ಐನಾತಿ ಮನೆಗಳ್ಳರ ಬಂಧನ !

Kannada News

24-06-2017

ಬೆಂಗಳೂರು: ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಬೀಗ ಮುರಿದು ಒಳ ನುಗ್ಗಿ ಕಳವು ಮಾಡುತ್ತಿದ್ದ ಮೂವರು ಐನಾತಿ ಮನೆಗಳ್ಳರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿತರಿಂದ 22 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಗೋಪಾಲನಗರದ ಶಿವಕುಮಾರ್ ಆಲಿಯಾಸ್ ಶಿವ (29), ನಂದಿನಿ ಬಡಾವಣೆಯ ಪರಿಮಳಾ ನಗರದ ಅರುಣ್ (29), ಪೀಣ್ಯ 1ನೇ ಹಂತದ ಅರುಣ್ ಆಲಿಯಾಸ್ ಆರ್‍ಎಂಸಿ (24) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಬಂಧಿತರಿಂದ 22 ಲಕ್ಷ ಮೌಲ್ಯದ 730 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು ಕಾಮಾಕ್ಷಿಪಾಳ್ಯದ 9, ಮಾಗಡಿ ರಸ್ತೆ, ಚಂದ್ರಲೇಔಟ್ ನ ತಲಾ 3, ಆರ್‍.ಆರ್ ನಗರ ಅನ್ನಪೂರ್ಣೇಶ್ವರಿ ನಗರದ ತಲಾ 1 ಸೇರಿದಂತೆ 17 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಕಳೆದ ಏಪ್ರಿಲ್ 10 ರಂದು ಸುಂಕದಕಟ್ಟೆಯ ಮದ್ದೂರಮ್ಮ ಬಡಾವಣೆಯ ತಿಮ್ಮಯ್ಯ ಹಾಗೂ ನಿಂಗಪ್ಪ ಎನ್ನುವವರ ಮನೆಯ ಬೀಗ ಮುರಿದು ನುಗ್ಗಿದ್ದ ಬಂಧಿತ ಆರೋಪಿಗಳು 2 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕಳೆದ ನವೆಂಬರ್ 28 ರಂದು ಸುಂಕದಕಟ್ಟೆಯ ಕೆಬ್ಬೆಹಳ್ಳದ ಶಿವಣ್ಣ ಎಂಬುವರ ಮನೆ ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಕೂಡ ವಿಚಾರಣೆಯಲ್ಲಿ ಪತ್ತೆಯಾಗಿದೆ. ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಇನ್ಸ್‍ ಪೆಕ್ಟರ್ ಎಂ.ಆರ್. ಹರೀಶ್ ಮತ್ತವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಐನಾತಿ ಮನೆಗಳ್ಳರ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ