ನಗರದಲ್ಲಿ ಮೂರು ಅಪಘಾತ ಮೂವರ ದುರ್ಮರಣ !

Kannada News

22-06-2017

ಬೆಂಗಳೂರು:  ನಗರದ ನಾಗವಾರ ಮೇಲ್ಸೇತುವೆ ಬಳಿ ಇರುವ ಪುಲಿಕೇಶಿ ನಗರದ ಮಾಸ್ಕ್ ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತ ಹಾಗೂ ಗೊರಗುಂಟೆಪಾಳ್ಯದ ತಾಜ್‍ವಿವಾಂತ ಹೋಟೆಲ್ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಅಪಘಾತ ಸೇರಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಘಾತಗಳಲ್ಲಿ ಮೂವರು ಗಾಯಗೊಂಡಿದ್ದು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಹೆಣ್ಣೂರಿನಿಂದ ಹೆಬ್ಬಾಳದ ಕಡೆಗೆ ಪಲ್ಸರ್ ಬೈಕ್‍ನಲ್ಲಿ ನಿನ್ನೆ ಮಧ್ಯರಾತ್ರಿ 2.30ರ ವೇಳೆ ವೇಗವಾಗಿ ಹೋಗುತ್ತಿದ್ದ ಇಬ್ಬರು ಯುವಕರು ನಾಗವಾರ ಮೇಲ್ಸೇತುವೆ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಜೆ ಹಳ್ಳಿಯ ಜಬೀರ್ ಖಾನ್ (19) ಮೃತ ಬೈಕ್ ಸವಾರ ಎಂದು ಗರುತಿಸಲಾಗಿದೆ. ಹಿಂಬದಿ ಸವಾರ ಶಿವಾಜಿನಗರದ ಅಬ್ದುಲ್ಲ(19)ಗಂಭೀರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜಬೀರ್ ಖಾನ್ ಹೆಲ್ಮೆಟ್ ಹಾಕದೆ ಇದ್ದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ಚಿಕ್ಕಜಾಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪುಲಿಕೇಶಿ ನಗರದ ಮಾಸ್ಕ್ ರಸ್ತೆಯಲ್ಲಿ ನಿನ್ನೆ ರಾತ್ರಿ 12ರ ವೇಳೆ ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಮಂಡ್ಯ ಮೂಲಕ ತ್ರಿಲೋಚನ್ ಹಾಗೂ ಯೋಗೀಶ್ ಗಾಯಗೊಂಡಿದ್ದಾರೆ. ಕೂಲ್ಸ್ ಪಾರ್ಕ್ ನ ಶಕ್ತಿ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರು ಊಟ ಮಾಡಿಕೊಂಡು ಬರಲು ಪುಲಿಕೇಶಿ ನಗರದ ಕಡೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ತ್ರಿಲೋಚನ್ ಹಾಗೂ ಯೋಗೀಶ್ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತವುಂಟು ಮಾಡಿದ ಅನಿಲ್ ಕುಮಾರ್‍ ನನ್ನು ಪುಲಿಕೇಶಿ ನಗರ ಸಂಚಾರ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇನ್ನು ಗೊರಗುಂಟೆಪಾಳ್ಯದ ತಾಜ್‍ವಿವಾಂತ ಹೋಟೆಲ್ ಬಳಿ ಜಾಲಹಳ್ಳಿ ಕಡೆ ಎಡತಿರುವು ತೆಗೆದುಕೊಳ್ಳುತ್ತಿದ್ದ ತಳ್ಳುವಗಾಡಿಗೆ ಲಾರಿ ಡಿಕ್ಕಿ ಹೊಡೆದು, ತರಕಾರಿ ವ್ಯಾಪಾರಿ ಮುನಿಸ್ವಾಮಪ್ಪ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ನಂದಿನಿಲೇಔಟ್‍ನ ನಿವಾಸಿಯಾಗಿದ್ದು,  ತರಕಾರಿ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಮುನಿಸ್ವಾಮಪ್ಪ ಅವರು ಇಂದು ಮುಂಜಾನೆ 5.20ರ ವೇಳೆ ತಳ್ಳುವ ಗಾಡಿಯನ್ನು ನೂಕಿಕೊಂಡು ಜಾಲಹಳ್ಳಿ ಕಡೆ ಹೋಗುತ್ತಿದ್ದಾಗ ಆಂಧ್ರ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದ್ದು, ಲಾರಿ ಚಾಲಕ ಮುತ್ತುಸ್ವಾಮಿಯನ್ನು ಬಂಧಿಸಿರುವ ಯಶವಂತಪುರ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ