ಗ್ರಾಮೀಣ ಪ್ರದೇಶಕ್ಕೆ ವೈದ್ಯರ ನೇಮಕ ಸರ್ಕಾರದ ಹೊಣೆ !

Kannada News

21-06-2017

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿಸಲು ಕಾನೂನು ತರುವುದು ಅಗತ್ಯವಾಗಿದ್ದು, ಈ ಹಿನ್ನೆಲೆಯಲಿ ವಿಧೇಯಕ ತರಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಮೇಲ್ಮನೆಯಲ್ಲಿಂದು ಬಲವಾಗಿ ಸಮರ್ಥಿಸಿಕೊಂಡರು. ಕರ್ನಾಟಕ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ತಿದ್ದುಪಡಿ ವಿಧೇಯಕ-2017 ರ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಈ ವಿಧೇಯಕ ಗ್ರಾಮೀಣ ಸೇವೆಗೆ ವೈದರನ್ನ ಒದಗಿಸುವ ಉದ್ದೇಶ ಹೊಂದಿದೆ. ವೈದ್ಯಕೀಯ ಕೋರ್ಸ್‍ನಲ್ಲಿ ಪಿಜಿ ಪಡೆದವರು ಗ್ರಾಮೀಣ ಸೇವೆ ಮಾಡಬೇಕು. ಬೇರೆ ರಾಜ್ಯದಿಂದ ಬಂದು ರಾಜ್ಯದಲ್ಲಿ ನೋಂದಣಿ ಮಾಡಿಕೊಂಡವರಿಗೂ ಗ್ರಾಮೀಣ ಸೇವೆ ಕಡ್ಡಾಯ. ಗ್ರಾಮೀಣ ಪ್ರದೇಶಗಳಲ್ಲಿ ಸೂಪರ್ ಸ್ಪೇಷಾಲಿಟಿ ಕೊರತೆಯಿಂದಾಗಿ ಅಂತಹ ವಿಶೇಷ ತಜ್ಞ ವೈದ್ಯರನ್ನು ಜಿಲ್ಲಾ ಕೇಂದ್ರಗಳಲ್ಲಿರುವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳಿಗೆ ನೇಮಿಸಲು ಈ ವಿಧೇಯಕದಲ್ಲಿ ಅವಕಾಶವಿದೆ ಎಂದು ವಿವರಿಸಿದರು. ಈ ಹೊಸ ತಿದ್ದುಪಡಿ ವಿಧೇಯಕದ ಮೂಲಕ 5000 ವೈದ್ಯರ ಸೇವೆ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಸದನ ತಿದ್ದುಪಡಿ ವಿಧೇಯಕಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದರು.  ನಂತರ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ-2017)ದ ಮೇಲೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್. ರಮೇಶಕುಮಾರ್, ಗ್ರಾಮೀಣ ಪ್ರದೇಶಗಳಿಗೆ ಅನುಭವಿ ವೈದ್ಯರ ನೇಮಕ ಸರಕಾರದ ಹೊಣೆಯಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಹೊಸದಾಗಿ ನೇಮಕಗೊಂಡ ವೈದ್ಯರನ್ನು ಅವರಿಗೆ ಬೇಕಾದಲ್ಲಿ ಅವಕಾಶ ನೀಡಲಾಗದು ಎಂದರು. ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 2353 ಸಾಮಾನ್ಯ ವೈದ್ಯರ ಹುದ್ದೆಗಳಲ್ಲಿ ಕೇವಲ 50 ಮಾತ್ರ ಖಾಲಿ ಇವೆ. 1300 ತಜ್ಞ ವೈದ್ಯರ ಹುದ್ದೆ ಖಾಲಿ ಇದ್ದು ಗುತ್ತಿಗೆ ಆಧಾರದಲ್ಲಿ ಬರಲು ವೈದ್ಯರು ಒಪ್ಪುತ್ತಿಲ್ಲ. ಮುಕ್ತ ಬಿಡ್ ಮೂಲಕ ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಬಿಜೆಪಿಯ ರಾಮಚಂದ್ರೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ತೀವ್ರತರದ ಖಾಯಿಲೆ ಇರುವ ಜನ ಇದ್ದಾರೆ. ಹೀಗಾಗಿ ಅಲ್ಲಿಗೆ ಅನುಭವಿ ವೈದ್ಯರು ಬೇಕು. ದೊಡ್ಡ ನಗರಗಳಿಗೆ ಅನುಭವಿ ವೈದ್ಯರನ್ನ ನೇಮಿಸಿದರೆ ಹಳ್ಳಿಗಳಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಸಲಹೆ ನೀಡಿದರು. ಸರಕಾರಿ ಆಸ್ಪತ್ರೆಗಳಲ್ಲಿ ಸೇವೆಯಲ್ಲಿರುವ ವೈದ್ಯರು ಸಹಿಗೆ ಮಾತ್ರ ಆಸ್ಪತ್ರೆಗೆ ಬರುತ್ತಾರೆ, ಆದರೆ ಇಡೀ ದಿನ ಅವರ ಸೇವೆ ಖಾಸಗಿ ಆಸ್ಪತ್ರೆಗಳಲ್ಲಿರುತ್ತದೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಸೇವೆಗೆ ಕಾಲಾವಧಿ ನಿಗದಿಪಡಿಸಿ. ಹೀಗಾಗಿ ಸರಕಾರಿ ಆಸ್ಪತ್ರೆಗಳಿಗೆ ಬರುವ ಎಲ್ಲ ರೋಗಿಗಳಿಗೂ ವೈದ್ಯಕೀಯ ಸೇವೆ ಲಭ್ಯವಾಗಲು ಸಾಧ್ಯ ಎಂದು ಸದಸ್ಯ ವಿ.ಎಸ್. ಉಗ್ರಪ್ಪ ಸಲಹೆ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ