ವೈದ್ಯರ ಕೊರತೆ ನೀಗಿಸಲು ತಿದ್ದುಪಡಿ ಮಸೂದೆ !

Kannada News

20-06-2017

ಬೆಂಗಳೂರು: ಆರೋಗ್ಯ ಇಲಾಖೆಯ ವರ್ಗಾವಣೆಯಲ್ಲಿ ಗಮನಾರ್ಹ ಬದಲಾವಣೆ ತರುವ ಹಾಗೂ 10 ವರ್ಷ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವವರನ್ನು ವರ್ಗಾವಣೆ ಮಾಡುವ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಇಂದು ಅಂಗೀಕಾರ ನೀಡಿತು. ವೈದ್ಯರ ಕೊರತೆ ನೀಗಿಸಲು ಮತ್ತು ಅಗತ್ಯವಿರುವ ಕಡೆಗಳಲ್ಲಿ ವೈದ್ಯರನ್ನು ವರ್ಗಾವಣೆ ಮಾಡುವ ಉದ್ದೇಶವನ್ನು ಈ ವಿಧೇಯಕ ಹೊಂದಿದ್ದು, ಇದರ ಜತೆಗೆ ವರ್ಗಾವಣೆ ಪ್ರಮಾಣವನ್ನು ಶೇ.5 ರಿಂದ 15ಕ್ಕೆ ಏರಿಸುವ ಅಂಶವನ್ನು ಇದು ಒಳಗೊಂಡಿದೆ. ವಿಧೇಯಕ ಕುರಿತು ಮಾತನಾಡಿದ ಆರೋಗ್ಯ ಸಚಿವ ರಮೇಶ್‍ಕುಮಾರ್, ಕೆಲ ವೈದ್ಯರು ತಮ್ಮ ಸೇವಾವಧಿಯಲ್ಲಿ ಬಹುತೇಕ ಒಂದೇ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ವೈದ್ಯರ ಕೊರತೆ ಹೆಚ್ಚಾಗಿದೆ, ಇದನ್ನು ನಿಭಾಯಿಸಲು ಈ ವಿಧೇಯಕ ಸಹಕಾರಿಯಾಗಲಿದೆ ಎಂದರು. ಬಿಜೆಪಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವರಾಜ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಆಸ್ಪತ್ರೆಗಳು ವೈದ್ಯರಿಗಿಂತ ನರ್ಸ್‍ಗಳು, ಕೆಳ ಹಂತದ ಸಿಬ್ಬಂದಿ ಹಿಡಿತದಲ್ಲಿವೆ. ಜಿಲ್ಲಾ ಮತ್ತು  ತಾಲ್ಲೂಕು ವೈದ್ಯಾಧಿಕಾರಿಗಳಿಗೂ ಇವುಗಳ ಮೇಲೆ ಹಿಡಿತವಿಲ್ಲದಂತಾಗಿದೆ. ಹೊಸ ವೈದ್ಯರಿಗಿಂತ ಹಳೆಯ ರೋಗಿಗಳು ಮೇಲು ಎನ್ನುವ ಮಾತಿದೆ. 10-15 ವರ್ಷ ಒಂದೇ ಕಡೆ ಇದ್ದವರು ಸಣ್ಣ ರಾಜಕಾರಣಿ ಆಗುತ್ತಾರೆ. ಪದೇ ಪದೇ ದೂರು ಬಂದವರನ್ನು ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು. ಆಡಳಿತ ಪಕ್ಷದ ಶಿವಾನಂದ ಪಾಟೀಲ್, ವೈದ್ಯರಿಗೆ ಹೆಚ್ಚು ಸಂಬಳ ನೀಡಿದರೆ ಗ್ರಾಮೀಣ ಪ್ರದೇಶಕ್ಕೆ ಬರುತ್ತಾರೆ ಎಂದಾಗ ಸಿಟ್ಟಾದ ಸಚಿವ ರಮೇಶ್‍ಕುಮಾರ್, ಸಂಬಳ ಕಡಿಮೆ ಕೊಡುತ್ತಿಲ್ಲ. ನಮಗೆ ತಜ್ಞ ವೈದ್ಯರ ಕೊರತೆಯಿದೆ. ವೈದ್ಯರುಗಳಿಗೆ ಹಳ್ಳಿಗಳಂದರೆ ಅಲರ್ಜಿ.ಅಲ್ಲಿಗೆ ಹೋಗಲು ತೊಂದರೆ ಅನುಭವಿಸುತ್ತಾರೆ. ಹಾಗೊಮ್ಮೆ ವೈದ್ಯರು ಆಗಮಿಸಿದರೆ ಅವರನ್ನು ತಳಿರು ತೋರಣ ಕಟ್ಟಿ, ಬ್ಯಾಂಡ್ ಬಾರಿಸಿ ಸ್ವಾಗತಿಸುತ್ತೇವೆ ಎಂದು ವ್ಯಂಗ್ಯವಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ