ದ್ವೀಪ ರಾಷ್ಟ್ರದಲ್ಲಿ ಡ್ರ್ಯಾಗನ್ ನೃತ್ಯ…!

26-06-2017 1176
ಇಡೀ ಜಗತ್ತಿನಲ್ಲಿ ಶಾಂತಿಯುತ ವಾತಾವರಣ ಇರಬೇಕೆನ್ನುವುದು ಭಾರತದ ಬಯಕೆ. ಇದೇ ರೀತಿ, ಭಾರತ ತನ್ನ ನೆರೆಯ ದೇಶಗಳ ಜೊತೆಗೂ ಸೌಹಾರ್ದಯುತ ಸಂಬಂಧ ಇರಿಸಿಕೊಳ್ಳಲು ಬಯಸುತ್ತದೆ. ಹೀಗಿದ್ದರೂ ಕೂಡ, ಪಾಕಿಸ್ತಾನ ಮತ್ತು ಚೀನಾ ದೇಶಗಳು ಒಂದಲ್ಲಾ ಒಂದು ರೀತಿಯಲ್ಲಿ ಭಾರತಕ್ಕೆ ತಲೆನೋವಾಗಿರುವುದಂತೂ ಸತ್ಯ. ಇದರ ಜೊತೆಗೆ, ಪಾಕಿಸ್ತಾನವೇ ಭಾರತದ ಶತ್ರು, ಬೇರೆಲ್ಲಾ ರಾಷ್ಟ್ರಗಳೂ ಮಿತ್ರರಾಷ್ಟ್ರಗಳೇ ಎಂದು ಬಿಂಬಿತವಾಗಿರುವುದೂ ಕೂಡ ಒಂದು ದುರಂತ. ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಿದಾಗ, ನಾವು ಪಾಕಿಸ್ತಾನಕ್ಕಿಂತಲೂ ಹೆಚ್ಚಾಗಿ, ಚೀನಾದ ಹುನ್ನಾರಗಳ ಬಗ್ಗೆಯೇ ಹೆಚ್ಚು ಎಚ್ಚರಿಕೆಯಿಂದಿರಬೇಕಾಗಿದೆ.
ಏಷ್ಯಾಖಂಡದಲ್ಲಿ ಚೀನಾ ಮತ್ತು ಭಾರತದ ನಡುವೆ ಬಹಳ ವರ್ಷಗಳಿಂದಲೂ ಮುಸುಕಿನಗುದ್ದಾಟ ನಡೆಯುತ್ತಲೇ ಇದೆ. ಏಷ್ಯಾದ ಈ ಎರಡೂ ಪ್ರಭಾವಶಾಲಿ ದೇಶಗಳು, ಜಾಗತಿಕ ಮಟ್ಟದಲ್ಲೂ ತಮ್ಮ ಛಾಪು ಒತ್ತಲು ಪೈಪೋಟಿಗಿಳಿದಂತೆ ವರ್ತಿಸುತ್ತಿರುವುದಂತೂ ನಿಜ. ಕೇವಲ ಸೇನಾ ಶಕ್ತಿಯ ಬಲದಿಂದ ಏಷ್ಯಾದಲ್ಲಿ ಪ್ರಭುತ್ವ ಸಾಧಿಸಿಕೊಂಡು, ತಾನು ವಿಶ್ವದ ದೊಡ್ಡಣ್ಣನಾಗಲು ಸಾಧ್ಯವಿಲ್ಲ ಅನ್ನುವುದು ಚೀನಾ ದೇಶಕ್ಕೆ ಅರ್ಥವಾಗಿದೆ. ಹೀಗಾಗಿ ಅದು ದಕ್ಷಿಣ ಏಷ್ಯಾದ ಬಹುತೇಕ ದೇಶಗಳಲ್ಲಿನ ಆರ್ಥಿಕ ಮುಗ್ಗಟ್ಟು ಹಾಗೂ ರಾಜಕೀಯ ಅಸ್ಥಿರತೆಯನ್ನೇ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ತಂತ್ರ ನಡೆಸಿದೆ.
ಭಾರತವನ್ನು ವ್ಯವಸ್ಥಿತವಾಗಿ ಸುತ್ತುವರಿದು ಪ್ರಾದೇಶಿಕ ವ್ಯವಹಾರಗಳಲ್ಲೇ ಕಟ್ಟಿಹಾಕಿ, ಹೆಣಗುವಂತೆ ಮಾಡುವುದು ಮತ್ತು ಆ ಮೂಲಕ, ಜಾಗತಿಕ ಮಟ್ಟದಲ್ಲಿ ಭಾರತ ಹೆಚ್ಚಿನ ಪಾತ್ರ ವಹಿಸುವುದನ್ನು ತಪ್ಪಿಸುವುದೇ ಚೀನಾದ ಕಾರ್ಯತಂತ್ರದ ಪ್ರಮುಖ ಭಾಗ. ಚೀನಾ ದೇಶ, ಭಾರತವನ್ನು ಕಟ್ಟಿಹಾಕುವ ತಂತ್ರಗಳನ್ನು ಜಾರಿಗೆ ತರಲು ಹೊರಟಿದ್ದು, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿದೆ. ಮೂಲ ಸೌಕರ್ಯ, ತಂತ್ರಜ್ಞಾನದ ಅಳವಡಿಕೆ, ಆರ್ಥಿಕ ಸಹಾಯ ಹೀಗೆ ಬೇರೆ ಬೇರೆ ಆಕರ್ಷಕ ಯೋಜನೆಗಳ ಮೂಲಕ ಅವರ ವಿಶ್ವಾಸ ಗಳಿಸುವ ಯತ್ನ ಮಾಡುತ್ತಿದೆ. ಆ ಮೂಲಕ ಭಾರತದ ಪ್ರಭಾವವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸುತ್ತಿದೆ.
ಇದೇ ನಿಟ್ಟಿನಲ್ಲಿ ಪಾಕಿಸ್ತಾನವನ್ನು ತನ್ನ ಪರಮಾಪ್ತ ದೇಶವನ್ನಾಗಿಸಿಕೊಂಡಿರುವ ಚೀನಾ ದೇಶ, ಅಲ್ಲಿನ ದುಸ್ಥಿತಿಯ ಲಾಭ ಪಡೆಯುತ್ತಿದೆ. ವಿಶ್ವಸಂಸ್ಥೆ ಮತ್ತು ಇತರ ವೇದಿಕೆಗಳಲ್ಲಿ ಚೀನಾ ದೇಶ ಪಾಕ್ ಪರ ನಿಂತರೆ, ಇಸ್ಲಾಮಿಕ್ ದೇಶಗಳ ಒಕ್ಕೂಟ ಇತ್ಯಾದಿಗಳಲ್ಲಿ ಪಾಕ್, ಚೀನಾ ಪರ ವಾದಿಸುತ್ತದೆ. ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ರೂವಾರಿ, ಅಜರ್ ಮಸೂದ್ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬೇಕೆಂದು, ವಿಶ್ವಸಂಸ್ಥೆಯಲ್ಲಿ ಭಾರತ ಮಂಡಿಸಿದ ನಿರ್ಣಯ ತಡೆಯುವಲ್ಲಿ ಚೀನಾ ಸಫಲವಾಗಿದೆ.
ಇದೇ ವೇಳೆ, ಹಲವು ದಶಕಗಳಿಂದಲೂ ಶ್ರೀಲಂಕಾವನ್ನು ಆಪ್ತ ಗೆಳೆಯನಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಚೀನಾ, ಮಹಿಂದ ರಾಜಪಕ್ಸೆ ಅಧ್ಯಕ್ಷರಾಗಿದ್ದ ಎರಡು ಅವಧಿಗಳಲ್ಲಿ ಶ್ರೀಲಂಕಾ ದೇಶಕ್ಕೆ ತುಂಬಾ ಹತ್ತಿರವಾಯಿತು. ಎಲ್ಟಿಟಿಇ ಜೊತೆಗಿನ ಯುದ್ಧದ ಸಂದರ್ಭದಲ್ಲಿ, ಶ್ರೀಲಂಕಾದ ಸೇನಾ ಪಡೆಗಳು ಮಾನವ ಹಕ್ಕು ಉಲ್ಲಂಘಿಸಿವೆ, ಅಮಾಯಕ ತಮಿಳರನ್ನು ಕಗ್ಗೊಲೆ ಮಾಡಿವೆ ಎಂಬ ಬಲವಾದ ಆರೋಪಗಳು ಕೇಳಿಬಂದಿದ್ದವು. ಶ್ರೀಲಂಕಾ ಸೇನೆಯ ಕುಕೃತ್ಯಗಳಿಗೆ ಆಗಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರೇ ಕಾರಣ ಎಂದು , ಅಮೆರಿಕ, ಇಂಗ್ಲೆಂಡ್ ಮತ್ತು ವಿಶ್ವಸಂಸ್ಥೆಯೂ ಆರೋಪಿಸಿತ್ತು. ಎಲ್ಟಿಟಿಇ ನವರನ್ನು ದಮನಮಾಡುವ ವೇಳೆ, ತಮಿಳು ನಾಗರಿಕರ ಮೇಲಿನ ದೌರ್ಜನ್ಯಕ್ಕಾಗಿ, ಶ್ರೀಲಂಕಾ ವಿರುದ್ಧ ನಿರ್ಬಂಧ ಹೇರಲು ಚಿಂತನೆಗಳು ನಡೆದಿದ್ದವು. ಮಾನವ ಹಕ್ಕು ಉಲ್ಲಂಘನೆ ವಿಚಾರದಲ್ಲಿ ಕಠಿಣ ಧೋರಣೆ ತೋರಿದ್ದ ಹೂಡಿಕೆದಾರ ಕಂಪನಿಗಳು, ಶ್ರೀಲಂಕಾದಿಂದ ದೂರಸರಿದಿದ್ದವು. ಇಂಥ ಸಂದರ್ಭದಲ್ಲಿ ಮಹಿಂದ ರಾಜಪಕ್ಸೆ ಅವರು, ಆರ್ಥಿಕ ಮತ್ತು ರಾಜತಾಂತ್ರಿಕ ಬೆಂಬಲಕ್ಕಾಗಿ ಚೀನಾದತ್ತ ಮುಖ ಮಾಡಿದ್ದರು.
ಚೀನಾ ದೇಶವೂ ಇಂಥದ್ದೇ ಒಂದು ಅವಕಾಶಕ್ಕಾಗಿ ಕಾಯುತ್ತಿತ್ತು, ಹೀಗಾಗಿ, 2009ರಿಂದಾಚೆಗೆ ಶ್ರೀಲಂಕಾ ಮತ್ತು ಚೀನಾ ಸಂಬಂಧ ಹೊಸ ಹುರುಪಿನೊಂದಿಗೆ ಬೆಳೆಯುತ್ತಾ ಹೋಯಿತು. ಚೀನಾ, ಶ್ರೀಲಂಕಾದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಯಿತು, ಅತಿ ದೊಡ್ಡ ಹೂಡಿಕೆದಾರ ದೇಶವಾಗಿ ಬೆಳೆಯಿತು. ಎಲ್ಟಿಟಿಇ ಜೊತೆಗಿನ ಯುದ್ಧದಿಂದ ಬಳಲಿ ಬಸವಳಿದಿದ್ದ ಶ್ರೀಲಂಕಾದ, ಮೂಲ ಸೌಕರ್ಯಗಳನ್ನು ರಿಪೇರಿ ಮಾಡಲು ಮತ್ತು ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಚೀನಾ ದೇಶ ಕೋಟ್ಯಂತರ ಡಾಲರ್ಗಳ ಬಂಡವಾಳ ಹೂಡಿಕೆ ಮಾಡಿತು. ಇದು ಸಹಜವಾಗಿಯೇ ಚೀನಾ ದೇಶಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡಿತ್ತು. ಶ್ರೀಲಂಕಾದಲ್ಲಿ ರಸ್ತೆಗಳು, ಏರ್ ಪೋರ್ಟ್ಗಳು ಮತ್ತು ಬಂದರುಗಳನ್ನು ನಿರ್ಮಿಸಲು ಚೀನಾ ಮುಂದಾಯಿತು. ಭಾರಿ ಮಹತ್ವದ ಹಂಬನ್ತೋಟ ಬಂದರು ಮತ್ತು ಕೊಲಂಬೊ ಬಂದರುಗಳ ಅಭಿವೃದ್ಧಿ ಯೋಜನೆಗಳನ್ನು ಚೀನಾ ಕೈಗೆತ್ತಿಕೊಂಡಿತು.
ಚೀನಾದಿಂದ ಬಿಲಿಯನ್ ಡಾಲರ್ ಗಟ್ಟಲೆ ಹಣ, ಶ್ರೀಲಂಕಾಗೆ ಹರಿದು ಬರತೊಡಗಿತು. ಆದರೆ, ಚೀನಾ ದೇಶ ಶ್ರೀಲಂಕಾಗೆ ಮಾಡಲು ಹೊರಟಿದ್ದೇನೂ ಪುಕ್ಕಟ್ಟೆ ಸಹಾಯವಾಗಿರಲಿಲ್ಲ. ಚೀನಾದೇಶ ಶ್ರೀಲಂಕಾದಲ್ಲಿ ಕೈಗೊಂಡ ಎಲ್ಲಾ ಯೋಜನೆಗಳು ಸಾಲದ ರೂಪವಾಗಿದ್ದವು. ಇದರಿಂದ ಶ್ರಿಲಂಕಾದೇಶದ ಸಾಲದ ಮೊತ್ತ ಬೃಹತ್ತಾಗಿ ಬೆಳೆಯುತ್ತಾಹೋಗಿ 64 ಬಿಲಿಯನ್ ಡಾಲರ್ ತಲುಪಿತ್ತು, ಶ್ರೀಲಂಕಾ ಒಂದು ರೀತಿಯಲ್ಲಿ ಚೀನಾದ ಹಂಗಿನಲ್ಲಿರುವಂತಾಯಿತು. ಆ ಹೊತ್ತಿನಲ್ಲಿ ಅಧಿಕಾರದಲ್ಲಿದ್ದ ಮಹಿಂದ ರಾಜಪಕ್ಸೆ ಸರ್ಕಾರ, ಹೆಚ್ಚೂ ಕಮ್ಮಿ ಚೀನಾದೇಶದ ಆಣತಿಯಂತೆ ಕಾರ್ಯನಿರ್ವಹಿಸತೊಡಗಿತ್ತು. ಇದೆಲ್ಲದರ ಜೊತೆಗೆ, 2014ರಲ್ಲಿ ಚೀನಾದ ಎರಡು ಜಲಾಂತರ್ಗಾಮಿ ನೌಕೆಗಳಿಗೆ ನೆಲೆ ಒದಗಿಸಿದ ಶ್ರೀಲಂಕಾ, ಭಾರತಕ್ಕೆ ಆತಂಕದ ವಾತಾವರಣ ಸೃಷ್ಟಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ ಚೀನಾ ದೇಶ, ತನ್ನ “ ಸ್ಟ್ರಿಂಗ್ ಆಫ್ ಪರ್ಲ್ಸ್ ” ಅಂದರೆ ಮುತ್ತಿನ ಮಾಲೆ ಯೋಜನೆ ಕಾರ್ಯಗತಗೊಳಿಸುವ ಯತ್ನ ನಡೆಸುತ್ತಿದೆ. ತನ್ನ ಮಿತ್ರ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾಗಳಲ್ಲಿ ಹೆದ್ದಾರಿ, ಬಂದರು ಮತ್ತಿತರ ಯೋಜನೆಗಳ ಮೂಲಕ, ಹಿಂದೂ ಮಹಾಸಾಗರದಲ್ಲಿ ತನ್ನ ನೌಕಾ ಪಡೆಗಳನ್ನು ನೆಲೆಗೊಳಿಸಿ ‘ಮುತ್ತಿನ ಮಾಲೆ’ ವ್ಯೂಹ ರಚಿಸಿ ಭಾರತವನ್ನು ಸುತ್ತುವರಿಯುವ ಪ್ರಯತ್ನ ನಡೆಸಿದೆ. ಚೀನಾ ದೇಶದಲ್ಲಿ ಪೆಟ್ರೋಲಿಯಂ ತೈಲಕ್ಕೆ ಭಾರಿ ಬೇಡಿಕೆ ಇದೆ. ಚೀನಾದ ತೈಲ ಆಮದಿನಲ್ಲಿ, ಶೇ70ರಷ್ಟು ಮಧ್ಯಪೂರ್ವ ಮತ್ತು ಆಫ್ರಿಕದಿಂದ ಬರುತ್ತಿದೆ. ಆದ್ದರಿಂದ ಸಮುದ್ರಮಾರ್ಗದ ಸಂಪರ್ಕ ಚೀನಾ ದೇಶಕ್ಕೆ ನಿರ್ಣಾಯಕ. ಹೋರ್ಮುಜ್ ಜಲಸಂಧಿಯಿಂದ ಹಿಂದೂ ಮಹಾಸಾಗರದ ಪಶ್ಚಿಮ ಪ್ರದೇಶಗಳೂ ಸೇರಿದಂತೆ ಮಲಕ್ಕಾ ಜಲಸಂಧಿವರೆಗೆ ತನ್ನ ಸಂಪರ್ಕ ಇರುವಂಥ ವ್ಯವಸ್ಥೆಯೊಂದನ್ನು ನಿರ್ಮಿಸಿಕೊಳ್ಳುವುದೇ ಚೀನಾ ದೇಶದ ಗುರಿ. ಇದು ಚೀನಾದ ವ್ಯಾಪಾರಕ್ಕೆ ಮತ್ತು ಇಂಧನ ಆಮದಿಗೆ ನೆರವಾಗುತ್ತದೆ. ಶ್ರೀಲಂಕಾದ ದಕ್ಷಿಣ ಕರಾವಳಿಯ ಹಂಬನ್ತೋಟದಲ್ಲಿ ಚೀನಾ ನಿರ್ಮಿಸುತ್ತಿರುವ ಬಂದರು, ಜಗತ್ತಿನ ಪ್ರಮುಖ ನೌಕಾಮಾರ್ಗದಿಂದ ಕೇವಲ 10 ಮೈಲಿಗಳ ದೂರದಲ್ಲಿದೆ. ಅದು, ಹಡಗುಗಳು ಲಂಗರು ಹಾಕುವ, ಇಂಧನ ತುಂಬಿಸಿಕೊಳ್ಳುವ ತಾಣವೂ ಆಗಿದೆ. ಹಂಬನ್ತೋಟ ಬಂದರಿನ ವ್ಯಾಪ್ತಿಯಲ್ಲಿರುವ ಚೀನಾದ ಹಡಗುಗಳು, ಹಿಂದೂ ಮಹಾಸಾಗರದಲ್ಲಿ ಗಸ್ತು ತಿರುಗುತ್ತವೆ.
ಮಧ್ಯಪೂರ್ವದ ಕಡೆಯಿಂದ ಬರುವ ತೈಲಸಾಗಣೆ ಹಡುಗುಗಳಿಗೆ ರಕ್ಷಣೆ ನೀಡುತ್ತವೆ. ಇದೆಲ್ಲವೂ ಒಂದು ವಾಣಿಜ್ಯ ವಿಚಾರವೆಂದು ಚೀನಾ ಹೇಳಿಕೊಂಡರೂ ಕೂಡ, ಇದು ಚೀನಾದೇಶಕ್ಕೆ ಒಂದು ವ್ಯೂಹಾತ್ಮಕ ಅನುಕೂಲ ನೀಡುತ್ತದೆ. ಇದೇ ವೇಳೆ ಪಾಕಿಸ್ತಾನದ ಗ್ವಾದಾರ್ ಮತ್ತು ಬಾಂಗ್ಲಾದ ಚಿತ್ತಗಾಂಗ್ ಬಂದರನ್ನೂ ಚೀನಾ ಅಭಿವೃದ್ಧಿ ಪಡಿಸುತ್ತಿದೆ. ದಕ್ಷಿಣ ಏಷ್ಯಾದ ಸಮುದ್ರ ಪ್ರದೇಶದಲ್ಲಿ ತನ್ನ ವೈರಿ ದೇಶಗಳಾದ ವಿಯೆಟ್ನಾಂ ಮತ್ತು ಜಪಾನ್ ದೇಶಗಳಿಂದ ಚೀನಾದೇಶಕ್ಕೆ ಆತಂಕವಿದೆ. ಹೀಗಾಗಿ, ಹಿಂದೂ ಮಹಾಸಾಗರದ ವಲಯದಲ್ಲಿ ತನ್ನ ರಕ್ಷಣಾ ಸಾಮರ್ಥ್ಯ ಹಾಗೂ ಅಸ್ತಿತ್ವ ಹೆಚ್ಚಿಸಿಕೊಳ್ಳಲು ಈ ಎಲ್ಲ ದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ನೆಪದಲ್ಲಿ ಬಂದರುಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗಿದೆ. “ಒನ್ ಬೆಲ್ಟ್ ಒನ್ ರೋಡ್ ” ಇದರ ಜೊತೆಗೆ, ಏಷ್ಯಾ, ಆಫ್ರಿಕ ಮತ್ತು ಯೂರೋಪ್ ಖಂಡಗಳವರೆಗೆ ವಿಸ್ತರಿಸುವ ಭಾರಿ ಮಹತ್ವಾಕಾಂಕ್ಷೆಯ “ಒನ್ ಬೆಲ್ಟ್ ಒನ್ ರೋಡ್” ಯೋಜನೆಯನ್ನೂ ಚೀನಾ ಕೈಗೆತ್ತಿಕೊಂಡಿದೆ. ಕೋಟ್ಯಂತರ ಬಿಲಿಯನ್ ಡಾಲರ್ಗಳ ಈ ಯೋಜನೆ, ಮೂಲ ಸೌಕರ್ಯ ನಿರ್ಮಾಣ, ಹೆದ್ದಾರಿಗಳು, ರೈಲ್ವೆ ಯೋಜನೆಗಳು, ಸಮುದ್ರ ಮಾರ್ಗಗಳು ಮತ್ತು ಬಂದರುಗಳ ಬೃಹತ್ ಸಂಪರ್ಕ ಜಾಲಗಳ ನಿರ್ಮಾಣದ ಉದ್ದೇಶ ಹೊಂದಿದೆ. ಶ್ರೀಲಂಕಾವೂ ಸೇರಿದಂತೆ ಭಾರತದ ನೆರೆಯ ಎಲ್ಲಾ ಪ್ರಮುಖ ದೇಶಗಳನ್ನು ಒಳಗೊಂಡಿರುವ ಈ ಯೋಜನೆಯ ಭಾಗವಾಗಲು ಭಾರತ ನಿರಾಕರಿಸಿತ್ತು. ಶ್ರೀಲಂಕಾದ ಜೊತೆ ಆಪ್ತತೆ ಸಾಧಿಸುವ ಮೂಲಕ, ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಪ್ರಭಾವ, ವ್ಯಾಪಾರ-ವಹಿವಾಟು ಮತ್ತು ಸಾಂಸ್ಕೃತಿಕ ಸಂಬಂಧಗಳ ಮೇಲೆ ಪರಿಣಾಮ ಉಂಟುಮಾಡಲು ಮುಂದಾಗಿರುವ ಚೀನಾದ ಪ್ರಯತ್ನಗಳನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ. ಸಂಪೂರ್ಣವಾಗಿ ಚೀನಾ ಪರ ವಾಲಿದ್ದ ಅಧ್ಯಕ್ಷ ಮಹಿಂದ ರಾಜಪಕ್ಸೆ 2015 ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವಲ್ಲಿ ಭಾರತ ನಡೆಸಿದ ತಂತ್ರ ಯಶಸ್ವಿಯಾಯಿತು. ಸಿರಿಸೇನ ಮೈತ್ರಿಪಾಲ ಶ್ರೀಲಂಕಾದ ಅಧ್ಯಕ್ಷರಾದರು. ಹೊಸ ಅಧ್ಯಕ್ಷ ಮೈತ್ರಿಪಾಲ, ಚೀನಾ ಕೈಗೊಂಡಿದ್ದ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ, ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ, ಚೀನಾ ಕೈಗೊಂಡಿದ್ದ ಯೋಜನೆಗಳನ್ನು ಮುಂದುವರಿಸುವುದು ಅನಿವಾರ್ಯವಾಯಿತು.
ಶ್ರೀಲಂಕಾದ ವಿಚಾರದಲ್ಲಿ ಭಾರತದ ಪ್ರಾಮುಖ್ಯತೆಯನ್ನು ಎಂದೂ ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತದ ದಕ್ಷಿಣದಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾದ ಜೊತೆಗೆ, ಭಾರತಕ್ಕೆ ಶತಮಾನಗಳಷ್ಟು ಹಳೆಯದಾದ ಧಾರ್ಮಿಕ, ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧವಿದೆ. ಭಾರತ, ಶ್ರೀಲಂಕಾದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 2.5 ಬಿಲಿಯನ್ ಡಾಲರ್ ಗಳಿಗೂ ಹೆಚ್ಚಿನ ಮೌಲ್ಯದ ನೆರವು ನೀಡಿದೆ. ನರೇಂದ್ರ ಮೋದಿ, ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಈ ವರೆಗೆ ಎರಡು ಬಾರಿ ಶ್ರೀಲಂಕಾಗೆ ಭೇಟಿ ನೀಡಿದ್ದಾರೆ.
ಎರಡು ತಿಂಗಳ ಹಿಂದಿನ ಭೇಟಿ ವೇಳೆ, ಬರುವ ಆಗಸ್ಟ್ ನಲ್ಲಿ ಕೊಲಂಬೊದಿಂದ ವಾರಣಾಸಿಗೆ ನೇರ ವಿಮಾನ ಸೇವೆ ಆರಂಭಿಸಲಾಗುವುದು ಎಂದು ಮೋದಿ ಹೇಳಿದ್ದರು. ಇದರಿಂದ ಸಾರಾನಾಥದಲ್ಲಿರುವ ಬುದ್ಧಸ್ತೂಪ ತಲುಪಲು ಶ್ರೀಲಂಕಾದ ಬೌದ್ಧರಿಗೆ ಅನುಕೂಲವಾಗುತ್ತದೆ. ಆದರೆ, ಶ್ರೀಲಂಕಾ ತನ್ನನ್ನು ತಾನು ಪ್ರಾದೇಶಿಕ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾಗಿ ರೂಪಿಸಿಕೊಳ್ಳಲು ಇಷ್ಟಪಡುತ್ತದೆ. ಇದರ ಸಲುವಾಗಿ, ಭಾರತ ಮತ್ತು ಚೀನಾ ಎರಡೂ ದೇಶಗಳನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ತೋರುವಂತೆ ಕಾಣುತ್ತಿದೆ.
ಇಂಥ ಪರಿಸ್ಥಿತಿಯಲ್ಲಿ, ಮೋದಿ ನೇತೃತ್ವದ ಭಾರತ ಸರ್ಕಾರ, ಶ್ರೀಲಂಕಾದ ಮನಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು, ಆ ದೇಶದೊಂದಿಗಿನ ತನ್ನ ಸಂಬಂಧಗಳನ್ನು ಗಟ್ಟಿಗೊಳಿಸಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಹಾಗೆಮಾಡಿದಾಗ ಮಾತ್ರವೇ, ದಕ್ಷಿಣ ಏಷ್ಯಾದಲ್ಲಿ ತನ್ನ ರಾಜಕೀಯ, ರಕ್ಷಣಾ ಮತ್ತು ಆರ್ಥಿಕ ಹಿಡಿತ ಸಾಧಿಸಲು ಹೊರಟಿರುವ ಚೀನಾ ದೇಶದ ಹಂಬಲಕ್ಕೆ ಕಡಿವಾಣ ಹಾಕಲು ಸಾಧ್ಯ.
ಒಂದು ಕಮೆಂಟನ್ನು ಹಾಕಿ