ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ರಾಜೀನಾಮೆ.. ?

Kannada News

23-06-2017 336

ಬೆಂಗಳೂರು: ರಾಜ್ಯದಲ್ಲಿ ಇಂದಿರಾಗಾಂಧಿ, ದೇವರಾಜ ಅರಸು, ರಾಹುಲ್‌ ಕಾಂಗ್ರೆಸ್ ಮಸುಕಾಗುತ್ತಿದೆ. ಹೈಕಮಾಂಡ್ ದುರ್ಬಲವಾಗಿದೆ, ಸಿದ್ಧರಾಮಯ್ಯನವರ ಕಾಂಗ್ರೆಸ್ ವಿಜೃಂಭಿಸುತ್ತಿದೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಇಂದಿಲ್ಲಿ ತಮ್ಮ ಅಂತರಾಳದ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬೆಂಗಳೂರು ಪ್ರೆಸ್‌ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯ ಅವರ ಧೋರಣೆ, ಅವರ ಬಗ್ಗೆ ಇರುವ ಸಿಟ್ಟು, ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಕಡೆಗಣಿಸುತ್ತಿರುವುದು ಎಲ್ಲವೂ ತಾನೇ ಎಂಬಂತೆ ವರ್ತಿಸುತ್ತಿರುವ ಬಗ್ಗೆ ಟೀಕಾ ಪ್ರಹಾರವನ್ನೇ ಮಾಡಲು ವೇದಿಕೆಯನ್ನಾಗಿ ಬಳಸಿಕೊಂಡರು. ಪಕ್ಷದಲ್ಲಿ ನನ್ನನ್ನು ಕಡೆಗಣಿಸುತ್ತಿರುವುದರಿಂದ ಬಹಳ ನೋವಾಗಿದೆ. ಕಾಂಗ್ರೆಸ್ ತೊರೆಯುವುದಾಗಿ ಹೇಳಿದ್ದರೂ ಯಾರೊಬ್ಬರೂ ತಮ್ಮನ್ನು ಮಾತನಾಡಿಸಿಲ್ಲ. ಅನಾಥ ಪ್ರಜ್ಞೆ ಅನುಭವಿಸುವಂತಾಗಿದೆ. ಮಲ್ಲಿಕಾರ್ಜುನ ಖರ್ಗೆ ಯವರಂತಹ ಹಿರಿಯ ನಾಯಕರೂ ತಮ್ಮನ್ನು ಮಾತನಾಡಿಸುವ ಪ್ರಯತ್ನ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಕಾಂಗ್ರೆಸ್‌ನಲ್ಲಿ ಮುಂದುವರೆಯಬೇಕಾ ಎಂಬ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ವಿಶ್ವನಾಥ್ ಹೇಳಿದರು. ವಿಶ್ವನಾಥ್ ಅವರನ್ನು ಭೇಟಿ ಮಾಡಿ ಪಕ್ಷದಲ್ಲೇ ಉಳಿಯುವಂತೆ ಮನವೊಲಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ ಎಂಬ ಬಗ್ಗೆ ಅವರ ಗಮನ ಸೆಳೆದಾಗ, ಮನವೊಲಿಸುವ ಯತ್ನ ಎಲ್ಲಿ ಬಂತು ಒಂದೂ ಫೋನೂ ಮಾಡಿಲ್ಲ. ನನ್ನನ್ನು ಸಂಪರ್ಕಿಸಿಲು ಅವರಿಗೆ ಹೆದರಿಕೆ ಎಂದು ಪ್ರತಿಕ್ರಿಯಿಸಿದರು. ಪಕ್ಷದಲ್ಲಿ ನನಗೆ ನೋವಾಗಿರುವ ಬಗ್ಗೆ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರ ಮುಂದೆ ತೋಡಿಕೊಂಡಾಗ, ನೀವು ಸಿದ್ಧರಾಮಯ್ಯ ಮೈಸೂರು ಭಾಗದ ನಾಯಕರು. ಕುರುಬ ಜಾತಿಗೆ ಸೇರಿದವರು. ನೀವು ನೀವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು. ಅದಕ್ಕೆ ನಾನು ಯಾವ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದೆ ಎಂದರು.

ನಾನು ಯಾವುದೇ ಬೇಡಿಕೆಯನ್ನು ಪಕ್ಷದ ನಾಯಕರ ಮುಂದಿಟ್ಟಿಲ್ಲ. ಬೇಡಿಕೆ ಈಡೇರಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಡುತ್ತಿಲ್ಲ. ನಾನು ಮರಳಿನವನಲ್ಲ, ಗಣಿಗಾರಿಕೆ ಅಥವಾ ರಿಯಲ್ ಎಸ್ಟೇಟ್ ದಂಧೆಯನ್ನೂ ನಡೆಸಿಲ್ಲ. ವರ್ಗಾವಣೆ ವ್ಯವಹಾರದಲ್ಲೂ ತೊಡಗಿಲ್ಲ. ನನಗೆ ಯಾರ ಹಂಗೂ ಇಲ್ಲ. ಸಿದ್ಧರಾಮಯ್ಯನವರಿಂದ ಏನನ್ನೂ ಪಡೆದಿಲ್ಲ. ನನ್ನ ಮಗ, ಸಚಿವ ಮಹದೇವಪ್ಪ ಅವರನ್ನು ಭೇಟಿ ಮಾಡಿ ಕಾಂಟ್ರ್ಯಾಕ್ಟ್ ಕೊಡಿಸಿ ಎಂದು ಕೇಳಿಲ್ಲ ಎಂದರು. ಕಾಂಗ್ರೆಸ್‌ ನನ್ನ ತಾಯಿ ಇದ್ದಂತೆ. ರಾಜಕೀಯ ಪಾಠಗಳನ್ನು ಕಲಿತಿದ್ದೆ ಇಲ್ಲಿ. ಇಂದಿರಾಗಾಂಧಿ, ದೇವರಾಜ ಅರಸು, ವೀರೇಂದ್ರಪಾಟೀಲ್, ಬಸವಲಿಂಗಪ್ಪ ಅವರಂತಹ ನಾಯಕರಿಂದ ಆಡಳಿತ ಪಾಠ ಕಲಿತಿದ್ದೇನೆ. ರಾಜಕೀಯ ಸಾಂಸ್ಕೃತಿಕ ಆಯಾಮಗಳನ್ನು ತಿಳಿಸಿದ್ದೇನೆ ಎಂದರು. ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ ಸಿದ್ಧರಾಮಯ್ಯ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾಗಿ ಭೀಮನ ಭಾಷಣ ಮಾಡಿದ್ದರು. ಆದರೆ ಈಗ ಅವರು ದುಶ್ಯಾಸನನಂತಾಗಿದ್ದಾರೆ. ಜನರಿಗೆ ಕೊಟ್ಟ ವಚನವನ್ನು ಈಡೇರಿಸದೆ ವಚನ ಭ್ರಷ್ಟರಾಗಿದ್ದಾರೆ ಎಂದರು.

ಗಣಿದಣಿ ರೆಡ್ಡಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್‌ಹೆಗ್ಡೆ, ಸ್ವಾತಂತ್ರ್ಯ ಹೆಚ್.ಎಸ್. ದೊರೆಸ್ವಾಮಿ ಅವರೆಲ್ಲರನ್ನೂ ಕರೆಸಿ ಮಾತನಾಡುವ ಸೌಜನ್ಯ ತೋರಿಲ್ಲ ಎಂದರು. ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ರೂಪಾಂತರದ ಹಾದಿಯಲ್ಲಿದೆ. ವಲಸೆ ಬಂದ ಜನರಿಗೆ ಕಾಂಗ್ರೆಸ್ ಚುಮ್ಮು ಹಲಗೆಯಾಗಿ ಅಧಿಕಾರ ಕೊಟ್ಟಿತು. ಆದರೆ ಅಧಿಕಾರಸ್ಥರು ಕಾಂಗ್ರೆಸ್‌ನ ಆತ್ಮವನ್ನು ಗ್ರಹಿಸಲಿಲ್ಲ. ಕಾಂಗ್ರೆಸ್‌ ಗಿದ್ದ ಸಾಂಸ್ಕೃತಿಕ ಆಯಾಮ ಮಸುಕಾಗುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸದಾ ಸುಸಂಸ್ಕೃತವಾಗಿತ್ತು. ಅದಕ್ಕೊಂದು ಮಾನವೀಯತೆಯ ಚಹರೆ ಇತ್ತು, ಜನ ಮುಖಿಯಾಗಿತ್ತು. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಮಾಯವಾಗಿ ಆಂತರಿಕ ಆಪತ್ತಿನ ಸ್ಥಿತಿ ಎದುರಾಗಿದೆ ಎಂದರು. ಸರ್ಕಾರ ಮತ್ತು ಪಕ್ಷದ ನಡವಳಿಕೆಗಳನ್ನು ವಿಮರ್ಶಿಸಿದವರಿಗೆ ಪ್ರಶ್ನಿಸಿದವರನ್ನು ಎದುರಾಳಿಗಳಂತೆ ನೋಡಲಾಗುತ್ತಿದೆ ಎಂದರು. ನನಗೆ ಸ್ಥಾನ, ಗೌರವ, ಪದವಿ ದೊರೆಯಲಿಲ್ಲ ಎಂಬುದು ನನ್ನ ರಾಜೀನಾಮೆಗೆ ಖಂಡಿತ ಕಾರಣವಲ್ಲ ಎಂದರು. ಕಾಂಗ್ರೆಸ್‌ನ ಮೂಲ ಸಿದ್ಧಾಂತಗಳು ತೆಳುವಾಗಿ ರೂಪಾಂತರವಾಗುತ್ತಿವೆ. ಕಟ್ಟಕಡೆಯ ಮನುಷ್ಯನನ್ನು ಗೌರವಿಸಬೇಕೆಂಬ ಕಾಂಗ್ರೆಸ್ ಆಶಯ ಗೆಲ್ಲಬೇಕು. ಎಲ್ಲರನ್ನೂ ಸೌಜನ್ಯದಿಂದ ಒಗ್ಗೂಡಿಸಿ ಕಾರ್ಯಕರ್ತರನ್ನು ಗೌರವಿಸಿ, ಅವರ ಅಭಿಪ್ರಾಯಗಳನ್ನು ಆಡಳಿತದಲ್ಲಿ ಮಿಳಿತಗೊಳಿಸುವ ಕೆಲಸ ನಾಯಕರಿಂದ ಆಗಬೇಕು ಅದು ಆಗುತ್ತಿಲ್ಲ ಎಂದರು.

ಪ್ರಸ್ತುತ ನನ್ನ ಪಕ್ಷದವರ ಮತ್ತು ಪಕ್ಷದ ಸರ್ಕಾರ ನಡೆಸುವವರ ಸಾಂಸ್ಕೃತಿ, ಬೌದ್ಧಿಕ ದಿವಾಳಿತನ ನನ್ನನ್ನು ನೋಯಿಸಿ ನಿರಾಸೆಗೊಳಿಸಿದೆ. ರಾಜಕೀಯ ಹೊಂದಾಣಿಕೆಗಾಗಿ ಮಾತನಾಡದೇ ಇರುವುದು ನನ್ನ ಸ್ವಂತಿಕೆಗೆ, ಸಂಸ್ಕೃತಿಗೆ, ಸ್ವಭಾವಕ್ಕೆ ಹೊಂದುವುದಿಲ್ಲ ಎಂದರು. ನನ್ನ ಅಭಿಪ್ರಾಯ ಬೇಧ ಹೊಂದಿರುವುದರಿಂದ ನನ್ನ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಬೇರೆನೂ ಸ್ವಾರ್ಥದ ಕಾರಣಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ