ಅಂಗಡಿಯ ಗೋಡೆ ಕೊರೆದು ಚಿನ್ನಾಭರಣ ಲೂಟಿ !

Kannada News

30-06-2017

ಬೆಂಗಳೂರು: ಬೊಮ್ಮಸಂದ್ರದ ಬೇಗೂರು ಮುಖ್ಯರಸ್ತೆಯ ಮನೆಯೊಂದಕ್ಕೆ ಬಾಡಿಗೆಗೆ ಕೆಲದಿನಗಳ ಹಿಂದಷ್ಟೇ ಬಂದ ದುಷ್ಕರ್ಮಿಗಳು ಗುರುವಾರ ರಾತ್ರಿ ಮುಂದಿನ ಚಿನ್ನಾಭರಣ ಅಂಗಡಿಯ ಗೋಡೆ ಕೊರೆದು 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೇಗೂರು ಮುಖ್ಯರಸ್ತೆಯ ಪವನ್ ಜ್ಯುವೆಲರ್ಸ್ ಅಂಗಡಿಗೆ ಅಂಟಿಕೊಂಡಿದ್ದ ಮನೆಯಿಂದ ಗೋಡೆ ಕೊರೆದು ಮಧ್ಯರಾತ್ರಿ ನುಗ್ಗಿರುವ ದುಷ್ಕರ್ಮಿಗಳು, 300 ಗ್ರಾಂ ಚಿನ್ನಾಬರಣ, 15 ಕೆಜಿ ಬೆಳ್ಳಿ, ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪವನ್ ಜ್ಯುವೆಲರ್ಸ್ ಅಂಗಡಿಯ ಗೋಡೆಗೆ ಅಂಟಿಕೊಂಡಿದ್ದ ಮನೆಯನ್ನು 15 ದಿನಗಳ ಹಿಂದಷ್ಟೆ ಬಾಡಿಗೆ ನೀಡಲಾಗಿತ್ತು. ಮನೆಯಿಂದ ಅಂಗಡಿಗೆ ಗೋಡೆ ಅಂಟಿಕೊಂಡಿರುವುದನ್ನು ಬಾಡಿಗೆಗೆ ಬಂದಿದ್ದ ದುಷ್ಕರ್ಮಿಗಳು ಗಮನಿಸಿ ಹೊಂಚು ಹಾಕಿ ಮಧ್ಯರಾತ್ರಿ ಗೋಡೆ ಕೊರೆದು ಚಿನ್ನಾಭರಣಗಳನ್ನು ಕಳವು ಮಾಡಿ ಮನೆಯಲ್ಲಿದ್ದ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಅಂಗಡಿ ಬಾಗಿಲು ತೆಗೆದಾಗ ಗೋಡೆ ಕೊರೆದು ಕಳವು ಮಾಡಿರುವುದು ಪತ್ತೆಯಾಗಿದೆ. ಬಾಡಿಗೆಯವರ ಪೂರ್ವಪರ ವಿಚಾರಿಸದೆ ಮಾಲೀಕ ಬಾಡಿಗೆ ನೀಡಿರುವುದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಡಾ. ಬೋರಲಿಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ, ಬೆರಳಚ್ಚು ದಳ ಪರಿಶೀಲನೆ ನಡೆಸಿದೆ. ಈ ಸಂಬಂದ ಚಿನ್ನದಂಗಡಿಯ ಮಾಲೀಕ ದೇವಾರಾಂ ಅವರು ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿರುವ ಬೊಮ್ಮನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ