ಸಂಪುಟ ವಿಸ್ತರಣೆ: ಸಚಿವಾಕಾಂಕ್ಷಿಗಳ ಲಾಬಿ ಶುರು !

Kannada News

22-06-2017

ಬೆಂಗಳೂರು: ಅಧಿವೇಶನ ಮುಗಿಯುತ್ತಿದ್ದಂತೆ, ಸಂಪುಟ ವಿಸ್ತರಣೆಯ ಕಸರತ್ತು ಪ್ರಾರಂಭ ಗೊಂಡಿದ್ದು, ಚಟುವಟಿಕೆಗಳು ಗರಿಗೆದರಿವೆ. ಜೂನ್  26 , 27ರಂದು ಸಚಿವ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿರುವುದರಿಂದ ಸಚಿವಾಕಾಂಕ್ಷಿಗಳ ಲಾಬಿ ಜೋರಾಗಿದೆ. ಹದೇವಪ್ರಸಾದ್ ಅವರ ನಿಧನ, ಎಚ್.ವೈ.ಮೇಟಿ ಮತ್ತು ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ಮೂರು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದು, ಸಚಿವಾಕಾಂಕ್ಷಿಗಳು ಲಾಬಿಯನ್ನು ಶುರುವಿಟ್ಟುಕೊಂಡಿದ್ದಾರೆ. ಖಾಲಿಯಾಗಿರುವ ಸ್ಥಾನಗಳನ್ನು ಅದೇ ಜಾತಿಯವರಿಗೆ ನೀಡಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದು, ಅದೇ ಜಾತಿಯಲ್ಲಿರುವ ಶಾಸಕರು, ಸಿಎಂ ಹಾಗೂ ಹೈಕಮಾಂಡ್ ಜೊತೆ ತಮ್ಮ ಹಕ್ಕು ಮಂಡಿಸಿದ್ದಾರೆ. ಕುರುಬ ಸಮುದಾಯದಿಂದ ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಡಿ.ಜಿ.ಗೋವಿಂದಪ್ಪ, ಎಚ್.ಎಂ.ರೇವಣ್ಣ, ಬಸವರಾಜ ಶಿವಣ್ಣನವರ್ ಅವರುಗಳು ಪ್ರಯತ್ನ ನಡೆಸಿದರೆ, ಲಿಂಗಾಯತ ಸಮುದಾಯದಿಂದ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಅಪ್ಪಾಜಿ ನಾಡಗೌಡ, ಡಿ.ಎಂ.ಇನಾಂದಾರ್, ಅಶೋಕ್‍ ಪಟ್ಟಣ್, ಡಾ.ಎ.ಬಿ.ಮಾಲಕರೆಡ್ಡಿ ಅವರುಗಳ ಹೆಸರುಗಳು ಕೇಳಿ ಬಂದಿವೆ. ದಲಿತ ಸಮುದಾಯದಿಂದ ಪಿ.ಎಂ.ನರೇಂದ್ರಸ್ವಾಮಿ, ಆರ್.ಬಿ.ತಿಮ್ಮಾಪುರ್, ಧರ್ಮಸೇನ ಅವರು ಪೈಪೋಟಿ ನಡೆಸುತ್ತಿದ್ದಾರೆ. ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯರಿಗೆ ಆದ್ಯತೆ, ಚಾಮರಾಜನಗರ ಜಿಲ್ಲೆಗೆ ಆದ್ಯತೆ, ಲಿಂಗಾಯಿತರಿಗೆ ಪ್ರಾಮುಖ್ಯತೆ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿದ್ದಾರೆ. ಇದೇ ಲಿಂಗಾಯತರ ಪ್ರಾತಿನಿಧ್ಯದಲ್ಲಿ ಷಡಕ್ಷರಿ ಅವರೂ ಕೂಡ ಆಕಾಂಕ್ಷಿಗಳಾಗಿದ್ದು, ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ. ಅದೇ ರೀತಿ ಎಚ್.ವೈ.ಮೇಟಿಯಿಂದ ತೆರವಾಗಿರುವ ಸ್ಥಾನಕ್ಕೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಎಚ್.ವೈ.ಮೇಟಿಯವರನ್ನೇ ಮತ್ತೆ ನೇಮಕ ಮಾಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಯಾವುದೇ ಆಕ್ಷೇಪ ವ್ಯಕ್ತವಾಗದಿದ್ದರೆ ಅವರನ್ನೇ ನೇಮಕ ಮಾಡಿಕೊಳ್ಳುವ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಆರೋಗ್ಯ ಸಚಿವರಾಗಿರುವ ರಮೇಶ್‍ ಕುಮಾರ್ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಿ ಅವರ ಸ್ಥಾನಕ್ಕೆ ನರೇಂದ್ರ ಸ್ವಾಮಿಯವರನ್ನು ನೇಮಕ ಮಾಡುವ ಯೋಚನೆ ಮುಖ್ಯಮಂತ್ರಿಯವರದ್ದಾಗಿದೆ. ಸಚಿವ ಸಂಪುಟದ ಮೇಲೆ ಆರ್.ಬಿ.ತಿಮ್ಮಾಪುರ್, ಧರ್ಮಸೇನ ಅವರೂ ಕೂಡ ಕಣ್ಣಿಟ್ಟಿದ್ದಾರೆ. ಪರಮೇಶ್ವರ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಪರಿಶಿಷ್ಟ ಜಾತಿಯಿಂದ ನರೇಂದ್ರ ಸ್ವಾಮಿ ಹಾಗೂ ತಿಮ್ಮಾಪುರ್, ಧರ್ಮಸೇನ ಅವರೆಲ್ಲರೂ ಕೂಡ ಪೈಪೋಟಿ ನಡೆಸಿದ್ದಾರೆ. ತಿಂಗಳಾಂತ್ಯದಲ್ಲಿ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದು ಏನಾಗಲಿದೆ ಎಂಬುದನ್ನು ಕಾದುನೋಡಬೇಕು. ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಈಗಾಗಲೇ ಹೈಕಮಾಂಡ್ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ಮುಖ್ಯಮಂತ್ರಿಯವರಿಗೆ ಸಂಪುಟ ವಿಸ್ತರಣೆ ಸಂಬಂಧ ಮುಕ್ತ ಅವಕಾಶವನ್ನೂ ಸಹ ನೀಡಿದೆ. ಯಾವುದೇ ರೀತಿ ತೊಂದರೆಯಾಗದಂತೆ ಅದೇ ಜಾತಿಯವರಿಗೆ ಪ್ರಾತಿನಿಧ್ಯ ನೀಡಿ ಅವಕಾಶ ಕಲ್ಪಿಸಿ ಎಂಬ ಸೂಚನೆಯನ್ನು ನೀಡಿದೆ. ಅಲ್ಲದೆ, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರು ಸರ್ಕಾರದ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂಬ ಸಂದೇಶವನ್ನು ನೀಡಿದ್ದಾರೆ. ಹಾಗಾಗಿ ಸಂಪುಟ ವಿಸ್ತರಣೆ ಸಿದ್ದರಾಮಯ್ಯನವರಿಗೆ ಅಷ್ಟೇನೂ ಕಷ್ಟವಾಗಲಾರದು. ತಾವು ಅಂದುಕೊಂಡಂತೆ ಸಂಪುಟ ವಿಸ್ತರಣೆಯನ್ನು ಸಿಎಂ ಮಾಡಲಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ