ಯಡಿಯೂರಪ್ಪನಂತವರನ್ನು ಸಾಕಷ್ಟು ಜನರನ್ನು ನೋಡಿದ್ದೇನೆ !

Kannada News

23-06-2017

ಬೆಂಗಳೂರು: ಯಾರ ಬೆದರಿಕೆಗೋ ಜಗ್ಗಿ ರೈತರ ಸಾಲ ಮನ್ನಾ ಮಾಡಿಲ್ಲ, ಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸಾಲಮನ್ನಾ ಘೋಷಣೆ ಮಾಡಿದ್ದೇನೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಡಿಯೂರಪ್ಪನಂತವರನ್ನು ಸಾಕಷ್ಟು ಜನರನ್ನು ನೋಡಿದ್ದೇನೆ ಎಂದು ಹರಿಹಾಯ್ದರು. ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ರೈತರ ಸಾಲಮನ್ನಾ ಮಾಡಿದ್ದಕ್ಕಾಗಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೆಲವರು ತಮ್ಮಷ್ಟಕ್ಕೆ ತಾವೇ ರೈತರ ಮಕ್ಕಳು, ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ಳುತ್ತಾರೆ, ಇವರೆಲ್ಲ ಹೊಲದಲ್ಲಿ ಗದ್ದೆಯಲ್ಲಿ ಕೆಲಸ ಮಾಡಿದವರಲ್ಲ, ಯಡಿಯೂರಪ್ಪ, ಕುಮಾರಸ್ವಾಮಿಯವರಿಗೆ ಹೊಲ ಉತ್ತಿ ಗೊತ್ತಿಲ್ಲ, ಬಿತ್ತಿ ಗೊತ್ತಿಲ್ಲ ಎಂದು ಟೀಕಿಸಿ, ನಾನು ನಿಜವಾದ ರೈತ ಮಕ್ಕಳಾದರೂ ನಮಗೆ ಯಾವುದೇ ಬಿರುದು ಇಲ್ಲ ಎಂದರು. ಹಳ್ಳಿಯಲ್ಲಿ ಹೊಲ ಉತ್ತಿದ್ದೇನೆ. ದನ ಕಾಯ್ದಿದ್ದೇನೆ, ರೈತರ ಕಷ್ಟ ನನಗೆ ಗೊತ್ತಿದೆ. ಹಾಗಾಗಿಯೇ ರೈತರ ಸಾಲಮನ್ನಾ ಮಾಡುವ ತೀರ್ಮಾನವನ್ನು ಮಾಡಿದ್ದು, ಯಾರಿಗೋ ಹೆದರಿಕೊಂಡು ಅಲ್ಲ ಎಂದರು. ಬಿಜೆಪಿಯವರು ನಮ್ಮ ಪ್ರತಿಭಟನೆಗೆ ಹೆದರಿ ಸಿಎಂ ಸಾಲಮನ್ನಾ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರಷ್ಟು ಮೂರ್ಖರು ಯಾರೂ ಇಲ್ಲ, ನಾನು ರೈತರಿಗಾಗಿ ಅವರ ನೋವು ಕಡಿಮೆ ಮಾಡಲು ಸಾಲಮನ್ನಾ ಮಾಡಿದ್ದೇನೆ, ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಒಂದೇ ಒಂದು ರೂಪಾಯಿ ರೈತರ ಸಾಲಮನ್ನಾ ಮಾಡಲಿಲ್ಲ ಎಂದರು. ರೈತರ ಸಾಲಮನ್ನಾ ಮಾಡದಿದ್ದರೆ ಮುಖ್ಯಮಂತ್ರಿಗಳ ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ಈಗ ನಾನು ಸಾಲಮನ್ನಾ ಮಾಡಿದ್ದೇನೆ. ಪ್ರಧಾನಿ ನರೇಂದ್ರಮೋದಿ ಅವರ ಕಾಲರ್ ಹಿಡಿದು ಸಾಲಮನ್ನಾ ಮಾಡಿಸುತ್ತಾರೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಮಾತು ಹೇಳುವಾಗ ಅವರು ನರೇಂದ್ರಮೋದಿ ಬದಲು ಮನ್ಮೋಹನ್ ಸಿಂಗ್ ಎಂದು ತಪ್ಪಾಗಿ ಹೇಳಿ ನಂತರ ತಪ್ಪು ಸರಿಪಡಿಸಿಕೊಂಡರು. ಸಾಲಮನ್ನಾ ಕುರಿತು ಸಚಿವ ಸಂಪುಟದಲ್ಲೂ ನಿನ್ನೆ ತೀರ್ಮಾನ ಕೈಗೊಂಡಿದ್ದೇವೆ, ಸದ್ಯದಲ್ಲೇ ಸಾಲಮನ್ನಾದ ಆದೇಶ ಹೊರಬೀಳುತ್ತದೆ ಎಂದವರು ಹೇಳಿದರು. ಬಿಜೆಪಿಯವರು ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ಮೋದಿಯವರು, ಕ್ರಿಶ್ಚಿಯನ್, ಮುಸ್ಲಿಂ ಸಮುದಾಯದವರನ್ನು ದೂರ ಇಡುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ವ್ಯಾಪಾರಸ್ಥರ ಪಕ್ಷ, ನಮ್ಮದು ಕಾಯಕ ಮತ್ತು ದಾಸೋಹ ಸಿದ್ಧಾಂತ ಹೊಂದಿರುವ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ಬಿಜೆಪಿ, ಜೆಡಿಎಸ್ ಮುಖಂಡರು ಹೇಳಿಕೆ ನೀಡಿದ್ದರು. ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದರೂ, ಸಾಲಮನ್ನಾ ಏಕೆ ಮಾಡಲಿಲ್ಲ ಎಂದು ಸಿಟ್ಟಿನಿಂದ ಹೇಳಿದರು. ರೈತರ ಸಾಲಮನ್ನಾ ಮಾಡುವುದು ಫ್ಯಾಶನ್ ಆಗಿದೆ ಎಂಬ ಕೇಂದ್ರ ಸಚಿವ ವೆಂಕಯ್ಯನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತರ ಪ್ರದೇಶದ, ಪಂಜಾಬ್ ಚುನಾವಣೆಯಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಇದು ಫ್ಯಾಶನ್ನಾ ಎಂದು ಕಿಡಿಕಾರಿದರು. ಇದಕ್ಕೂ ಮೊದಲು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಹಲವಾರು ವರ್ಷಗಳಿಂದ ರಾಜ್ಯದ ರೈತ ಸಂಕಷ್ಟದಲ್ಲಿದ್ದಾನೆ, ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಅನ್ನದಾತನ ನೆರವಿಗೆ ರಾಜ್ಯಸರ್ಕಾರ ಸ್ಪಂದಿಸಿದೆ. ಸಾಲಮನ್ನಾ ಮಾಡುವ ಐತಿಹಾಸಿಕ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ ಎಂದು ಮಚ್ಚುಗೆ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ