ದೇವರ ಸರವನ್ನೇ ಎಗರಿಸಿದ ಕಳ್ಳರು !

Kannada News

26-06-2017

ಬೆಂಗಳೂರು: ಚನ್ನಮ್ಮನ ಕೆರೆ ಅಚ್ಚುಕಟ್ಟುವಿನ ಶ್ರೀನಿವಾಸ ನಗರದಲ್ಲಿ ಸೋಮವಾರ ಬೆಳಿಗ್ಗೆ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಚಿನ್ನದ ಸರ ಕಳವು ಮಾಡಿ ಅರ್ಚಕನ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ. ಶ್ರೀನಿವಾಸ ನಗರದ ಪುರಾತನ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಾಲಯದಲ್ಲಿ ಬೆಳಿಗ್ಗೆ 6.30ರ ವೇಳೆ ಇಬ್ಬರು ದುಷ್ಕರ್ಮಿಗಳು ಭಕ್ತರ ಸೋಗಿನಲ್ಲಿ ಬಂದಿದ್ದಾರೆ. ಈ ವೇಳೆ ಅರ್ಚಕ ಮಂಜುನಾಥ್ ಅವರು ವಿಗ್ರಹ ತೊಳೆಯಲು ನೀರು ತರಲು ಹೋಗಿದ್ದರು, ದೇವಾಯದಲ್ಲಿ ಯಾರೂ ಇಲ್ಲದಿದ್ದರಿಂದ ದುಷ್ಕರ್ಮಿಗಳು ದೇವರ ಕೊರಳಿಗೆ ಹಾಕಿದ್ದ 50 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ. ದೇವಾಲಯದಿಂದ ಹೊರಹೋಗುವಾಗ ಎದುರಿಗೆ ಅರ್ಚಕ ಮಂಜುನಾಥ್ ಅವರು ಬಂದಿದ್ದು ಹೆದರಿದ ದುಷ್ಕರ್ಮಿಗಳು ಅವರ ಮುಖಕ್ಕೆ ಕಾರದ ಪುಡಿ ಎರಚಿ ಪರಾರಿಯಾಗಿದ್ದಾರೆ. ಕಣ್ಣುಜ್ಜಿಕೊಂಡು ರಕ್ಷಣೆಗಾಗಿ ಮಂಜುನಾಥ್ ಕೂಗಿಕೊಂಡಿದ್ದು ಸ್ಥಳೀಯರು ಬಂದು ನೋಡಿದಾಗ ಚಿನ್ನದ ಸರ ಕಳವಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ