ತಪ್ಪಿಸಿಕೊಳ್ಳಲೆತ್ನಿದ ಆರೋಪಿಗೆ ಗುಂಡೇಟು !  

Kannada News

24-06-2017 212

ಬೆಂಗಳೂರು: ಮೂತ್ರ ವಿಸರ್ಜನೆ ನೆಪ ಮಾಡಿ ಹಿಂದೆ ಬಂದ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಓಡಿಹೋಗಲು ಯತ್ನಿಸಿದ ಕೊಲೆ ಆರೋಪಿ ಜಾನ್ಸನ್ ಮೇಲೆ  ಎಚ್‍ಎಎಲ್ ಪೊಲೀಸರು ಗುಂಡು ಹಾರಿಸಿದ್ದಾರೆ. ಎಡಗಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ವಿಭೂತಿಪುರದ ಜಾನ್ಸನ್ (21)ನನ್ನು ಬಂಧಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈಟ್‍ಫೀಲ್ಡ್ ಡಿಸಿಪಿ ನಾರಾಯಣ್ ತಿಳಿಸಿದ್ದಾರೆ. ಕಳೆದ ಜೂನ್ 10 ರಂದು ಎಚ್‍ಎಎಲ್ ಸಮೀಪ ಅಪಘಾತವಾಗಿ ಕೆಳಗೆ ಬಿದ್ದಿದ್ದ ಮಹಿಳೆಯೊಬ್ಬರ ಸರ ಕಸಿಯಲು ಯತ್ನಿಸಿ ಪರಾರಿಯಾಗುತ್ತಿದ್ದಾಗ ಬೆನ್ನಟ್ಟಿ ಹಿಡಿಯಲು ಬಂದ ಕಗ್ಗದಾಸಪುರದ ಐಟಿ ಕಂಪನಿ ಉದ್ಯೋಗಿ ಸಾಯಿಚರಣ್‍ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಜಾನ್ಸನ್ನನ್ನು ಶುಕ್ರವಾರ ಸಂಜೆ ಎಚ್‍ಎಎಲ್ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಂತರ ಕೊಲೆ ಪ್ರಕರಣದ ಸ್ಥಳ ಮಹಜರು ಮಾಡಲು ಅನ್ನಸಂದ್ರ ಪಾಳ್ಯಕ್ಕೆ ಬೆಳಿಗ್ಗೆ 10ರ ವೇಳೆ ಕರೆದುಕೊಂಡು ಹೋಗಿ ಮತ್ತೆ ಠಾಣೆಗೆ ವಾಪಸ್ಸು ಕರೆ ತರುತ್ತಿದ್ದಾಗ ಮೂತ್ರ ವಿಸರ್ಜನೆ ನೆಪದಲ್ಲಿ ಜೀಪಿನಿಂದ ಇಳಿದು ಸ್ವಲ್ಪ ದೂರ ಜಾನ್ಸನ್ ಹೋಗಿದ್ದಾನೆ. ಆತನ ಹಿಂದೆಯೇ ಪೇದೆಗಳಾದ ಕಾಂತ ಹಾಗೂ ಮಂಜೇಶ್ ಹೋಗಿದ್ದು, ಮೂತ್ರ ವಿಸರ್ಜನೆ ನಾಟಕವಾಡಿ ಹಿಂದೆ ಬಂದ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಕಂಡ ಜೀಪಿನ ಬಳಿ ಇದ್ದ ಎಚ್‍ಎಎಲ್ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಓಡಿ ಹೋಗದಂತೆ ಎಚ್ಚರಿಕೆ ನೀಡಿದರು. ಆದರೂ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಜಾನ್ಸನ್ ಮೇಲೆ ಮತ್ತೊಂದು ಗುಂಡು ಹಾರಿಸಿದಾಗ ಅದು ಆತನ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಂಡು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಳಾಯಿ ಕೆಲಸ (ಫ್ಲಂಬರ್) ಮಾಡುತ್ತಿದ್ದ ಜಾನ್ಸನ್ ಡಕಾಯಿತಿ, ಕಳ್ಳತನ, ಕೊಲೆ ಸೇರಿದಂತೆ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ನಾರಾಯಣ್ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ