2018 ಚುನಾವಣೆ: ಅಮಿತ್ ಷಾ ರಾಜ್ಯ ಪ್ರವಾಸ !

Kannada News

27-06-2017

ಬೆಂಗಳೂರು: ಬರುವ ಆಗಸ್ಟ್ 3 ರಿಂದ 5ರ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಬಳ್ಳಾರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಭವನೀಯ ಅಭ್ಯರ್ಥಿಗಳ ಕುರಿತು ಪಕ್ಷದ ಕೇಂದ್ರ ಹಾಗೂ ರಾಜ್ಯ ಘಟಕ ಸಮೀಕ್ಷೆ ಕೈಗೊಳ್ಳಲಿದೆ. ಇದರೊಂದಿಗೆ ಜನರ ಅಭಿಪ್ರಾಯವನ್ನೂ ಕ್ರೋಡೀಕರಿಸಿ, ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಸಂಸದರ ಪೈಕಿ ಯಾರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಕೇಂದ್ರ ನಾಯಕರು ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು. ಹಲವು ರಂಗಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ, ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ವಾಗ್ದಾನ ಮಾಡಿದ್ದ ಸರ್ಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 36 ಸಾವಿರ ಕೋಟಿ ರೂಪಾಯಿ ಮಾತ್ರ ವೆಚ್ಚ ಮಾಡಿದೆ ಎಂದು ಅವರು ಟೀಕಿಸಿದರು. ಸರಕು ಮತ್ತು ಸೇವಾ ತೆರಿಗೆ - ಜಿಎಸ್‍ಟಿ ಜಾರಿಯಿಂದ ಆರ್ಥಿಕ ಕ್ಷೇತ್ರ ಪ್ರಗತಿ ಕಾಣಲಿದೆ, ಕಪ್ಪು ಹಣ ನಿಯಂತ್ರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಇರಿಸಿದೆ, ರೈತರ ಬೆಳೆ ನಷ್ಟ ಪರಿಹಾರಕ್ಕೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ