ನೇಕಾರರ ಸಾಲಮನ್ನಾ ಮಾಡವಂತೆ ಒತ್ತಾಯ !

Kannada News

27-06-2017

ಬೆಂಗಳೂರು: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರ ಬದುಕು ಹಸನುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಮಾರು 8,600 ಕೋಟಿ ರೂ.ಗಳ ಸಾಲ ಮನ್ನಾ ಮಾಡಿರುವ ಮಾದರಿಯಲ್ಲೇ ನೇಕಾರರ ಮೇಲಿನ ಸಾಲವನ್ನೂ ಸಹ ಮನ್ನಾ ಮಾಡುವಂತೆ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಒತ್ತಾಯಿಸಿತು. ಕನ್ನಡ ಮತ್ತು ಸಂಸ್ಕತಿ ಸಚಿವೆ ಉಮಾಶ್ರೀ, ಒಕ್ಕೂಟದ ಗೌರವಾಧ್ಯಕ್ಷರಾದ ಶಾಸಕ ಕೆ.ಸಿ. ಕೊಂಡಯ್ಯ ಹಾಗೂ ಅಧ್ಯಕ್ಷರಾದ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಮತ್ತು ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿಗಳ ಗೃಹ ಕಾವೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯದ ರೈತ ಮತ್ತು ನೇಕಾರ ಸರ್ಕಾರದ ಎರಡು ಕಣ್ಣುಗಳು ಎಂದು ಸರ್ಕಾರವೇ ಘೋಷಿಸಿರುವಂತೆ ಈಗಾಗಲೇ ರೈತರಿಗೆ ತೋರಿರುವ ಅನುಕಂಪದ ಮಾದರಿಯಲ್ಲೇ ನೇಕಾರರ ಮೇಲಿರುವ ಅಂದಾಜು 50 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿ ಸಹಕರಿಸಿ ನೇಕಾರರ ಶ್ರೇಯೋಭಿವೃದ್ಧಿಗೆ ಸಹಕರಿಸುವಂತೆ ನಿಯೋಗ ಮನವಿ ಮಾಡಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ನೇಕಾರರ ಸಾಲ ಮನ್ನಾ ಮಾಡುವ ಕುರಿತು ಸರ್ಕಾರ ಪರಿಶೀಲಿಸಿ ಕ್ರಮ ಜರುಗಿಸಲಿದೆ ಎಂದು ಭರವಸೆ ನೀಡಿದರು. ನಿಯೋಗದಲ್ಲಿ ನೇಕಾರರ ರಾಷ್ಟ್ರೀಯ ಸೇವಾ  ಟ್ರಸ್ಟ್ನ ಅಧ್ಯಕ್ಷ ರಘು ಎಸ್. ಶೆಟ್ಟಿಗಾರ್ ಹಾಗೂ ನೇಕಾರರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ ಉಪಸ್ಥಿತರಿದ್ದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ