ವೀರ ಯೋಧನ ಅಂತ್ಯ ಸಂಸ್ಕಾರ !

Kannada News

24-06-2017 412

ಬೆಂಗಳೂರು: ಪಶ್ಚಿಮ ಬಂಗಾಳದ ಗಡಿಭಾಗದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವೀರಮರಣ ಹೊಂದಿದ ಕನ್ನಡಿಗ ಯೋಧ ಗಂಗಾಧರ್ ಅವರ ಅಂತ್ಯ ಸಂಸ್ಕಾರವು ನಗರದ ಹೊರವಲಯದ ಶಿಡ್ಲಘಟ್ಟದ ಯಣ್ಣಂಗೂರಿನಲ್ಲಿ ಶನಿವಾರ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಸಾರ್ವಜನಿಕರು ಪಾಲ್ಗೊಂಡು ಅಗಲಿದ ವೀರ ಯೋಧನಿಗೆ ನಮನ ಸಲ್ಲಿಸಿದರು. ಕಳೆದ ಜೂನ್.21 ರಂದು ಡಾರ್ಜಿಲಿಂಗ್‍ನ ಗಡಿಭಾಗದಲ್ಲಿ ನಡೆದ ಗುಂಡಿನಚಕಮಕಿಯಲ್ಲಿ ವೀರಮರಣ ಹೊಂದಿದ್ದರು ಯೋಧ ಗಂಗಾಧರ್ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಪಶ್ಚಿಮ ಬಂಗಾಳದಿಂದ ಮುಂಜಾನೆ 2ರ ವೇಳೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಕೆಲಕಾಲ ಪಾರ್ಥಿವ ಶರೀರವನ್ನು ಇಡಲಾಯಿತು. ನಂತರ ಯೋಧನ ಸ್ವಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗ್ರಾಮದತ್ತ ತೆಗೆದುಕೊಂಡು ಹೋಗಲಾಯಿತು. ದೇವನಹಳ್ಳಿ ವಿಜಯಪುರ ಮಾರ್ಗವಾಗಿ ಸೇನೆಯ ತೆರೆದ ವಾಹನದಲ್ಲಿ ವೀರ ಯೋಧನ ಪಾರ್ಥಿವ ಶರೀರ ತೆಗೆದುಕೊಂಡು ಹೋಗುತ್ತಿದ್ದರೆ, ಸಾರ್ವಜನಿಕರು ರಸ್ತೆ ಉದ್ದಕ್ಕೂ ನಮನವನ್ನು ಸಲ್ಲಿಸಿದರು. ಶಿಡ್ಲಘಟ್ಟದ ಜಂಗಮಕೋಟೆ ಜ್ಞಾನಜ್ಯೋತಿ ಶಾಲೆಯ ಬಳಿ ಸಾರ್ವಜನಿಕರ ದರ್ಶನಕ್ಕೆ ಕೆಲಕಾಲ ಇಡಲಾಯಿತು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಯಣ್ಣಂಗೂರು ಗ್ರಾಮದಲ್ಲಿ ವೀರ ಯೋಧನ ಅಂತ್ಯಸಂಸ್ಕಾರ ನಡೆಯಿತು ಸ್ಥಳೀಯ ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಸಾರ್ವಜನಿಕರು ಅಂತ್ಯಕ್ರಿಯೆ ಪಾಲ್ಗೊಂಡು ಅಗಲಿದ ವೀರ ಯೋಧನಿಗೆ ನಮನ ಸಲ್ಲಿಸಿದರು. ಗಂಗಾಧರ್ 20 ವರ್ಷಗಳಿಂದ ಬಿಎಸ್‍ಎಫ್‍ನಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ