ದೇಶಾದ್ಯಂತ ವ್ಯಾಪಕ ಕಟ್ಟೆಚ್ಚರ !

Kannada News

20-06-2017 348

ನವದೆಹಲಿ: ದೇಶದಲ್ಲಿ ಭಯೋತ್ಪಾದಕರು ವಿಧ್ವಂಸಕ ಕೃತ್ಯ ನಡೆಸಲು ಉದ್ದೇಶಿಸಿದ್ದಾರೆ ಎನ್ನುವ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ, ದೇಶಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸುವ ಜೊತೆಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಪ್ರಮುಖ ಬಸ್, ರೈಲು ನಿಲ್ದಾಣ, ಪಂಚತಾರಾ ಹೋಟೆಲ್, ಮಾಲ್‌ಗಳು, ಮಾರುಕಟ್ಟೆಗಳು, ಧಾರ್ಮಿಕ ಸ್ಥಳಗಳು, ವಿದೇಶಗಳ ರಾಯಭಾರ ಕಚೇರಿಗಳು, ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಕ್ರೀಡಾಂಗಣಗಳು, ಪ್ರವಾಸಿ ತಾಣಗಳು ಹಾಗೂ ಹೆಚ್ಚಾಗಿ ವಿದೇಶಿ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಭಾರೀ ಬಿಗಿ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಗುಪ್ತಚರ ಇಲಾಖೆ ಸೂಚಿಸಿದೆ. ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಒದಗಿಸುವಂತೆ ಗುಪ್ತಚರ ಇಲಾಖೆ ಸೂಚಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅನುಮಾನಾಸ್ಪದವಾಗಿ ಯಾವುದೇ ವಸ್ತುಗಳು ಕಂಡುಬಂದರೆ ಅಥವಾ ವಾಹನಗಳು ಓಡಾಡುತ್ತಿದ್ದರೆ, ಅವುಗಳನ್ನು ಹಿಡಿದು ತಪಾಸಣೆ ನಡೆಸುವಂತೆಯೂ ಭದ್ರತಾ ಸಿಬ್ಬಂದಿಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ. ದೇಶದ ವಿವಿಧ ಸ್ಥಳಗಳಲ್ಲಿ ಸರಣಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕರು ಯೋಚಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳು, ಮಾರುಕಟ್ಟೆ ಹಾಗೂ ವಿದೇಶಿಗರು ಪದೇ ಪದೇ ಬರುವ ಸ್ಥಳಗಳನ್ನು ಉಗ್ರರು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಇಂತಹ ಸ್ಥಳಗಳೂ ಸೇರಿದಂತೆ, ದೇಶದೆಲ್ಲೆಡೆ ಬಿಗಿ ಭದ್ರತೆ ಹಾಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ