ಚಪ್ಪಲಿ ನೀಡಿತು ಹಂತಕನ ಸುಳಿವು !

Kannada News

21-06-2017

ಬೆಂಗಳೂರು: ಗುಜರಿ ಅಂಗಡಿಯಲ್ಲಿ ಮಲಗಿದ್ದ ಒಂಟಿ ವೃದ್ಧೆಯನ್ನು ಕೊಲೆಗೈದ ಪ್ರಕರಣವನ್ನು ಚಪ್ಪಲಿಯೊಂದರಿಂದ ಪತ್ತೆ ಹಚ್ಚುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಬಿದ್ದಿದ್ದ ವೃದ್ದೆಯದನ್ನು ಬಿಟ್ಟು ರಕ್ತಸಿಕ್ತವಾದ ಬಿದ್ದಿದ್ದ ಚಪ್ಪಲಿಯೊಂದನ್ನು ಪರಿಶೀಲಿಸಿದ ಪೊಲೀಸರಿಗೆ ಅದರ ಮುಂಭಾಗದಲ್ಲಿ ಕೆಲವೊಂದು ವೆಲ್ಡಿಂಗ್‍ನಿಂದ ಆಗುವ ರಂಧ್ರಗಳಿರುವುದು ಕಂಡುಬಂದು ಅದರಿಂದ ಆರೋಪಿ ಪತ್ತೆಯಾಗಿದ್ದಾನೆ. ಚಪ್ಪಲಿ ಜಾಡು ಹಿಡಿದ ತಕ್ಷಣ ಅವರು ನೇರವಾಗಿ ಆರೋಪಿಯ ಮನೆ ಬಾಗಿಲಿಗೆ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿಯು ಅಜ್ಜಿಯ ಬಳಿಯ ಚೀಲದಲ್ಲಿದ್ದ ಹಣದಾಸೆಗೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಥ್ರಿಲ್ಲರ್ ಸಿನಿಮಾಗಳನ್ನು ನೆನಪಿಸುವ ಈ ಘಟನೆ ನಿಜರೂಪದಲ್ಲೂ ಮಾಡಿದ ಪೊಲೀಸರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೂನ್ 15 ಮಧ್ಯರಾತ್ರಿ  ಸಮತಾನಗರದಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದ ಗಜಲಕ್ಷ್ಮೀ (65) ಅವರ ಕೊಲೆಯಾಗಿತ್ತು. ಗಜಲಕ್ಷ್ಮೀ ಅವರ ಗಂಡ ಮತ್ತು ಮಗ ಈ ಹಿಂದೆಯೇ ಸಾವನ್ನಪ್ಪಿದ್ದರು. ಅವರು ತಮ್ಮ ಸೊಸೆ ಕಲಾ ಹಾಗೂ ಮೊಮ್ಮಕ್ಕಳೊಂದಿಗೆ ನಗರದ ನೀಲಸಂದ್ರದಲ್ಲಿ ವಾಸಿಸುತ್ತಿದ್ದರು. ಗುಜರಿ ಅಂಗಡಿ ಇಟ್ಟುಕೊಂಡಿದ್ದ ಅವರು ರಾತ್ರಿ ಅದೇ ಅಂಗಡಿಯಲ್ಲಿ ಒಬ್ಬಂಟಿಯಾಗಿ ಮಲಗುತ್ತಿದ್ದರು. ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಆಡುಗೋಡಿ ಪೊಲೀಸರು, ಘಟನಾ ಸ್ಥಳವನ್ನು ಬೆರಳಚ್ಚು ಹಾಗೂ ಶ್ವಾನ ದಳದ ಸಿಬ್ಬಂದಿಯಿಂದ ಪರಿಶೀಲನೆ ನಡೆಸಿದ್ದರು. ಆಗ ಅಲ್ಲಿ ಒಂದು ಜೊತೆ ರಕ್ತಸಿಕ್ತ ಚಪ್ಪಲಿ ದೊರೆತಿತ್ತು. ಮೃತದ ಸಂಬಂಧಿಕರಿಗೆ ಅದನ್ನು ತೋರಿಸಿದಾಗ ಅವರ್ಯಾರು ಅದು ತಮ್ಮದಲ್ಲ ಎಂದು ತಿಳಿಸಿದ್ದರು. ಚಪ್ಪಲಿಯನ್ನು ಪರಿಶೀಲಿಸಿದಾಗ ಅದರ ಮುಂಭಾಗ ಹಲವು ರಂಧ್ರಗಳಿರುವುದು ಕಂಡುಬಂದಿದೆ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇನ್ನಷ್ಟು ಪರಿಶೀಲನೆ ಒಳಪಡಿಸಿದಾಗ ಅದು ವೆಲ್ಡಿಂಗ್ ಮಾಡುವಾಗ ಹಾರುವ ಬೆಂಕಿಯ ಕಿಡಿಗಳಿಂದ ಉಂಟಾಗುತ್ತದೆ ಎಂಬ ನಿರ್ಧಾರಕ್ಕೆ ಬಂದರು. ಘಟನೆ ನಡೆದ ಸುತ್ತಮುತ್ತಲಿನ ವೆಲ್ಡಿಂಗ್ ಕೆಲಸ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆರೋಪಿ ನೀಲಸಂದ್ರದ ಮುನಿಗೌಡ ಗಾರ್ಡನ್‍ನ ಸಯ್ಯದ್ ನದೀಮ್ (22) ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆ ಚಪ್ಪಲಿ ತನ್ನದೆಂದು ಹಣದ ಆಸೆಗಾಗಿ ಅಜ್ಜಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಣದಲ್ಲಿ ಹೊಸ ಬಟ್ಟೆ, ಶೂ ಖರೀದಿಸಿ, ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಖರ್ಚು ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಐದು ವರ್ಷಗಳ ಹಿಂದೆ ಮೃತ ಗಜಲಕ್ಷ್ಮಿ ಅವರ ಗುಜರಿ ಅಂಗಡಿಯ ಹಿಂಭಾಗದಲ್ಲಿದ್ದ ಕ್ವಾರ್ಟಸ್‍ನಲ್ಲಿ ವಾಸಮಾಡಿಕೊಂಡಿದ್ದ ಆರೋಪಿ ಸಯ್ಯದ್ ನದೀಮ್ ಬಳಿಕ ನೀಲಸಂದ್ರಕ್ಕೆ ತಮ್ಮ ಮನೆಯನ್ನು ಸ್ಥಳಾಂತರಿಸಿದ್ದಾನೆ. ಕೇವಲ 5ನೇ ತರಗತಿವರೆಗೆ ಕಲಿತಿರುವ ಆತ ತನ್ನ ತಂದೆ ಮಾಡುತ್ತಿದ್ದ ಬೀರು ತಯಾರಿಸುವ ಕೆಲಸ ಕೂಡ ಮಾಡಿದ್ದ. ಬಳಿಕ ಮುಂಬೈ, ವಿಜಯವಾಡದಲ್ಲೂ ಕೆಲವು ವರ್ಷ ಕೆಲಸ ಮಾಡಿದ್ದಾನೆ. 4-5 ತಿಂಗಳಿಂದ ರಾಜೇಂದ್ರ ನಗರದ ಅಮ್ಜದ್ ಎಂಬವರ ವೆಲ್ಡಿಂಗ್  ಅಂಗಡಿಯಲ್ಲೂ ಕೆಲಸ ಮಾಡಿದ್ದಾನೆ. ಆದೆ ಜೂ.13ರಂದು ಅಲ್ಲಿ ಕೆಲಸ ಬಿಟ್ಟಿದ್ದಾನೆ. 5-6 ವರ್ಷಗಳಿಂದ ಗಜಲಕ್ಷ್ಮಿ ಅವರ ಗುಜರಿ ಅಂಗಡಿಗೆ ಬಂದು ಕಬ್ಬಿಣ ಮತ್ತು ಇತರ ಗುಜರಿ ಸಾಮಾಗ್ರಿಗಳನ್ನು ಮಾರಿ ಹಣ ಪಡೆದುಕೊಳ್ಳುತ್ತಿದ್ದ. ಈ ವೇಳೆ ಅಜ್ಜಿ ಹಣ ಇಡುತ್ತಿದ್ದ ಚೀಲದ ಮೇಲೆ ಆತನ ಕಣ್ಣು ಬಿದ್ದಿದೆ. ಜೂನ್.15 ರಂದು ರಾತ್ರಿ 2 ಗಂಟೆ ಸುಮಾರಿಗೆ ಅಂಗಡಿಯ ಬಳಿಯ ಶೌಚಾಲಯದ ಬಳಿ ಬಚ್ಚಿಟ್ಟುಕೊಂಡು ಅಂಗಡಿಗೆ ನುಗ್ಗಿ ಸಿಮೆಂಟ್ ಇಟ್ಟಿಗೆಯಿಂದ ಅಜ್ಜಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಆದರೆ ಆತನಿಗೆ ಅಜ್ಜಿಯಿಂದ ಸಿಕ್ಕಿದ ಹಣ ಮಾತ್ರ ಕೇವಲ 6800 ರೂ. ಅದುನ್ನು ತೆಗೆದುಕೊಂಡು ನೇರವಾಗಿ ಮನೆಗೆ ಬಂದು ರಕ್ತಸಿಕ್ತ ಬಟ್ಟೆಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದನ್ನು ದೂರ ಬಿಸಾಡಿದ್ದಾನೆ. ಅಲ್ಲಿಂದ ನೇರವಾಗಿ ಶಿವಾಜಿನಗರಕ್ಕೆ ಬಂದು ಹಣದಲ್ಲಿ ಹೊಸ ಶೂ, ಬಟ್ಟೆ ಖರೀದಿಸಿದ್ದ. ಪ್ರಕರಣವನ್ನು ಆಗ್ನೇಯ ವಿಭಾಗದ ಡಿ.ಸಿ.ಪಿ ಡಾ.ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪವಿಭಾಗದ ಎಸಿಪಿ ಎ.ವಿ. ಲಕ್ಷ್ಮೀನಾರಾಯಣ ಅವರು ಭೇದಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ