ರಾಜ್ಯದ ಬಗ್ಗೆ ಅಸಮಾಧಾನ ತೋರಿದ ಸಚಿವಾಲಯ !

Kannada News

29-06-2017

 

ಬೆಂಗಳೂರು: ಬಹು ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ನೆರವಿನ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪ‌ಡಿಸಿದ್ದಾರೆ. ಒಟ್ಟಾರೆ 1357.27 ದಶಲಕ್ಷ ಅಮೇರಿಕ ಡಾಲರ್ ನೆರವನ್ನು ಪಡೆದಿದ್ದು, ಈ ಪೈಕಿ ಇನ್ನೂ 670.01 ದಶಲಕ್ಷ ಅಮೆರಿಕ ಡಾಲರ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ಶಕ್ತಿಕಾಂತ್ ದಾಸ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. 2017ರ ಫೆಬ್ರವರಿ 14ರವರೆಗೂ ಬಿಡುಗಡೆ ಮಾಡಿರುವ ಹಣದ ಪ್ರಮಾಣ ಶೇ. 50.57ರಷ್ಟು ಮಾತ್ರ ಆಗಿದೆ. 2016-17ರ ಸಾಲಿನಲ್ಲಿ 2017ರ ಫೆಬ್ರವರಿ 14ರ ವರೆಗೂ ಕೇವಲ 159.84 ದಶಲಕ್ಷ ಅಮೆರಿಕ ಡಾಲರ್ ಬಿಡುಗಡೆ ಮಾಡ‌ಲಾಗಿದ್ದು, ಇದು ಒಟ್ಟಾರೆ ಸಾಲ ಪ್ರಮಾಣದ ಶೇ. 11.78ರಷ್ಟಾಗಿದೆ ಎಂದು ಅಂಕಿ ಅಂಶ ಸಮೇತ ಪತ್ರದಲ್ಲಿ ತಿಳಿಸಿದ್ದಾರೆ. ಎರಡು ಪ್ರಮುಖ ಯೋಜನೆಗಳು ಕೈಗೆತ್ತಿಕೊಂಡು 5 ವರ್ಷ ಮೇಲ್ಪಟ್ಟಿದ್ದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. ವಿದೇಶಿ ನೆರವಿನ ಹಣದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳು ಶೀಘ್ರಗತಿಯಲ್ಲಿ ಅನುಷ್ಠಾನಕ್ಕೆ ಬರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಉಸ್ತುವಾರಿ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿದೇಶಿ ನೆರವಿನ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ