಿಸಿ 10 ಸಾವಿರವರೆಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಮಾರಾಟದಿಂದ ಬಂದ ಹಣದಲ್ಲಿ ಪಾಂಡಿಚೆರಿ, ಮೈಸೂರು, ಕೇರಳ ಇನ್ನಿತರ ಪ್ರವಾಸಿ ತಾಣಗಳಿಗೆ ಹೋಗಿ ಮೋಜು-ಮಸ್ತಿ ಮಾಡಿ ಹಣ ಖಾಲಿಯಾದ ನಂತರ ಮತ್ತೆ ಬೈಕ್ ಕಳವು ಮಾಡುತ್ತಿದ್ದರು. ಇವರೆಲ್ಲರ ತಂದೆ-ತಾಯಿಗಳು ಕೂಲಿ ಕೆಲಸ ಮಾಡಿಕೊಂಡಿದ್ದು, ಐಷಾರಾಮಿ ಜೀವನಕ್ಕಾಗಿ ಆರೋಪಿಗಳು ಈ ಕೃತ್ಯಕ್ಕೆ ಇಳಿದಿದ್ದರು ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಸುತ್ತಮುತ್ತಲಿನ ಕಡೆಗಳಲ್ಲಿ ದುಬಾರಿ ಬೈಕ್ ಕಳವು ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದು, ಅವುಗಳ ಪತ್ತೆಗಾಗಿ ಎಪಿಸಿ ಸೂರ್ಯನಾರಾಯಣರಾವ್, ಇನ್ಸ್ ಪೆಕ್ಟರ್ ಕಿಶೋರ್ ಕುಮಾರ್ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಪರಪ್ಪನ ಅಗ್ರಹಾರದ ಬಳಿ ವಿಲಾಸಿ ಬೈಕ್ ಒಂದರ ಹಿಂಬದಿ ಹಾಗೂ ಮುಂಬದಿಯ ನಂಬರ್ ಪ್ಲೇಟ್ ಇಲ್ಲದಿರುವುದನ್ನು ಗಮನಿಸಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬೈಕ್ ಕಳವು ಗ್ಯಾಂಗ್ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ