ಶಾಸನ ಸಭೆಯ ವಿರುದ್ಧ ಪತ್ರಕರ್ತರ ಪ್ರತಿಭಟನೆ !

Kannada News

30-06-2017

ಬೆಂಗಳೂರು: ಪತ್ರಕರ್ತರಿಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಶಾಸನಸಭೆಯ ತೀರ್ಮಾನದ ಕುರಿತು ಕಳವಳ ವ್ಯಕ್ತಪಡಿಸಿರುವ ರಾಜ್ಯದ ವಿವಿಧ ಮಾಧ್ಯಮಗಳ ಸಂಘಟನೆಗಳು ತಕ್ಷಣವೇ ಈ ತೀರ್ಮಾನವನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಶನಿವಾರ ಪತ್ರಿಕಾ ದಿನಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟಿಸಲಿದ್ದು, ತಕ್ಷಣವೇ ಸಮಸ್ಯೆಯನ್ನು ಪರಿಹರಿಸುವಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಕಂದಾಯ ಭವನದಲ್ಲಿರುವ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಪ್ರೆಸ್ ಕ್ಲಬ್, ಬೆಂಗಳೂರು ವರದಿಗಾರರ ಕೂಟ, ಟಿವಿ ಜರ್ನಲಿಸ್ಟ್ ಅಸೋಸಿಯೇಷನ್, ಹಿರಿಯಪತ್ರಕರ್ತರ ವೇದಿಕೆ ಸೇರಿದಂತೆ ಹಲ ಸಂಘಟನೆಗಳು ಪತ್ರಕರ್ತರಿಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಬೆಳವಣಿಗೆಯ ಕುರಿತು ಆತಂಕ ವ್ಯಕ್ತಪಡಿಸಿದವು. ಹಕ್ಕುಚ್ಯುತಿ ಸಮಿತಿಯ ಶಿಫಾರಸಿನ ಮೇಲೆ ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ, ಮತ್ತು ಹತ್ತು ಸಾವಿರ ದಂಡ ವಿಧಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇದು ಮೊದಲ ಬಾರಿ ನಡೆದ ಘಟನೆ. ಇದು ಜಾರಿಯಾದರೆ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿರುವ ವಿವಿಧ ಹಂತದ ಸಾಂವಿಧಾನಿಕ ಸಂಸ್ಥೆಗಳು ಇಂತಹದೇ ಅಧಿಕಾರವತ್ತು ಪ್ರದತ್ತಗೊಳಿಸಿಕೊಂಡು ರಾಜ್ಯದೆಲ್ಲೆಡೆ ಪತ್ರಕರ್ತರನ್ನು ಬಂಧಿಸುವ ಕ್ರಮಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಹೀಗಾಗಿ ಇದು ಇಬ್ಬರು ಪತ್ರಕರ್ತರ ಪ್ರಶ್ನೆಯಲ್ಲ, ಬದಲಿಗೆ ಇಡೀ ರಾಜ್ಯದ ಪತ್ರಕರ್ತರ ಹಿತದ ಪ್ರಶ್ನೆ, ಆದ್ದರಿಂದ ಇದು ಕಳವಳ ಮೂಡಿಸಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಶಾಸಕಾಂಗ ಹಾಗೂ ಮಾಧ್ಯಮರಂಗಗಳ ನಡುವೆ ಮುಂಚಿನಿಂದಲೂ ಸುಮಧುರ ಸಂಬಂಧವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಬಂಧಕ್ಕೆ ಧಕ್ಕೆಯಾಗುವಂತಹ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಕೆಲ ತಿಂಗಳ ಹಿಂದೆ ವಿಧಾನಸಭೆಯಲ್ಲಿ ಮಾಧ್ಯಮಗಳ ವಿರುದ್ಧ ಕೆಲ ಶಾಸಕರು ಕೆಂಡಕಾರಿದ್ದರು. ಮತ್ತು ಅದರ ಆಧಾರದ ಮೇಲೆ ಮಾಧ್ಯಮಗಳನ್ನು ನಿಯಂತ್ರಿಸಲು ಸದನ ಸಮಿತಿಯನ್ನು ರಚಿಸಲಾಯಿತು. ಈ ಸದನ ಸಮಿತಿ ವರದಿ ನೀಡುವ ಮುನ್ನವೇ ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸುವ ತೀರ್ಮಾನ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ ಸದನ ಸಮಿತಿ ಯಾವ ರೀತಿಯ ವರದಿ ನೀಡಬಹುದು ಎಂಬುದಕ್ಕೆ ಇದು ಸಾಂಕೇತಿಕವಾಗಿದೆ.ಆ ಮೂಲಕ ಪತ್ರಕರ್ತರನ್ನು ಆತಂಕಕ್ಕೆ ತಳ್ಳಿದೆ. ಈ ಮಧ್ಯೆ ಪತ್ರಕರ್ತರಿಗೆ ಯಾವ ವಿಧಿಯನ್ವಯ ಶಿಕ್ಷೆ ನೀಡಲಾಗಿದೆ?ಶಾಸಕಾಂಗವೇ ಶಿಕ್ಷೆ ನೀಡುವುದಾದರೆ ನ್ಯಾಯಾಂಗದ ವಿಷಯದಲ್ಲಿ ಹಸ್ತಕ್ಷೇಪ ಮಾಡಿದಂತಾಗುವುದಿಲ್ಲವೇ? ಹೀಗಾಗಿ ತಕ್ಷಣವೇ ಈ ತೀರ್ಮಾನವನ್ನು ಕೈ ಬಿಡಬೇಕು. ಇದಕ್ಕಾಗಿ ತುರ್ತು  ಶಾಸನಸಭೆಯನ್ನು ಕರೆಯಬೇಕು ಎಂದು ಸಭೆ ಆಗ್ರಹಿಸಿತು. ವಿಧಾನಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳುವ ಮುನ್ನ ಮುಖ್ಯಮಂತ್ರಿಗಳು ಇರಲಿಲ್ಲ. ಪ್ರತಿಪಕ್ಷಗಳ ನಾಯಕರಾದ ಜಗದೀಶ್ ಶೆಟ್ಟರ್, ಹೆಚ್.ಡಿ.ಕುಮಾರಸ್ವಾಮಿ ಅವರಿರಲಿಲ್ಲ. ಹೀಗಾಗಿ ಇಂತಹದೊಂದು ಅಪರೂಪದ ನಿರ್ಣಯ ಚರ್ಚೆಯೇ ಆಗದೆ ಕ್ಷಣ ಮಾತ್ರದಲ್ಲಿ ಮುಗಿದು ಹೋಯಿತು. ಇದು ದುರದೃಷ್ಟಕರ ಬೆಳವಣಿಗೆ. ಶಾಸನಸಭೆ ರಾಜ್ಯದ ಆರೂವರೆ ಕೋಟಿ ಜನರ ಪ್ರತಿಬಿಂಬ. ನಾವು ಅದನ್ನು ಗೌರವಿಸುತ್ತೇವೆ. ಅದು ನಮ್ಮ ಆತಂಕವನ್ನು ನಿವಾರಿಸಬೇಕು ಎಂದು ಸಭೆ ಮನವಿ ಮಾಡಿಕೊಂಡಿತು. ಇದೇ ರೀತಿ ಮುಂದಿನ ದಿನಗಳಲ್ಲಿ ಪತ್ರಕರ್ತರು ಎದುರಿಸುವ ಆತಂಕವನ್ನು ನಿವಾರಿಸುವ ಸಲುವಾಗಿ ವಿವಿಧ ಸಂಘಟನೆಗಳ ಪ್ರಮುಖರಿರುವ ಸಂಚಾಲನ ಸಮಿತಿಯನ್ನು ರಚಿಸಲು ಸಭೆ ತೀರ್ಮಾನ ಮಾಡಿತು. ಸಭೆಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು,ಉಪಾಧ್ಯಕ್ಷ ಶಿವಾನಂದ ತಗಡೂರ್,ಕಾರ್ಯದರ್ಶಿ ವೆಂಕಟೇಶ್,ಬೆಂಗಳೂರು ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ,ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ ಶೆಣೈ, ಟಿವಿ ಜರ್ನಲಿಸ್ಟ್ ಅಸೋಸಿಯೇಷನ್ ನ ರವೀಶ್ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ