ಸಾಲಮನ್ನಾ ವಿಧಾನ ಸಭೆಯಲ್ಲಿ ಸುಧೀರ್ಘ ಉತ್ತರ !

Kannada News

21-06-2017

ಬೆಂಗಳೂರು: ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಗರಿಷ್ಠ 50 ಸಾವಿರ ರೂಪಾಯಿಗಳ ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದು, ಮೂರು ವರ್ಷಗಳ ಸತತ ಬರದಿಂದ ಕೆಂಗೆಟ್ಟಿರುವ ರೈತ ಸಮುದಾಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. 2017-18ನೇ ಸಾಲಿನ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಸಾಲ ಮನ್ನಾ ಘೋಷಣೆ ಮಾಡಿ ಮುಂದಿನ ಚುನಾವಣೆಗೆ ನಾವು ಸಿದ್ಧ ಎನ್ನುವ ಸಂದೇಶ ರವಾನಿಸಿದರು. ಸಹಕಾರ ಸಂಸ್ಥೆಗಳಲ್ಲಿ ಜೂನ್ 20 ರವರೆಗೆ ಬಾಕಿ ಇರುವ ಎಲ್ಲ ರೈತರ ಎಲ್ಲ ಬಗೆಯ ಒಟ್ಟು ಅಲ್ಪಾವಧಿ ಸಾಲದಲ್ಲಿ ಐವತ್ತು ಸಾವಿರ ರೂಪಾಯಿಗಳನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಮೂರು ಗಂಟೆಗಳ ಕಾಲ ಸುದೀರ್ಘ ಉತ್ತರ ನೀಡಿದ ಅವರು ಕೊನೆಯಲ್ಲಿ ರೈತರ ಸಾಲ ಮನ್ನಾ ಘೋಷಿಸಿ, ಪ್ರತಿಪಕ್ಷ ಶಾಸಕರಿಗೆ ಆಘಾತ ನೀಡಿದರು. ಈ ಘೋಷಣೆಯಿಂದ ರಾಜ್ಯದ 22,27,506 ರೈತರಿಗೆ ಲಾಭವಾಗಲಿದ್ದು, 8165 ಕೋಟಿ ರೂ ಸರ್ಕಾರಕ್ಕೆ ಹೊರೆಯಾಗಲಿದೆ ಎಂದರು. ಈಗ ತಾವು ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದು, ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು. ನಾವು ಪ್ರಣಾಳಿಕೆ ಹಾಗೂ ಬಜೆಟ್‍ನಲ್ಲೂ ಕೂಡ ಸಾಲ ಮನ್ನಾ ಮಾಡುವ ಘೋಷಣೆ ಮಾಡಿರಲಿಲ್ಲ. ಆದರೂ ಸತತ ಬರಗಾಲದಿಂದ ಸಕಷ್ಟದಲ್ಲಿರುವ ರೈತರ ಹಿತಕಾಪಾಡುವ ದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದೆ. ಬಿಜೆಪಿ  ಅವರಿಗೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ಹಾಗೂ ರೈತರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಸಹಕಾರಿ ಬ್ಯಾಂಕುಗಳ ಮೂಲಕ 10,736 ಕೋಟಿ ರೂ . ಸಾಲ ನೀಡಲಾಗಿದೆ. ಸಾಲ ಮನ್ನಾ ಮಾಡಿರುವ  ಆದೇಶವನ್ನು ಕೂಡಲೇ ಹೊರಡಿಸಲಾಗುವುದು ಎಂದು ಹೇಳಿದರು. ರಾಷ್ಟೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳ ಮೂಲಕ ರೈತರು ಶೇ.80ರಷ್ಟು ಸಾಲ ಪಡೆದಿದ್ದಾರೆ. ಆ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡುವಂತೆ ಪತ್ರ ಕೂಡ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದಾಗಲು ಮನವಿ ಮಾಡಲಾಗಿತ್ತು. ಆದರೂ ಕೂಡ ಕೇಂದ್ರ ಸರ್ಕಾರ  ಸ್ಪಂದಿಸಲಿಲ್ಲ ಎಂದರು.

 ಜೂ.13 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಬಿಡುಗಾಸು ಕೊಡುವುದಿಲ್ಲ. ರಾಜ್ಯಗಳು ನಿಮ್ಮ ಸಂಪನ್ಮೂಲದಿಂದ ಬೇಕಿದ್ದರೆ ಸಾಲ ಮನ್ನಾ ಮಾಡಲಿ ಎಂದು ಹೇಳಿದ್ದರು. ಆದರೆ ನಮ್ಮ ಸರ್ಕಾರ ರೈತರ, ಹಿಂದುಳಿದವರ, ಬಡವರ, ಶೋಷಿತರ, ದಲಿತರ ಪರವಾಗಿದೆ. ಈಗಾಗಲೇ ರೈರತರಿಗೆ ಕೃಷಿ ಭಾಗ್ಯದಂತಹ ಹಲವು ಸೌಲಭ್ಯ ಕೊಟ್ಟಿದ್ದರೂ ಅವರ ಕಷ್ಟಕ್ಕೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಒಟ್ಟು 1,16,006ಕೋಟಿ ರೂ.ಗಳನ್ನು ರೈತರು ಸಾಲ ಮಾಡಿದ್ದಾರೆ. ಇದರಲ್ಲಿ ಅಲ್ಪಾವಧಿ ಸಾಲ 52ಸಾವಿರ ಕೋಟಿ ರೂ. ಇದೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 1600ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 3600 ಕೋಟಿ ರೂ. ಸಾಲ ಮನ್ನಾ ಮಾಡುವ ಘೋಷಣೆ ಮಾಡಿ 960ಕೋಟಿ ರೂ. ಮಾತ್ರ ನೀಡಿದ್ದರು. ಉಳಿದ 2ಸಾವಿರ ಕೋಟಿಯಷ್ಟು ಹಣವನ್ನು ನಾವು ತೀರಿಸಿದ್ದೆವು. ಎಲ್ಲಾ ಕಡೆ ರೈತರಿಂದ ಸಾಲ ಮನ್ನಾ ಮಾಡುವ  ಒತ್ತಾಯ ಬರುತ್ತಿತ್ತು. ನಮ್ಮ ಶಾಸಕರು ಕೂಡ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರುತ್ತಿದ್ದರು. ಅಲ್ಲದೆ, ಕುಮಾರಸ್ವಾಮಿ, ಶೆಟ್ಟರ್ , ಕೋನರೆಡ್ಡಿ ಸೇರಿದಂತೆ ಹಲವು ಶಾಸಕರು ಸದನದಲ್ಲಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು. ಈ ನಡುವೆ ರಿಸರ್ವ್ ಬ್ಯಾಂಕ್‍ನ ಗೌರ್ನರ್ ಊರ್ಜಿತ್ ಪಟೇಲ್ ರೈತರ ಸಾಲ ಮನ್ನ ಮಾಡಿದರೆ  ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಕಾರ್ಪರೇಟ್ ಸಂಸ್ಥೆಗಳಿಗೆ ಬ್ಯಾಂಕ್‍ಗಳು ಭಾರೀ ಪ್ರಮಾಣದಲ್ಲಿ ಸಾಲ ನೀಡಿದ್ದು, ಅವೆಲ್ಲವೂ ಅನುತ್ಪಾದಕ ಆಸ್ತಿಗಳಾಗಿವೆ. ಇಂತಹ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಆಪಾದಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ 72ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿತ್ತು, ವಿ.ಪಿ ಸಿಂಗ್ ಪ್ರಧಾನಿಯಾಗಿದ್ದಾಗ ತಲಾ 10ಸಾವಿರ ಸಾಲ ಮನ್ನಾ ಮಾಡಲಾಗಿತ್ತು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಾಲ ಮನ್ನ ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿತ್ತು. ಪ್ರಧಾನಿಯವರೂ ಸಹ ಇದನು ದೃಢೀಕರಿಸಿದ್ದರು. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.  2016ರ ಮಾರ್ಚ್ ಅಂತ್ಯದವರೆಗೆ ಬಾಕಿ ಇರುವ 36ಸಾವಿರ ಕೋಟಿ ರೂ. ಸಣ್ಣ ಮತ್ತು ಅತಿಸಣ್ಣ ರೈತರ ಸಾಲ ಮನ್ನ ಮಾಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಣೆ ಮಾಡಿದ್ದಾರೆ. ಆದರೆ, ಇನ್ನೂ ಆದೇಶ ಹೊರಬಂದಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನಿವಿಸ್  ಸಾಲ ಮನ್ನ ಮಾಡುವ ಘೋಷಣೆ ಮಾಡಿ ಅದಕ್ಕೊಂದು ಸಮಿತಿ ರಚಿಸಿದ್ದಾರೆ. ಆದೇಶ ಮಾತ್ರ ಎರಡೂ ರಾಜ್ಯಗಳಿಂದ  ಹೊರ ಬಿದ್ದಿಲ್ಲ. ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ 10 ಲಕ್ಷ ರೈತರಿಗೆ ಸಹಾಯವಾಗುವಂತೆ ಸಾಲ ಮನ್ನ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ