ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು !

Kannada News

28-06-2017

ಬೆಂಗಳೂರು: ಬಾಗಲೂರು ಲೇಔಟ್‍ನಲ್ಲಿ ಹಾಡುಹಗಲೇ ತನ್ನ ಸಹಚರರ ಜೊತೆ ಸೇರಿ ರೌಡಿ ಪಳನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದ ರೌಡಿ ಮಲ್ಲೇಶ್ ನ್ಯಾಯಾಲಯಕ್ಕೆ ಶರಣಾಗಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿರುವ ಕೆಜಿ ಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪಳನಿಯನ್ನು ಕೊಲೆಗೈದ ತಲೆಮರೆಸಿಕೊಂಡಿದ್ದ ಮಲ್ಲೇಶ್‍ಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ತನ್ನ ಮೇಲೆ ಗುಂಡಿನ ದಾಳಿ ನಡೆಸಬಹುದು ಎನ್ನುವ ಭೀತಿಯಿಂದ ಆರೋಪಿ 11ನೇ ಎಸಿಎಂಎಂ ಕೋರ್ಟ್‍ನಲ್ಲಿ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕೊಲೆಯಾಗಿ ಭಾಗಿಯಾದ ಇತರ ಆರೋಪಿಗಳ ಮಾಹಿತಿ ಪಡೆದು ಹುಡುಕಾಟ ನಡೆಸಿದ್ದಾರೆ. ಪಳನಿ ಕೊಲೆಯನ್ನು ರೌಡಿ ಮಲ್ಲೇಶ್ ಮಾಡಿರುವ ಕೃತ್ಯ ಎನ್ನುವುದು ಪೊಲೀಸರಿಗೆ ಖಚಿತವಾಗಿತ್ತು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಮಲ್ಲೇಶ್ ಈ ಕೊಲೆ ಮಾಡಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶರಣಾಗಿರುವ ಆರೋಪಿ ಮಲ್ಲೇಶ್‍ನನ್ನು ಕೆಜಿ ಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೊಲೆಯಲ್ಲಿ ಮಲ್ಲೇಶ್ ನೇರವಾಗಿ ಭಾಗಿಯಾಗದೇ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಲ್ಲೇಶ್‍ನ  ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಮಲ್ಲೇಶ್ ಮಹದೇವಪುರದಲ್ಲಿ ಪಳನಿಯ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ. ಆದರೆ, ಆ ವೇಳೆ ಪಳನಿ ಪರಾರಿಯಾಗಿದ್ದ. ಜೂನ್ 23 ರಂದು ಬೆಳಗ್ಗೆ ಕೆಜಿ ನಗರದ ಪಳನಿಯ ಮನೆ ಮುಂದೆಯೇ ಆತನನ್ನು ಕೊಲೆ ಮಾಡಲಾಗಿತ್ತು. ಮಲ್ಲೇಶ್ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿದ್ದು ಈತನ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳಿದ್ದು ಕೆಜಿ ಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ