ಸುದ್ದಿವಾಹಿನಿಯ ಪ್ರಶ್ನೆಯೇ ಸರ್ಜಿಕಲ್ ದಾಳಿಗೆ ಪ್ರೇರಣೆ !

Kannada News

01-07-2017

ಪಣಜಿ: ಪಿಒಕೆಯಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಸ್ ಗೆ ಪ್ರೇರಣೆ ನೀಡಿದ್ದು ಸುದ್ದಿವಾಹಿನಿಯೊಂದರ ಆ್ಯಂಕರ್ ಒಬ್ಬರು ಕೇಳಿದ್ದ ಪ್ರಶ್ನೆ ಎಂದು ಮಾಜಿ ರಕ್ಷಣಾ ಸಚಿವ, ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಅಲ್ಲದೆ, ನಿರ್ದಿಷ್ಟ ದಾಳಿಗೆ 15 ತಿಂಗಳು ಮೊದಲೇ ಯೋಜನೆ ರೂ‍ಪಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ. ‘ಮಯನ್ಮಾರ್ ಗಡಿಯಲ್ಲಿ 2015ರಲ್ಲಿ ನಿರ್ದಿಷ್ಟ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಕೇಂದ್ರ ಸಚಿವರಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡುತ್ತಿದ್ದರಂತೆ. ಆಗ ರಾಥೋಡ್‌ ಅವರನ್ನು ಪ್ರಶ್ನಿಸಿದ್ದ ಆ್ಯಂಕರ್, ಈಶಾನ್ಯ ಗಡಿಯಲ್ಲಿ ತೋರಿದ ಇದೇ ಧೈರ್ಯವನ್ನು ನೀವು ಪಶ್ಚಿಮದ ಗಡಿಯಲ್ಲೂ ಪ್ರದರ್ಶಿಸಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದರಂತೆ. ಸಮಯ ಬಂದಾಗ ಇದಕ್ಕೆ ಉತ್ತರ ನೀಡಬೇಕು ಎಂದು ಆಗಲೇ ನಿರ್ಧರಿಸಿದ್ದೆ. 2016ರ ಸೆಪ್ಟೆಂಬರ್ 29ರಂದು ಪಿಒಕೆಯಲ್ಲಿ ನಡೆಸಿದ ನಿರ್ದಿಷ್ಟ ದಾಳಿಗೆ ಆಗಲೇ ಪ್ರೇರಣೆ ದೊರೆತಿತ್ತು’ ಎಂದು ಪರಿಕ್ಕರ್ ಹೇಳಿದ್ದಾರೆ. 2015ರ ಜೂನ್ 4ರಂದು ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 18 ಯೋಧರು ಹತರಾಗಿದ್ದರು. ಆಗ ಭಾರತೀಯ ಸೇನೆಯು ಮಯನ್ಮಾರ್ ಗಡಿಯಲ್ಲಿ ನಿರ್ದಿಷ್ಟ ದಾಳಿ ನಡೆಸಿ 70–80 ಉಗ್ರರನ್ನು ಹತ್ಯೆ ಮಾಡಿತ್ತು ಎಂದಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ