ಹೆಲ್ಮೆಟ್ ಧರಿಸದ ಇಬ್ಬರ ದುರ್ಮರಣ !

Kannada News

23-06-2017

ಬೆಂಗಳೂರು: ಹೆಲ್ಮೆಟ್ ಧರಿಸದೇ ಹೊಸ ಬೈಕ್‍ನಲ್ಲಿ ಹೋಗಿದ್ದ ಇಬ್ಬರು ಯುವಕರು ರಸ್ತೆ ಅಫಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಗುರುವಾರ ಮಧ್ಯರಾತ್ರಿ ಮಲ್ಲೇಶ್ವರಂ ನಲ್ಲಿ ನಡೆದಿದೆ. ಮಲ್ಲೇಶ್ವರಂ ನ ರೈಲ್ವೆ ಮೇಲ್ಸೇತುವೆ ರಸ್ತೆಯಲ್ಲಿ ಮಧ್ಯರಾತ್ರಿ ಹೊಚ್ಚ ಹೊಸ ಯಮಹಾ ಬೈಕ್‍ನಲ್ಲಿ ವೇಗವಾಗಿ ಹೆಲ್ಮೆಟ್ ಧರಿಸದೆ ಹೋಗುತ್ತಿದ್ದ ಇಬ್ಬರು ಯುವಕರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ರಾಜಾಜಿನಗರದ ವೆಂಕಟ್ (21) ಹಾಗೂ ಲಗ್ಗೆರೆಯ ಚಂದನ್ (21)ಎಂದು ಗುರುತಿಸಲಾಗಿದೆ. ಹೆಬ್ಬಾಳದ ಯಮಹಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರೂ ಸ್ನೇಹಿತರು ರಾತ್ರಿ 12.45ರ ವೇಳೆ ಕೆಲಸ ಮುಗಿಸಿಕೊಂಡು ತಮ್ಮದೇ ಕಂಪನಿಯ ನೊಂದಣಿಯಾಗದ ಹೊಸ ಎಫ್ಜೆಡ್ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಮಲ್ಲೇಶ್ವರಂ ವೃತ್ತದಿಂದ ದೇವಯ್ಯ ಪಾರ್ಕ್ ಕಡೆಗಿನ ಹೋಗುವ ರೈಲ್ವೆ ಮೇಲ್ಸೇತುವೆ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಇಬ್ಬರು ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಹಾಕದೆ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿರುವ ಮಲ್ಲೇಶ್ವರಂ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ