ಮೊದಲ ದಿನವೇ ಬೆಲೆ ಏರಿಕೆ ಬಿಸಿ !

Kannada News

01-07-2017

ನವದೆಹಲಿ: ಭಾರೀ ಅಬ್ಬರದ ಪ್ರಚಾರದ ನಡುವೆ ನಿನ್ನೆ ಮಧ್ಯರಾತ್ರಿಯಿಂದ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ಧತಿಗೆ ಚಾಲನೆ ದೊರೆತಿದೆ. ದೇಶಾದ್ಯಂತ ಜಾರಿಗೆ ಬಂದಿರುವ ಏಕರೂಪದ ತೆರಿಗೆ ವ್ಯವಸ್ಥೆಯಿಂದ ಬಹುತೇಕ ಎಲ್ಲ ವಸ್ತುಗಳ ಬೆಲೆ ಇಳಿಯಲಿದೆ ಎಂದು ಕೇಂದ್ರ ಸರ್ಕಾರ ಬೊಬ್ಬಿರಿದಿತ್ತು. ಆದರೆ ಜಿಎಸ್‍ಟಿಯಲ್ಲಿ ದುಬಾರಿಯಾಗಿರುವ ಸರಕುಗಳು ಮತ್ತು ಸೇವೆಗಳ ಪಟ್ಟಿ ದೊಡ್ಡದಾಗಿದ್ದು, ಮೊದಲ ದಿನವೇ ಬೆಲೆ ಏರಿಕೆಯ ಬಿಸಿಯೊಂದಿಗೆ ದೇಶವಾಸಿಗಳು ಪರಿತಪಿಸುವಂತಾಗಿದೆ. ತುಟ್ಟಿಯಾಗಿರುವ ವಸ್ತುಗಳ ಪಟ್ಟಿ ಹೀಗಿದೆ ಮೊಬೈಲ್ ಫೋನ್ ಮೇಲಿನ ತೆರಿಗೆ ಶೇ.6 ರಿಂದ 18ಕ್ಕೇರಿದೆ. ತೀರಾ ಸಾಮಾನ್ಯ ಜನರ ಅಗತ್ಯ ಸರಕುಗಳಲ್ಲಿ ಒಂದಾದ ಫೋನ್ ಮೇಲಿನ ತೆರಿಗೆ ಮೂರುಪಟ್ಟು ಹೆಚ್ಚಾಗಿದೆ. ಪ್ರತಿಯೊಬ್ಬರ ಮನೆಯ ಕಣ್ಮಣಿ ಎನಿಸಿರುವ ಟೆಲಿವಿಷನ್ ಮೇಲಿನ ತೆರಿಗೆಯೂ ಏರಿಕೆಯಾಗಿದೆ. ಟಿವಿ ಮತ್ತು ಹವಾನಿಯಂತ್ರಕಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ ಶೇ.26ರಷ್ಟು ತೆರಿಗೆ ಜಿಎಸ್‍ಟಿ ಜಾರಿ ಪರಿಣಾಮ ಶೇ.28ಕ್ಕೇರಿದೆ. ಇನ್ನೂ ಕಂಪ್ಯೂಟರ್ ಇಲ್ಲದ ಇಂದಿನ ವೇಗದ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ. ಇದು ಎಲ್ಲರ ಅಗತ್ಯ ವಸ್ತು. ಈ ಹಿಂದೆ ಕಂಪ್ಯೂಟರ್ ಮತ್ತು ಲ್ಯಾಪ್‍ಟಾಪ್‍ಗಳಿಗೆ ಶೇ.14 ರಿಂದ 15ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಈಗ ಅದರ ತೆರಿಗೆ ಶೇ. 3ರಷ್ಟು ಹೆಚ್ಚಾಗಿದೆ. ಜಿಎಸ್‍ಟಿ ಜಾರಿ ಬೆನ್ನಲ್ಲೇ ಅನೇಕ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಶೇ.28ರಷ್ಟು ಏರಿದ್ದು, ಜನರು ಆರಂಭದಲ್ಲೇ ಕಂಗಲಾಗುವಂತಾಗಿದೆ. ಸಿಂಗಲ್‍ಲೆನ್ಸ್ ಕ್ಯಾಮೆರಾ ಮೇಲೆ ಪ್ರಸ್ತುತ ಶೇಕಡ 24ರಷ್ಟು ತೆರಿಗೆ ಇತ್ತು. ಹೊಸ ವ್ಯವಸ್ಥೆಯಲ್ಲಿ ಅದು ಶೇ.28ಕ್ಕೇರಿದೆ. ಶೇ.22ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಚರ್ಮದ ಬ್ಯಾಗ್ ಮತ್ತು ಉತ್ಪನ್ನಗಳ ಮೇಲಿನ ಸುಂಕ ಈಗ ಶೇ.6ರಷ್ಟು ಏರಿದೆ. ವನಿತೆಯರ ಮೆಚ್ಚಿನ ಸಂಗಾತಿಯಾದ ಸೌಂದರ್ಯವರ್ಧಕಗಳು ಮತ್ತು ಪ್ರಸಾದನಗಳ ತೆರಿಗೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. ಅದು ಶೇ.2ರಷ್ಟು ಹೆಚ್ಚಳವಾಗಿ ಪ್ರತಿಶತ 28ಕ್ಕೆ ವೃದ್ದಿಯಾಗಿದೆ. ಒಟ್ಟಾರೆ ದೇಶದ ಹಿತ ದೃಷ್ಟಿಯಿಂದ ಜಾರಿಗೆ ತಂದ ಜಿ.ಎಸ್.ಟಿ ಗೆ ಮೊದಲ ದಿನವೇ ಸಾರ್ವಜನಿಕರು ಪರದಾಡುವಂತಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ