ಶ್ರದ್ಧಾ-ಭಕ್ತಿಯಿಂದ ನಗರದೆಲ್ಲೆಡೆ ರಂಜಾನ್ ಸಂಭ್ರಮ !

Kannada News

26-06-2017

 

ಬೆಂಗಳೂರು: ಈದ್ ಉಲ್ ಫಿತರ್ ಎಂದೇ ಕರೆಯಲಾಗುವ ಮುಸ್ಲೀಮರ ಪವಿತ್ರ ರಂಜಾನ್ ಹಬ್ಬವನ್ನು ನಗರದ ವಿವಿಧೆಡೆಗಳಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಿವಾಜಿನಗರ, ಬನ್ನೇರುಘಟ್ಟ ರಸ್ತೆ, ಚಾಮರಾಜಪೇಟೆಯ ಈದ್ಗಾ ಮೈದಾನ, ಮೈಸೂರು ರಸ್ತೆ, ಹೊಸೂರು ರಸ್ತೆ, ಜಾನ್ಸನ್ ಮಾರ್ಕೆಟ್ ಸಮೀಪದ ಮಸೀದಿ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಮಸೀದಿಗಳು ಮತ್ತು ಮೈದಾನಗಳಲ್ಲಿ ಮುಸ್ಲೀಮರು ವಿಶೇಷ ಪ್ರಾರ್ಥನೆಯೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಾಗವಾರದಲ್ಲಿರುವ ಅರೇಬಿಕ್ ಕಾಲೇಜ್ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉಪಸ್ಥಿತರಿದ್ದರು. ನಗರದ ವಿವಿಧೆಡೆ ಮುಸ್ಲಿಂ ಬಾಂಧವರು ಬಿಳಿ ವಸ್ತ್ರ ಧರಿಸಿ ಪ್ರಾರ್ಥನೆ ಸಲ್ಲಿಸಲು ಸಂಭ್ರದಿಂದ ತೆರಳುವ ದೃಶ್ಯಗಳು ಕಂಡು ಬಂದವು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇರುವ ಕಾರಣ ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯೂ ವಿರಳವಾಗಿತ್ತು. ರಂಜಾನ್ ಅಂಗವಾಗಿ ನಗರದ ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು ಭದ್ರತೆಗಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ. ಹೊಯ್ಸಳ ಸೇರಿದಂತೆ ಗಸ್ತು ಪೊಲೀಸ್ ವಾಹನಗಳನ್ನು ಹಾಕಲಾಗಿದ್ದು, ಸಂಚಾರ ನಿಯಂತ್ರಣಕ್ಕೆ ಸಂಚಾರ ಪೊಲೀಸರನ್ನು ಸಹ ನಿಯೋಜಿಸಲಾಗಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ