ಕಳ್ಳತನಕ್ಕೆಂದು ಬಂದು ಕೊಲೆ ಮಾಡಿದ !

Kannada News

21-06-2017

ಬೆಂಗಳೂರು: ಮನೆಗಳ್ಳತನಕ್ಕೆಂದು ಬಂದಿದ್ದ ಕಳ್ಳನೊಬ್ಬ, ಪ್ರತಿರೋಧ ತೋರಿದ ವೃದ್ದರೊಬ್ಬರನ್ನು ಕೊಲೆ ಮಾಡಿ ಬಾಲಕನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ದುರ್ಘಟನೆ ಯಲಹಂಕ ಉಪ ನಗರದ 4ನೇ ಹಂತದಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ. ಯಲಹಂಕ ಉಪ ನಗರದ 4ನೇ ಹಂತದಲ್ಲಿ ಮಂಗಳವಾರ ಮಧ್ಯರಾತ್ರಿ ನಾಲ್ಕು ಕಡೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಬಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ ಕಳವಿಗೆ ಪ್ರತಿರೋಧ ತೋರಿದ ವೃದ್ಧರೊಬ್ಬರನ್ನು ಕೊಲೆ ಮಾಡಿ ದುಷ್ಕರ್ಮಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಕಳ್ಳನಿಂದ ಕೊಲೆಯಾದವರನ್ನು ಯಲಹಂಕದ 4ನೇ ಹಂತದ ನಿವೃತ್ತ ಫೆಡರಲ್ ಮೊಘಲ್ ಕಂಪನಿಯ ಉದ್ಯೋಗಿ ಅನಂತ ರಾಮಯ್ಯ (68) ಎಂದು ಗುರುತಿಸಲಾಗಿದೆ. ಕಳ್ಳನ ಕಲ್ಲೇಟಿನಿಂದ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊಹಮ್ಮದ್ ಅನಾಸ್ (12) ಎಂಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಮನೆಗಳ್ಳತನ ಮಾಡಲು ಮಧ್ಯರಾತ್ರಿ ಯಲಹಂಕ ಉಪನಗರಕ್ಕೆ ಬಂದಿದ್ದ ದುಷ್ಕರ್ಮಿ ಮೊದಲಿಗೆ ಮನೆಯೊಂದಕ್ಕೆ ನುಗ್ಗಿದ್ದಾನೆ. ಎಚ್ಚರಗೊಂಡ ದಂಪತಿ ಗಲಾಟೆ ಮಾಡಿದ್ದರಿಂದ ಅಲ್ಲಿಂದ ಪರಾರಿಯಾಗಿ ಮತ್ತೊಬ್ಬರ ಮನೆಗೆ ನುಗ್ಗಿದ್ದಾನೆ. ದಂಪತಿ ಮಲಗಿದ್ದ ಕೊಠಡಿಗೆ ಹೊರಗಿನಿಂದ ಚಿಲಕ ಹಾಕಿ ಮಕ್ಕಳು ಮಲಗಿದ್ದ ಕೊಠಡಿಗೆ ನುಗ್ಗಿ ಅಲ್ಮೇರಾವನ್ನು ಒಡೆದು ಬೆಲೆಬಾಳುವ ವಸ್ತುಗಳನ್ನು ದೋಚಲು ಮುಂದಾದಾಗ ಎಚ್ಚರಗೊಂಡ ಮಕ್ಕಳು ಕಿರುಚಿಕೊಂಡಿದ್ದು, ಆಕ್ರೋಶಗೊಂಡ ದುಷ್ಕರ್ಮಿ ಕಲ್ಲಿನಿಂದ ಮೊಹಮ್ಮದ್ ಅನಾಸ್ ಮೇಲೆ ಹಲ್ಲೆ ನಡೆಸಿದ್ದಾನೆ.

ಮತ್ತೊಬ್ಬ ಬಾಲಕ ತಂದೆ-ತಾಯಿ ಮಲಗಿದ್ದ ಕೊಠಡಿಯ ಚಿಲಕ ತೆಗೆದಿದ್ದು, ಅವರ ಎದ್ದು ಹೊರಗೆ ಬರುವಷ್ಟರಲ್ಲಿ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾರೆ. ದುಷ್ಕರ್ಮಿ ಮುಂಜಾನೆ 3ರ ವೇಳೆ ಅನಂತ್ ರಾಮಯ್ಯ ಅವರ ಮನೆ ಬಳಿ ಬಂದಿದ್ದಾನೆ. ಬಾಗಿಲಿಗೆ ಚಿಲಕ ಹಾಕದಿದ್ದರಿಂದ ಒಳ ನುಗ್ಗಿದ ದುಷ್ಕರ್ಮಿ ಬೆಲೆಬಾಳುವ ವಸ್ತುಗಳಿಗಾಗಿ ತಡಕಾಡಿದ್ದು, ಎಚ್ಚರಗೊಂಡ ಅನಂತರಾಮಯ್ಯ ಅವರು ರಕ್ಷಣೆಗಾಗಿ ಕೂಗಿಕೊಂಡಾಗ ಅವರ ತಲೆಗೆ ರಾಡ್‍ನಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವರು ಕೆಳಗೆ ಬಿದ್ದ ಕೂಡಲೇ ಅಲ್ಲಿದ್ದ ಸೂಟ್ಕೇಸ್ ತೆಗೆದುಕೊಂಡು ಓಡಿಹೋಗಿದ್ದಾನೆ.

ಸ್ವಲ್ಪ ದೂರ ಓಡಿದ ನಂತರ ಸೂಟ್ಕೇಸ್ ತೆಗೆದು ನೋಡಿದಾಗ ಅದರಲ್ಲಿ ಯಾವುದೇ ವಸ್ತುಗಳು ಇಲ್ಲದಿದ್ದರಿಂದ ಎಸೆದು ಪರಾರಿಯಾಗುತ್ತಿದ್ದನ್ನು ನೋಡಿದ ಸ್ಥಳೀಯರು 'ನಮ್ಮ 100' ಸಂಖ್ಯೆಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಅನಂತರಾಮಯ್ಯ ಅವರ ಪುತ್ರ ಮಾದವನ್ ಕೃತ್ಯ ನಡೆದ 2 ಗಂಟೆಗಳ ನಂತರ ಎಚ್ಚರಗೊಂಡು ಕೆಳಗಿಳಿದು ಬಂದು ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಮಾನಸ ನಂತರ ಬಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು. ಮಾದವನ್ ವೈದ್ಯಕೀಯ ಉಪಕರಣಗಳ ಪ್ರಸರಣದ ಕೆಲಸವನ್ನು ಮನೆಯಲ್ಲೇ ಮಾಡುತ್ತಿದ್ದು, ಮೇಲಿನ ಕೊಠಡಿಯಲ್ಲಿ ಅವರಿದ್ದರೆ, ಅನಂತ್ ರಾಮಯ್ಯ ಅವರು ಕೆಳಗಿನ ಮನೆಯಲ್ಲಿ ಇರುತ್ತಿದ್ದರು. ಆಗಾಗ ಮಗ ಕೆಳಗಿನ ಮನೆಗೆ ಬಂದು ಹೋಗುತ್ತಿದ್ದರಿಂದ ಅನಂತ್ ರಾಮಯ್ಯ ಅವರು ಬಾಗಿಲಿಗೆ ಚಿಲಕ ಹಾಕದಂತೆ ಮಲಗುತ್ತಿದ್ದರು ಎಂದು ಡಿಸಿಪಿ ಡಾ.ಹರ್ಷ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಯಲಹಂಕ ಉಪನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ